ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂರೋಪ್‌ ರಾಷ್ಟ್ರಗಳೇ ಪ್ರಬಲ ಏಷ್ಯಾಗೆ ಭಾರತ–ಪಾಕ್ ಬಲ

Last Updated 9 ಡಿಸೆಂಬರ್ 2018, 20:15 IST
ಅಕ್ಷರ ಗಾತ್ರ

ವಿಶ್ವಕಪ್‌ ಹಾಕಿ ಟೂರ್ನಿ ಆರಂಭವಾಗುತ್ತಿದ್ದಂತೆ ಎಲ್ಲ ಕಡೆ ಕೇಳಿ ಬಂದ ಮಾತು, ಈ ಬಾರಿಯೂ ಯುರೋಪ್ ಮತ್ತು ಒಷಿನಿಯಾ ರಾಷ್ಟ್ರಗಳು ಟೂರ್ನಿಯಲ್ಲಿ ಪ್ರಾಬಲ್ಯ ಮೆರೆಯುವವೇ? ಎಂಬುದು.

ಈ ಪ್ರಶ್ನೆಗೆ ಪೂರಕವೆಂಬಂತೆ ಟೂರ್ನಿಯಲ್ಲಿ ಈ ವರೆಗೆ ಯುರೋಪ್ ಮತ್ತು ಒಷಿನಿಯಾ ತಂಡಗಳು ಉತ್ತಮ ಸಾಮರ್ಥ್ಯ ತೋರಿವೆ. ಭಾರತ ಇರುವ ‘ಸಿ’ ಗುಂಪು ಬಿಟ್ಟರೆ ಉಳಿದೆಲ್ಲ ಗುಂಪುಗಳಲ್ಲೂ ಈ ರಾಷ್ಟ್ರಗಳು ನಾಕೌಟ್ ಹಂತದತ್ತ ದಾಪುಗಾಲು ಹಾಕಿವೆ.

ನೆದರ್ಲೆಂಡ್ಸ್, ಜರ್ಮನಿ, ಸ್ಪೇನ್ ಮುಂತಾದ ಯುರೋಪ್‌ ರಾಷ್ಟ್ರಗಳು ಮತ್ತು ಒಷಿನಿಯಾಗೆ ಸೇರಿದ ಆಸ್ಟ್ರೇಲಿಯಾ ತಂಡ ಹೆಚ್ಚು ಮೆರೆದಿರುವ ವಿಶ್ವಕಪ್‌ನಲ್ಲಿ ಏಷ್ಯಾದ ಗೌರವ ಉಳಿಸಿರುವುದು ಪಾಕಿಸ್ತಾನ ಮತ್ತು ಭಾರತ ಮಾತ್ರ. ಅಮೆರಿಕ ಮತ್ತು ಆಫ್ರಿಕಾ ಖಂಡಗಳ ಸಾಧನೆ ತೀರಾ ಕಡಿಮೆ.

ಪಾಕಿಸ್ತಾನದ ಏರ್‌ ಮಾರ್ಷಲ್‌ ನೌರ್ ಖಾನ್‌ ಅವರು ವಿಶ್ವಕಪ್ ಹಾಕಿ ಹಿಂದಿನ ಪ್ರೇಕರ ಶಕ್ತಿ. ವಿಶ್ವ ಹಾಕಿ ನಿಯತಕಾಲಿಕದ ಮೊದಲ ಸಂಪಾದಕ ಪ್ಯಾಟ್ರಿಕ್ ರೌಲಿ ಅವರ ಜೊತೆ ನೌರ್ ಖಾನ್ ವಿಶ್ವಕಪ್‌ ಕುರಿತ ಕಲ್ಪನೆಯನ್ನು ಹಂಚಿಕೊಂಡಿದ್ದರು. ಇವರಿಬ್ಬರ ಯೋಜನೆಯನ್ನು 1969ರಲ್ಲಿ ವಿಶ್ವ ಹಾಕಿ ಫೆಡರೇಷನ್‌ನ ಸಮಿತಿ ಅಂಗೀಕರಿಸಿತು. 1971ರಲ್ಲಿ ಮೊದಲ ವಿಶ್ವಕಪ್ ಟೂರ್ನಿಯನ್ನು ಪಾಕಿಸ್ತಾನದಲ್ಲಿ ಆಯೋಜಿಸುವ ಯೋಜನೆಯನ್ನೂ ಹಾಕಿಕೊಂಡಿತು. ಆದರೆ ಭಾರತ ಮತ್ತು ಪಾಕಿಸ್ತಾನ ನಡುವಿನ ರಾಜಕೀಯ ದ್ವೇಷದ ಕಾರಣ ಟೂರ್ನಿಯನ್ನು ಸ್ಪೇನ್‌ಗೆ ಸ್ಥಳಾಂತರಿಸಲಾಯಿತು.

ಐತಿಹಾಸಿಕ ಕ್ಷಣ ತವರಿನಿಂದ ದೂರದ ಯುರೋಪ್‌ಗೆ ಸಾಗಿತಾದರೂ ಮೊದಲ ಟೂರ್ನಿಯಲ್ಲಿ ಪಾಕಿಸ್ತಾನ ಜಯಭೇರಿ ಮೊಳಗಿಸಿತು. ಫೈನಲ್‌ನಲ್ಲಿ ಆತಿಥೇಯರನ್ನೇ ಮಣಿಸಿ ಪ್ರಶಸ್ತಿ ಎತ್ತಿ ಹಿಡಿಯಿತು. ಭಾರತ ಮೂರನೇ ಸ್ಥಾನ ಪಡೆಯಿತು. ಮುಂದಿನ ಬಾರಿ ಯುರೋಪ್‌ ಆಧಿಪತ್ಯ ಸ್ಥಾಪಿಸಿತು. ಭಾರತವನ್ನು ಫೈನಲ್‌ನಲ್ಲಿ ಸೋಲಿಸಿ ನೆದರ್ಲೆಂಡ್ಸ್‌ ಚಾಂಪಿಯನ್ ಆಯಿತು. ಮೂರನೇ ಸ್ಥಾನವೂ ಯುರೋಪ್ ಪಾಲಾಯಿತು.

ಮುಂದಿನ ವಿಶ್ವಕಪ್‌ನಲ್ಲಿ ಏಷ್ಯಾದ ಪ್ರಾಬಲ್ಯ ಎದ್ದು ಕಂಡಿತು. ಮೂರನೇ ಆವೃತ್ತಿಯಲ್ಲಿ ಭಾರತ ಪ್ರಶಸ್ತಿ ಗೆದ್ದರೆ ಪಾಕಿಸ್ತಾನ ರನ್ನರ್ ಅಪ್ ಆಯಿತು. ಆತಿಥೇಯ ಮಲೇಷ್ಯಾ ನಾಲ್ಕನೇ ಸ್ಥಾನ ಗಳಿಸಿತು. ಮೂರನೇ ಸ್ಥಾನದಲ್ಲಿ ಜರ್ಮನಿ ಇದ್ದ ಕಾರಣ ಯುರೋಪ್‌ನ ಸಾನ್ನಿಧ್ಯ ಕಂಡುಬಂತು.

ನಾಲ್ಕು ಮತ್ತು ಐದನೇ ಆವೃತ್ತಿಯಿಂದ ಟೂರ್ನಿಯಲ್ಲಿ ಮಹತ್ವದ ಬದಲಾವಣೆಗಳು ಆಗತೊಡಗಿದವು. 1978 ಮತ್ತು 1982ರಲ್ಲಿ ಪಾಕಿಸ್ತಾನ ಪ್ರಶಸ್ತಿ ಗೆದ್ದರೂ ಉಳಿದ ಸ್ಥಾನಗಳಲ್ಲಿ ಗಮನ ಸೆಳೆಯಲು ಏಷ್ಯಾದ ತಂಡಗಳಿಗೆ ಆಗಲಿಲ್ಲ. ಈ ಸಂದರ್ಭದಲ್ಲಿ ಒಷಿನಿಯಾದ ಆಸ್ಟ್ರೇಲಿಯಾ ಮೊದಲ ಬಾರಿ ಅಗ್ರ ಕ್ರಮಾಂಕದಲ್ಲಿ ಕಾಣಿಸಿಕೊಂಡು ಭರವಸೆ ಮೂಡಿಸಿತು. 1986ರಲ್ಲಿ ಆಸ್ಟ್ರೇಲಿಯಾ ಪ್ರಶಸ್ತಿಯನ್ನೂ ಗೆದ್ದಿತು. ಎರಡು ಮತ್ತು ಮೂರನೇ ಸ್ಥಾನಗಳಲ್ಲಿ ಯುರೋಪ್ ರಾಷ್ಟ್ರಗಳು ಗಮನ ಸೆಳೆದವು. ಮುಂದಿನ ಮೂರು ಟೂರ್ನಿಗಳಲ್ಲಿ ನೆದರ್ಲೆಂಡ್ಸ್‌ ಎರಡು ಬಾರಿ ಗೆದ್ದರೆ ಒಂದು ಬಾರಿ ಪಾಕಿಸ್ತಾನ ಮೇಲುಗೈ ಸಾಧಿಸಿತು. ಉಳಿದಂತೆ ಆಸ್ಟ್ರೇಲಿಯಾ ಮತ್ತು ಜರ್ಮನಿ ತಂಡಗಳೇ ಪಾರಮ್ಯ ಮೆರೆದವು. ಏಷ್ಯಾದ ಇತರ ರಾಷ್ಟ್ರಗಳ ಸಾಧನೆ ಈ ಸಂದರ್ಭದಲ್ಲಿ ಏನೂ ಇರಲಿಲ್ಲ.

ನಂತರದ ನಾಲ್ಕು ಆವೃತ್ತಿಗಳಲ್ಲಿ ಯರೋಪ್ ಮತ್ತು ಒಷಿನಿಯಾ ರಾಷ್ಟ್ರಗಳದ್ದೇ ಕರಾಮತ್ತು. ಜರ್ಮನಿ ಮತ್ತು ಆಸ್ಟ್ರೇಲಿಯಾ ತಂಡಗಳು ಸತತ ಎರಡು ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರೆ ಎರಡು, ಮೂರನೇ ಸ್ಥಾನಗಳಿಗಾಗಿ ನೆದರ್ಲೆಂಡ್ಸ್ ಮತ್ತು ಸ್ಪೇನ್‌ ತಂಡಗಳು ಮುಗಿ ಬಿದ್ದವು.

ಎರಡು ಬಾರಿ ನಾಲ್ಕನೇ ಸ್ಥಾನ ಗಳಿಸಿದ ದಕ್ಷಿಣ ಕೊರಿಯಾ ಈ ಅವಧಿಯಲ್ಲಿ ಏಷ್ಯಾದ ಗೌರವ ಉಳಿಸುವ ಪ್ರಯತ್ನ ಮಾಡಿತು. ಈಗ ನಡೆಯುತ್ತಿರುವ 14ನೇ ಆವೃತ್ತಿಯಲ್ಲಿ ಪಾಕಿಸ್ತಾನ ತೃಪ್ತಿಕರ ಸಾಧನೆ ಮಾಡಲಿಲ್ಲ. ಏಷ್ಯಾದಿಂದ ಭಾರತ ಮತ್ತು ಚೀನಾ ದೇಶಗಳು ಮಾತ್ರ ಗಮನ ಸೆಳೆಯುವ ಸಾಧನೆ ಮಾಡಿವೆ.

ಏಷ್ಯಾದಿಂದ ಕಡಿಮೆ ತಂಡಗಳ ಪ್ರವೇಶ
ಫುಟ್‌ಬಾಲ್‌ನಂತೆ ಹಾಕಿಯಲ್ಲೂ ಏಷ್ಯಾ ಖಂಡದಿಂದ ಕಡಿಮೆ ತಂಡಗಳು ಅರ್ಹತೆ ಪಡೆಯುತ್ತಿವೆ. ಹೀಗಾಗಿ ಸ್ಪರ್ಧೆಯಲ್ಲೂ ಈ ಖಂಡದ ಸಾಧನೆ ಕಾಣುವುದಿಲ್ಲ. ಆಸ್ಟ್ರೇಲಿಯಾ, ಜರ್ಮನಿ ಮತ್ತು ನೆದರ್ಲೆಂಡ್ಸ್‌ ಪ್ರತಿಬಾರಿ ಎಂಬಂತೆ ವಿಶ್ವಕಪ್‌ನ ಸಾಧಕ ತಂಡಗಳ ಪಟ್ಟಿಯಲ್ಲಿ ಸ್ಥಾನ ಗಳಿಸುತ್ತಿವೆ. ಬೆಲ್ಜಿಯಂ, ಅರ್ಜೆಂಟೀನಾ, ಸ್ಪೇನ್‌, ಇಂಗ್ಲೆಂಡ್‌ ಮುಂತಾದ ತಂಡಗಳು ಕೂಡ ತಮ್ಮ ಕಾಣಿಕೆಯನ್ನು ನೀಡಿವೆ. ಒಂದೇ ಭಾಗದ ತಂಡಗಳೇ ಹೀಗೆ ನಿರಂತರ ಹೆಸರು ಮಾಡುತ್ತಿದ್ದರೆ ಹಾಕಿಯನ್ನು ವಿಶ್ವ ಮಟ್ಟದ ಕ್ರೀಡೆ ಎಂದು ಹೇಳುವುದಾದರೂ ಹೇಗೆ ಎಂಬ ಕುಹಕವೂ ಆಗಾಗ ಕೇಳಿ ಬರುತ್ತಿದೆ.

‘ಪ್ರಾದೇಶಿಕ ಚಾಂಪಿಯನ್‌ಷಿಪ್‌: ‘ಭಾರತದಲ್ಲಿ ನಡೆಯುವ ಹಾಕಿ ಲೀಗ್‌ಗೆ ಇನ್ನಷ್ಟು ಮೆರುಗು ತುಂಬಿದರೆ ಈ ಭಾಗದಲ್ಲಿ ಹಾಕಿಗೆ ಹೊಸ ಆಯಾಮ ಸಿಗಲಿದೆ‘ ಎಂದು ಆಸ್ಟ್ರೇಲಿಯಾ ಕೋಚ್‌ ಕಾಲಿನ್ ಬಾಕ್‌ ಇತ್ತೀಚೆಗೆ ಹೇಳಿದ್ದರು. ಏಷ್ಯಾ ಖಂಡದ ತಂಡಗಳ ಚಾಂಪಿಯನ್‌ಷಿಪ್ ಕೂಡ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ದೂರು ಕೂಡ ಇದೆ. ಇಂಥ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರೆ ಹಾಕಿಯಲ್ಲಿ ಏಷ್ಯಾದ ವೈಭವ ಮರುಕಳಿಸುವ ಆಸೆ ಜೀವಂತವಾಗಿರಿಸಿಕೊಳ್ಳಬಹುದು.

ಸಾಂಘಿಕ ಪ್ರಯತ್ನ ನಮ್ಮಲ್ಲಿಲ್ಲವೇ...?
‘ಯುರೋಪ್ ರಾಷ್ಟ್ರಗಳ ತಂಡಗಳು ಸಾಂಘಿಕ ಪ್ರಯತ್ನದ ಮೂಲಕ ಆಡುತ್ತವೆ. ಅದುವೇ ಅವರ ಏಳಿಗೆಗೆ ಪ್ರಮುಖ ಕಾರಣ. ಏಷ್ಯಾದ ತಂಡಗಳು ವೈಯಕ್ತಿಕ ಆಟದ ಮೇಲೆ ಗಮನ ನೀಡುವುದು ಮುಳುವಾಗುತ್ತಿದೆ...’ ಭಾರತ, ಪಾಕಿಸ್ತಾನ ಮತ್ತು ಮಲೇಷ್ಯಾ ತಂಡಗಳಿಗೆ ತರಬೇತಿ ನೀಡಿದ್ದ ರೋಲಂಟ್ ಓಲ್ಟಮನ್ಸ್‌ ಹೇಳಿದ ಮಾತು ಇದು. ಇದರಲ್ಲಿ ವಾಸ್ತವ ಎಷ್ಟಿದೆ ಎಂಬುದು ಚರ್ಚಾ ವಿಷಯ. ಆದರೆ ಯುರೋಪ್ ತಂಡಗಳು ನಿರಂತರವಾಗಿ ಪ್ರಶಸ್ತಿ ಗೆಲ್ಲುತ್ತ ಸಾಗುತ್ತಿರುವ ವಾಸ್ತವ ಕಣ್ಣ ಮುಂದೆ ಇರುವಷ್ಟು ಕಾಲ ಈ ಮಾತನ್ನು ಒಪ್ಪದೇ ಇರಲು ಸಾಧ್ಯವಿಲ್ಲ. ‘ತರಬೇತಿಯ ಸಂದರ್ಭದಲ್ಲಿ ಯಾವುದಕ್ಕೆ ಹೆಚ್ಚು ಗಮನ ನೀಡಲಾಗುತ್ತದೆ ಎಂಬುದು ತಂಡದ ಸಾಧನೆ ಮೇಲೆ ಪರಿಣಾಮ ಬೀರುತ್ತದೆ. ಯುರೋಪ್‌ ರಾಷ್ಟ್ರಗಳಲ್ಲಿ ಸಂಘಟಿತ ಆಟ, ತಂತ್ರಗಳ ಪರಿಣಾಮಕಾರಿ ಬಳಕೆ ಮೇಲೆ ಹೆಚ್ಚು ನಿಗಾ ವಹಿಸಲಾಗುತ್ತದೆ’ ಎಂದು ಹೇಳುವ ಓಲ್ಟಮನ್ಸ್ ಮಾತು ಕೂಡ ಗಮನಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT