ಶನಿವಾರ, ಏಪ್ರಿಲ್ 4, 2020
19 °C
ಬೊಂಜಿಗೆ ನಿರಾಸೆ

ಬೆಂಗಳೂರು ಓಪನ್‌ ಚಾಲೆಂಜರ್‌ ಟೆನಿಸ್‌ ಟೂರ್ನಿ: ಡಕ್ವರ್ಥ್‌ಗೆ ಸಿಂಗಲ್ಸ್‌ ಕಿರೀಟ

ಜಿ.ಶಿವಕುಮಾರ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವಾರದ ಕೊನೆಯ ದಿನವನ್ನು ಖುಷಿಯಿಂದ ಕಳೆಯಲು ಕಬ್ಬನ್‌ ಉದ್ಯಾನದಲ್ಲಿರುವ ಕೆಎಸ್‌ಎಲ್‌ಟಿಎ ಅಂಗಳಕ್ಕೆ ಬಂದಿದ್ದ ಟೆನಿಸ್‌ ಪ್ರಿಯರಿಗೆ ಕೊಂಚವೂ ನಿರಾಸೆಯಾಗಲಿಲ್ಲ.

ಬೆಂಗಳೂರು ಓಪನ್‌ ಎಟಿಪಿ ಚಾಲೆಂಜರ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ ಕಣಕ್ಕಿಳಿದಿದ್ದ ಆಸ್ಟ್ರೇಲಿಯಾದ ಜೇಮ್ಸ್‌ ಡಕ್ವರ್ಥ್‌ ಮತ್ತು ಫ್ರಾನ್ಸ್‌ನ ಬೆಂಜಮಿನ್‌ ಬೊಂಜಿ ಅವರು ಬ್ಯಾಕ್‌ಸ್ಪಿನ್‌ ಡ್ರಾಪ್‌, ಮಿಂಚಿನ ಏಸ್‌ ಮತ್ತು ಆಕರ್ಷಕ ರ‍್ಯಾಲಿಗಳ ಮೂಲಕ ಉದ್ಯಾನ ನಗರಿಯ ಅಭಿಮಾನಿಗಳನ್ನು ರಂಜಿಸಿದರು.

ಸೆಂಟರ್‌ ಕೋರ್ಟ್‌ನಲ್ಲಿ 1 ಗಂಟೆ 8 ನಿಮಿಷ ನಡೆದ ಪೈಪೋಟಿಯಲ್ಲಿ ನಾಲ್ಕನೇ ಶ್ರೇಯಾಂಕದ ಆಟಗಾರ ಡಕ್ವರ್ಥ್‌ 6–4, 6–4ರಲ್ಲಿ ಬೊಂಜಿ ಅವರನ್ನು ಪರಾಭವಗೊಳಿಸಿದರು. ಇದರೊಂದಿಗೆ ಬೆಂಗಳೂರು ಓಪನ್‌ನಲ್ಲಿ ಪ್ರಶಸ್ತಿ ಗೆದ್ದ ಮೊದಲ ವಿದೇಶಿ ಆಟಗಾರ ಎಂಬ ಹಿರಿಮೆಗೆ ಭಾಜನರಾದರು.

ಹಿಂದಿನ ಎರಡು ಆವೃತ್ತಿಗಳಲ್ಲಿ ಭಾರತದ ಸುಮಿತ್‌ ನಗಾಲ್‌ (2017) ಮತ್ತು ಪ್ರಜ್ಞೇಶ್‌ ಗುಣೇಶ್ವರನ್‌ (2018) ಅವರು ಚಾಂಪಿಯನ್‌ ಆಗಿದ್ದರು.

ಪಂದ್ಯದ ಮೊದಲ ಸೆಟ್‌ನ ಮೊದಲ ಗೇಮ್‌ನಲ್ಲಿ ಸರ್ವ್‌ ಉಳಿಸಿಕೊಂಡ ಬೊಂಜಿ, ನಾಲ್ಕನೇ ಗೇಮ್‌ನಲ್ಲಿ ಬ್ರೇಕ್‌ ಪಾಯಿಂಟ್‌ ಗಳಿಸಿ 3–1 ಮುನ್ನಡೆ ಪಡೆದರು. ಹೀಗಾಗಿ ಅವರ ಗೆಲುವು ಸುಲಭ ಎಂದೇ ಭಾವಿಸಲಾಗಿತ್ತು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಬೊಂಜಿಗಿಂತಲೂ 285 ಸ್ಥಾನ ಮೇಲಿದ್ದ ಡಕ್ವರ್ಥ್‌ ನಂತರ ಫೀನಿಕ್ಸ್‌ನಂತೆ ಪುಟಿದೆದ್ದರು. ಐದನೇ ಗೇಮ್‌ನಲ್ಲಿ ಬ್ರೇಕ್‌ ಪಾಯಿಂಟ್‌ ಗಳಿಸಿ ಹಿನ್ನಡೆಯನ್ನು 2–3ಕ್ಕೆ ತಗ್ಗಿಸಿಕೊಂಡ ಆಸ್ಟ್ರೇಲಿಯಾದ ಆಟಗಾರ, ಮರು ಗೇಮ್‌ನಲ್ಲಿ ಮತ್ತದೇ ಎಡವಟ್ಟು ಮಾಡಿದರು. 40–0ಯಿಂದ ಮುಂದಿದ್ದ ಅವರು ಎರಡು ಬಾರಿ ‘ಡಬಲ್‌ ಫಾಲ್ಟ್‌’ ಮಾಡಿ ಸರ್ವ್‌ ಕೈಚೆಲ್ಲಿದರು. ಇದರಿಂದ ಹತಾಶರಾಗಿ ಚೆಂಡನ್ನು ಅಂಗಳದ ಆಚೆ ಬಾರಿಸಿದರು.

4–2ರಿಂದ ಮುಂದಿದ್ದ ಬೊಂಜಿ, ಏಳನೇ ಗೇಮ್‌ನಲ್ಲಿ ಸರ್ವ್‌ ಕಳೆದುಕೊಂಡರು. ಬ್ಯಾಕ್‌ಹ್ಯಾಂಡ್‌ ರಿಟರ್ನ್‌ ವೇಳೆ ಪದೇ ಪದೇ ಚೆಂಡನ್ನು ನೆಟ್‌ಗೆ ಬಾರಿಸಿ ನಿರಾಸೆ ಕಂಡರು. ನಂತರದ ಮೂರು ಗೇಮ್‌ಗಳಲ್ಲಿ ಎರಡು ಬಾರಿ ಸರ್ವ್‌ ಉಳಿಸಿಕೊಂಡ ಡಕ್ವರ್ಥ್‌, ಮತ್ತೊಮ್ಮೆ ‘ಬ್ರೇಕ್‌ ಪಾಯಿಂಟ್‌’ ಗಳಿಸಿ 37 ನಿಮಿಷಗಳಲ್ಲಿ ಸೆಟ್‌ ಜಯಿಸಿ ಸಂಭ್ರಮಿಸಿದರು.

ಎರಡನೇ ಸೆಟ್‌ನ ಮೊದಲ ನಾಲ್ಕು ಗೇಮ್‌ಗಳಲ್ಲಿ ಸಮಬಲದ ಪೈಪೋಟಿ ಕಂಡುಬಂತು. ‍ರ‍್ಯಾಲಿಗಳಿಂದ ಕೂಡಿದ್ದ ಐದನೇ ಗೇಮ್‌ನ ಆಟ ಅಭಿಮಾನಿಗಳಿಗೆ ಮುದ ನೀಡಿತು. ಒಂದಾದ ಮೇಲೊಂದು ತಪ್ಪು ಮಾಡಿ ಕೈಸುಟ್ಟುಕೊಂಡ ಬೊಂಜಿ 2–3 ಹಿನ್ನಡೆ ಕಂಡರು. ಆರನೇ ಗೇಮ್‌ನಲ್ಲಿ ಡಕ್ವರ್ಥ್‌, ಸರ್ವ್‌ ಹಾಳುಮಾಡಿಕೊಂಡಿದ್ದರಿಂದ ಮತ್ತೆ 3–3 ಸಮಬಲ ಕಂಡುಬಂತು.

ಏಳನೇ ಗೇಮ್‌ನಲ್ಲಿ ಎದುರಾಳಿಗೆ ‘ಬ್ರೇಕ್‌ ಪಾಯಿಂಟ್‌’ ಬಿಟ್ಟುಕೊಟ್ಟ ಬೊಂಜಿ, ಪ್ರಶಸ್ತಿಯ ಆಸೆಯನ್ನೂ ಕೈಚೆಲ್ಲಿದರು. ನಂತರದ ಮೂರು ಗೇಮ್‌ಗಳ ಪೈಕಿ ಎರಡರಲ್ಲಿ ಆಸ್ಟ್ರೇಲಿಯಾದ ಆಟಗಾರ ಸರ್ವ್‌ ಕಾಪಾಡಿಕೊಂಡರು. ಚುರುಕಿನ ಡ್ರಾಪ್‌ ಮೂಲಕ ಮ್ಯಾಚ್‌ ಪಾಯಿಂಟ್ಸ್‌ ಗಳಿಸಿದ ಡಕ್ವರ್ಥ್‌ ಸಂಭ್ರಮಿಸಿದರು. ಇದರೊಂದಿಗೆ ಏಳು ದಿನಗಳ ಟೆನಿಸ್‌ ಹಬ್ಬಕ್ಕೆ ತೆರೆಬಿತ್ತು.

ಪೇಸ್‌ಗೆ ಭಾವುಕ ವಿದಾಯ
ಭಾರತದಲ್ಲಿ ಕೊನೆಯ ಟೂರ್ನಿ ಆಡಿದ ದಿಗ್ಗಜ ಆಟಗಾರ ಲಿಯಾಂಡರ್‌ ಪೇಸ್‌ಗೆ ಭಾನುವಾರ ಭಾವುಕ ವಿದಾಯ ನೀಡಲಾಯಿತು.

ಮುಸ್ಸಂಜೆಯ ವೇಳೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಕರ್ನಾಟಕದ ಹಿರಿಯ ಕ್ರೀಡಾಪಟುಗಳು ಪೇಸ್‌ಗೆ ಸ್ಮರಣಿಕೆ ನೀಡಿ ಗೌರವಿಸಿದರು. ಎಲ್ಲರೂ ಪೇಸ್‌ ಜೊತೆಗಿನ ಒಡನಾಟವನ್ನು ಮೆಲುಕು ಹಾಕಿದರು. ಸಂಘಟನಾ ಸಮಿತಿಯ ಮುಖ್ಯಸ್ಥ ಪ್ರಿಯಾಂಕ್‌ ಖರ್ಗೆ, ಪೇಸ್‌ ಅವರಿಗೆ ಮೈಸೂರು ಪೇಟ ತೊಡಿಸಿ ಸನ್ಮಾನಿಸಿದರು. ಸ್ಮರಣಿಕೆಯನ್ನೂ ನೀಡಿದರು.


ಭಾನುವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಕೆಎಸ್‌ಎಲ್‌ಟಿಎ ಮತ್ತು ಕರ್ನಾಟಕದ ಹಿರಿಯ ಕ್ರೀಡಾಪಟುಗಳ ವತಿಯಿಂದ ಲಿಯಾಂಡರ್‌ ಪೇಸ್‌ (ಮಧ್ಯ) ಅವರನ್ನು ಗೌರವಿಸಲಾಯಿತು. (ಎಡದಿಂದ) ಬೆಂಗಳೂರು ಓಪನ್‌ ಸಂಘಟನಾ ಸಮಿತಿಯ ಮುಖ್ಯಸ್ಥ ಪ್ರಿಯಾಂಕ್‌ ಖರ್ಗೆ, ಒಲಿಂಪಿಯನ್‌ ಹಾಕಿ ಪಟು ಜೂಡ್‌ ಫೆಲಿಕ್ಸ್‌, ಅಂತರರಾಷ್ಟ್ರೀಯ ಈಜುಪಟುಗಳಾದ ರೇಷ್ಮಾ ಮತ್ತು ನಿಶಾ ಮಿಲ್ಲೆಟ್‌, ಅಥ್ಲೀಟ್‌ಗಳಾದ ಪ್ರಮೀಳ ಅಯ್ಯಪ್ಪ, ಅಶ್ವಿನಿ ನಾಚಪ್ಪ, ರೀತ್‌ ಅಬ್ರಾಹಂ, ಹಾಕಿ ಆಟಗಾರರಾದ ವಿ.ಆರ್‌. ರಘುನಾಥ್‌, ಅರ್ಜುನ್‌ ಹಾಲಪ್ಪ ಮತ್ತು ಹಿರಿಯ ಡೇವಿಸ್‌ ಕಪ್‌ ಆಟಗಾರ ಪ್ರಹ್ಲಾದ್‌ ಶ್ರೀನಾಥ್‌ ಇದ್ದಾರೆ –ಪ್ರಜಾವಾಣಿ ಚಿತ್ರ/ ವಿ.ಪುಷ್ಕರ್‌

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು