ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಕರಾಜ್: ಅಮೆರಿಕ ಓಪನ್‌ನ ‘ಯುವ’ರಾಜ

ಏಂಜಲಿಕ್ ಕರ್ಬರ್ ಓಟಕ್ಕೆ ಲೆಯ್ಲಾ ಫರ್ನಾಂಡಸ್ ತಡೆ; ಅಲಿಯಾಸಿಮ್ ಜಯಭೇರಿ
Last Updated 6 ಸೆಪ್ಟೆಂಬರ್ 2021, 7:17 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಹದಿನೆಂಟರ ಹರೆಯದ ಕಾರ್ಲೋಸ್ ಅಲ್ಕರಾಜ್ ಇಲ್ಲಿನ ಹುಲ್ಲಿನ ಅಂಗಣದಲ್ಲಿ ಮಿಂಚಿದರು. ಭಾನುವಾರ ರಾತ್ರಿ ನಡೆದ ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಪ್ರೀ ಕ್ವಾರ್ಟರ್‌ ಫೈನಲ್ ಹಣಾಹಣಿಯಲ್ಲಿ ಗೆದ್ದ ಅವರು ಟೂರ್ನಿಯ ಎಂಟರ ಘಟ್ಟ ಪ್ರವೇಶಿಸಿದ ಅತಿ ಕಿರಿಯ ಆಟಗಾರ ಎನಿಸಿಕೊಂಡರು.

ಐದು ಸೆಟ್‌ಗಳ ರೋಚಕ ಪಂದ್ಯದಲ್ಲಿ ಸ್ಪೇನ್‌ನ ಕಾರ್ಲೋಸ್ ಜರ್ಮನಿಯ ಪೀಟರ್ ಗೊಜೊವ್‌ಜಿಕ್‌ ವಿರುದ್ಧ 5-7, 6-1, 5-7, 6-2, 6-0ರಲ್ಲಿ ಗೆಲುವು ಸಾಧಿಸಿದರು.

1998ರ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಅಮೆರಿಕದ ಆ್ಯಂಡ್ರೆ ಅಗಾಸಿ ಈ ಸಾಧನೆ ಮಾಡಿದ ಅತಿ ಕಿರಿಯ ಆಟಗಾರ ಎನಿಸಿಕೊಂಡಿದ್ದರು. ಅಗಾಸಿಗಿಂತ ಕಾರ್ಲೋಸ್‌ ಎಂಟು ದಿನ ಕಿರಿಯರಾಗಿದ್ದಾರೆ. ಅವರಿಗೆ ಈಗ 18 ವರ್ಷ ನಾಲ್ಕು ತಿಂಗಳು ಪ್ರಾಯ.

ಕಾರ್ಲೋಸ್‌ ಅವರಿಗಿಂತ 14 ವರ್ಷ ಹಿರಿಯರಾದ ಪೀಟರ್ ಅವರು ಗ್ರ್ಯಾನ್‌ಸ್ಲಾಂ ಟೂರ್ನಿಯೊಂದರಲ್ಲಿ ಇದೇ ಮೊದಲ ಬಾರಿ ನಾಲ್ಕರ ಸುತ್ತು ಪ್ರವೇಶಿಸಿದ್ದರು. ಮೊದಲ ಸೆಟ್‌ನಲ್ಲಿ ಅತ್ಯುತ್ತಮ ಆಟವಾಡಿದ ಅವರು ನಂತರ ನಿರಾಸೆಗೆ ಒಳಗಾದರು. ನಾಲ್ಕನೇ ಸೆಟ್‌ನಲ್ಲಿ ತೊಡೆಯಲ್ಲಿ ನೋವು ಕಾಣಿಸಿಕೊಂಡು ಚಿಕಿತ್ಸೆ ಪಡೆದುಕೊಂಡರು.

35 ವಿನ್ನರ್ಸ್ ಮತ್ತು ಏಳು ಏಸ್‌ ಸಿಡಿಸಿದ ಕಾರ್ಲೋಸ್ ನೆಟ್‌ ಬಳಿ ಡ್ರಾಪ್‌ ಮಾಡುವುದರ ಮೂಲಕ 15 ಪಾಯಿಂಟ್ ಕಲೆ ಹಾಕಿದ್ದರು. ಎದುರಾಳಿ ಆಟಗಾರ 84 ಸ್ವಯಂ ತಪ್ಪುಗಳನ್ನು ಎಸಗಿದರು. ಮುಂದಿನ ಪಂದ್ಯದಲ್ಲಿ ಕಾರ್ಲೋಸ್ 12ನೇ ಶ್ರೇಯಾಂಕಿತ ಕೆನಡಾ ಆಟಗಾರ ಫೆಲಿಕ್ಸ್‌ ಆಗರ್‌ ಅಲಿಯಾಸಿಮ್ ಎದುರು ಸೆಣಸುವರು.

‘ಐದು ಸೆಟ್‌ಗಳ ವರೆಗೆ ಸಾಗುವ ಇಂಥ ಪಂದ್ಯಗಳಲ್ಲಿ ಆಡುವುದು ಬಲು ಕಷ್ಟ. ಆದರೂ ಗೆಲುವು ಸಾಧಿಸಿದ್ದರಲ್ಲಿ ಖುಷಿ ಇದೆ. ಈ ಹಂತಕ್ಕೆ ತಲುಪುವ ನಿರೀಕ್ಷೆ ಇರಲಿಲ್ಲ. ಮುಂದೆ ಇನ್ನಷ್ಟು ಗ್ರ್ಯಾನ್‌ ಸ್ಲಾಂ ಟೂರ್ನಿಗಳಲ್ಲಿ ‘ಫೈನಲ್ಸ್‌’ ಆಡುವು ಹುರುಪು ಬಂದಿದೆ’ ಎಂದು ಕಾರ್ಲೋಸ್ ಹೇಳಿದರು.

ತಿಯಾಫಿ ಸವಾಲು ಮೀರಿದ ಫೆಲಿಕ್ಸ್‌

ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಅಮೆರಿಕದ ಫ್ರಾನ್ಸಿಸ್ ತಿಯಾಫಿ ಅವರ ಸವಾಲು ಮೀರಿ ನಿಂತ ಫೆಲಿಕ್ಸ್‌ 4-6, 6-2, 7-6(6), 6-4ರಲ್ಲಿ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಆರ್ಥರ್ ಆ್ಯಷ್‌ ಅಂಗಣದಲ್ಲಿ ನಡೆದ ಪಂದ್ಯದ ಮೊದಲ ಸೆಟ್‌ನಲ್ಲಿ 23 ವರ್ಷದ ಅಮೆರಿಕ ಆಟಗಾರ ತಿಯಾಫಿ ಅಮೋಘ ಸಾಮರ್ಥ್ಯ ತೋರಿದ್ದರು. ಆದರೆ 21 ವರ್ಷದ ಫೆಲಿಕ್ಸ್ ಎರಡನೇ ಸೆಟ್‌ನಲ್ಲಿ ಭರ್ಜರಿ ಆಟದ ಮೂಲಕ ತಿರುಗೇಟು ನೀಡಿದರು.

12ನೇ ಶ್ರೇಯಾಂಕಿತ ಫೆಲಿಕ್ಸ್ ಮೂರನೇ ಸೆಟ್‌ನ ಒಂಬತ್ತನೇ ಗೇಮ್‌ನಲ್ಲಿ ನಾಲ್ಕು ಏಸ್ ಸಿಡಿಸಿ ಎದುರಾಳಿಯನ್ನು ಕಂಗೆಡಿಸಿದರು. ಆದರೆ ತಿಯಾಫಿ ಪಟ್ಟು ಬಿಡಲಿಲ್ಲ. ಹೀಗಾಗಿ ಪಂದ್ಯ ಸೆಟ್‌ ಟೈ ಬ್ರೇಕರ್‌ಗೆ ಸಾಗಿತು. ನಾಲ್ಕನೇ ಸೆಟ್‌ನಲ್ಲಿ ಹೆಚ್ಚು ಪ್ರಯಾಸವಿಲ್ಲದೆ ಫೆಲಿಕ್ಸ್ ಜಯ ಸಾಧಿಸಿದರು.

ಏಂಜಲಿಕ್ ಕರ್ಬರ್‌ಗೆ ಲೆಯ್ಲಾ ಆಘಾತ

ಕಳೆದ ವರ್ಷದ ಚಾಂಪಿಯನ್‌ ನವೊಮಿ ಒಸಾಕ ವಿರುದ್ಧ ಎರಡನೇ ಸುತ್ತಿನಲ್ಲಿ ಜಯ ಗಳಿಸಿ ಗಮನ ಸೆಳೆದಿದ್ದ ಕೆನಡಾದ ಲೆಯ್ಲಾ ಫರ್ನಾಂಡಸ್‌ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಮತ್ತೊಬ್ಬರು ಮಾಜಿ ಚಾಂಪಿಯನ್‌ಗೆ ಆಘಾತ ನೀಡಿದರು. ಭಾನುವಾರ ರಾತ್ರಿ ನಡೆದ ಪಂದ್ಯ ಜರ್ಮನಿಯ ಏಂಜಲಿಕ್ ಕರ್ಬರ್‌ ವಿರುದ್ಧ4-6, 7-6(5), 6-2ರಲ್ಲಿ ಜಯ ಸಾಧಿಸಿದ ಅವರು ಎಂಟರ ಘಟ್ಟಕ್ಕೆ ಲಗ್ಗೆ ಇರಿಸಿದರು.

19ನೇ ಜನ್ಮದಿನದ ಹಿಂದಿನ ರಾತ್ರಿಯ ಪಂದ್ಯದಲ್ಲಿ ಮೂರು ಬಾರಿಯ ಗ್ರ್ಯಾನ್‌ಸ್ಲಾಂ ವಿಜೇತೆ ಕರ್ಬರ್‌ ವಿರುದ್ಧ ಲೆಯ್ಲಾ ಮೊದಲ ಸೆಟ್‌ ಸೋತರು. ಆದರೆ ನಂತರ ಚೇತರಿಸಿಕೊಂಡರು. ಟೈ ಬ್ರೇಕರ್‌ಗೆ ಸಾಗಿದ ಎರಡನೇ ಸೆಟ್‌ನಲ್ಲಿ ಭರ್ಜರಿ ಆಟವಾಡಿದ ಅವರು ನಿರ್ಣಾಯಕ ಮೂರನೇ ಸೆಟ್‌ನಲ್ಲಿ ಏಕಪಕ್ಷೀಯ ಜಯ ಸಾಧಿಸಿದರು.

ಮೊದಲ ಸೆಟ್‌ನ ಆರಂಭದಲ್ಲಿ 4–2ರ ಮುನ್ನಡೆ ಗಳಿಸಿದ್ದ ಲೆಯ್ಲಾ ವಿರುದ್ಧ 2016ರ ಅಮೆರಿಕ ಓಪನ್ ಚಾಂಪಿಯನ್‌ ಕರ್ಬರ್ ತಿರುಗೇಟು ನೀಡಿದರು. ಲೆಯ್ಲಾಎರಡು ಬಾರಿ ಡಬಲ್ ಫಾಲ್ಟ್ ಎಸಗಿದ ನಂತರ ಪಾರಮ್ಯ ಮೆರೆದ ಕರ್ಬರ್ ಸತತ ನಾಲ್ಕು ಗೇಮ್‌ ಗೆದ್ದು ಸೆಟ್ ತಮ್ಮದಾಗಿಸಿಕೊಂಡರು.

ಎರಡನೇ ಸೆಟ್‌ನಲ್ಲಿ ಇಬ್ಬರೂ ಅಮೋಘ ಆಟವಾಡಿದರು. ಆದರೆ ಗೆಲುವು ಲೆಯ್ಲಾ ಅವರಿಗೆ ಒಲಿಯಿತು. ಕರ್ಬರ್‌ ಅವರಿಗಿಂತ 15 ವರ್ಷ ಕಿರಿಯ ಆಟಗಾರ್ತಿ, 73ನೇ ರ‍್ಯಾಂಕ್‌ನ ಲೆಯ್ಲಾ ಮೂರನೇ ಸೆಟ್‌ನ ಆರಂಭದಿಂದಲೇ ಆಧಿಪತ್ಯ ಸಾಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT