ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಬಲೆಂಕಾ ಮುಡಿಗೆ ಮೊದಲ ಕಿರೀಟ

ಆಸ್ಟ್ರೇಲಿಯಾ ಓಪನ್ ಟೆನಿಸ್‌ ಟೂರ್ನಿ: ರಿಬಾಕಿನಾಗೆ ನಿರಾಸೆ
Last Updated 28 ಜನವರಿ 2023, 13:05 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಬೆಲಾರೂಸ್‌ನ ಅರಿನಾ ಸಬಲೆಂಕಾ ಅವರು ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಕಿರೀಟ ಮುಡಿಗೇರಿಸಿಕೊಂಡರು.

ರಾಡ್‌ ಲೇವರ್‌ ಅರೆನಾದಲ್ಲಿ ಶನಿವಾರ ನಡೆದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ, ಸೆಟ್‌ ಹಿನ್ನಡೆಯಿಂದ ಪುಟಿದೆದ್ದ ಅವರು 4-6, 6-3, 6-4ರಿಂದ ಕಜಕಸ್ತಾನದ ಎಲೆನಾ ರಿಬಾಕಿನಾ ಅವರನ್ನು ಪರಾಭವಗೊಳಿಸಿದರು. ಇದರೊಂದಿಗೆ ತಮ್ಮ ಮೊದಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗೆ ಮುತ್ತಿಕ್ಕಿದರು.

ತೀವ್ರ ಕುತೂಹಲ ಕೆರಳಿಸಿದ್ದ ಹಣಾಹಣಿಯು 2 ತಾಸು 28 ನಿಮಿಷಗಳ ಕಾಲ ನಡೆಯಿತು. ಹಾಲಿ ವಿಂಬಲ್ಡನ್‌ ಚಾಂಪಿಯನ್‌ಗೆ ಸೋಲುಣಿಸಿದ ಸಂತಸದಲ್ಲಿ ಸಬಲೆಂಕಾ ಆನಂದಬಾಷ್ಪ ಸುರಿಸಿದರು.

ಬಿರುಸಿನ ಗ್ರೌಂಡ್‌ಸ್ಟ್ರೋಕ್‌ಗಳು, ನಿಖರ ಸರ್ವ್‌ಗಳು ಮತ್ತು ಅದ್ಭುತ ರ‍್ಯಾಲಿಗಳು ಪಂದ್ಯದ ಮೆರುಗು ಹೆಚ್ಚಿಸಿದವು.

ಕೇವಲ 34 ನಿಮಿಷಗಳಲ್ಲಿ ಮೊದಲ ಸೆಟ್‌ ಗೆದ್ದುಕೊಂಡ ರಿಬಾಕಿನಾ, ಪ್ರಶಸ್ತಿ ಜಯಿಸುವ ನಿರೀಕ್ಷೆ ಮೂಡಿಸಿದ್ದರು. ಆದರೆ ಎರಡನೇ ಸೆಟ್‌ಅನ್ನು 57 ನಿಮಿಷಗಳಲ್ಲಿ ತಮ್ಮದಾಗಿಸಿಕೊಂಡ ಸಬಲೆಂಕಾ, ನಿರ್ಣಾಯಕ ಸೆಟ್‌ನ ಕುತೂಹಲ ಹೆಚ್ಚುವಂತೆ ಮಾಡಿದರು.

ಮೂರನೇ ಸೆಟ್‌ನಲ್ಲಿ 3–3 ಗೇಮ್‌ಗಳಿಂದ ಸಮಬಲವಾಗಿದ್ದಾಗ ರಿಬಾಕಿನಾ ಎರಡು ಬ್ರೇಕ್ ಪಾಯಿಂಟ್ಸ್ ಉಳಿಸಿಕೊಂಡರು. ಏಸ್‌ ಸಿಡಿಸಿದ ಸಬಲೆಂಕಾ 5–3ರಿಂದ ಮುನ್ನಡೆದರು. ಬಳಿಕ ಅದೇ ಲಯದೊಂದಿಗೆ ಸೆಟ್‌ ಹಾಗೂ ಪಂದ್ಯವನ್ನು ತಮ್ಮದಾಗಿಸಿಕೊಂಡರು.

ಪಂದ್ಯದಲ್ಲಿ ರಿಬಾಕಿನಾ ಒಂಬತ್ತು ಮತ್ತು ಸಬಲೆಂಕಾ 17 ಏಸ್‌ಗಳನ್ನು ಸಿಡಿಸಿದರು. ಬೆಲಾರೂಸ್‌ ಆಟಗಾರ್ತಿ ಏಳು ಡಬಲ್ ಫಾಲ್ಟ್ಸ್ ಎಸಗಿದರು. ರಿಬಾಕಿನಾ ಒಂದು ಡಬಲ್ ಫಾಲ್ಟ್ ಮಾತ್ರ ಮಾಡಿದರು. ಇಲ್ಲಿ ಟ್ರೋಫಿ ಜಯಿಸುವುದರೊಂದಿಗೆ ಸಬಲೆಂಕಾ ವಿಶ್ವ ರ‍್ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ ಎರಡನೇ ಸ್ಥಾನಕ್ಕೇರಲಿದ್ದಾರೆ.

ಏಳು ತಿಂಗಳ ಅವಧಿಯಲ್ಲಿ ಎರಡನೇ ಗ್ರ್ಯಾನ್‌ಸ್ಲಾಮ್‌ ಫೈನಲ್ ತಲುಪಿದ ರಿಬಾಕಿನಾ ಮೊದಲ ಬಾರಿಗೆ ಅಗ್ರ 10ರೊಳಗಿನ ರ‍್ಯಾಂಕಿಂಗ್‌ ಪಡೆಯಲಿದ್ದಾರೆ.

ಡಿ ಗ್ರೂಟ್‌ ಸತತ ಒಂಬತ್ತನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ: ನೆದರ್ಲೆಂಡ್ಸ್ ದಂತಕತೆ ಡಿಯೆಡ್‌ ಡಿ ಗ್ರೂಟ್‌ ಅವರು ಮಹಿಳೆಯರ ವೀಲ್‌ಚೇರ್ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದರು. ಇದರೊಂದಿಗೆ ಸತತ ಒಂಬತ್ತು ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲಿ ಕಿರೀಟ ಧರಿಸಿದ ಸಾಧನೆ ಮಾಡಿದರು.

ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಡಿಗ್ರೂಟ್‌ 0-6, 6-2, 6-2ರಿಂದ ಜಪಾನ್‌ನ ಯುಯಿ ಕಮಿಜಿ ಅವರನ್ನು ಪರಾಭವಗೊಳಿಸಿದರು. ಡಿ ಗ್ರೂಟ್ ಅವರಿಗೆ ಇದು ಐದನೇ ಆಸ್ಟ್ರೇಲಿಯಾ ಓಪನ್ ಕಿರೀಟ. ಒಟ್ಟಾರೆ 17ನೇ ಗ್ರ್ಯಾನ್‌ಸ್ಲಾಮ್ ಸಿಂಗಲ್ಸ್ ಗರಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT