ಬುಧವಾರ, ಡಿಸೆಂಬರ್ 2, 2020
17 °C

ಲೆಜೆಂಡ್ಸ್‌ ಚೆಸ್: ಮುಂದುವರಿದ ಆನಂದ್‌ ಪರದಾಟ

ಪಿಟಿಐ Updated:

ಅಕ್ಷರ ಗಾತ್ರ : | |

prajavani

ಚೆನ್ನೈ: ಲೆಜೆಂಡ್ಸ್‌ ಆಫ್‌ ಚೆಸ್‌ ಆನ್‌ಲೈನ್‌ ಟೂರ್ನಿಯಲ್ಲಿ ಭಾರತದ ವಿಶ್ವನಾಥನ್‌ ಆನಂದ್‌ ಅವರ ಪರದಾಟ ಮುಂದುವರಿದಿದೆ. ಮಾಜಿ ವಿಶ್ವ ಚಾಂಪಿಯನ್‌ ಆನಂದ್‌ ಸೋಮವಾರ ರಷ್ಯದ ಇಯಾನ್‌ ನೆಪೊಮ್‌ನಿಯಾಟ್ಜಿ ಅವರಿಗೆ ಮಣಿಯುವ ಮೂಲಕ ಸತತ ಆರನೇ ಸೋಲನ್ನು ಅನುಭವಿಸಿದರು.

ರಷ್ಯದ ಆಟಗಾರ 3–2 ರಿಂದ ಜಯಗಳಿಸಿದರು. ಪ್ರತಿ ಸುತ್ತಿನಲ್ಲಿ ನಾಲ್ಕು ಆಟಗಳಿರುತ್ತವೆ.

ಚೆನ್ನೈನ ಆಟಗಾರ ಉತ್ತಮ ರಕ್ಷಣಾತ್ಮಕ ನಡೆಗಳನ್ನಿರಿಸಿ ಮೊದಲ ಆಟವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆದರೆ ಎರಡನೇ ಆಟದಲ್ಲಿ ರಷ್ಯದ ಆಟಗಾರ ಕೇವಲ 34 ನಡೆಗಳಲ್ಲಿ ಆನಂದ್‌ ಸವಾಲನ್ನು ಅಡಗಿಸಿದರು. ಮೂರನೇ ಆಟದಲ್ಲಿ ಇಬ್ಬರೂ 48 ನಡೆಗಳ ನಂತರ ‘ಡ್ರಾ‘ಕ್ಕೆ ಸಮ್ಮತಿಸಿದರು. ನಾಲ್ಕನೇ ಆಟದಲ್ಲಿ ಆನಂದ್‌ 42 ನಡೆಗಳಲ್ಲಿ ಜಯಗಳಿಸಿದ ಕಾರಣ ಹೋರಾಟ ‘ಟೈ ಬ್ರೇಕರ್‌’ಗೆ ಬೆಳೆಯಿತು. ಆದರೆ ರಷ್ಯ ಆಟಗಾರ ಟೈಬ್ರೇಕರ್‌ ಆಟದಲ್ಲಿ ಜಯಗಳಿಸಿದ್ದರಿಂದ ಅನಂದ್‌ ಅವರಿಗೆ ನಿರಾಶೆಯಾಯಿತು.

50 ವರ್ಷದ ಆನಂದ್‌ ಈಗ ಮೂರು ಪಾಯಿಂಟ್‌ಗಳೊಡನೆ 9ನೇ ಸ್ಥಾನದಲ್ಲಿದ್ದಾರೆ.

ಸುಮಾರು ₹ 1.12 ಕೋಟಿ ಬಹುಮಾನದ ಈ ಟೂರ್ನಿಯಲ್ಲಿ, ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್‌ ಕಾರ್ಲ್‌ಸನ್‌ (ನಾರ್ವೆ) 17 ಪಾಯಿಂಟ್ಸ್‌ ಸಂಗ್ರಹಿಸಿ ಅಗ್ರಸ್ಥಾನದಲ್ಲಿದ್ದಾರೆ. ಅವರು ಆರನೇ ಸುತ್ತಿನಲ್ಲಿ 2.5–1.5 ರಿಂದ ಚೀನಾದ ಡಿಂಗ್‌ ಲಾರೆನ್‌ ಅವರನ್ನು ಸೋಲಿಸಿದರು.

ಇತರ ಪಂದ್ಯಗಳಲ್ಲಿ ಅನಿಶ್‌ ಗಿರಿ 2.5–1.5 ರಿಂದ ಪೀಟರ್‌ ಲೆಕೊ ಅವರನ್ನು, ವ್ಲಾದಿಮಿರ್‌ ಕ್ರಾಮ್ನಿಕ್‌ 3.–2 ರಿಂದ ಬೋರಿಸ್‌ ಗೆಲ್‌ಫಾಂಡ್‌ ಅವರನ್ನು, ಪೀಟರ್‌ ಸ್ವಿಡ್ಲರ್‌ 3–2 ರಿಂದ ವ್ಯಾಸಿಲ್‌ ಇವಾನ್‌ಚುಕ್‌ ಅವರನ್ನು ಸೋಲಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು