ಸೋಮವಾರ, ಮಾರ್ಚ್ 20, 2023
24 °C
ಡೆನ್ಮಾರ್ಕ್‌ ವಿರುದ್ಧ ಹಣಾಹಣಿ

ಡೇವಿಸ್ ಕಪ್‌: ಭಾರತಕ್ಕೆ ರೂನ್‌ ಸವಾಲು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಹಿಲರ್ಡ್‌, ಡೆನ್ಮಾರ್ಕ್‌: ಡೇವಿಸ್‌ ಕಪ್‌ ಟೆನಿಸ್‌ ಟೂರ್ನಿಯ ವಿಶ್ವ ಗುಂಪಿನಲ್ಲಿ ಸ್ಥಾನ ಉಳಿಸಿಕೊಳ್ಳುವ ಪ್ರಯತ್ನದಲ್ಲಿರುವ ಭಾರತ ತಂಡಕ್ಕೆ ಡೆನ್ಮಾರ್ಕ್‌ ತಂಡದ ಸವಾಲು ಎದುರಾಗಿದೆ.

ಡೆನ್ಮಾರ್ಕ್‌ ವಿರುದ್ಧದ ಪ್ಲೇ ಆಫ್‌ ಪಂದ್ಯ ಶುಕ್ರವಾರ ಆರಂಭವಾಗಲಿದ್ದು, ಯುವ ಆಟಗಾರ ಹೋಲ್ಗರ್‌ ರೂನ್‌ ಅವರು ಭಾರತದ ಆಟಗಾರರಿಗೆ ಪ್ರಬಲ ಪೈಪೋಟಿ ಒಡ್ಡುವ ನಿರೀಕ್ಷೆಯಿದೆ. ಹಿಲರ್ಡ್‌ನ ಒಳಾಂಗಣ ಕ್ರೀಡಾಂಗಣದ ಹಾರ್ಡ್‌ ಕೋರ್ಟ್‌ನಲ್ಲಿ ಪಂದ್ಯಗಳು ನಡೆಯಲಿವೆ. 

ಭಾರತ ತಂಡದಲ್ಲಿರುವ ಆಟಗಾರರಲ್ಲಿ ಯಾರೂ ವಿಶ್ವ ರ‍್ಯಾಂಕಿಂಗ್‌ನಲ್ಲಿ 300ರ ಒಳಗಿನ ಸ್ಥಾನದಲ್ಲಿಲ್ಲ. ಆದರೆ ಡೆನ್ಮಾರ್ಕ್‌ ತಂಡದ ರೂನ್‌ ಅವರು ಎಟಿಪಿ ರ‍್ಯಾಂಕಿಂಗ್‌ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ಧಾರೆ.

ನವದೆಹಲಿಯಲ್ಲಿ 2022ರ ಮಾರ್ಚ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತ 4–0 ರಲ್ಲಿ ಡೆನ್ಮಾರ್ಕ್‌ ತಂಡವನ್ನು ಮಣಿಸಿತ್ತು. ಆದರೆ 19 ವರ್ಷದ ರೂನ್‌ ಅವರ ಉಪಸ್ಥಿತಿ, ಈ ಬಾರಿ ಭಾರತದ ಗೆಲುವಿನ ಹಾದಿಯನ್ನು ಕಠಿಣಗೊಳಿಸಿದೆ. ಈಚೆಗೆ ನಡೆದ ಆಸ್ಟ್ರೇಲಿಯಾ ಓಪನ್‌ ಟೂರ್ನಿಯಲ್ಲಿ ಅವರು ನಾಲ್ಕನೇ ಸುತ್ತು ಪ್ರವೇಶಿಸಿದ್ದರು.

ಡೆನ್ಮಾರ್ಕ್‌ ತಂಡದ ಇತರ ಆಟಗಾರರನ್ನು ಗುರಿಯಾಗಿಸಿ ಗೆಲುವು ಪಡೆಯುವ ಯೋಜನೆಯನ್ನು ಭಾರತ ಹಾಕಿಕೊಂಡಿದೆ. ಆದ್ದರಿಂದ ಯೂಕಿ ಭಾಂಬ್ರಿ ಅವರನ್ನು ಸಿಂಗಲ್ಸ್‌ ಪಂದ್ಯದಲ್ಲಿ ಆಡಿಸಲು ತೀರ್ಮಾನಿಸಿದೆ. ಡೆನ್ಕಾರ್ಕ್‌ ತಂಡದಲ್ಲಿರುವ ಆಗಸ್ಟ್‌ ಹೋಮ್‌ಗ್ರೆನ್‌ ಮತ್ತು ಎಲ್ಮೆರ್ ಮೊಲೆರ್‌ ಅವರು ವಿಶ್ವ ರ‍್ಯಾಂಕಿಂಗ್‌ನಲ್ಲಿ ಕ್ರಮವಾಗಿ 484 ಹಾಗೂ 718ನೇ ಸ್ಥಾನದಲ್ಲಿದ್ದಾರೆ.

ಭಾರತ ತಂಡದಲ್ಲಿ ಸಿಂಗಲ್ಸ್‌ ಆಡುವ ಮೂವರು– ಪ್ರಜ್ಞೇಶ್‌ ಗುಣೇಶ್ವರನ್ (306ನೇ ರ‍್ಯಾಂಕ್), ರಾಮಕುಮಾರ್‌ ರಾಮನಾಥನ್‌ (412) ಮತ್ತು ಸುಮಿತ್‌ ನಗಾಲ್ (509) ಇದ್ದಾರೆ. ಆದರೂ ಯೂಕಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ.

ಶುಕ್ರವಾರ ನಡೆಯಲಿರುವ ಸಿಂಗಲ್ಸ್‌ ಪಂದ್ಯಗಳಲ್ಲಿ ಯೂಕಿ– ರೂನ್‌ ಮತ್ತು ಸುಮಿತ್‌– ಹೋಮ್‌ಗ್ರೆನ್‌ ಎದುರಾಗಲಿದ್ದಾರೆ. ಶನಿವಾರ ನಡೆಯುವ ಡಬಲ್ಸ್‌ನಲ್ಲಿ ಅನುಭವಿ ರೋಹನ್‌ ಬೋಪಣ್ಣ ಮತ್ತು ಯೂಕಿ ಭಾಂಬ್ರಿ ಜತೆಯಾಗಿ ಆಡಲಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು