ಬುಧವಾರ, ಸೆಪ್ಟೆಂಬರ್ 22, 2021
29 °C
ವಿಶ್ವ ರ‍್ಯಾಂಕಿಂಗ್‌ನಲ್ಲಿ 3ನೇ ಸ್ಥಾನದಲ್ಲಿದ್ದ ಜೋಡಿಗೆ ಆಘಾತ ನೀಡಿದ ಭಾರತದ ಆಟಗಾರರು

Tokyo Olympics: ಬ್ಯಾಡ್ಮಿಂಟನ್‌- ಜಯದ ಮುನ್ನುಡಿ ಬರೆದ ಸಾತ್ವಿಕ್‌–ಚಿರಾಗ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಭಾರತದ ಭರವಸೆಯ ಜೋಡಿ ಚಿರಾಗ್‌ ಶೆಟ್ಟಿ ಹಾಗೂ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಗೆಲುವಿನೊಂದಿಗೆ ಒಲಿಂಪಿಕ್ಸ್‌ ಅಭಿಯಾನ ಆರಂಭಿಸಿದೆ.

ಮೊದಲ ಬಾರಿ ಕೂಟಕ್ಕೆ ಅಡಿ ಇಟ್ಟಿರುವ ಯುವ ತಾರೆಯರು ‘ಎ’ ಗುಂಪಿನ ಮೊದಲ ಸುತ್ತಿನ ಹಣಾಹಣಿಯಲ್ಲೇ ವಿಶ್ವ ರ‍್ಯಾಂಕಿಂಗ್‌ನಲ್ಲಿ 3ನೇ ಸ್ಥಾನದಲ್ಲಿರುವ ಯಾಂಗ್‌ ಲೀ ಹಾಗೂ ಚಿ ಲಿನ್‌ ವಾಂಗ್‌ಗೆ ಆಘಾತ ನೀಡಿದರು.

ಶನಿವಾರದ ಈ ಪೈಪೋಟಿ ರೋಚಕತೆಗೆ ಸಾಕ್ಷಿಯಾಯಿತು. ಕ್ಷಣ ಕ್ಷಣಕ್ಕೂ ತಿರುವು ಪಡೆಯುತ್ತಿದ್ದ ಮೂರನೇ ಗೇಮ್‌ನಲ್ಲಿ ಚೀನಾ ತೈಪೆ ಆಟಗಾರರ ಸದ್ದಡಗಿಸಿದ ಭಾರತದ ಆಟಗಾರರು ಖುಷಿಯಿಂದ ಬೀಗಿದರು.

ಇದನ್ನೂ ಓದಿ: 

ಕೂಟದಲ್ಲಿ ಮೂರನೇ ಶ್ರೇಯಾಂಕ ಹೊಂದಿದ್ದ ಲೀ ಮತ್ತು ವಾಂಗ್‌ ಪಂದ್ಯದಲ್ಲಿ ಗೆಲ್ಲುವ ನೆಚ್ಚಿನ ಆಟಗಾರರೆನಿಸಿದ್ದರು. ಥಾಯ್ಲೆಂಡ್‌ ಹಾಗೂ ವಿಶ್ವ ಟೂರ್‌ ಫೈನಲ್ಸ್‌ನಲ್ಲಿ ಸತತವಾಗಿ ಪ್ರಶಸ್ತಿಗಳನ್ನು ಜಯಿಸಿದ್ದ ಇವರು ಆತ್ಮವಿಶ್ವಾಸದ ಗಣಿ ಎನಿಸಿದ್ದರು.

ಆಕ್ರಮಣ ಮತ್ತು ರಕ್ಷಣೆಗೆ ಒತ್ತು ನೀಡಿದ ಸಾತ್ವಿಕ್‌ ಮತ್ತು ಚಿರಾಗ್‌ ಮೊದಲ ಗೇಮ್‌ನ ಶುರುವಿನಲ್ಲೇ 7–2 ಮುನ್ನಡೆ ಪಡೆದರು. ನಂತರವೂ ಗುಣಮಟ್ಟದ ಆಟಕ್ಕೆ ಒತ್ತು ನೀಡಿ ಮುನ್ನಡೆಯನ್ನು 11–7ಕ್ಕೆ ಹೆಚ್ಚಿಸಿಕೊಂಡು ವಿರಾಮಕ್ಕೆ ಹೋದರು. ದ್ವಿತೀಯಾರ್ಧದಲ್ಲೂ ಪ್ರಾಬಲ್ಯ ಮುಂದುವರಿಸಿದ ಭಾರತದ ಆಟಗಾರರು ಗೇಮ್‌ ಗೆದ್ದರು.

ಎರಡನೇ ಗೇಮ್‌ನಲ್ಲಿ ಲೀ ಮತ್ತು ವಾಂಗ್‌ ಲಯ ಕಂಡುಕೊಂಡರು. ಸಿಕ್ಕ ಅವಕಾಶಗಳನ್ನೆಲ್ಲಾ ಪಾಯಿಂಟ್ಸ್‌ಗಳನ್ನಾಗಿ ಪರಿವರ್ತಿಸಿ 10–8 ಮುನ್ನಡೆ ಗಳಿಸಿದರು. ಎರಡನೇ ಅವಧಿಯಲ್ಲೂ ಪರಿಣಾಮಕಾರಿಯಾಗಿ ಆಡಿದ ಈ ಜೋಡಿ ಗೇಮ್‌ ಜಯಿಸಿ 1–1 ಸಮಬಲ ಸಾಧಿಸಿತು.

ಮೂರನೇ ಗೇಮ್‌ನ ಆರಂಭದಲ್ಲೇ ಚಿರಾಗ್‌ ಮತ್ತು ಸಾತ್ವಿಕ್‌ 2–0 ಮುನ್ನಡೆ ತಮ್ಮದಾಗಿಸಿಕೊಂಡರು. ನಂತರ ಉಭಯ ಜೋಡಿಯೂ ಜಿದ್ದಾಜಿದ್ದಿನಿಂದ ಸೆಣಸಿತು. ಹೀಗಾಗಿ 10–10ರಲ್ಲಿ ಸಮಬಲ ಕಂಡುಬಂತು. ಈ ಹಂತದಲ್ಲಿ ಸಾತ್ವಿಕ್‌ ಎಸಗಿದ ತಪ್ಪಿನಿಂದಾಗಿ ಚೀನಾ ತೈಪೆ ಆಟಗಾರರ ಖಾತೆಗೆ ಪಾಯಿಂಟ್‌ ಸೇರ್ಪಡೆಯಾಯಿತು.

ಇದನ್ನೂ ಓದಿ: 

ವಿರಾಮದ ನಂತರ ಹುಮ್ಮಸ್ಸಿನಿಂದ ಹೋರಾಡಿ 13–13ರಲ್ಲಿ ಸಮಬಲ ಸಾಧಿಸಿದ ಭಾರತದ ಜೋಡಿ ನಂತರ ಹಲವು ತಪ್ಪುಗಳನ್ನು ಮಾಡಿ  ಪಾಯಿಂಟ್ಸ್‌ ಬಿಟ್ಟುಕೊಟ್ಟಿತು. 18–15ರಿಂದ ಮುನ್ನಡೆ ಕಾಯ್ದುಕೊಂಡಿದ್ದ ಲೀ ಮತ್ತು ವಾಂಗ್‌ ಸುಲಭವಾಗಿ ಪಂದ್ಯ ಗೆಲ್ಲುತ್ತಾರೆ ಎಂದು ಅಂದಾಜಿಸಲಾಗಿತ್ತು. ಆದರೆ ಚಿರಾಗ್‌ ಮತ್ತು ಸಾತ್ವಿಕ್  ಸೋಲೊಪ್ಪಿಕೊಳ್ಳಲು ಸಿದ್ಧರಿದ್ದಂತೆ ಕಾಣಲಿಲ್ಲ. ಎದುರಾಳಿಗಳಿಗೆ ಪ್ರಬಲ ಪ್ರತಿರೋಧ ಒಡ್ಡಿದರು. ಹೀಗಾಗಿ ಪಂದ್ಯದಲ್ಲಿ 20–20, 24–24ರ ಸಮಬಲ ಕಂಡುಬಂತು.

ರೋಚಕ ಘಟ್ಟದಲ್ಲಿ ಭಾರತದ ಜೋಡಿ ಮೊದಲ ‘ಮ್ಯಾಚ್‌ ಪಾಯಿಂಟ್‌’ ಕೈಚೆಲ್ಲಿತು. ಹೀಗಾಗಿ ಟಿ.ವಿ.ಎದುರು ಕುಳಿತು ಪಂದ್ಯ ವೀಕ್ಷಿಸುತ್ತಿದ್ದವರ ಎದೆಬಡಿತವೂ ಜೋರಾಗಿತ್ತು. ನಂತರ ಚೀನಾ ತೈಪೆ ಆಟಗಾರರು ಎಡವಟ್ಟು ಮಾಡಿ ಕೈಸುಟ್ಟುಕೊಂಡರು.

ಪಂದ್ಯದ ವಿವರ

ಚಿರಾಗ್‌/ಸಾತ್ವಿಕ್‌- ಯಾಂಗ್‌/ವಾಂಗ್‌

21 ಮೊದಲ ಗೇಮ್‌ 16

16 ಎರಡನೇ ಗೇಮ್‌ 21

27 ಮೂರನೇ ಗೇಮ್‌ 25

ಅವಧಿ: 1 ಗಂಟೆ 6 ನಿಮಿಷ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು