ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Tokyo Olympics: ನಮಸ್ಕಾರ ಪ್ಯಾರಿಸ್; ಧನ್ಯವಾದ ಟೋಕಿಯೊ

ಕೋವಿಡ್ ಕಾಲದಲ್ಲಿಯೂ ಒಲಿಂಪಿಕ್ಸ್‌ ಆಯೋಜಿಸಿ ಯಶಸ್ವಿಯಾದ ಜಪಾನ್: ಆಧುನಿಕ ಒಲಿಂಪಿಕ್ಸ್‌ ಪಿತಾಮಹನ ನಾಡಿನಲ್ಲಿ ಮುಂದಿನ ಕೂಟ
Last Updated 8 ಆಗಸ್ಟ್ 2021, 20:55 IST
ಅಕ್ಷರ ಗಾತ್ರ

ಟೋಕಿಯೊ: ಮನುಕುಲದ ಮನೋಲ್ಲಾಸ ಮತ್ತು ಸಹೋದರತ್ವದ ಸಂಕೇತವಾಗಿರುವ ಒಲಿಂಪಿಕ್ ಕೂಟದ ಧ್ವಜ ಸೂರ್ಯೋದಯ ನಗರಿ ಟೋಕಿಯೊದಿಂದ ದೀಪಗಳ ನಗರಿ ಪ್ಯಾರಿಸ್‌ಗೆ ಭಾನುವಾರ ಪ್ರಯಾಣ ಆರಂಭಿಸಿತು.

ಆಧುನಿಕ ಒಲಿಂಪಿಕ್‌ ಅಭಿಯಾನದ ಪಿತಾಮಹ ಪಿಯರ್ ಡಿ ಕೌಬರ್ತಿನ್ ನಾಡಿನಲ್ಲಿ 2024ರ ಕೂಟ ನಡೆಯಲಿದೆ.

ಕೋವಿಡ್ ಕಾಲಘಟ್ಟದ ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಒಲಿಂಪಿಕ್ ಕೂಟವನ್ನು ಯಶಸ್ವಿಯಾಗಿ ಆಯೋಜಿಸಿದ ಜಪಾನ್ ಅದ್ದೂರಿ ಕಾರ್ಯಕ್ರಮದಲ್ಲಿ ಒಲಿಂಪಿಕ್ ಧ್ವಜವನ್ನು ಅಂತರರಾಷ್ಟ್ರೀಯ ಒಲಿಂಪಿಕ್ ಕಮಿಟಿಯ ಅಧ್ಯಕ್ಷ ಥಾಮಸ್ ಬಾಕ್ ಅವರ ಮೂಲಕ ಫ್ರಾನ್ಸ್‌ಗೆ ಹಸ್ತಾಂತರಿಸಿತು.

ಅದರ ಬೆನ್ನಲ್ಲೇ ಕ್ರೀಡಾಂಗಣದಲ್ಲಿದ್ದ ಕ್ರೀಡಾಜ್ಯೋತಿಯ ಸಮೀಪದ ದೊಡ್ಡ ಡಿಜಿಟಲ್ ಪರದೆಯಲ್ಲಿ ಪ್ಯಾರಿಸ್‌ನ ಐಫೆಲ್‌ ಟವರ್ –ಮುಂದೆ ಸಂಭ್ರಮಿಸುವ ಜನಸಮೂಹ, ಕುಣಿಯುತ್ತ, ಹಾಡುತ್ತ ಒಲಿಂಪಿಕ್ ಕೂಟವನ್ನು ಸ್ವಾಗತಿಸಿದ ಕಲಾವಿದರು ಕಂಡರು. ಐಫೆಲ್ ಟಾವರ್‌ನ ಸುತ್ತ ಶರವೇಗದಲ್ಲಿ ಚಲಿಸಿದ ಆಧುನಿಕ ತಂತ್ರಜ್ಞಾನದ ಜೆಟ್‌ ವಿಮಾನಗಳು ಗಾಳಿಯಲ್ಲಿ ಫ್ರಾನ್ಸ್‌ ದೇಶದ ಧ್ವಜದ ಚಿತ್ತಾರ ಬಿಡಿಸಿದವು. ಆ ದೇಶದ ಒಲಿಂಪಿಕ್ ಪದಕ ವಿಜೇತರು, ಕ್ರೀಡಾಪಟುಗಳು ಟವರ್ ಮುಂದೆ ಸೇರಿ ಸಂಭ್ರಮಿಸಿದರು.

ಇತ್ತ ಟೋಕಿಯೊ ಕ್ರೀಡಾಂಗಣದಲ್ಲಿದ್ದ ಫ್ರೆಂಚ್ ತಂಡದ ಆಟಗಾರರೂ ಸಡಗರದಿಂದ ನರ್ತಿಸಿದರು. ಪಥಸಂಚಲನದಲ್ಲಿ ಭಾರತದ ಕುಸ್ತಿಪಟು, ಕಂಚಿನ ಪದಕ ವಿಜೇತ ಬಜರಂಗ್ ಪೂನಿಯಾ ರಾಷ್ಟ್ರ ಧ್ವಜ ಹಿಡಿದು ನಡೆದರು.

ಜಪಾನ್ ದೇಶದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಅನಾವರಣ ಮಾಡಿದ ಸಂಗೀತ, ನೃತ್ಯ ಕಾರ್ಯಕ್ರಮಗಳು ಗಮನ ಸೆಳೆದವು. ಕೊನೆಯಲ್ಲಿ ಕ್ರೀಡಾಜ್ಯೋತಿಯ ಗೋಳದ ಸ್ವಯಂಚಾಲಿತ ಬಾಗಿಲುಗಳು ಮುಚ್ಚಿದಾಗ. ದೊಡ್ಡ ಪರದೆಯ ಮೇಲೆ ಅರಿಗಾಟೊ (ಧನ್ಯವಾದಗಳು) ಪದ ಪ್ರಜ್ವಲಿಸಿತು.

17 ದಿನಗಳಿಂದ ಒಂದೇ ಸೂರಿನಡಿ ಕೂಡಿ ಆಡಿ ನಲಿದ 205 ದೇಶಗಳ ಕ್ರೀಡಾಪಟುಗಳ ಕಂಗಳದಲ್ಲಿ ಸಂಭ್ರಮ ಭಾವ. ಜೊತೆಗೆ ವಿದಾಯದ ಕಣ್ಣೀರು ಕೂಡ ತುಳುಕಿದ್ದವು. ದೇಶ, ಧರ್ಮ, ಬಣ್ಣ, ಭಾಷೆಗಳನ್ನು ಮೀರಿ ಸೇರಿ ಆಡಿದ ಇವರೆಲ್ಲ ಕ್ರೀಡೆಯನ್ನು ಗೆಲ್ಲಿಸಿದರು.

ಜುಲೈ 23ರಂದು ಟೋಕಿಯೊ ಒಲಿಂಪಿಕ್‌ –2020 ಆರಂಭವಾಗುವ ಮುನ್ನ ಜಪಾನ್ ಆಡಳಿತವು ಹಲವು ಪ್ರತಿಭಟನೆಗಳನ್ನು ಎದುರಿಸಬೇಕಾಯಿತು. ಹೋದ ವರ್ಷವೇ ನಡೆಯಬೇಕಿದ್ದ ಒಲಿಂಪಿಕ್ ಈ ವರ್ಷಕ್ಕೆ ಮುಂದೂಡಿದ್ದ ಜಪಾನ್ ನಿರ್ಧಾರ ಐತಿಹಾಸಿಕವಾಗಿತ್ತು. ಆದರೆ, ಈಗ ಮತ್ತೆ ಮುಂದೂಡಲು ಅದು ಸಿದ್ಧವಿರಲಿಲ್ಲ. 1948ರ ನಂತರ ಒಂದು ಬಾರಿಯೂ ರದ್ದಾಗದ ಒಲಿಂಪಿಕ್ ಕೂಟವನ್ನು ಈ ಬಾರಿಯೂ ನಡೆಸಿಯೇ ತೀರುವ ಛಲವನ್ನು ಐಒಎ ತೊಟ್ಟಿತ್ತು.

ಬಯೋಬಬಲ್ ನಿಯಮಾವಳಿಗಳನ್ನು ಅಚ್ಚುಕಟ್ಟಾಗಿ ಜಾರಿ ಮಾಡಲಾಯಿತು. ಅದಾಗ್ಯೂ 400ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾದವು. ಆದರೂ ಕೂಟಕ್ಕೆ ಅಡೆತಡೆಯಾಗಲಿಲ್ಲ. ಸಾವಿರಾರು ಸ್ವಯಂಸೇವಕರು, ಆಧುನಿಕ ತಂತ್ರಜ್ಞಾನದ ಸೌಲಭ್ಯಗಳೊಂದಿಗೆ ಕೂಟವನ್ನು ಯಶಸ್ವಿಯಾಗಿ ನಡೆಸುವಲ್ಲಿ ಜಪಾನ್ ಮೇಲುಗೈ ಸಾಧಿಸಿತು. ಪದಕ ಪಟ್ಟಿಯಲ್ಲಿಯೂ ಆತಿಥೇಯ ಕ್ರೀಡಾಪಟುಗಳು ದಿಟ್ಟ ಪೈಪೋಟಿ ಒಡ್ಡಿದರು.

ಯುದ್ಧಪೀಡಿತ ಸಿರಿಯಾದ 12 ವರ್ಷದ ಪೋರಿ ಹೆಂಡ್‌ ಜಾಜಾ ಟೇಬಲ್‌ ಟೆನಿಸ್‌ನಲ್ಲಿ ಆಡಿ ಮನ ಗೆದ್ದರು.

ಯುದ್ಧನಿರಾಶ್ರಿತರ ತಂಡವೂ ತನ್ನ ಹೆಜ್ಜೆಗುರುತು ಮೂಡಿಸಿತು. ಸ್ಯಾನ್ ಮರೈನ್‌ ನಂತಹ ಪುಟ್ಟ ರಾಷ್ಟ್ರವೂ ಪದಕದ ಖಾತೆ ತೆರೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT