ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Tokyo Olympics: ಮಿಶ್ರ ರಿಲೆಯಲ್ಲಿ ವಿಶ್ವ ದಾಖಲೆ

ಏಳು ಪದಕ ಗಳಿಸಿದ ಬ್ರಿಟನ್‌ಗೆ ಇಂದು ಶ್ರೇಷ್ಠ ಸಾಧನೆಯ ಗುರಿ; ಡ್ರೆಸೆಲ್‌ಗೆ ಮತ್ತೆ ಚಿನ್ನ
Last Updated 31 ಜುಲೈ 2021, 19:45 IST
ಅಕ್ಷರ ಗಾತ್ರ

ಟೋಕಿಯೊ: ವಿಶ್ವ ದಾಖಲೆ ಮುರಿದು ಮುನ್ನುಗ್ಗಿದ ಬ್ರಿಟನ್ ಈಜುಪಟುಗಳು ಇದೇ ಮೊದಲ ಬಾರಿ ಒಲಿಂಪಿಕ್ಸ್‌ನಲ್ಲಿ ಸೇರ್ಪಡೆಯಾಗಿರುವ4x100 ಮೀಟರ್ಸ್‌ ಮಿಶ್ರ ಮೆಡ್ಲೆ ರಿಲೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡರು.

ಶನಿವಾರ ನಡೆದ ಸ್ಪರ್ಧೆಯಲ್ಲಿ ಕ್ಯಾಥ್ಲೀನ್ ಡಾಸನ್, ಪೀಟಿ, ಜೇಮ್ಸ್‌ ಗೈ ಮತ್ತು ಅನಾ ಹಾಪ್ಕಿನ್ ಅವರನ್ನು ಒಳಗೊಂಡ ತಂಡ 3 ನಿಮಿಷ 37.58 ಸೆಕೆಂಡುಗಳಲ್ಲಿ ಗುರಿ ಮುಟ್ಟಿತು. ಈ ಮೂಲಕ ವಿಶ್ವ ದಾಖಲೆಯನ್ನು ಹಿಂದಿಕ್ಕಿತು. ಕ್ವಿಂಗ್ಡಾವೊದಲ್ಲಿ ಕಳೆದ ವರ್ಷ ನಡೆದ ಟೂರ್ನಿಯಲ್ಲಿ ಚೀನಾ 3 ನಿಮಿಷ 38.41 ಸೆಕೆಂಡುಗಳಲ್ಲಿ ಗುರಿ ತಲುಪಿ ದಾಖಲೆ ಸೃಷ್ಟಿಸಿತ್ತು.

ಶನಿವಾರ 3 ನಿಮಿಷ 38.86 ಸೆಕೆಂಡುಗಳಲ್ಲಿ ಈಜು ಪೂರ್ತಿಗೊಳಿಸಿದ ಚೀನಾ ಬೆಳ್ಳಿ ಪದಕ ಗೆದ್ದುಕೊಂಡರೆ ಆಸ್ಟ್ರೇಲಿಯಾ (3 ನಿಮಿಷ 38.95 ಸೆಕೆಂಡು) ಕಂಚಿನ ಪದಕಕ್ಕೆ ಸಮಾಧಾನಪಟ್ಟುಕೊಂಡಿತು. ಕಾಲೆಬ್ ಡ್ರೆಸೆಲ್ ಮುನ್ನಡೆಸಿದ ಅಮೆರಿಕ ತಂಡ ಐದನೇ ಸ್ಥಾನಕ್ಕೆ ಕುಸಿಯಿತು.

ಶ್ರೇಷ್ಠ ಸಾಧನೆಗೆ ಇನ್ನೊಂದು ಹೆಜ್ಜೆ...

ಮಿಶ್ರ ರಿಲೆಯಲ್ಲಿ ಪದಕ ಗೆಲ್ಲುವುದರೊಂದಿಗೆ ಬ್ರಿಟನ್ ಒಟ್ಟು ಏಳು ಪದಕಗಳನ್ನು ತನ್ನದಾಗಿಸಿಕೊಂಡಿತು. ನಾಲ್ಕು ಚಿನ್ನ, ಎರಡು ಬೆಳ್ಳಿ ಮತ್ತು ಒಂದು ಕಂಚಿನ ಪದಕದೊಂದಿಗೆ ಒಲಿಂಪಿಕ್ಸ್‌ ಈಜಿನಲ್ಲಿ ದೇಶದ ಶ್ರೇಷ್ಠ ಸಾಧನೆಯನ್ನು ಸಮಗಟ್ಟಿತು. 1908ರಲ್ಲಿ ಬ್ರಿಟನ್ ಇಷ್ಟೇ ಪದಕಗಳನ್ನು ಗಳಿಸಿತ್ತು. ಭಾನುವಾರ ನಡೆಯಲಿರುವ 4x100 ರಿಲೆ ಫೈನಲ್‌ನಲ್ಲೂ ಬ್ರಿಟನ್ ಪಾಲ್ಗೊಳ್ಳಲಿದೆ. ಅದರಲ್ಲಿ ಪದಕ ಗೆದ್ದರೆ ಈ ವರೆಗಿನ ಗರಿಷ್ಠ ಸಾಧನೆ ಮಾಡಿದ ಶ್ರೇಯ ತಂಡಕ್ಕೆ ಸಿಗಲಿದೆ.

ಸ್ಪ್ರಿಂಟ್‌ನಲ್ಲಿ ಡ್ರೆಸೆಲ್ ಪಾರಮ್ಯ

ಸ್ಪ್ರಿಂಟ್ ತಾರೆ ಕಾಲೆಬ್ ಡ್ರೆಸೆಲ್ 100 ಮೀಟರ್ಸ್ ಬಟರ್‌ಫ್ಲೈನಲ್ಲಿ ಚಿನ್ನ ಗೆಲ್ಲುವುದರೊಂದಿಗೆ ಮೂರನೇ ಪದಕ ಗೆದ್ದು ಸಂಭ್ರಮಿಸಿದರು. 49.45 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಅವರು ತಮ್ಮದೇ ಹೆಸರಿನಲ್ಲಿದ್ದ ದಾಖಲೆ ಮುರಿದರು. 2019ರ ಈಜು ಕೂಟದಲ್ಲಿ ಅವರು 49.50 ಸೆಕೆಂಡುಗಳ ಸಾಧನೆ ಮಾಡಿದರು. ಹಂಗರಿಯ ಕ್ರಿಸ್ಟೊಫ್ ಮಿಲಕ್ ಬೆಳ್ಳಿ ಗಳಿಸಿದರೆ ಸ್ವಿಟ್ಜರ್ಲೆಂಡ್‌ನ ನೊಯೊ ಪೊಂಟಿ ಮೂರನೆಯವರಾದರು.

100 ಮೀಟರ್ಸ್‌ ಬ್ಯಾಕ್‌ಸ್ಟ್ರೋಕ್‌ನಲ್ಲಿ ಗಮನ ಸೆಳೆದಿರುವ ತಾರೆ ಆಸ್ಟ್ರೇಲಿಯಾದ ಕೈಲಿ ಮೆಕ್ಯಾನ್ 200 ಮೀಟರ್ಸ್‌ನಲ್ಲೂ ಮೊದಲಿಗರಾದರು. ಅಂತಿಮ 50 ಮೀಟರ್ಸ್‌ನಲ್ಲಿ ಮಿಂಚಿನ ವೇಗದಲ್ಲಿ ಈಜಿದ ಅವರು 2 ನಿಮಿಷ 04.68 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಈ ಮೂಲಕ ಕೆನಡಾದ ಕೈಲೀ ಮಸ್ಸಿ (2 ನಿಮಿಷ 05.42 ಸೆಕೆಂಡು) ಅವರನ್ನು ಹಿಂದಿಕ್ಕಿದರು. ಕಂಚಿನ ಪದಕವೂ ಆಸ್ಟ್ರೇಲಿಯಾಗೆ ಲಭಿಸಿತು. ಎಮಿಲಿ ಸೀಬಾಮ್ 2 ನಿಮಿಷ 06.17 ಸೆಕೆಂಡುಗಳಲ್ಲಿ ಗುರಿ ತಲುಪಿದರು.

ಫಲಿತಾಂಶಗಳು: ಪುರುಷರು: 100 ಮೀಟರ್ಸ್ ಬಟರ್‌ಫ್ಲೈ: ಕ್ಯಾಲೆಬ್ ಡ್ರೆಸೆಲ್ (ಅಮೆರಿಕ)–1. ಕಾಲ:49.45 (ವಿಶ್ವ ದಾಖಲೆ), ಕ್ರಿಸ್ಟೊಫ್‌ ಮಿಲಕ್ (ಹಂಗರಿ)–2, ನೊಯಿ ಪೊಂಟಿ (ಸ್ವಿಟ್ಜರ್ಲೆಂಡ್)–3. ಮಹಿಳೆಯರು: 200 ಮೀಟರ್ಸ್ ಬ್ಯಾಕ್‌ಸ್ಟ್ರೋಕ್‌: ಕೈಲಿ ಮೆಕ್ಯಾನ್ (ಆಸ್ಟ್ರೇಲಿಯಾ)–1. ಕಾಲ: 2:04.68) ಕೈಲಿ ಮಸ್ಸಿ (ಕೆನಡ)–2, ಎಮಿಲಿ ಸೀಬಾಮ್‌ (ಆಸ್ಟ್ರೇಲಿಯಾ)–3. 800 ಮೀಟರ್ಸ್ ಫ್ರೀಸ್ಟೈಲ್‌: ಕ್ಯಾತಿ ಲೆಡೆಕಿ (ಅಮೆರಿಕ)–1. ಕಾಲ: 8:12.57, ಅರಿಯಾರ್ನೆ ತಿಮುಸ್ (ಆಸ್ಟ್ರೇಲಿಯಾ)–2, ಸಿಮೋನಾ ಕ್ವಾಡರೆಲ (ಇಟಲಿ)–3.

4x100 ಮೀಟರ್ಸ್ ಮಿಶ್ರ ರಿಲೆ: ಬ್ರಿಟನ್ (ಡಾವ್ಸನ್, ಪೀಟಿ, ಗೈ, ಹಾಪ್ಕಿನ್)–1. ಕಾಲ: 3 ನಿಮಿಷ 37.58 ಸೆಕೆಂಡು (ವಿಶ್ವ ದಾಖಲೆ), ಚೀನಾ (ಜಿಯಾಯು, ಜಿಬೆ, ಯೂಫೀ, ಜುಂಕ್ಸುವಾನ್)–2, ಆಸ್ಟ್ರೇಲಿಯಾ (ಮೆಕ್ಯಾನ್‌, ಕುಕ್‌, ಟೆಂಪಲ್, ಮೆಕ್‌ಯಾನ್‌)–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT