ಸೋಮವಾರ, ಜೂನ್ 21, 2021
30 °C
ಖಾಡೆಗೆ ನಿರಾಸೆ

ಬೆಂಗಳೂರು ಓಪನ್‌ ಎಟಿಪಿ ಚಾಲೆಂಜರ್‌ ಟೆನಿಸ್‌ ಟೂರ್ನಿ: ಮುಕುಂದ್‌, ಸಾಕೇತ್‌ ಮಿಂಚು

ಜಿ.ಶಿವಕುಮಾರ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಉದ್ಯಾನ ನಗರಿಯ ಟೆನಿಸ್‌ ಪ್ರಿಯರ ನಿರೀಕ್ಷೆ ಹುಸಿಯಾಗಲಿಲ್ಲ. ಭಾರತದ ಪ್ರಮುಖ ಸಿಂಗಲ್ಸ್‌ ಆಟಗಾರರಾದ ಸಾಕೇತ್‌ ಮೈನೇನಿ ಮತ್ತು ಶಶಿಕುಮಾರ್‌ ಮುಕುಂದ್‌, ಏಷ್ಯಾದ ಅತಿ ದೊಡ್ಡ ಎಟಿಪಿ ಚಾಲೆಂಜರ್‌ ಟೆನಿಸ್‌ ಟೂರ್ನಿ ಎನಿಸಿರುವ ಬೆಂಗಳೂರು ಓಪನ್‌ನಲ್ಲಿ ಮೊದಲ ದಿನ ಮೋಡಿ ಮಾಡಿದರು. ‌

ಕಬ್ಬನ್‌ ಉದ್ಯಾನದಲ್ಲಿರುವ ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಸಂಸ್ಥೆಯ (ಕೆಎಸ್‌ಎಲ್‌ಟಿಎ) ‘ಸೆಂಟರ್‌ ಕೋರ್ಟ್‌’ನಲ್ಲಿ ಗೆಲುವಿನ ತೋರಣ ಕಟ್ಟಿದ ಇವರು ಅಭಿಮಾನಿಗಳ ಮನ ಗೆದ್ದರು.

ಪುರುಷರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ಶಶಿಕುಮಾರ್‌ 2–6, 6–3, 6–4ರಲ್ಲಿ ಸ್ಲೊವೇನಿಯಾದ ಬ್ಲಾಜ್‌ ಕ್ಯಾವಸಿಸ್‌ ಅವರನ್ನು ಸೋಲಿಸಿದರು. 1 ಗಂಟೆ 56 ನಿಮಿಷ ನಡೆದ ಈ ಪೈಪೋಟಿಯಲ್ಲಿ ಟೆನಿಸ್‌ ಆಟದ ಸೊಬಗು ಅನಾವರಣಗೊಂಡಿತು.

32 ವರ್ಷ ವಯಸ್ಸಿನ ಬ್ಲಾಜ್‌, ಮೊದಲ ಸೆಟ್‌ನಲ್ಲಿ ಸುಲಭವಾಗಿ ಜಯದ ಸಿಹಿ ಸವಿದರು. ಎರಡನೇ ಸೆಟ್‌ನ ಶುರುವಿನಲ್ಲೂ ಅವರು ಮುನ್ನಡೆ ಪಡೆದಿದ್ದರಿಂದ ಮುಕುಂದ್‌ ಮುಗ್ಗರಿಸಬಹುದೆಂದು ಅಂದಾಜಿಸಲಾಗಿತ್ತು. ಆದರೆ ಹಾಗಾಗಲಿಲ್ಲ. ಎದುರಾಳಿಯ ತಂತ್ರಗಳಿಗೆ ಪ್ರತಿತಂತ್ರ ಹೆಣೆದ ಭಾರತದ ಆಟಗಾರ ಸೆಟ್‌ ಗೆದ್ದು 1–1 ಸಮಬಲ ಸಾಧಿಸಿದರು.

ನಿರ್ಣಾಯಕ ಎನಿಸಿದ್ದ ಮೂರನೇ ಸೆಟ್‌ನಲ್ಲೂ ಮುಕುಂದ್‌ ಆಟ ರಂಗೇರಿತು. ಗಂಟೆಗೆ 190, 200 ಕಿಲೊ ಮೀಟರ್ಸ್‌ ವೇಗದಲ್ಲಿ ಸರ್ವ್‌ಗಳನ್ನು ಮಾಡಿದ ಅವರು ಎರಡನೇ ಗೇಮ್‌ನಲ್ಲೇ ಎದುರಾಳಿಯ ಸರ್ವ್‌ ಮುರಿದರು. ತಾವು ಮಾಡಿದ ಎರಡು ಸರ್ವ್‌ಗಳನ್ನೂ ಉಳಿಸಿಕೊಂಡು 3–0 ಮುನ್ನಡೆ ಗಳಿಸಿದರು. ನಂತರದ ಐದು ಗೇಮ್‌ಗಳಲ್ಲಿ ಮುಕುಂದ್‌ ಹಲವು ತಪ್ಪುಗಳನ್ನು ಮಾಡಿದರು. ಇವು ಎದುರಾಳಿಗೆ ವರವಾದವು. ಏಕಮುಖವಾಗಿ ಸಾಗಿದ್ದ ಸೆಟ್‌ನಲ್ಲಿ 4–4 ಸಮಬಲ ಕಂಡುಬಂತು. ರೋಚಕ ಘಟ್ಟದಲ್ಲಿ ಸಹನೆಯಿಂದಲೇ ಆಡಿ ಎದುರಾಳಿಯ ಸವಾಲು ಮೆಟ್ಟಿನಿಂತಾಗ ಮುಕುಂದ್‌ ಮೊಗದಲ್ಲಿ ಮಂದಹಾಸ ಮೂಡಿತು.

ಸಾಕೇತ್‌ಗೆ ಸುಲಭ ಜಯ: ಮಧ್ಯಾಹ್ನ ನಡೆದ ಪಂದ್ಯದಲ್ಲಿ 32 ವರ್ಷ ವಯಸ್ಸಿನ ಸಾಕೇತ್‌ 6–3, 6–3ರಲ್ಲಿ ರಷ್ಯಾದ ಅಸ್ಲಾನ್‌ ಕರತ್ಸೇವ್‌ ವಿರುದ್ಧ ಗೆದ್ದರು.

ಮೊದಲ ಸೆಟ್‌ನ ಆರಂಭದ ಐದು ಗೇಮ್‌ಗಳಲ್ಲಿ ಉಭಯ ಆಟಗಾರರು ಸಮಬಲದಿಂದ ಸೆಣಸಿದರು. ಆರನೇ ಗೇಮ್‌ನಲ್ಲಿ ಎದುರಾಳಿಯ ಸರ್ವ್‌ ಮುರಿದ ಸಾಕೇತ್‌ 4–2 ಮುನ್ನಡೆ ಗಳಿಸಿದರು. ಶರವೇಗದ ಸರ್ವ್‌ಗಳ ಜೊತೆಗೆ ಆಗಾಗ ಬಲಿಷ್ಠ ಏಸ್‌ಗಳನ್ನೂ ಸಿಡಿಸಿ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದ ಅವರು 32 ನಿಮಿಷಗಳಲ್ಲಿ ಮೊದಲ ಸೆಟ್‌ ಗೆದ್ದರು.

ಎರಡನೇ ಸೆಟ್‌ನ ಮೊದಲ ಆರು ಗೇಮ್‌ಗಳಲ್ಲಿ ಇಬ್ಬರೂ ಸರ್ವ್‌ ಉಳಿಸಿಕೊಂಡಿದ್ದರಿಂದ 3–3 ಸಮಬಲ ಕಂಡುಬಂತು. ಏಳನೇ ಗೇಮ್‌ನಲ್ಲಿ ಎದುರಾಳಿಯ ಸರ್ವ್‌ ಮುರಿದ ಭಾರತದ ಆಟಗಾರ 4–3 ಮುನ್ನಡೆ ಪಡೆದು ಗೆಲುವಿನ ಕನಸಿಗೆ ಬಲ ತುಂಬಿಕೊಂಡರು. ಎಂಟನೇ ಗೇಮ್‌ನಲ್ಲಿ ಸಾಕೇತ್‌ ಸರ್ವ್‌ ಮುರಿದು ಸಮಬಲ ಸಾಧಿಸುವ ಅವಕಾಶ ಕೈಚೆಲ್ಲಿದ ಕರತ್ಸೇವ್‌, ನೆಟ್‌ಗೆ ಬಡಿದು ತಮ್ಮತ್ತ ಬಂದ ಚೆಂಡನ್ನು ಕ್ರೀಡಾಂಗಣದ ಆಚೆ ಬಾರಿಸಿ ಹತಾಶೆ ವ್ಯಕ್ತಪಡಿಸಿದರು.

ಕನ್ನಡಿಗರಿಗೆ ನಿರಾಸೆ

ಸಿಂಗಲ್ಸ್‌ನಲ್ಲಿ ಕಣದಲ್ಲಿದ್ದ ಕರ್ನಾಟಕದ ಸೂರಜ್‌ ಆರ್‌.ಪ್ರಬೋಧ್, ಎಸ್‌.ಡಿ.ಪ್ರಜ್ವಲ್‌ ದೇವ್‌ ಮತ್ತು ಆದಿಲ್‌ ಕಲ್ಯಾಣಪುರ್‌ ಮೊದಲ ದಿನ ನಿರಾಸೆ ಕಂಡರು.

ಆದಿಲ್‌ 4–6, 7–6, 6–7 ರಲ್ಲಿ ನಿಕಿ ಪೂಣಚ್ಚ ಎದುರೂ, ಸೂರಜ್‌ 2–6, 2–6ರಲ್ಲಿ ವ್ಲಾದಿಸ್ಲಾವ್‌ ಒರ್ಲೋವ್‌ ಮೇಲೂ, ಪ್ರಜ್ವಲ್‌ 2–6, 1–6ರಲ್ಲಿ ಖುಮೋಯುನ್‌ ಸುಲ್ತಾನೋವ್ ವಿರುದ್ಧವೂ ಸೋತರು. ಮೂವರೂ ಟೂರ್ನಿಗೆ ‘ವೈಲ್ಡ್‌ ಕಾರ್ಡ್‌’ ಅರ್ಹತೆ ಗಳಿಸಿದ್ದರು.

ಭಾರತದ ಅರ್ಜುನ್‌ ಖಾಡೆ ಕೂಡ ಮೊದಲ ಸುತ್ತಿನಲ್ಲಿ ಮುಗ್ಗರಿಸಿದರು. ಅವರು 2–6, 6–7ರಲ್ಲಿ ಮಲೇಜ್‌ ಜಝಿರಿಗೆ ಮಣಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು