ಬುಧವಾರ, ಫೆಬ್ರವರಿ 19, 2020
29 °C

ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್‌: ಪ್ರಶಸ್ತಿ ಉಳಿಸಿಕೊಳ್ಳುವರೇ ಪ್ರಜ್ಞೇಶ್?

ಜಿ.ಶಿವಕುಮಾರ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸದಾ ಒಂದಿಲ್ಲೊಂದು ಕ್ರೀಡಾ ಚಟುವಟಿಕೆಗಳಿಗೆ ವೇದಿಕೆ ಕಲ್ಪಿಸುವ ಉದ್ಯಾನ ನಗರಿಯಲ್ಲಿ ಈಗ ಟೆನಿಸ್‌ ಸಂಭ್ರಮ ಗರಿಗೆದರಿದೆ.

ಏಷ್ಯಾದ ಅತಿ ದೊಡ್ಡ ಟೆನಿಸ್ ಟೂರ್ನಿ ಎನಿಸಿರುವ ಬೆಂಗಳೂರು ಓಪನ್‌ ಎಟಿಪಿ ಚಾಲೆಂಜರ್‌ನ ಮೂರನೇ ಆವೃತ್ತಿಗೆ ಸೋಮವಾರ ಚಾಲನೆ ದೊರೆಯಲಿದೆ.

ಕಬ್ಬನ್‌ ಉದ್ಯಾನದಲ್ಲಿರುವ ಕರ್ನಾ ಟಕ ರಾಜ್ಯ ಲಾನ್‌ ಟೆನಿಸ್‌ ಸಂಸ್ಥೆಯ (ಕೆಎಸ್‌ಎಲ್‌ಟಿಎ) ಅಂಗಳದಲ್ಲಿ ಒಟ್ಟು ಏಳು ದಿನಗಳ ಕಾಲ ನಡೆಯುವ ಟೆನಿಸ್‌ ‘ಹಬ್ಬ’ದಲ್ಲಿ ಬಲಿಷ್ಠ ಆಟಗಾರರು ಪ್ರಶಸ್ತಿಗಾಗಿ ಸೆಣಸಲಿದ್ದಾರೆ.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರ 100ರೊಳಗೆ ಸ್ಥಾನ ಗಳಿಸಿರುವ ಸ್ಟೆಫಾನೊ ಟ್ರವಾಗ್ಲಿಯಾ,‌ ಯುಯಿಚಿ ಸುಗಿಟಾ, ಜೇಮ್ಸ್‌ ಡಕ್ವರ್ಥ್‌ ಅವರ ಆಟ ಕಣ್ತುಂಬಿಕೊಳ್ಳುವ ಅವಕಾಶವೂ ‘ಸಿಲಿಕಾನ್‌ ಸಿಟಿ’ಯ ಟೆನಿಸ್ ಪ್ರಿಯರಿಗೆ ಸಿಗಲಿದೆ.

ಭಾರತದ ಪ್ರಜ್ಞೇಶ್‌ ಗುಣೇಶ್ವರನ್‌, ಟೂರ್ನಿಯ ಹಾಲಿ ಚಾಂಪಿಯನ್‌ ಆಗಿದ್ದಾರೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ 122ನೇ ಸ್ಥಾನದಲ್ಲಿರುವ ಅವರು ಈ ಬಾರಿ ಟ್ರೋಫಿ ಉಳಿಸಿಕೊಳ್ಳುವರೇ ಎಂಬ ಕುತೂಹಲವೂ ಅಭಿಮಾನಿಗಳಲ್ಲಿ ಮನೆಮಾಡಿದೆ.

ಚೆನ್ನೈನ ಎಡಗೈ ಆಟಗಾರ ಪ್ರಜ್ಞೇಶ್‌, ಟೂರ್ನಿಯಲ್ಲಿ ಏಳನೇ ಶ್ರೇಯಾಂಕ ಪಡೆದಿದ್ದಾರೆ. ಮೊದಲ ಸುತ್ತಿನಲ್ಲಿ ಅವರಿಗೆ ‘ಬೈ’ ಲಭಿಸಿದೆ.

ಹೋದ ವಾರ ನಡೆದಿದ್ದ ಮಹಾರಾಷ್ಟ್ರ ಚಾಲೆಂಜರ್‌ ಟೂರ್ನಿಯಲ್ಲಿ ಪ್ರಜ್ಞೇಶ್‌, ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಎಡವಿದ್ದರು. ಅವರಿಗೆ ಸ್ಟೆಫಾನೊ ಅವರಿಂದ ಪ್ರಬಲ ಪೈಪೋಟಿ ಎದುರಾಗುವ ನಿರೀಕ್ಷೆ ಇದೆ.

ಸುಮಿತ್‌ ನಗಾಲ್‌ ಅವರೂ ಸಿಂಗಲ್ಸ್‌ನಲ್ಲಿ ಭಾರತದ ಭರವಸೆಯಾಗಿದ್ದಾರೆ. 2017ರ ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದ ಸುಮಿತ್‌, ಈ ಬಾರಿ ಎಂಟನೇ ಶ್ರೇಯಾಂಕ ಪಡೆ ದಿದ್ದಾರೆ. ಅವರಿಗೂ ಮೊದಲ ಸುತ್ತಿನಲ್ಲಿ ‘ಬೈ’ ಸಿಕ್ಕಿದೆ. ಈ ಬಾರಿಯೂ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಅವರು ಎರಡು ದಿನಗಳ ಹಿಂದೆಯೇ ಬೆಂಗಳೂರಿಗೆ ಬಂದು ಕಠಿಣ ಅಭ್ಯಾಸ ನಡೆಸಿದ್ದಾರೆ.

ಕರ್ನಾಟಕದ ಮೂವರಿಗೆ ‘ವೈಲ್ಡ್‌ ಕಾರ್ಡ್‌’: ರಾಜ್ಯದ ಯುವ ಆಟಗಾರರಾದ ಆದಿಲ್‌ ಕಲ್ಯಾಣಪುರ್‌, ಎಸ್‌.ಡಿ.ಪ್ರಜ್ವಲ್‌ ದೇವ್‌ ಮತ್ತು ಸೂರಜ್‌ ಪ್ರಭೋದ್‌ ಅವರಿಗೆ ‘ವೈಲ್ಡ್‌ ಕಾರ್ಡ್‌’ ಅರ್ಹತೆ ಲಭಿಸಿದೆ.

ಮೈಸೂರಿನ ಪ್ರಜ್ವಲ್‌ ಮತ್ತು ಆದಿಲ್‌ ಅವರು ಡಬಲ್ಸ್‌ನಲ್ಲಿ ಕಣಕ್ಕಿಳಿಯಲಿದ್ದು, ಅಮೋಘ ಆಟದ ಮೂಲಕ ತವರಿನ ಅಭಿಮಾನಿಗಳ ಮನಗೆಲ್ಲಲು ಕಾತರರಾಗಿದ್ದಾರೆ. ಬೆಂಗಳೂರಿನ 25 ವರ್ಷ ವಯಸ್ಸಿನ ಆಟಗಾರ ಸೂರಜ್‌ ಅವರು ಸಿಂಗಲ್ಸ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.

ಲಿಯಾಂಡರ್‌ ಪೇಸ್‌ ಆಕರ್ಷಣೆ

ಭಾರತದ ದಿಗ್ಗಜ ಆಟಗಾರ ಲಿಯಾಂಡರ್‌ ಪೇಸ್‌, ಟೂರ್ನಿಯ ಆಕರ್ಷಣೆಯಾಗಿದ್ದಾರೆ.

ಡಬಲ್ಸ್‌ನಲ್ಲಿ ಅವರು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಜೊತೆಗೂಡಿ ಆಡಲಿದ್ದಾರೆ. ಸುಮಾರು ಮೂರು ದಶಕಗಳ ಟೆನಿಸ್‌ ಬದುಕಿನಲ್ಲಿ ಪೇಸ್ ಹಲವು ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

46 ವರ್ಷ ವಯಸ್ಸಿನ ಈ ಆಟಗಾರ, ಭಾರತದಲ್ಲಿ ಆಡುತ್ತಿರುವ ಕೊನೆಯ ಟೂರ್ನಿ ಇದಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು