ಶನಿವಾರ, ಏಪ್ರಿಲ್ 4, 2020
19 °C

ನಿಕ್‌ ಸವಾಲು ಮೆಟ್ಟಿನಿಂತ ನಡಾಲ್‌

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್‌: ವಿಶ್ವದ ಅಗ್ರಮಾನ್ಯ ಆಟಗಾರ ರಫೆಲ್‌ ನಡಾಲ್‌ ಟೂರ್ನಿಯಲ್ಲಿ ಮೊದಲ ಬಾರಿ ಸೆಟ್‌ ಕಳೆದುಕೊಂಡರು. ಆದರೆ ಆತಿಥೇಯ ಆಟಗಾರ ನಿಕ್‌ ಕಿರ್ಗಿಯೋಸ್‌ ಅವರ ಸ್ಫೂರ್ತಿಯುತ ಹೋರಾಟವನ್ನು ಮೆಟ್ಟಿನಿಂತ ನಡಾಲ್‌, ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಸೋಮವಾರ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದರು.

ಬಲಿಷ್ಠ ಸ್ನಾಯುಗಳ ಸ್ಪೇನ್‌ನ ಆಟಗಾರ 6–3, 3–6, 7–6 (8–6), 7–6 (7–4) ರಿಂದ ಜಯಗಳಿಸಿ 12ನೇ ಬಾರಿ ಮೆಲ್ಬರ್ನ್‌ಪಾರ್ಕ್‌ನಲ್ಲಿ ಎಂಟರ ಘಟ್ಟ ತಲುಪಿದರು. ಅವರ ಮುಂದಿನ ಎದುರಾಳಿ ಆಸ್ಟ್ರಿಯಾದ ಡೊಮಿನಿಕ್‌ ಥೀಮ್‌. 23ನೇ ಶ್ರೇಯಾಂಕದ ಕಿರ್ಗಿಯೋಸ್‌, 19 ಬಾರಿಯ ಗ್ರ್ಯಾನ್‌ಸ್ಲಾಮ್‌ ಚಾಂಪಿಯನ್‌ ಎದುರು ಎರಡನೇ ಸೆಟ್‌ ಮತ್ತು ಮೂರನೇ ಸೆಟ್‌ನ ಬಹುಪಾಲು ಸರಿಸಾಟಿಯಾಗೇ ಆಡಿದರು. ಆದರೆ ಒಂದು ಬಾರಿ ಹಿಡಿತ ಸಿಕ್ಕಿದ ಮೇಲೆ ನಡಾಲ್‌ ಗೆಲ್ಲುವ ಆಟಗಾರನಂತೆ ಕಂಡುಬಂದರು.

ನಾಲ್ಕನೇ ಸೆಟ್‌ನಲ್ಲಿ ಪಂದ್ಯ ಗೆಲುವಿಗೆ ಸರ್ವ್‌ ಮಾಡುತ್ತಿದ್ದಾಗ ಕಿರ್ಗಿಯೋಸ್‌ ‘ಬ್ರೇಕ್‌’ ಪಡೆದರು. ಫಲಿತಾಂಶ ಬದಲಾಗಬಹುದೆಂದು ಆಸ್ಟ್ರೇಲಿಯಾದ ಪ್ರೇಕ್ಷಕರೂ ರೋಮಾಂಚನಗೊಂಡಿದ್ದರು. ಆದರೆ ನಡಾಲ್‌ ಟೈಬ್ರೇಕರ್‌ನಲ್ಲಿ ಛಲದಿಂದ ಆಡಿದರು. ಕಿರ್ಗಿಯೋಸ್‌ ಅವರ ಫೋರ್‌ಹ್ಯಾಂಡ್‌ ಹೊಡೆತ ನೆಟ್‌ಗೆ ಬಡಿಯುವ ಮೂಲಕ ಮೂರು ಗಂಟೆ 38 ನಿಮಿಷಗಳ ಪಂದ್ಯ ನಡಾಲ್‌ ಪರ ಮುಕ್ತಾಯಗೊಂಡಿತು.

‘ಆತ (ಕಿರ್ಗಿಯೋಸ್‌) ಆಟದ ಮೇಲೆ ಗಮನ ಕೇಂದ್ರೀಕರಿಸಿದರೆ ಮಹತ್ವದ ಆಟಗಾರನಾಗಬಲ್ಲ. ಆತನಲ್ಲಿ ಅಷ್ಟೊಂದು ಪ್ರತಿಭೆಯಿದೆ’ ಎಂದು ನಡಾಲ್ ಎದುರಾಳಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

ಕಳೆದ ವರ್ಷ ಇಬ್ಬರ ನಡುವಣ ಮಾತಿನ ಸಮರ ನಡೆದಿದ್ದು, ಈ ಹೋರಾಟ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಕಿರ್ಗಿಯೋಸ್‌ಗೆ ಗೌರವ ಕೊಡುವುದು ಗೊತ್ತಿಲ್ಲ ಎಂದು ನಡಾಲ್‌ ಟೀಕಿಸಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಆಸ್ಟ್ರೇಲಿಯಾದ ಆಟಗಾರ, ಎದುರಾಳಿಯನ್ನು ‘ಸೂಪರ್‌ ಸಾಲ್ಟಿ’ (ಸಿಡುಕುಗಾರ) ಎಂದು ಮೂದಲಿಸಿದ್ದರು. ಐದನೇ ಶ್ರೇಯಾಂಕದ ಥೀಮ್‌ ನಾಲ್ಕನೇ ಸುತ್ತಿನ ಇನ್ನೊಂದು ಪಂದ್ಯದಲ್ಲಿ ಫ್ರಾನ್ಸ್‌ನ ಗೇಲ್‌ ಮಾನ್‌ಫಿಲ್ಸ್‌ ಅವರನ್ನು 6–2, 6–4,6–4 ರಿಂದ ಸೋಲಿಸಿದರು.

ಇತರ ಪಂದ್ಯಗಳಲ್ಲಿ 15ನೇ ಶ್ರೇಯಾಂಕದ ಸ್ಟಾನ್‌ ವಾವ್ರಿಂಕ (ಸ್ವಿಜರ್ಲೆಂಡ್‌) 6–2, 2–6, 4–6, 7–6 (7–2), 6–2 ರಿಂದ ನಾಲ್ಕನೇ ಶ್ರೇಯಾಂಕದ ಡೇನಿಯಲ್‌ ಮೆಡ್ವೆಡೇವ್‌ (ರಷ್ಯಾ) ವಿರುದ್ಧ, ಏಳನೇ ಶ್ರೇಯಾಂಕದ ಅಲೆಕ್ಸಾಂಡರ್‌ ಜ್ವರೇವ್‌ (ಜರ್ಮನಿ) 6–4, 6–4, 6–4 ರಿಂದ ರಷ್ಯಾದ ಆ್ಯಂಡ್ರೆ ರುಬ್ಲೆವ್‌ ವಿರುದ್ಧ ಜಯಗಳಿಸಿದರು.

ಅನೆಟ್‌, ಹಲೆಪ್‌ ಮುನ್ನಡೆ: ಕಳೆದ ವಾರ ಅನಿರೀಕ್ಷಿತಗಳನ್ನು ಕಂಡಿದ್ದ ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ನಾಲ್ಕನೇ ಶ್ರೇಯಾಂಕದ ಸಿಮೊನಾ ಹಲೆಪ್‌ ಮತ್ತು ಸ್ಪೇನ್‌ನ ಗಾರ್ಬೈನ್‌ ಮುಗುರುಜಾ ಎಂಟರ ಘಟ್ಟಕ್ಕೆ ಮುನ್ನಡೆದರು. ಅವರೊಡನೆ ಅನೆಟ್‌ ಕೊಂಟಾವೀಟ್‌ (ಎಸ್ಟೋನಿಯಾ) ಮತ್ತು ಅನಸ್ತೇಸಿಯಾ ಪಾವ್ಲುಚೆಂಕೊವಾ (ರಷ್ಯಾ) ಕೂಡ ಕ್ವಾರ್ಟರ್‌ಫೈನಲ್‌ ತಲುಪಿದರು.

ಅನೆಟ್ 6–7 (4–7), 7–5, 7–5 ರಿಂದ ಪೋಲೆಂಡ್‌ನ ಇಗಾ ಸ್ವೆಟೆಕ್‌ ಅವರನ್ನು; ರುಮೇನಿಯಾದ ಹಲೆಪ್‌ 6–4, 6–4 ರಿಂದ ಬೆಲಾರಸ್‌ನ ಎಲಿಸ್‌ ಮೆರ್ಟೆನ್ಸ್‌ ಅವರನ್ನು; ಮುಗುರುಜಾ 6–3, 6–3 ರಿಂದ ಕಿಕಿ ಬರ್ಟೆನ್ಸ್‌ (ನೆದರ್ಲೆಂಡ್ಸ್‌) ಅವರನ್ನು; ಪಾವ್ಲುಚೆಂಕೊವಾ 6–7 (5–7), 7–6 (7–4), 6– 2ರಿಂದ 17ನೇ ಶ್ರೇಯಾಂಕದ ಆಂಜೆಲಿಕ್‌ ಕೆರ್ಬರ್‌ (ಜರ್ಮನಿ) ಅವರನ್ನು ಸೋಲಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು