ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೋಕಿಯೊ ಒಲಿಂಪಿಕ್ಸ್ 2020 – ಅಥ್ಲೆಟಿಕ್ಸ್‌: ನನಸಾಗುವುದೇ ಪದಕದ ಕನಸು?

ಭಾರತದ ಕನಸಿನ ಪಯಣ
Last Updated 11 ಜುಲೈ 2021, 19:44 IST
ಅಕ್ಷರ ಗಾತ್ರ

ಪ್ರತಿ ಒಲಿಂಪಿಕ್ಸ್‌ ಆರಂಭವಾದಾಗ ಅಥ್ಲೆಟಿಕ್ಸ್‌ನಲ್ಲಿ ಈ ಬಾರಿಯಾದರೂ ಪದಕ ಬರಬಹುದೇ ಎನ್ನುವ ಪ್ರಶ್ನೆ ಮೂಡುತ್ತದೆ. ಹೀಗೆ ಕ್ರೀಡಾಪ್ರೇಮಿಗಳು ಪ್ರಶ್ನೆ ಕೇಳುತ್ತಾ ಒಂದು ಶತಮಾನವೇ ಕಳೆದರೂ ನಿರೀಕ್ಷೆ ಮಾತ್ರ ನಿಜವಾಗಿಲ್ಲ. ಅನೇಕ ಸಲ ಹಲವು ಅಥ್ಲೀಟ್‌ಗಳು ಪದಕಗಳ ಸಮೀಪ ಬಂದು ನಿರಾಸೆ ಕಂಡಿದ್ದಾರೆ.

ಭಾರತ ಪಾಲ್ಗೊಂಡ 1900ರ ತನ್ನ ಮೊದಲ ಒಲಿಂಪಿಕ್ಸ್‌ನ (ಪ್ಯಾರಿಸ್‌) ಅಥ್ಲೆಟಿಕ್ಸ್‌ನಲ್ಲಿ ನಾರ್ಮನ್‌ ಪಿಚರ್ಡ್‌ ಪುರುಷರ 200 ಮೀಟರ್ಸ್‌ ಓಟ ಮತ್ತು 200 ಮೀಟರ್ಸ್‌ ಹರ್ಡಲ್ಸ್‌ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಅದರ ನಂತರದ ಒಲಿಂಪಿಕ್ಸ್‌ನಿಂದ ಹಿಂದಿನ 2016ರ ರಿಯೊ ಡಿ ಜನೈರೊ ಕೂಟದ ತನಕ ಅಥ್ಲೆಟಿಕ್ಸ್‌ನಲ್ಲಿ ಪದಕದ ಆಸೆ ಈಡೇರಿಲ್ಲ. ಇತ್ತೀಚಿಗಷ್ಟೇ ನಿಧನರಾದ ಅಥ್ಲೀಟ್‌ ಮಿಲ್ಖಾ ಸಿಂಗ್‌ ‘ಭಾರತ ಅಥ್ಲೆಟಿಕ್ಸ್‌ನಲ್ಲಿ ಪದಕ ಗೆಲ್ಲುವುದನ್ನು ಕಣ್ತುಂಬಿಕೊಳ್ಳಬೇಕು’ ಎಂಬ ಆಸೆ ವ್ಯಕ್ತಪಡಿಸಿದ್ದರು.

ಟೋಕಿಯೊ ಟಿಕೆಟ್‌ ಪಡೆದಿರುವ ಜಾವೆಲಿನ್‌ ಎಸೆತ ಸ್ಪರ್ಧಿ ಹರಿಯಾಣದ ನೀರಜ್‌ ಚೋಪ್ರಾ ಭಾರತದ ಭರವಸೆ ಎನಿಸಿದ್ದಾರೆ. 2018ರಲ್ಲಿ ಗೋಲ್ಡ್‌ ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್‌ ಮತ್ತು ಜಕಾರ್ತದಲ್ಲಿ ಜರುಗಿದ ಏಷ್ಯನ್‌ ಕ್ರೀಡಾಕೂಟದಲ್ಲಿ ಅವರು ಚಿನ್ನದ ಪದಕಗಳನ್ನು ಗೆದ್ದು ಸಾಮರ್ಥ್ಯ ಸಾಬೀತು ಮಾಡಿದ್ದಾರೆ.

2019ರ ಮೇನಲ್ಲಿ ನೀರಜ್ ಬಲಮೊಣಕೈ ಗಾಯದ ಸಮಸ್ಯೆಯಿಂದಾಗಿ ಬಳಲಿದ್ದರು. ಆದ್ದರಿಂದ ಅವರಿಗೆ ಆ ವರ್ಷ ಯಾವ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. 2021ರ ಜನವರಿಯಲ್ಲಿ ಸ್ಪರ್ಧಾ ಕಣಕ್ಕೆ ಮರಳಿ 88.07 ಮೀಟರ್‌ ದೂರ ಎಸೆದು ರಾಷ್ಟ್ರೀಯ ದಾಖಲೆ ಬರೆದಿದ್ದರು. ಈ ಉತ್ತಮ ಪ್ರದರ್ಶನದಿಂದಾಗಿಯೇ ಮೊದಲ ಸಲ ಒಲಿಂಪಿಕ್ಸ್‌ಗೆ ಅರ್ಹತೆ ಲಭಿಸಿದೆ.

ಲಾಂಗ್‌ಜಂಪ್‌ನಲ್ಲಿ ಸ್ಪರ್ಧಿಸಲಿರುವ ಮುರಳಿ ಶ್ರೀಶಂಕರ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು 8.22 ಮೀ. ಜಿಗಿಯಬೇಕಿತ್ತು. ಅವರು 8.26 ಮೀ. ಜಿಗಿದು ಉತ್ತಮ ಸಾಮರ್ಥ್ಯ ತೋರಿಸಿ ತಮ್ಮದೇ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು ಉತ್ತಮಪಡಿಸಿಕೊಂಡಿದ್ದಾರೆ.

ನಡಿಗೆ ಸ್ಪರ್ಧಿ ಕೆ.ಟಿ. ಇರ್ಫಾನ್‌, ಮಹಿಳೆಯರ 100 ಮೀ. ಓಟದಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ದ್ಯುತಿ ಚಾಂದ್‌, ನಾಲ್ಕನೇ ಬಾರಿಗೆ ಅರ್ಹತೆ ಗಳಿಸಿರುವ ಡಿಸ್ಕಸ್‌ ಎಸೆತ ಸ್ಪರ್ಧಿ ಸೀಮಾ ಪೂನಿಯಾ ಒಲಿಂಪಿಕ್ಸ್‌ನಂಥ ದೊಡ್ಡ ಕ್ರೀಡಾ ವೇದಿಕೆಯಲ್ಲಿ ಆಡಿದ ಹಾಗೂ ಅಲ್ಲಿನ ಸವಾಲನ್ನು ಎದುರಿಸಿದ ಅನುಭವ ಹೊಂದಿದ್ದಾರೆ. ಈ ಅನುಭವವೇ ಭಾರತಕ್ಕೆ ಪದಕ ತಂದುಕೊಡಬಲ್ಲದು ಎನ್ನುವ ನಿರೀಕ್ಷೆ ಬಲವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT