ಸೋಮವಾರ, ಜನವರಿ 27, 2020
15 °C

ಗುರು ಇಲ್ಲದೇ ಗುರಿ ಮುಟ್ಟಿದ ಛಲಗಾತಿ

ಜಿ.ಶಿವಕುಮಾರ Updated:

ಅಕ್ಷರ ಗಾತ್ರ : | |

Prajavani

ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು ಎಂಬ ಮಾತಿದೆ.

ಗುರು ಇಲ್ಲದೇ ಗುರಿ ಮುಟ್ಟಿದವರು ವಿರಳ. ಅಂತಹ ಸಾಧಕರ ಸಾಲಿಗೆ ಸೇರಿದವರು ಎಲ್‌.ಜಿ.ನಂದಿನಿ.

ಬೆಂಗಳೂರಿನ ಈ ಪ್ರತಿಭಾನ್ವಿತೆ, ಜನಸಾಮಾನ್ಯರಿಗೆ ಅಷ್ಟೇನು ಪರಿಚಿತವಲ್ಲದ ನೆಟ್‌ಬಾಲ್‌ ಕ್ರೀಡೆಯಲ್ಲಿ ಹೆಜ್ಜೆ ಗುರುತು ಮೂಡಿಸುತ್ತಿದ್ದಾರೆ. ಜೂನಿಯರ್‌ ಮತ್ತು ಸೀನಿಯರ್‌ ವಿಭಾಗದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಈಗಾಗಲೇ ಹಲವು ಪದಕಗಳಿಗೆ ಕೊರಳೊಡ್ಡಿದ್ದಾರೆ.

2018ರಲ್ಲಿ ಸಿಂಗಪುರದಲ್ಲಿ ನಡೆದಿದ್ದ ಎಮ್‌–1 ಏಷ್ಯಾ ಚಾಂ‍ಪಿಯನ್‌ಷಿಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ 24 ವರ್ಷದ ನಂದಿನಿ, ಕರ್ನಾಟಕ ಒಲಿಂಪಿಕ್‌ ಸಂಸ್ಥೆಯು (ಕೆಒಎ) ರಾಜ್ಯದ ಶ್ರೇಷ್ಠ ಕ್ರೀಡಾಪಟುಗಳಿಗೆ ನೀಡುವ 2019ನೇ ಸಾಲಿನ ಕೆಒಎ ಗೌರವಕ್ಕೆ ಭಾಜನರಾಗಿದ್ದಾರೆ.ಬೆಂಗಳೂರು ವಿಶ್ವವಿದ್ಯಾಲಯ ನೀಡುವ ಪಾರ್ವತಮ್ಮ ಮಲ್ಲಾರಾಧ್ಯ ಪ್ರಶಸ್ತಿಯನ್ನೂ ಪಡೆದಿರುವ ಅವರು ‘ಪ್ರಜಾವಾಣಿ’ ಜೊತೆ ತಮ್ಮ ಕನಸುಗಳನ್ನು ಬಿಚ್ಚಿಟ್ಟಿದ್ದಾರೆ.

ಈ ಬಾರಿ ಕೆಒಎ ಗೌರವಕ್ಕೆ ಭಾಜನರಾಗಿದ್ದೀರಿ. ಹೇಗನಿಸುತ್ತಿದೆ. ಪ್ರಶಸ್ತಿ ಸಿಗುವ ನಿರೀಕ್ಷೆ ಇತ್ತೆ?

ಖಂಡಿತವಾಗಿಯೂ ನಿರೀಕ್ಷೆ ಇರಲಿಲ್ಲ. ಪ್ರತಿಭೆಯನ್ನು ಗುರುತಿಸಿ ಪುರಸ್ಕಾರ ನೀಡಿರುವುದಕ್ಕೆ ಅತೀವ ಖುಷಿಯಾಗಿದೆ. ಇನ್ನಷ್ಟು ಸಾಧನೆ ಮಾಡಲು ಇದು ಪ್ರೇರಣೆಯಾಗಲಿದೆ.

ಬೆಂಗಳೂರಿನ ಕ್ಯೂನಿ ಕಾನ್ವೆಂಟ್‌ನಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದೇನೆ. ನನಗೆ ಪ್ರಶಸ್ತಿ ಸಿಕ್ಕಿರುವುದರಿಂದ ಶಾಲೆಯ ಮಕ್ಕಳಿಗೂ ಖುಷಿಯಾಗಿದೆ. ನನ್ನ ಈ ಸಾಧನೆ ಅವರಿಗೆ ಮಾದರಿಯಾಗಬಹುದು. ಅವರೂ ನನ್ನ ಹಾದಿಯಲ್ಲೇ ಹೆಜ್ಜೆ ಇಡಲು ಇದು ಸಹಕಾರಿಯಾಗಬಹುದು.

ನೆಟ್‌ಬಾಲ್‌ ಪಯಣ ಶುರುವಾಗಿದ್ದು ಹೇಗೆ?

ಶಾಲಾ ದಿನಗಳಲ್ಲಿ ಕ್ರೀಡೆಯ ಬಗ್ಗೆ ಅಷ್ಟೇನು ಆಸಕ್ತಿ ಇರಲಿಲ್ಲ.  ಪಿಯುಸಿ ವ್ಯಾಸಂಗಕ್ಕಾಗಿ ಬೆಂಗಳೂರಿನ ಬಿ.ಎಂ.ಎಸ್‌.ಕಾಲೇಜಿಗೆ ಸೇರಿದ ಬಳಿಕ ನನ್ನೊಳಗೆ ಕ್ರೀಡಾ ಪ್ರೇಮ ಮೊಳೆಯಿತು. ಕಾಲೇಜಿನಲ್ಲಿ ಕ್ರೀಡೆಗೆ ಪೂರಕ ವಾತಾವರಣ ಮತ್ತು ಪ್ರೋತ್ಸಾಹ ಇತ್ತು. ಅಕ್ಕ ಕೂಡ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಳು. ಆಟದತ್ತ ಹೊರಳಲು ಅವಳ ಸಲಹೆಯೂ ಕಾರಣ.

ನೆಟ್‌ಬಾಲ್‌, ಅಷ್ಟೇನೂ ಪ್ರಸಿದ್ಧಿ ಹೊಂದಿಲ್ಲ. ಹೀಗಿದ್ದರೂ ಈ ಕ್ರೀಡೆಯನ್ನು ವೃತ್ತಿಪರವಾಗಿ ಸ್ವೀಕರಿಸಲು ಕಾರಣ?

ಕಾಲೇಜು ದಿನಗಳಲ್ಲಿ ಇತರ ಕ್ರೀಡೆಗಳಿಗಿಂತಲೂ ನೆಟ್‌ಬಾಲ್‌ ಹೆಚ್ಚು ಆಪ್ತ ಅನಿಸಿತು. ಅಷ್ಟೇನು ಪರಿಚಯವಲ್ಲದ ಈ ಆಟವನ್ನು ನನಗೆ ಅರಿವಿಲ್ಲದಂತೆಯೇ ಬಹಳ ಬೇಗನೆ ಕಲಿತುಬಿಟ್ಟಿದ್ದೆ. ಅವಕಾಶಗಳು ಸಹ ಕೈಬೀಸಿ ಕರೆಯುತ್ತಿದ್ದವು. ಹೀಗಾಗಿ ಇದರಲ್ಲೇ ಎತ್ತರದ ಸಾಧನೆ ಮಾಡಬೇಕೆಂದು ದೃಢವಾಗಿ ನಿರ್ಧರಿಸಿದೆ.

ನೀವು ಆಡುವ ವಿಭಾಗ ಯಾವುದು. ತಂಡದ ಗೆಲುವಿನಲ್ಲಿ ಆ ವಿಭಾಗದ ಮಹತ್ವವೇನು?

ನಾನು ‘ಶೂಟಿಂಗ್‌’ ವಿಭಾಗದಲ್ಲಿ ಆಡುತ್ತೇನೆ. ಬ್ಯಾಸ್ಕೆಟ್‌ಬಾಲ್‌ನಲ್ಲಿ ಆಡುವ ಐದು ಮಂದಿಯೂ ಚೆಂಡನ್ನು ‘ಬ್ಯಾಸ್ಕೆಟ್‌’ (ಶೂಟ್‌) ಮಾಡಬಹುದು. ಆದರೆ ನೆಟ್‌ಬಾಲ್‌ನಲ್ಲಿ ಹಾಗಲ್ಲ. ಇದರಲ್ಲಿ ಇಬ್ಬರೇ ಚೆಂಡನ್ನು ‘ಶೂಟ್‌’ ಮಾಡಬೇಕು. ಶೂಟರ್‌ಗಳನ್ನು ತಂಡದ ಆಧಾರಸ್ಥಂಭಗಳೆಂದರೂ ತಪ್ಪಿಲ್ಲ.

ಸಹ ಆಟಗಾರ್ತಿಯರು ತುಂಬಾ ಶ್ರಮಪಟ್ಟು ಚೆಂಡನ್ನು ನಮಗೆ ಪಾಸ್‌ ಮಾಡುತ್ತಾರೆ. ಆ ಚೆಂಡನ್ನು ನಿಖರವಾಗಿ ಗುರಿ ಮುಟ್ಟಿಸಿ ತಂಡದ ಖಾತೆಗೆ ಗೋಲು ಸೇರ್ಪಡೆ ಮಾಡಬೇಕಾದ ಮಹತ್ವದ ಜವಾಬ್ದಾರಿ ಶೂಟರ್‌ಗಳದ್ದಾಗಿರುತ್ತದೆ. ಕೆಲವೊಮ್ಮೆ ನಮ್ಮ ಆಟದ ಮೇಲೆಯೇ ತಂಡದ ಸೋಲು ಗೆಲುವು ಸಹ ನಿರ್ಧರಿತವಾಗುತ್ತದೆ.

ಕರ್ನಾಟಕದಲ್ಲಿ ನೆಟ್‌ಬಾಲ್‌ ಬೆಳವಣಿಗೆ ಹೇಗಿದೆ. ನೀವು ಆಡಲು ಶುರುಮಾಡಿದ ದಿನಗಳಿಗೆ ಹೋಲಿಸಿದರೆ ಈಗ ಏನಾದರೂ ಬದಲಾವಣೆ ಆಗಿದೆಯೇ?

ನಾನು ನೆಟ್‌ಬಾಲ್‌ ಕಲಿಯಲು ಶುರುಮಾಡಿದಾಗ ಯಾರಿಗೂ ಈ ಕ್ರೀಡೆಯ ಪರಿಚಯವೇ ಇರಲಿಲ್ಲ. ಆದರೆ ಈಗ ಪರಿಸ್ಥಿತಿ ತುಂಬಾ ಸುಧಾರಿಸಿದೆ. ಈ ಕ್ರೀಡೆಯ ಬೇರುಗಳನ್ನು ಇನ್ನಷ್ಟು ಆಳಕ್ಕಿಳಿಸುವ ದೃಷ್ಟಿಯಿಂದ ಕರ್ನಾಟಕ ಅಮೆಚೂರ್‌ ನೆಟ್‌ಬಾಲ್‌ ಸಂಸ್ಥೆ (ಎಎನ್‌ಬಿಎಕೆ) ಹಲವು ಯೋಜನೆಗಳನ್ನು ರೂಪಿಸಿ ಅವುಗಳನ್ನು ಅನುಷ್ಠಾನಗೊಳಿಸಲು ಮುಂದಾಗಿದೆ. ಹೀಗಾಗಿ ಅಭಿವೃದ್ಧಿಯು ವೇಗ ಪಡೆದುಕೊಂಡಿದೆ. 

ಈಗ ಟಿ.ವಿ.ಗಳಲ್ಲಿ ಅಂತರರಾಷ್ಟ್ರೀಯ ಪಂದ್ಯಗಳನ್ನು ನೇರಪ್ರಸಾರ ಮಾಡಲಾಗುತ್ತಿದೆ. ಜೊತೆಗೆ ನಾವು ಆಡುವ ಪಂದ್ಯಗಳ ವಿಡಿಯೊ ತುಣುಕುಗಳನ್ನು ವೆಬ್‌ಸೈಟ್‌ನಲ್ಲಿ ಹಾಕುತ್ತೇವೆ. ಇವುಗಳನ್ನು ನೋಡಿ ಹಲವರು ಈ ಕ್ರೀಡೆಯತ್ತ ಆಕರ್ಷಿತರಾಗುತ್ತಿದ್ದಾರೆ. ಈಗ ನೆಟ್‌ಬಾಲ್‌ ಆಡುವವರ ಸಂಖ್ಯೆಯೂ ಹೆಚ್ಚುತ್ತಿರುವುದರಿಂದ ಸ್ಪರ್ಧೆಯೂ ಕಠಿಣವಾಗುತ್ತಿದೆ. ಇದು ಉತ್ತಮ ಬೆಳವಣಿಗೆ.

ಕರ್ನಾಟಕದಲ್ಲಿ ನೆಟ್‌ಬಾಲ್‌ ಕ್ರೀಡೆಯನ್ನು ಇನ್ನಷ್ಟು ಜನಪ್ರಿಯಗೊಳಿಸಲು ಏನು ಮಾಡಬೇಕು?

ಕ್ರಿಕೆಟ್‌, ಬ್ಯಾಡ್ಮಿಂಟನ್‌, ಟೆನಿಸ್‌ ಹಾಗೂ ಕಬಡ್ಡಿಯಲ್ಲಿ ಸಾಧನೆ ಮಾಡಿದವರಿಗೆ ಪೊಲೀಸ್‌, ರೈಲ್ವೆ ಹಾಗೂ ಬ್ಯಾಂಕ್‌ಗಳಲ್ಲಿ ಉದ್ಯೋಗ ನೀಡಲಾಗುತ್ತದೆ. ನೆಟ್‌ಬಾಲ್‌ನಲ್ಲಿ ಹೆಜ್ಜೆಗುರುತು ಮೂಡಿಸಿರುವ ಮತ್ತು ಮೂಡಿಸುತ್ತಿರುವವರಿಗೂ ಈ ಇಲಾಖೆಗಳಲ್ಲಿ ಕೆಲಸ ನೀಡುವ ಸಂಪ್ರದಾಯಕ್ಕೆ ಈಗಲೇ ನಾಂದಿ ಹಾಡಬೇಕಿದೆ. ಹೀಗಾದಾಗ ಹೆಚ್ಚೆಚ್ಚು ಮಂದಿ ಈ ಕ್ರೀಡೆಯತ್ತ ಮುಖ ಮಾಡುತ್ತಾರೆ. ಇದರಿಂದ ಪ್ರತಿಭಾನ್ವೇಷಣೆಯೂ ಸುಲಭವಾಗುತ್ತದೆ.

ಭಾರತದಲ್ಲಿ ಈಗ ಲೀಗ್‌ಗಳ ಪರ್ವ ಶುರುವಾಗಿದೆ. ನೆಟ್‌ಬಾಲ್‌ ಲೀಗ್‌ ನಡೆದರೆ ಪರಿಸ್ಥಿತಿ ಬದಲಾಗಬಹುದೇ?

ಖಂಡಿತವಾಗಿಯೂ. ನೆಟ್‌ಬಾಲ್‌ ಲೀಗ್‌ ಶುರುವಾದರೆ ತುಂಬಾ ಪ್ರಯೋಜನವಾಗಲಿದೆ. ಮುಖ್ಯವಾಗಿ ಆಟಗಾರರು ಆರ್ಥಿಕವಾಗಿ ಸಬಲರಾಗುತ್ತಾರೆ. ದೇಶದ ಉದ್ದಗಲಕ್ಕೂ ಈ ಕ್ರೀಡೆಯ ಕಂಪು ಪಸರಿಸಲು ಇದು ಸಹಕಾರಿಯಾಗಲಿದೆ. ಜೊತೆಗೆ ಆಟದ ಗುಣಮಟ್ಟವೂ ಹೆಚ್ಚಲಿದೆ.

ಅಭ್ಯಾಸ ಕ್ರಮದ ಬಗ್ಗೆ ಹೇಳಿ?

ನನಗೆ ವೈಯಕ್ತಿಕ ಕೋಚ್‌ ಅಂತ ಯಾರೂ ಇಲ್ಲ. ಕಾಲೇಜು ದಿನಗಳಲ್ಲಿ ಹಿರಿಯ ವಿದ್ಯಾರ್ಥಿಗಳು ಆಟದ ಪಾಠಗಳನ್ನು ಹೇಳಿಕೊಡುತ್ತಿದ್ದರು. ಬಿ.ಎಂ.ಎಸ್‌. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ರೂಪಾ ಅವರು ತುಂಬಾ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ.

ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳೆಲ್ಲಾ ಸೇರಿ ‘ವೀಲ್‌’ ಎಂಬ ಕ್ಲಬ್‌ ಶುರುಮಾಡಿದ್ದೇವೆ. ಕ್ಲಬ್‌ನಲ್ಲಿಯೇ ಅಭ್ಯಾಸ ಮಾಡುತ್ತೇನೆ. ಹಿರಿಯ ಆಟಗಾರರ ಮಾರ್ಗದರ್ಶನದಲ್ಲೇ ಫಿಟ್‌ನೆಸ್‌ ಕಾಪಾಡಿಕೊಳ್ಳಲು ಅಗತ್ಯವಿರುವ ವ್ಯಾಯಾಮಗಳನ್ನೂ ಮಾಡುತ್ತೇನೆ.

ಜೀವನದ ಗುರಿ?

ಹೆಚ್ಚೆಚ್ಚು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಬೇಕೆಂಬ ಗುರಿ ಇದೆ. ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿದ್ದೇನೆ.

ಮುಂದಿನ ಟೂರ್ನಿಗಳ ಬಗ್ಗೆ?

ಸದ್ಯದಲ್ಲೇ ರಾಷ್ಟ್ರೀಯ ಸೀನಿಯರ್‌ ಟೂರ್ನಿ ನಡೆಯಲಿದ್ದು ಅದಕ್ಕಾಗಿ ಸಿದ್ಧತೆ ಆರಂಭಿಸಿದ್ದೇನೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು