ಹಿಂದೆ ಸರಿದ ಜೊಕೊ; ಸಿನ್ನರ್‌ಗೆ ಅಗ್ರಪಟ್ಟ
ಪ್ಯಾರಿಸ್ (ಎಎಫ್‌ಪಿ): ನಾರ್ವೆಯ ಕ್ಯಾಸ್ಪರ್ ರುಡ್ ವಿರುದ್ಧ ಬುಧವಾರ ಫ್ರೆಂಚ್ ಓಪನ್ ಟೂರ್ನಿ ಸಿಂಗಲ್ಸ್ ಕ್ವಾರ್ಟರ್‌ಫೈನಲ್ ಪಂದ್ಯ ಆಡಬೇಕಾಗಿದ್ದ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರು ಮೊಣಕಾಲಿನ ನೋವಿನಿಂದ ಹಿಂದೆಸರಿದಿದ್ದಾರೆ ಎಂದು ಟೂರ್ನಿಯ ಸಂಘಟಕರು ಮಂಗಳವಾರ ತಿಳಿಸಿದ್ದಾರೆ. ಈ ಮೂಲಕ ಮೂರು ಬಾರಿಯ ಚಾಂಪಿಯನ್ ಜೊಕೊವಿಚ್ ದೀರ್ಘಕಾಲದಿಂದ ಹೊಂದಿದ್ದ ವಿಶ್ವದ ನಂ ಆಟಗಾರನ ಸ್ಥಾನ ಕಳೆದುಕೊಳ್ಳಲಿದ್ದಾರೆ. ರುಡ್ ಸೆಮಿಫೈನಲ್‌ಗೆ ಮುನ್ನಡೆಯಲ್ಲಿದ್ದಾರೆ. ಇದರೊಂದಿಗೆ ಯಾನಿಕ್ ಸಿನ್ನರ್ ಅವರು ಮುಂದಿನ ವಾರ ಪ್ರಕಟವಾಗಲಿರುವ ಎಟಿಪಿ ರ‍್ಯಾಂಕಿಂಗ್‌ನಲ್ಲಿ ಅಗ್ರ ಕ್ರಮಾಂಕಕ್ಕೆ ಏರಲಿದ್ದಾರೆ. ಈ ಸ್ಥಾನಕ್ಕೇರುವ ಇಟಲಿಯ ಮೊದಲ ಆಟಗಾರ ಎನಿಸಲಿದ್ದಾರೆ. ಅವರು ಫೈನಲ್ ತಲುಪಿದಲ್ಲಿ ಅಗ್ರಕ್ರಮಾಂಕ ಖಾತರಿಯಾಗುತಿತ್ತು. ಆದರೆ ಅದಕ್ಕೆ ಮೊದಲೇ ಅವರಿಗೆ ಈ ಸ್ಥಾನ ಖಚಿತವಾಗಿದೆ. ಸೋಮವಾರ ಫ್ರಾನ್ಸಿಸ್ಕೊ ಸೆರುನಡೊಲೊ ಎದುರು ಮೂರನೇ ಸುತ್ತಿನಲ್ಲಿ ಐದು ಸೆಟ್‌ಗಳ ಪಂದ್ಯ ಗೆದ್ದ ನಂತರ ತಮ್ಮ ಫಿಟ್ನೆಸ್ ಬಗ್ಗೆ ಜೊಕೊವಿಚ್ ಸಂದೇಹ ವ್ಯಕ್ತಪಡಿಸಿದ್ದರು. ಫಿಲಿಪ್ ಶಾಟಿಯೆ ಅಂಕಣ ‘ಜಾರುತ್ತಿದ್ದುದು’ ಇದಕ್ಕೆಲ್ಲ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.