ಬುಧವಾರ, ಜುಲೈ 28, 2021
21 °C
ಪರಿಸ್ಥಿತಿ ಬಿಗಡಾಯಿಸಿದರೆ ನಿರ್ಧಾರ ಹಿಂತೆಗೆದುಕೊಳ್ಳುವ ಎಚ್ಚರಿಕೆ ನೀಡಿದ ಪ್ರಧಾನಿ ಸೂಗ

ಒಲಿಂಪಿಕ್ಸ್‌: 10 ಸಾವಿರ ಪ್ರೇಕ್ಷಕರಿಗೆ ಅವಕಾಶ

ಎಪಿ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಮುಂದಿನ ತಿಂಗಳ ಕೊನೆಯಲ್ಲಿ ಆರಂಭವಾಗಲಿರುವ ಒಲಿಂಪಿಕ್ಸ್‌ ಕೂಟದ ವೇಳೆ ಪ್ರತಿ ಕ್ರೀಡಾಂಗಣದಲ್ಲಿ 10 ಸಾವಿರ ಸ್ಥಳೀಯ ಪ್ರೇಕ್ಷಕರು ಸ್ಪರ್ಧೆಗಳನ್ನು ವೀಕ್ಷಿಸಲು ಅವಕಾಶ ನೀಡಲಾಗುವುದು ಎಂದು ಆಯೋಜನಾ ಸಮಿತಿ ಸೋಮವಾರ ತಿಳಿಸಿದೆ. ಪರಿಸ್ಥಿತಿ ಬಿಗಡಾಯಿಸಿದರೆ ನಿರ್ಧಾರ ಹಿಂತೆಗೆದುಕೊಳ್ಳುವುದಾಗಿ ಜಪಾನ್ ಪ್ರಧಾನಿ ಯೊಶಿಡೆ ಸೂಗ ಎಚ್ಚರಿಕೆ ನೀಡಿದ್ದಾರೆ.

ಒಲಿಂಪಿಕ್ಸ್‌ಗೆ ವಿದೇಶಿ ಪ್ರೇಕ್ಷಕರ ಮೇಲೆ ಈಗಾಗಲೇ ನಿಷೇಧ ಹೇರಲಾಗಿದೆ. ಸ್ಥಳೀಯ ಪ್ರೇಕ್ಷಕರ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವುದಾಗಿ ಸಮಿತಿಯವರು ಪದೇ ಪದೇ ಹೇಳುತ್ತಾ ಬಂದಿದ್ದರು. ಸೋಮವಾರ ಆನ್‌ಲೈನ್ ಮೂಲಕ ನಡೆದ ಸಭೆಯ ನಂತರ ಆಯೋಜನಾ ಸಮಿತಿ ಮತ್ತು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಈ ಕುರಿತ ಅಂತಿಮ ತೀರ್ಮಾನ ಪ್ರಕಟಿಸಿತು.

ಸಭೆಯಲ್ಲಿ ಸ್ಥಳೀಯ ಆಯೋಜಕರು, ಐಒಸಿ, ಅಂತರರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿ, ಜಪಾನ್ ಸರ್ಕಾರದ ಪ್ರತಿನಿಧಿಗಳು ಮತ್ತು ಟೋಕಿಯೊ ಮೆಟ್ರೊಪಾಲಿಟನ್ ಸರ್ಕಾರದ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಪ್ರೇಕ್ಷಕರಿಲ್ಲದೆ ಕ್ರೀಡಾಕೂಟ ಆಯೋಜಿಸುವುದು ಅತ್ಯಂತ ಸೂಕ್ತ ಎಂದು ದೇಶದ ಪ್ರಮುಖ ವೈದ್ಯ ಶಿಗೇರು ಒಮಿ ಕಳೆದ ವಾರ ಶಿಫಾರಸು ಮಾಡಿದ್ದರು. ಅದನ್ನು ಕಡೆಗಣಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.  

ಟೋಕಿಯೊ ಒಲಿಂಪಿಕ್ಸ್ ಜುಲೈ 23ರಂದು ಆರಂಭಗೊಳ್ಳಲಿದೆ. ಸ್ಥಳೀಯರನ್ನು ಷರತ್ತುಗಳಿಗೆ ಒಳಪಡಿಸಿ ಒಳಗೆ ಬಿಡಲಾಗುವುದು ಎಂದು ತಿಳಿಸಲಾಗಿದೆ. ಸ್ಪರ್ಧೆಗಳು ನಡೆಯುವಾಗ ಸಂಭ್ರಮ ಆಚರಿಸಲು ಪ್ರೇಕ್ಷಕರಿಗೆ ಅವಕಾಶವಿಲ್ಲ. ಮಾಸ್ಕ್‌ ಧರಿಸದ ಯಾರನ್ನೂ ಒಳಗೆ ಬಿಡಲಾಗುವುದಿಲ್ಲ. ಸ್ಪರ್ಧೆ ಮುಗಿದ ನಂತರ ಎಲ್ಲೂ ನಿಲ್ಲದೆ ನೇರವಾಗಿ ಮನೆಗೆ ತೆರಳಬೇಕು ಎಂದು ಸೂಚಿಸಲಾಗಿದೆ. 

ಕ್ರೀಡಾಂಗಣಗಳಿಗೆ ಪ್ರೇಕ್ಷಕರನ್ನು ಬಿಡುವುದರಿಂದ ವೈರಸ್ ಸೋಂಕು ಹಬ್ಬುವ ಸಾಧ್ಯತೆಗಳು ಹೆಚ್ಚು ಇವೆ. ಕ್ರೀಡಾಕೂಟಗಳಿಗೆ ಜನರು ಬಂದರೆ ರೈಲು, ರೆಸ್ಟಾರೆಂಟ್ ಮತ್ತು ಇತರ ಜಾಗಗಳಲ್ಲೂ ಸೋಂಕು ಉಂಟಾಗುವ ಸಾಧ್ಯತೆ ಇದೆ. ಜುಲೈ 11ರ ವರೆಗೆ ಟೋಕಿಯೊ ಮತ್ತು ಸುತ್ತಮುತ್ತ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು. ಮತ್ತಷ್ಟು ಕಠಿಣ ನಿರ್ಬಂಧಗಳೊಂದಿಗೆ ಇದನ್ನು ಕಳೆದ ವಾರದ ವರೆಗೆ ವಿಸ್ತರಿಸಲಾಗಿತ್ತು. ಈಗ ಹೊಸ ನಿಯಮಾವಳಿಗಳು ಜಾರಿಯಲ್ಲಿದ್ದು ರೆಸ್ಟಾರೆಂಟ್‌ಗಳಲ್ಲಿ ನಿಗದಿತ ಅವಧಿಯಲ್ಲಿ ಮದ್ಯ ಸಬರಾಜಿಗೆ ಅವಕಾಶ ನೀಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು