ವಾಟ್ಸ್ ಆ್ಯಪ್ ತರಬೇತಿಯತ್ತ ಚೆಸ್ ‘ನಡೆ’

ಕೊರೊನಾ ಕಾಲದಲ್ಲಿ ಹೆಚ್ಚು ತೊಂದರೆಗೆ ಒಳಗಾಗದ ಕ್ರೀಡೆ, ಚೆಸ್. ಕೊರೊನಾ ಕಾಲದ ಆರಂಭದ ಕೆಲವು ವಾರಗಳಲ್ಲಿ ಸ್ಥಗಿತಗೊಂಡಿದ್ದ ಚೆಸ್ ಕ್ಷೇತ್ರ ನಂತರ ಚೇತರಿಸಿಕೊಂಡಿತ್ತು. ಅದಕ್ಕೆ ಸಹಕಾರಿಯಾದದ್ದು ಆನ್‌ಲೈನ್ ವೇದಿಕೆಗಳು. ದೇಶದ ಮೂಲೆಮೂಲೆಗಳಲ್ಲಿ ನಡೆದ ತರಬೇತಿ ಕಾರ್ಯಕ್ರಮಗಳಿಂದ ಹಿಡಿದು ಅಂತರರಾಷ್ಟ್ರೀಯ ಮಟ್ಟದ ಟೂರ್ನಿಗಳ ವರೆಗೂ ಆನ್‌ಲೈನ್‌ನಲ್ಲಿ ಚೆಸ್ ವಿಜೃಂಭಿಸಿದೆ.
ಇದೀಗ ಆನ್‌ಲೈನ್ ಚೆಸ್ ಮತ್ತೊಂದು ಆಯಾಮ ಪಡೆದುಕೊಂಡಿದೆ. ಅದು, ವಾಟ್ಸ್ ಆ್ಯಪ್ ಮೂಲಕ ತರಬೇತಿ. ಶಿವಮೊಗ್ಗದ ಯಾದವ ಸ್ಕೂಲ್ ಆಫ್ ಚೆಸ್ ಸಂಸ್ಥೆ ಈ ಪ್ರಯೋಗಕ್ಕೆ ಮುಂದಾಗಿದೆ. ಸಂಸ್ಥೆಯ ಉಚಿತ ತರಬೇತಿ ಮಂಗಳವಾರ (ಸೆಪ್ಟೆಂಬರ್ 15) ಆರಂಭಗೊಂಡಿದ್ದು ’ಚದುರಂಗ‘ದ ಆರಂಭಿಕ ಪಾಠ ಕಲಿಯಲು 100ಕ್ಕೂ ಹೆಚ್ಚು ಮಂದಿ ಆಸಕ್ತಿ ತೋರಿದ್ದಾರೆ.
ಅಂತರರಾಷ್ಟ್ರೀಯ ಆರ್ಬಿಟರ್ ಕೆ. ಪ್ರಾಣೇಶ್ ಯಾದವ್ ಅವರು ಇದರ ರೂವಾರಿ. ’ಈಗ ಬಹುತೇಕ ಎಲ್ಲ ಚಟುವಟಿಕೆಯೂ ಆನ್‌ಲೈನ್ ಮೂಲಕ ನಡೆಯುತ್ತಿದೆ. ಹೀಗಾಗಿ ತಾಂತ್ರಿಕ ಅಡಚಣೆಗಳು ಹೆಚ್ಚು. ಈ ಸಂದರ್ಭದಲ್ಲಿ ಹೊಸ ಮಾಧ್ಯಮದ ಹುಡುಕಾಟ ನಡೆಯುತ್ತಿದ್ದಾಗ ಹೊಳೆದದ್ದು ವಾಟ್ಸ್ ಆ್ಯಪ್. ಈ ಹಿಂದೆ ಶುಲ್ಕ ಪಡೆದು ವಾಟ್ಸ್ ಆ್ಯಪ್ ಮೂಲಕ ತರಬೇತಿ ನೀಡಿದ್ದೆ. ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅದು, ಈಗ ಉಚಿತ ತರಬೇತಿ ನೀಡಲು ಪ್ರೇರಣೆಯಾಗಿದೆ‘ ಎಂದು ಪ್ರಾಣೇಶ್ ತಿಳಿಸಿದರು.
ತರಬೇತಿ ಹೇಗೆ ನಡೆಯುತ್ತದೆ?
ಪ್ರಾಣೇಶ್ ಅವರು ವಿವರಿಸುವ ಪ್ರಕಾರ ವಾಟ್ಸ್ ಆ್ಯಪ್‌ನಲ್ಲಿ ನೀಡುವ ತರಬೇತಿಗೂ ಸಾಮಾನ್ಯ ತರಬೇತಿಗೂ ಹೆಚ್ಚು ವ್ಯತ್ಯಾಸವಿಲ್ಲ. ಬಿಡುವು ಇದ್ದಾಗ ನೋಡಿಕೊಂಡು ಚೆಸ್ ಕಲಿಯಬಹುದು ಎಂಬುದು ವಾಟ್ಸ್ ಆ್ಯಪ್ ಮೂಲಕ ನಡೆಯುವ ತರಬೇತಿಯ ಅನುಕೂಲ. ಆಸಕ್ತರಿಗೆ ಇನ್ನೂ ಅವಕಾಶವಿದೆ. ಆದರೆ ಆದಷ್ಟು ಬೇಗ ನೋಂದಣಿ ಮಾಡಿಸಿಕೊಂಡರೆ ಕಲಿಕೆ ಸುಲಭ ಎನ್ನುತ್ತಾರೆ ಪ್ರಾಣೇಶ್.
’ಡೆಮೊ ಬೋರ್ಡ್ ಇರಿಸಿ ಅದರಲ್ಲಿ ಕಾಯಿಗಳನ್ನು ನಡೆಸುವುದನ್ನು ವಿಡಿಯೊ ಶೂಟ್ ಮಾಡಲಾಗುತ್ತದೆ. ನಂತರ ವಾಟ್ಸ್ ಆ್ಯಪ್ ಗುಂಪಿಗೆ ಅದನ್ನು ಅಪ್‌ಲೋಡ್ ಮಾಡಲಾಗುತ್ತದೆ. ಲೋಡಿಂಗ್ ಅನುಕೂಲಕ್ಕಾಗಿ ಪ್ರತಿ ವಿಡಿಯೊಗಳನ್ನು 10 ನಿಮಿಷಗಳ ಒಳಗೆ ಮುಗಿಸಲಾಗುತ್ತದೆ. ಈ ವರ್ಷ ಜಾರಿಗೆ ಬಂದಿರುವ ಹೊಸ ನಿಯಮಗಳಡಿಯಲ್ಲಿ ತರಬೇತಿ ನೀಡಲಾಗುತ್ತದೆ’ ಎಂದು ಅವರು ವಿವರಿಸಿದರು. ಸಂಪರ್ಕ ಸಂಖ್ಯೆ–9242401702/8618108601.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.