ಮಂಗಳವಾರ, ಸೆಪ್ಟೆಂಬರ್ 21, 2021
27 °C

Tokyo Olympics ಹಾಕಿ: ಬ್ರಿಟನ್ ವಿರುದ್ಧ ಅಮೋಘ ಜಯ; ಭಾರತ ಸೆಮಿಫೈನಲ್‌ಗೆ ಲಗ್ಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೋಕಿಯೊ: ಜಪಾನ್‌ನಲ್ಲಿ ಸಾಗುತ್ತಿರುವ ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದ ಪುರುಷರ ಹಾಕಿ ವಿಭಾಗದಲ್ಲಿ ಅಮೋಘ ಪ್ರದರ್ಶನ ಮುಂದುವರಿಸಿರುವ ಭಾರತ ತಂಡವು ಸೆಮಿಫೈನಲ್‌ಗೆ ಪ್ರವೇಶಿಸಿದೆ. 

ಭಾನುವಾರ ನಡೆದ ರೋಚಕ ಕ್ವಾರ್ಟರ್‌ಫೈನಲ್ ಮುಖಾಮುಖಿಯಲ್ಲಿ ಭಾರತ ತಂಡವು ಬ್ರಿಟನ್ ವಿರುದ್ಧ 3-1 ಗೋಲುಗಳ ಅಂತರದ ಗೆಲುವು ದಾಖಲಿಸಿದೆ. 

1980ರಲ್ಲಿ ಮಾಸ್ಕೋದಲ್ಲಿ ಚಿನ್ನದ ಪದಕ ಗಳಿಸಿದ ನಂತರ ಭಾರತಕ್ಕೆ ಇದುವರೆಗೆ ಒಂದೂ ಪದಕ ಒಲಿದಿಲ್ಲ. ಈಗ 41 ವರ್ಷಗಳ ನಂತರ ಬಳಿಕ ಪದಕದ ಮೇಲೆ ಗುರಿ ನೆಟ್ಟಿದೆ.

ಇದನ್ನೂ ಓದಿ: 

ಭಾರತದ ಪರ ದಿಲ್‌ಪ್ರೀತ್ ಸಿಂಗ್ (7ನೇ ನಿಮಿಷ), ಗುರ್ಜಂತ್ ಸಿಂಗ್ (16ನೇ ನಿಮಿಷ) ಮತ್ತು ಹಾರ್ದಿಕ್ ಸಿಂಗ್ (57ನೇ ನಿಮಿಷ) ವಿಜಯದ ಗೋಲುಗಳನ್ನು ಬಾರಿಸಿದರು. ಬ್ರಿಟನ್ ಪರ 45ನೇ ನಿಮಿಷದಲ್ಲಿ ಸ್ಯಾಮ್ ವಾರ್ಡ್ ಗೋಲು ಬಾರಿಸಿ ಸೋಲಿನ ಅಂತರವನ್ನು ತಗ್ಗಿಸಿದರು. 

ಭಾರತದ ಗೋಲ್‌ಕೀಪರ್ ಶ್ರೀಜೇಶ್ ಮಗದೊಂದು ಬಾರಿ ಅದ್ಭುತ ಸೇವ್ ಮಾಡುವ ಮೂಲಕ ಭಾರತಕ್ಕೆ ಶ್ರೀರಕ್ಷೆಯಾದರು. 

ಬೆಲ್ಜಿಯಂ ಎದುರಾಳಿ...
ಆಗಸ್ಟ್ 3ರಂದು ನಡೆಯಲಿರುವ ಸೆಮಿಫೈನಲ್ ಮುಖಾಮುಖಿಯಲ್ಲಿ ಭಾರತ ತಂಡವು ಬೆಲ್ಜಿಯಂ ಸವಾಲನ್ನು ಎದುರಿಸಲಿದೆ. ಮಗದೊಂದು ಕ್ವಾರ್ಟರ್ ಹಣಾಹಣಿಯಲ್ಲಿ ಬೆಲ್ಜಿಯಂ ತಂಡವು ಸ್ಪೇನ್ ವಿರುದ್ಧ 3-1 ಗೋಲುಗಳ ಅಂತರದ ಗೆಲುವು ದಾಖಲಿಸಿತ್ತು. 

ಅತ್ತ ಮಗದೊಂದು ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ಹಾಗೂ ಜರ್ಮನಿ ತಂಡಗಳು ಸೆಣಸಲಿವೆ. ಮೊದಲ ಕ್ವಾರ್ಟರ್‌ನಲ್ಲಿ ಆಸ್ಟ್ರೇಲಿಯಾ ತಂಡವು ನೆದರ್ಲೆಂಡ್ಸ್ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ ಗೆಲುವು ದಾಖಲಿಸಿದ್ದರೆ ದ್ವಿತೀಯ ಕ್ವಾರ್ಟರ್‌ನಲ್ಲಿ ಜರ್ಮನಿ ತಂಡವು ಅರ್ಜೆಂಟೀನಾ ವಿರುದ್ಧ 3-1 ಗೋಲುಗಳ ಅಂತರದ ಜಯಭೇರಿ ಮೊಳಗಿಸಿತ್ತು. 

ಒಲಿಂಪಿಕ್ಸ್‌ ಇತಿಹಾಸದ ಪುಟ ತೆರೆದು ನೋಡಿದಾಗ, ಭಾರತ ಇದುವರೆಗೆ ಎಂಟು ಚಿನ್ನದ ಪದಕಗಳನ್ನು ಗೆದ್ದ ದಾಖಲೆಯನ್ನು ಹೊಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು