ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುದ್ದೆಯಿಂದ ವಜಾಗೊಳಿಸಿದ್ದಕ್ಕೆ ಕುಸ್ತಿ ಕೋಚ್ ಆ್ಯಂಡ್ರ್ಯೂ‌ ಕುಕ್ ಸಿಡಿಮಿಡಿ

Last Updated 5 ಜುಲೈ 2020, 15:32 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಮಹಿಳಾ ಕುಸ್ತಿ ತಂಡದ ಕೋಚ್ ಹುದ್ದೆಯಿಂದ ತಮ್ಮನ್ನು ವಜಾಗೊಳಿಸಿದ ಭಾರತ ಕುಸ್ತಿ ಫೆಡರೇಷನ್ ಕ್ರಮದಿಂದಾಗಿ ಮನಸ್ಸಿಗೆ ತೀವ್ರ ಘಾಸಿಯಾಗಿದೆ ಎಂದು ಆ್ಯಂಡ್ರ್ಯೂ ಕುಕ್ ಬೇಸರ ವ್ಯಕ್ತಪಡಿಸಿದ್ದಾರೆ.

2019ರ ಆರಂಭದಲ್ಲಿಅಮೆರಿಕದ ಕುಕ್‌ ರಾಷ್ಟ್ರೀಯ ತಂಡದ ಕೋಚ್ ಆಗಿ ನೇಮಕವಾಗಿದ್ದರು. ಮಾರ್ಚ್‌ನಲ್ಲಿ ಲಾಕ್‌ಡೌನ್ ಆರಂಭವಾಗಿದ್ದರಿಂದ ಕುಸ್ತಿ ಶಿಬಿರಗಳನ್ನು ಸ್ಥಗಿತಗೊಳಿಸಲಾಗಿತ್ತು. ಆಗ ಕುಕ್ ತಮ್ಮ ದೇಶಕ್ಕೆ ಮರಳಿದ್ದರು. ಬಳಿಕ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌), ಭಾರತ ಕುಸ್ತಿ ಫೆಡರೇಷನ್‌(ಡಬ್ಲ್ಯುಎಫ್‌ಐ) ಮತ್ತು ಕುಕ್‌ ಮಧ್ಯೆ ಭಿನ್ನಮತ ಕಾಣಿಸಿಕೊಂಡಿತ್ತು.

ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ಆಯೋಜಿಸಿದ್ದ ವೆಬಿನಾರ್‌ನಲ್ಲಿ ಭಾಗವಹಿಸಲು ಒಪ್ಪಿರಲಿಲ್ಲ ಎಂದು ಜೂನ್‌ 25ರಂದು ಕುಕ್‌ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿತ್ತು.

‘ನಾನು ಅಮೆರಿಕಕ್ಕೆ ತೆರಳಿದ ಸಂದರ್ಭದಲ್ಲಿ ಕುಸ್ತಿ ತಂಡದ ಪ್ರದರ್ಶನ ಉನ್ನತ ಸ್ಥಿತಿಯಲ್ಲಿತ್ತು. ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಐತಿಹಾಸಿಕ ಒಂಬತ್ತು ಪದಕಗಳನ್ನು ಗೆದ್ದು, ಒಲಿಂಪಿಕ್‌ ಅರ್ಹತಾ ಟೂರ್ನಿಗಳಿಗೆ ತೆರಳುವವರಿದ್ದೆವು. ಇದೇ ವೇಳೆ ಕೋವಿಡ್‌ ಪಿಡುಗು ಕಾಣಿಸಿಕೊಂಡಿತು. ತಕ್ಷಣ ಎಲ್ಲವೂ ಬದಲಾಯಿತು. ನಾನೀಗ ತಪ್ಪಿತಸ್ಥನ ಸ್ಥಾನದಲ್ಲಿ ನಿಂತಿದ್ದೇನೆ’ ಎಂದು ಅಮೆರಿಕದ ಸಿಯಾಟಲ್‌ನಿಂದಲೇ‌ ಕುಕ್‌, ಪಿಟಿಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.

‘ಭಾರತದ ಸಾಂಸ್ಕೃತಿಕ ಶ್ರೀಮಂತಿಕೆ ಹಾಗೂ ಆಹಾರವನ್ನು ಇಷ್ಟಪಡುತ್ತೇನೆ. ಆದರೆ ಅಲ್ಲಿಯ ವ್ಯವಸ್ಥೆ ನನ್ನ ವೃತ್ತಿಗೆ ಕೊಳ್ಳಿ ಇಟ್ಟಿತು. ಭಾರತಕ್ಕೆ ಮರಳಲು ಬಯಸುವುದಿಲ್ಲ’ ಎಂದು ಕುಕ್‌ ನುಡಿದರು.

ಸಾಯ್‌ ಆಯೋಜಿಸಿದ್ದ ಆನ್‌ಲೈನ್‌ ಕಾರ್ಯಕ್ರಮದಲ್ಲಿ ಭಾಗವಹಿಸಲು ಕುಕ್‌ ನಿರಾಕರಿಸಿದರೆಂದು ಡಬ್ಲ್ಯುಎಫ್‌ಐ ಹೇಳಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಕುಕ್‌, ‘ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಾನು ನಸುಕಿನ 3 ಗಂಟೆಗೇ ಏಳುತ್ತಿದ್ದೆ; ಸಾಯ್ ಕೋಚ್‌ಗಳೇ ಇದನ್ನು ಸಕಾರಾತ್ಮಕವಾಗಿ ಪರಿಶೀಲಿಸಿದ್ದರು’ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT