ಬುಧವಾರ, ಆಗಸ್ಟ್ 4, 2021
23 °C

ಹಾಕಿ ಇಂಡಿಯಾ ಅಧ್ಯಕ್ಷ ಅಹಮದ್ ರಾಜೀನಾಮೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಹಾಕಿ ಇಂಡಿಯಾದ ಅಧ್ಯಕ್ಷ ಸ್ಥಾನಕ್ಕೆ ಮೊಹಮ್ಮದ್ ಮುಷ್ತಾಕ್ ಅಹಮದ್ ರಾಜೀನಾಮೆ ನೀಡಿದ್ದಾರೆ. ಅವರ ಸ್ಥಾನಕ್ಕೆ ಹಿರಿಯ ಉಪಾಧ್ಯಕ್ಷ, ಮಣಿಪುರದ ಗ್ಯಾನೆಂದ್ರೊ ನಿಗೊಂಬಮ್ ಅವರನ್ನು ನೇಮಕ ಮಾಡಲಾಗಿದೆ.

‘ವೈಯಕ್ತಿಕ ಕಾರಣಗಳಿಗಾಗಿ ರಾಜೀನಾಮೆ ನೀಡಿದ್ದೇನೆ’ ಎಂದು ಅಹಮದ್ ತಿಳಿಸಿದ್ದಾರೆ. 

ಆದರೆ, ರಾಷ್ಟ್ರೀಯ ಕ್ರೀಡಾ ನೀತಿಯಲ್ಲಿರುವ ಅಧ್ಯಕ್ಷೀಯ ಅಧಿಕಾರವಧಿ ನಿಯಮವನ್ನು ಅವರು ಉಲ್ಲಂಘಿಸಿದ್ದರಿಂದ, ಸ್ಥಾನ ತೊರೆಯುವಂತೆ ಕೇಂದ್ರ ಕ್ರೀಡಾ ಸಚಿವಾಲಯ ಈಚೆಗೆ ಸೂಚಿಸಿತ್ತು.

‘ಹಾಕಿ ಇಂಡಿಯಾದ ಆಡಳಿತ ಸಮಿತಿಯ ತುರ್ತು ಸಭೆಯಲ್ಲಿ ಗ್ಯಾನೆಂದ್ರೊ ನಿಗೊಂಬಮ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ಅಧ್ಯಕ್ಷ ಸ್ಥಾನಕ್ಕೆ ಅವರ ಆಯ್ಕೆಯು ನಿಯಮಬಾಹಿರವಾಗಿತ್ತು. ವಯೋಮಿತಿ ಮತ್ತು ಪದಾಧಿಕಾರಿಗಳ ಅಧಿಕಾರವಧಿಯ ನಿಯಮಗಳನ್ನು ಪಾಲಿಸಲಾಗಿರಲಿಲ್ಲ.  ಆದ್ದರಿಂದ ಸರ್ಕಾರವು ಅವರಿಗೆ ಮುಂದುವರಿಯದಿರಲು ಸೂಚಿಸಿತ್ತು’ ಎಂದು ಹೇಳಲಾಗಿದೆ.

ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳ ಪದಾಧಿಕಾರಿಗಳು ಸತತ ನಾಲ್ಕು ವರ್ಷಗಳ  ಎರಡು ಅವಧಿಯಲ್ಲಿ (ಒಟ್ಟು ಎಂಟು ವರ್ಷ) ಕಾರ್ಯನಿರ್ವಹಿಸಬಹುದು ಎಂದು 2011ರಲ್ಲಿ ನಿಯಮ ರೂಪಿಸಲಾಗಿತ್ತು. ನಂತರ ಪರಿಷ್ಕರಣೆಗೊಂಡ ನಿಯಮದ ಪ್ರಕಾರ ಅಧ್ಯಕ್ಷರು ಮೂರು ಅವಧಿಯಲ್ಲಿ ಮುಂದುವರಿಯಬಹುದು ಎಂದು ಹೇಳಲಾಗಿತ್ತು.

2018ರಲ್ಲಿ ನಡೆದ ಚುನಾವಣೆಯಲ್ಲಿ ಅಹಮದ್ ಆಯ್ಕೆಯಾಗಿದ್ದರಿಂದ ಹಾಕಿ ಇಂಡಿಯಾ ಮತ್ತು ಕ್ರೀಡಾ ಸಚಿವಾಲಯದ ನಡುವೆ ಭಿನ್ನಾಭಿಪ್ರಾಯ ತಲೆದೂರಿತ್ತು.

2019ರಲ್ಲಿ ವ್ಯಕ್ತಿಯೊಬ್ಬರು ಮಾಹಿತಿ ಹಕ್ಕು ನಿಯಮದಡಿ ಸಲ್ಲಿಸಿದ್ದ ಅರ್ಜಿಗೆ ಉತ್ತರಿಸಿದ್ದ ಕ್ರೀಡಾ ಸಚಿವಾಲಯವು, ‘2018ರ ಅಕ್ಟೋಬರ್ 1ರಂದು ನಡೆದ ಅಹಮದ್ ಅವರ ಆಯ್ಕೆಯು ನಿಯಮದ ಉಲ್ಲಂಘನೆಯಾಗಿದೆ. ಅವರು ಹಾಕಿ ಇಂಡಿಯಾದಲ್ಲಿ ಎರಡು ಅವಧಿಯಲ್ಲಿ ಸತತವಾಗಿ ಕಾರ್ಯನಿರ್ವಹಿಸಿದ್ದರು’ ಎಂದಿತ್ತು.

2019ರ ಫೆಬ್ರುವರಿ 13ರಂದು ಅಹಮದ್ ಅವರಿಗೆ ಸ್ಥಾನ ತೊರೆಯುವಂತೆ ಸಚಿವಾಲಯವು ಪತ್ರ ಬರೆದಿತ್ತು. ಅದಕ್ಕುತ್ತರವಾಗಿ ಹಾಕಿ ಇಂಡಿಯಾ, ‘ಪರಿಷ್ಕೃತ ನಿಯಮದಡಿಯಲ್ಲಿ ಅಹಮದ್ ಅವರ ನೇಮಕವು ಸರಿಯಾಗಿಯೇ ಇದೆ. 2010ರ ಮೇ 1ರ ಮಾರ್ಗಸೂಚಿಯ ಪ್ರಕಾರ ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ’ ಎಂದಿತ್ತು.

2010ರಲ್ಲಿ ಹಾಕಿ ಇಂಡಿಯಾ ಅಂಗೀಕೃತ ಫೆಡರೇಷನ್ ಆಗಿರಲಿಲ್ಲ. 2014ರ ಫೆಬ್ರುವರಿ 28ರಂದು ಮಾನ್ಯತೆ ಲಭಿಸಿತ್ತು. ಆ ಸಂದರ್ಭದಲ್ಲಿ ಅಹಮದ್ ಅವರು ಖಜಾಂಚಿಯಾಗಿದ್ದರು. ಅದೇ ವರ್ಷ ಅಕ್ಟೋಬರ್ 13ರಂದು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು. 2018ರಲ್ಲಿ ಅಧ್ಯಕ್ಷರಾಗಿ ಚುನಾಯಿತರಾಗಿದ್ದರು. ಸದ್ಯ ಅವರು ಅಧ್ಯಕ್ಷರಾಗಿ ಎರಡನೇ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

‘ಫೆಡರೇಷನ್‌ಗೆ ಮಾನ್ಯತೆ ಸಿಕ್ಕ ಸಂದರ್ಭದಲ್ಲಿ ಇದ್ದ ನಿಯಮಗಳು ಅನ್ವಯವಾಗುತ್ತವೆ. ಅದರ ಪ್ರಕಾರ ಪದಾಧಿಕಾರಿಗಳ ವಯೋಮಿತಿ ಮತ್ತು  ಅವಧಿಯ ನಿಯಮದ ಪ್ರಕಾರ ಅಹಮದ್ ನೇಮಕವು ಸೂಕ್ತವಲ್ಲ’ ಎಂದು ಸಚಿವಾಲಯ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು