ಶನಿವಾರ, ಸೆಪ್ಟೆಂಬರ್ 18, 2021
30 °C

ಒಡವೆ ಮಾರಿ ಮೀರಾಗೆ ಒಲಿಂಪಿಕ್ಸ್ ರಿಂಗ್ ಮಾದರಿಯ ಓಲೆ ಮಾಡಿಸಿಕೊಟ್ಟಿದ್ದ ತಾಯಿ

ಪಿಟಿಐ Updated:

ಅಕ್ಷರ ಗಾತ್ರ : | |

ಇಂಫಾಲ್: ಟೋಕಿಯೊ ಒಲಿಂಪಿಕ್ಸ್ ವೇಟ್ ಲಿಫ್ಟಿಂಗ್‌ನಲ್ಲಿ ಭಾರತದ ಹೆಮ್ಮೆಯೆ ಮೀರಾಬಾಯಿ ಚಾನು ಅವರು ಗೆದ್ದ ಬೆಳ್ಳಿ ಪದಕವು ಮಾತ್ರ ಜನರ ಗಮನ ಸೆಳೆಯಲಿಲ್ಲ. ಟಿ.ವಿಯಲ್ಲಿ ನೋಡುತ್ತಿದ್ದವರಿಗೆ ಅವರ ಕಿವಿಯಲ್ಲಿದ್ದ ಒಲಿಂಪಿಕ್ಸ್ ಉಂಗುರಗಳ ಆಕಾರದ ಚಿನ್ನದ ಓಲೆಗಳು ಸಹ ಕಣ್ಣು ಕೋರೈಸಿದ್ದವು.

ಅವು ಅಂತಿಂಥಾ ಓಲೆಯಲ್ಲ. ಐದು ವರ್ಷಗಳ ಹಿಂದೆ ಅವರಿಗೆ ಅವರ ತಾಯಿ ಸ್ವಂತ ಆಭರಣಗಳನ್ನು ಮಾರಾಟ ಮಾಡಿ ಉಡುಗೊರೆಯಾಗಿ ಮಾಡಿಸಿ ಕೊಟ್ಟಿದ್ದರು. ಒಲಿಂಪಿಕ್ಸ್‌ನಲ್ಲಿ ಮಗಳು ಪದಕ ಗೆಲ್ಲಲಿ ಎಂಬುದು ಅವರ ಅಭಿಲಾಷೆಯಾಗಿತ್ತು. ಈ ಓಲೆಗಳು ಅವರಿಗೆ ಅದೃಷ್ಟ ತಂದುಕೊಡಲಿ ಎಂಬ ನಂಬಿಕೆಯು ಇಂದು ನಿಜವಾಗಿದೆ.

ಓಲೆಗಳು ಅವಳಿಗೆ ‘ಅದೃಷ್ಟ‘ ತರುತ್ತವೆ ಎಂಬ ಭರವಸೆ ಇತ್ತು. 2016 ರಿಯೊ ಒಲಿಂಪಿಕ್ಸ್‌ನಲ್ಲಿ ಅದು ಸಾಧ್ಯವಾಗಲಿಲ್ಲ ಆದರೆ, ಚಾನು ಇಂದು ಬೆಳಿಗ್ಗೆ ಟೋಕಿಯೊದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾಳೆ. ಈ ಸಂದರ್ಭ, ಬಹಳ ವರ್ಷಗಳಿಂದ ತಡೆದಿದ್ದ ಕಣ್ಣೀರು ಈಗ ಹರಿಸಿದೆ ಎಂದು ಅವರ ತಾಯಿ ಸೈಖೋಮ್ ಒಂಗ್ಬಿ ಟೋಂಬಿ ಲೀಮಾ ಒಮ್ಮೆಲೆ ಹೇಳಿದ್ದಾರೆ.

‘ನಾನು ಟಿವಿಯಲ್ಲಿ ಕಿವಿಯೋಲೆಗಳನ್ನು ನೋಡಿದ್ದೇನೆ, 2016 ರಲ್ಲಿ (ರಿಯೊ) ಒಲಿಂಪಿಕ್ಸ್‌ಗೆ ಮುಂಚಿತವಾಗಿ ನಾನು ಅವುಗಳನ್ನು ಅವಳಿಗೆ ಕೊಟ್ಟಿದ್ದೆ. ನನ್ನ ಬಳಿ ಇರುವ ಚಿನ್ನದ ಒಡವೆಗಳು ಮತ್ತು ಉಳಿತಾಯದಿಂದ ನಾನು ಅದನ್ನು ಅವಳಿಗೆ ಮಾಡಿಸಿದ್ದೆ. ಅವುಗಳು ಅದೃಷ್ಟ ಮತ್ತು ಯಶಸ್ಸನ್ನು ತರುತ್ತದೆ ಎಂಬ ನಂಬಿಕೆ ಇತ್ತು.’ ಎಂದು ಲೀಮಾ ಪಿಟಿಐಗೆ ತಿಳಿಸಿದ್ದಾರೆ.

‘ನನ್ನ ಮಗಳು ಪದಕ ಗೆದ್ದ ಕ್ಷಣಗಳನ್ನು ಟಿ.ವಿಯಲ್ಲಿ ಕಣ್ತುಂಬಿಸಿಕೊಂಡೆ. ನನ್ನ ಕಣ್ಣಂಚಿನಲ್ಲಿ ನೀರು ತುಂಬಿತ್ತು. ಅವಳ ತಂದೆ (ಸೈಖೋಮ್ ಕೃತಿ ಮೈಟೈ) ಕೂಡ ಕಣ್ಣೀರು ಹಾಕಿದರು. ಅದು ಸಂತೋಷದ ಕಣ್ಣೀರು. ಅವಳ ಎಲ್ಲಾ ಶ್ರಮವು ಯಶಸ್ಸಿಗೆ ಕಾರಣವಾಗಿದೆ.’ ಎಂದು ತಾಯಿ ಲೀಮಾ ಹೇಳಿದ್ದಾರೆ.

ಮೀರಾಬಾಯಿ ಚಾನು ಅವರು ಬೆಳಿಗ್ಗೆ ಟೋಕಿಯೊ ಒಲಿಂಪಿಕ್ಸ್‌ನ 49 ಕೆ.ಜಿ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಪದಕ ಗೆದ್ದು ಭಾರತದ ಪದಕ ಬೇಟೆಗೆ ಭರ್ಜರಿ ಆರಂಭ ನೀಡಿದ್ದರು.

ಟೋಕಿಯೊದಲ್ಲಿ ಚಾನು ಇತಿಹಾಸ ಬರೆಯುತ್ತಿದ್ದಂತೆ ಅಭಿನಂದನೆ ತಿಳಿಸಲು ಗಣನೀಯ ಸಂಖ್ಯೆಯ ಸಂಬಂಧಿಕರು, ಸ್ನೇಹಿತರು ಮತ್ತು ಹಿತೈಷಿಗಳು ಮಣಿಪುರದ ಚಾನು ಅವರ ಮನೆಯಲ್ಲಿ ನೆರೆದಿದ್ದರು.

ಇದನ್ನೂ ಓದಿ.. ಚಿನ್ನ ಅಥವಾ ಕನಿಷ್ಠ ಪದಕ ಗೆಲ್ಲುವುದಾಗಿ ಹೇಳಿ ಹೋಗಿದ್ದ ಮೀರಾಬಾಯಿ ಚಾನು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು