ಶನಿವಾರ, ಸೆಪ್ಟೆಂಬರ್ 18, 2021
21 °C

Tokyo Olympics ಮಹಿಳಾ ಹಾಕಿ: ಬಲಿಷ್ಠ ಆಸೀಸ್ ಮಣಿಸಿದ ಭಾರತ ಸೆಮಿಫೈನಲ್‌ಗೆ ಲಗ್ಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ಮಹಿಳಾ ಹಾಕಿ ವಿಭಾಗದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು 1-0 ಗೋಲುಗಳ ಅಂತರದಲ್ಲಿ ಮಣಿಸಿರುವ ಭಾರತ ಸೆಮಿಫೈನಲ್‌ಗೆ ಪ್ರವೇಶಿಸಿದೆ. 

ಇದರೊಂದಿಗೆ ನಾಲ್ಕು ದಶಕಗಳ ಕಾಯುವಿಕೆಗೆ ಫಲ ಸಿಕ್ಕಿದೆ. 1980ರಲ್ಲಿ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿರುವುದು ಭಾರತ ಮಹಿಳಾ ಹಾಕಿ ತಂಡದ ಇದುವರೆಗಿನ ಶ್ರೇಷ್ಠ ಸಾಧನೆಯಾಗಿದೆ. ಅಂದು ಒಟ್ಟು ಆರು ತಂಡಗಳು ಸ್ಪರ್ಧಿಸಿತ್ತು. 

ಇದನ್ನೂ ಓದಿ: 

ವಿಶ್ವ ಅಗ್ರ ತಂಡದ ವಿರುದ್ಧ ಅಮೋಘ ಆಟದ ಪ್ರದರ್ಶನ ನೀಡಿದ ಭಾರತೀಯ ಆಟಗಾರ್ತಿಯರು ಅಮೋಘ ಗೆಲುವು ದಾಖಲಿಸಿದ್ದಾರೆ. ಇದು ಭಾರತದ ಮಹಿಳಾ ಹಾಕಿ ಕ್ರೀಡೆಯ ಪಾಲಿಗೆ ಐತಿಹಾಸಿಕ ಕ್ಷಣವಾಗಿದೆ. 

ಈ ಪಂದ್ಯಕ್ಕೂ ಮೊದಲು ಭಾರತ ತಂಡವು ಆಸ್ಟ್ರೇಲಿಯಾವನ್ನು ಮಣಿಸಲಿದೆ ಎಂದು ಬಹುಶಃ ಯಾರೂ ಅಂದುಕೊಂಡಿರಲಿಲ್ಲ. ಆದರೆ ಭಾರತದ ಪರ ಏಕೈಕ ಗೋಲು ಬಾರಿಸಿದ ಗುರ್ಜಿತ್ ಕೌರ್ ಗೆಲುವಿನ ರೂವಾರಿಯೆನಿಸಿದರು.  

ಗುಂಪು ಹಂತದಲ್ಲಿ ಹ್ಯಾಟ್ರಿಕ್ ಸೋಲು ಅನುಭವಿಸಿ ಕ್ವಾರ್ಟರ್ ಹಂತಕ್ಕೆ ತಲುಪಲು ತಡಕಾಡಿದ ರಾಣಿ ರಾಂಪಾಲ್ ಪಡೆಯು ಅಲ್ಲಿಂದ ಬಳಿಕ ಹಿಂತಿರುಗಿಯೇ ನೋಡಲಿಲ್ಲ. ಗುಂಪು ಹಂತದಲ್ಲಿ ಗೆಲ್ಲಲೇಬೇಕಾದ ಕೊನೆಯ ಎರಡು ಪಂದ್ಯಗಳಲ್ಲಿ ಗೆಲುವು ದಾಖಲಿಸಿತ್ತು. ಅಂತಿಮವಾಗಿ ಆರು ಪಾಯಿಂಟ್‌ ಗಳಿಸಿ ಎಂಟರ ಘಟ್ಟಕ್ಕೆ ಪ್ರವೇಶಿಸಿತು. ದಕ್ಷಿಣ ಆಫ್ರಿಕಾ ವಿರುದ್ಧ ಅಂತಿಮ ಪಂದ್ಯದಲ್ಲಿ ವಂದನಾ ಕಟಾರಿಯಾ ಹ್ಯಾಟ್ರಿಕ್ ಗೋಲು ಬಾರಿಸಿ ಒಲಿಂಪಿಕ್ಸ್‌ನಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ್ತಿ ಎನಿಸಿಕೊಂಡರು. 

ಈಗ ಪುರುಷರ ಹಾಕಿ ಬಳಿಕ ಮಹಿಳಾ ಹಾಕಿ ವಿಭಾಗದಲ್ಲೂ ಭಾರತ ಸೆಮಿಫೈನಲ್‌ಗೇರಿದ ಸಾಧನೆ ಮಾಡಿದೆ.

ಇದನ್ನೂ ಓದಿ: 

ಅರ್ಜೆಂಟೀನಾ ಸವಾಲು...
ಆಗಸ್ಟ್ 4ರಂದು ನಡೆಯಲಿರುವ ಸೆಮಿಫೈನಲ್‌ನಲ್ಲಿ ಭಾರತ ತಂಡವು ಅರ್ಜೆಂಟೀನಾ ಸವಾಲನ್ನು ಎದುರಿಸಲಿದೆ. ಮಗದೊಂದು ಕ್ವಾರ್ಟರ್‌ನಲ್ಲಿ ಅರ್ಜೆಂಟೀನಾ ತಂಡವು ಜರ್ಮನಿ ವಿರುದ್ಧ 3-0 ಗೋಲುಗಳ ಅಂತರದ ಗೆಲುವು ದಾಖಲಿಸಿತ್ತು. ಆ ಪಂದ್ಯ ಗೆದ್ದರೆ ಚಿನ್ನಕ್ಕಾಗಿ ಆಗಸ್ಟ್ 6ರಂದು ಕಣಕ್ಕಿಳಿಯಲಿದೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು