ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿ: ಸೆರೆನಾಗೆ ಸಾಟಿಯಾಗದ ಬೌಷಾರ್ಡ್‌

ಸಿಮೊನಾಗೆ ಪ್ರಯಾಸದ ಗೆಲುವು
Last Updated 17 ಜನವರಿ 2019, 15:40 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಆಸ್ಟ್ರೇಲಿಯಾದ ಮಾರ್ಗರೇಟ್‌ ಕೋರ್ಟ್‌ ಹೆಸರಿನಲ್ಲಿರುವ 24 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆಲುವಿನ ದಾಖಲೆ ಸರಿಗಟ್ಟುವ ಹಾದಿಯಲ್ಲಿ ಅಮೆರಿಕದ ಸೆರೆನಾ ವಿಲಿಯಮ್ಸ್‌ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

ಋತುವಿನ ಮೊದಲ ಗ್ರ್ಯಾನ್‌ಸ್ಲಾಮ್‌, ಆಸ್ಟ್ರೇಲಿಯಾ ಓಪನ್‌ನಲ್ಲಿ ಸೆರೆನಾ ಮೂರನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

ಗುರುವಾರ ನಡೆಯುವ ಮಹಿಳಾ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನ ಹಣಾಹಣಿಯಲ್ಲಿ ಅಮೆರಿಕದ ಆಟಗಾರ್ತಿ 6–2, 6–2 ನೇರ ಸೆಟ್‌ಗಳಿಂದ ಕೆನಡಾದ ಯೂಜ್ನಿ ಬೌಷಾರ್ಡ್‌ ಅವರನ್ನು ಸೋಲಿಸಿದರು. ಈ ಹೋರಾಟ 70 ನಿಮಿಷ ನಡೆಯಿತು.

ಮುಂದಿನ ಸುತ್ತಿನಲ್ಲಿ ಸೆರೆನಾ, ಉಕ್ರೇನ್‌ನ ಆಟಗಾರ್ತಿ ಡಯಾನ ಯಸ್ಟ್ರೆಮಸ್ಕಾ ಎದುರು ಆಡಲಿದ್ದಾರೆ.

ಮೊದಲ ಸೆಟ್‌ನ ಆರಂಭದ ನಾಲ್ಕು ಗೇಮ್‌ಗಳಲ್ಲಿ ಸೆರೆನಾ ಮತ್ತು ಬೌಷಾರ್ಡ್‌ ಸರ್ವ್‌ ಉಳಿಸಿಕೊಂಡರು. ಹೀಗಾಗಿ 2–2 ಸಮಬಲ ಕಂಡುಬಂತು. ನಂತರ ಅಮೆರಿಕದ ಆಟಗಾರ್ತಿ ಮೋಡಿ ಮಾಡಿದರು. ಬೇಸ್‌ ಲೈನ್‌ ಮತ್ತು ಗ್ರೌಂಡ್‌ ಸ್ಟ್ರೋಕ್‌ಗಳ ಮೂಲಕ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದ ಸೆರೆನಾ ಸಂಭ್ರಮಿಸಿದರು.

ಎರಡನೇ ಸೆಟ್‌ನ ಆರಂಭದಲ್ಲೂ ಉಭಯ ಆಟಗಾರ್ತಿಯರು ಜಿದ್ದಾಜಿದ್ದಿನ ಪೈಪೋಟಿ ನಡೆಸಿದರು. ಬಳಿಕ ಪರಿಣಾಮಕಾರಿ ಆಟ ಆಡಿದ ಸೆರೆನಾ ಸತತ ಐದು ಗೇಮ್‌ಗಳನ್ನು ಜಯಿಸಿ ಸಂಭ್ರಮದ ಹೊಳೆಯಲ್ಲಿ ಮಿಂದೆದ್ದರು.

ಇನ್ನೊಂದು ಪಂದ್ಯದಲ್ಲಿ ರುಮೇನಿಯಾದ ಆಟಗಾರ್ತಿ, ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಸಿಮೊನಾ ಹಲೆಪ್‌ 6–3, 6–7, 6–4ರಲ್ಲಿ ಅಮೆರಿಕದ ಸೋಫಿಯಾ ಕೆನಿನ್‌ ಅವರನ್ನು ಮಣಿಸಿದರು.

ಜಪಾನ್‌ನ ಆಟಗಾರ್ತಿ ನವೊಮಿ ಒಸಾಕ 6–2, 6–4ರಲ್ಲಿ ತಮಾರ ಜಿದಾನ್‌ಸೆಕ್‌ ಎದುರು ಗೆದ್ದರು.

ಸೆರೆನಾ ಅವರ ಸಹೋದರಿ ವೀನಸ್‌ ವಿಲಿಯಮ್ಸ್‌ 6–3, 4–6, 6–0ರಲ್ಲಿ ಅಲೈಜ್‌ ಕಾರ್ನೆಟ್‌ ಅವರನ್ನು ಪರಾಭವಗೊಳಿಸಿದರು.

ಇತರ ಪಂದ್ಯಗಳಲ್ಲಿ ಕ್ಯಾಮಿಲಾ ಜಿಯೊರ್ಗಿ 6–2, 6–0ರಲ್ಲಿ ಇಗಾ ಸ್ವಿಯಾಟೆಕ್‌ ಎದುರೂ, ವಾಂಗ್‌ ಕ್ವಿಯಾಂಗ್‌ 6–2, 6–3ರಲ್ಲಿ ಅಲೆಕ್ಸಾಂಡ್ರಾ ಕ್ರುನಿಚ್‌ ಮೇಲೂ, ಎಲಿನಾ ಸ್ವಿಟೋಲಿನಾ 6–4, 6–1ರಲ್ಲಿ ವಿಕ್ಟೋರಿಯಾ ಬ್ರೆಂಗಲ್‌ ವಿರುದ್ಧವೂ, ಅನಸ್ತೆಸಿಜಾ ಸೆವಾಸ್ಟೋವಾ 6–3, 3–6, 6–2ರಲ್ಲಿ ಬಿಯಾಂಕ ಆ್ಯಂಡ್ರಿಸ್ಕು ಮೇಲೂ, ಎಲಿಸೆ ಮರ್ಟೆನ್ಸ್‌ 6–1, 7–5ರಲ್ಲಿ ಮಾರ್ಗರಿಟಾ ಗ್ಯಾಸ್ಪರಿನಾ ಎದುರೂ, ಮ್ಯಾಡಿಸನ್‌ ಕೀಸ್‌ 6–3, 6–4ರಲ್ಲಿ ಅನಸ್ತೇಸಿಯಾ ಪೊಟಾಪೊವಾ ಮೇಲೂ, ಟೈಮಿ ಬ್ಯಾಕ್‌ಸಿಂಜಿಕಿ 6–2, 7–5ರಲ್ಲಿ ನಟಾಲಿಯಾ ವಿಖಲ್ಯಾನ್‌ತ್ಸೆವಾ ಎದುರೂ ಗೆದ್ದರು.

ಸಿಮನ್‌ಗೆ ಆಘಾತ ನೀಡಿದ ಬೋಲ್ಟ್‌: ಪುರುಷರ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನ ಹೋರಾಟದಲ್ಲಿ ಆಸ್ಟ್ರೇಲಿಯಾದ ಅಲೆಕ್ಸ್ ಬೋಲ್ಟ್‌, ಫ್ರಾನ್ಸ್‌ನ ಗಿಲ್ಲೆಸ್‌ ಸಿಮನ್‌ಗೆ ಆಘಾತ ನೀಡಿದರು.

ಅಲೆಕ್ಸ್‌ 2–6, 6–4, 4–6, 7–6, 6–4ಯಿಂದ ಗೆದ್ದರು.

ಇತರ ಪಂದ್ಯಗಳಲ್ಲಿ ಕೀ ನಿಶಿಕೋರಿ 6–3, 7–6, 5–7, 5–7, 7–6ರಲ್ಲಿ ಇವೊ ಕಾರ್ಲೊವಿಚ್‌ ಎದುರೂ, ಬೊರ್ನಾ ಕೊರಿಕ್‌ 6–4, 6–3, 6–4ರಲ್ಲಿ ಮಾರ್ಟನ್‌ ಫುಕ್ಸೊವಿಕ್ಸ್ ಮೇಲೂ, ಫಾಬಿಯೊ ಫಾಗ್ನಿನಿ 7–6, 6–3, 7–6ರಲ್ಲಿ ಲಿಯೊನಾರ್ಡೊ ಮೇಯರ್‌ ವಿರುದ್ಧವೂ, ಮಿಲೊಸ್‌ ರಾನಿಕ್‌ 6–7, 7–6, 7–6, 7–6ರಲ್ಲಿ ಸ್ಟಾನ್‌ ವಾವ್ರಿಂಕ ಮೇಲೂ, ಡೇವಿಡ್‌ ಗೊಫಿನ್‌ 5–7, 7–5, 6–2, 6–4ರಲ್ಲಿ ಮರಿಯಸ್‌ ಕೊಪಿಲ್‌ ಎದುರೂ, ಡೇನಿಯಲ್‌ ಮೆಡ್ವೆದೇವ್‌ 6–3, 6–3, 6–3ರಲ್ಲಿ ರ‍್ಯಾನ್‌ ಹ್ಯಾರಿಸನ್‌ ವಿರುದ್ಧವೂ ವಿಜಯಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT