ಭಾನುವಾರ, ಮೇ 29, 2022
30 °C
ಯಾನಿಕ್ ಹಂಫ್‌ಮ್ಯಾನ್‌, ಮ್ಯಾಡಿಸನ್ ಬ್ರೆಂಗಲ್‌ಗೆ ಸೋಲು

ಆಸ್ಟ್ರೇಲಿಯನ್ ಓಪನ್: ನಡಾಲ್, ಒಸಾಕ, ಬಾರ್ಟಿ ಜಯದ ಓಟ

ರಾಯಿಟರ್ಸ್‌/ಎಪಿ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್‌: ಸ್ಪೇನ್‌ನ ರಫೆಲ್ ನಡಾಲ್, ಸ್ಥಳೀಯ ಆಟಗಾರ್ತಿ ಆ್ಯಶ್ಲಿ ಬಾರ್ಟಿ ಮತ್ತು ಹಾಲಿ ಚಾಂಪಿಯನ್ ಜಪಾನ್‌ನ ನವೊಮಿ ಒಸಾಕ ಅವರು ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಮೂರನೇ ದಿನವೂ ಪಾರಮ್ಯ ಮೆರೆದಿದ್ದಾರೆ.

ಗಾಯದಿಂದಾಗಿ ಕೆಲವು ತಿಂಗಳು ವಿಶ್ರಾಂತಿ ಪಡೆದುಕೊಂಡಿದ್ದ ರಫೆಲ್‌ ನಡಾಲ್ ಈಚೆಗೆ ಪ್ರತಿ ಪಂದ್ಯದಲ್ಲೂ ತಮ್ಮ ಸಾಮರ್ಥ್ಯ ವೃದ್ಧಿಯಾಗುತ್ತಿದೆ ಎಂದು ಹೇಳಿದ್ದರು. ಈ ಮಾತಿಗೆ ತಕ್ಕಂತೆ ಬುಧವಾರ ಆಡಿದ ಅವರು ಜರ್ಮನಿಯ ಯಾನಿಕ್ ಹಂಫ್‌ಮ್ಯಾನ್‌ ವಿರುದ್ಧ 6-2 6-3 6-4ರ ಜಯ ಸಾಧಿಸಿದರು.  

ನೊವಾಕ್ ಜೊಕೊವಿಚ್ ಮತ್ತು ರೋಜರ್ ಫೆಡರರ್ ಅವರ ಅನುಪಸ್ಥಿತಿಯಲ್ಲಿ ಕಣದಲ್ಲಿರುವ ಏಕೈಕ ಮಾಜಿ ಚಾಂಪಿಯನ್‌ ನಡಾಲ್ ಮುಂದೆ ವಿಶ್ವ ರ‍್ಯಾಂಕಿಂಗ್‌ನಲ್ಲಿ 126ನೇ ಸ್ಥಾನದಲ್ಲಿರುವ ಹಂಫ್‌ಮ್ಯಾನ್‌ ನಿರುತ್ತರರಾದರು. ಅರ್ಹತಾ ಸುತ್ತಿನಲ್ಲಿ ಆಡಿ ಬಂದಿದ್ದ ಅವರು ರಾಡ್ ಲೇವರ್ ಅರೆನಾದಲ್ಲಿ ಮೂರೂ ಗೇಮ್‌ಗಳಲ್ಲೂ ನಡಾಲ್ ತಂತ್ರಗಳಿಗೆ ಪ್ರತಿತಂತ್ರಗಳನ್ನು ಹೆಣೆಯಲಾಗದೆ ಸೋಲೊಪ್ಪಿಕೊಂಡರು. 30 ವಿನ್ನರ್‌ಗಳನ್ನು ಸಿಡಿಸಿದ ನಡಾಲ್ ನಾಲ್ಕು ಬಾರಿ ಎದುರಾಳಿಯ ಸರ್ವ್ ಮುರಿದರು. ಲಭಿಸಿದ ಎರಡೂ ಬ್ರೇಕ್‌‍ಪಾಯಿಂಟ್‌ಗಳನ್ನು ಉಳಿಸಿಕೊಂಡರು.  

ಮೊದಲ ಸೆಟ್‌ನ ಆರಂಭದಲ್ಲಿ ಪದೇ ಪದೇ ನೆಟ್‌ಬಳಿ ತೆರಳಿ ಡ್ರಾಪ್ ಶಾಟ್‌ಗಳ ಮೂಲಕ ನಡಾಲ್‌ ಅವರನ್ನು ಗೊಂದಲದಲ್ಲಿ ಸಿಲುಕಿಸುವಲ್ಲಿ ಹಂಫ್‌ಮ್ಯಾನ್ ಯಶಸ್ವಿಯಾದರು. ಆದರೆ ಆಟ ಮುಂದುವರಿದಂತೆ ಸ್ಪೇನ್ ಆಟಗಾರ ಹಿಡಿತ ಬಿಗಿಗೊಳಿಸಿದರು. 

ನೇಷನ್ಸ್‌ ಡೇಯಲ್ಲಿ ಮಿಂಚಿದ ಬಾರ್ಟಿ

ನೇಷನ್ಸ್ ಡೇ ಆಚರಿಸಿದ ಆಸ್ಟ್ರೇಲಿಯಾಗೆ ಆ್ಯಶ್ಲಿ ಬಾರ್ಟಿ ಗೆಲುವಿನ ಉಡುಗೊರೆ ನೀಡಿದರು.  ಮೆಲ್ಬರ್ನ್ ಪಾರ್ಕ್‌ನಲ್ಲಿ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ವಿಶ್ವ ರ‍್ಯಾಂಕಿಂಗ್‌ನ ಒಂದನೇ ಸ್ಥಾನದಲ್ಲಿರುವ ಬಾರ್ಟಿ 142ನೇ ಸ್ಥಾನದಲ್ಲಿರುವ ಇಟಲಿಯ ಲೂಸಿಯಾ ಬ್ರಾನ್ಸೆಟಿ ವಿರುದ್ಧ 6-1, 6-1ರಲ್ಲಿ ಜಯ ಗಳಿಸಿದರು. ಅರ್ಹತಾ ಸುತ್ತಿನ ಮೂಲಕ ಬಂದಿದ್ದ ಎದುರಾಳಿಯನ್ನು ಮಣಿಸಲು ಬಾರ್ಟಿಗೆ 52 ನಿಮಿಷಗಳು ಸಾಕಾದವು.  

ಹಾಲಿ ಚಾಂಪಿಯ್ ನವೊಮಿ ಒಸಾಕ ಅಮೆರಿಕದ ಮ್ಯಾಡಿಸನ್ ಬ್ರೆಂಗಲ್ ವಿರುದ್ಧ ಜಯ ಗಳಿಸಿದರು. ಮೊದಲ ಸೆಟ್‌ನಲ್ಲಿ ಏಕಪಕ್ಷೀಯ 6–0 ಗೇಮ್‌ಗಳ ಗೆಲುವು ದಾಖಲಿಸಿದ ಅವರಿಗೆ ಎರಡನೇ ಸೆಟ್‌ನಲ್ಲಿ ಭಾರಿ ಸವಾಲು ಎದುರಾಯಿತು. ಕೊನೆಗೆ 6–4ರಲ್ಲಿ ಗೆದ್ದರು. 

ಎರಡು ಬಾರಿಯ ಚಾಂಪಿಯನ್ ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ ಸ್ವಿಟ್ಜರ್ಲೆಂಡ್‌ನ ಜಿಲ್ ಟೀಚ್‌ಮನ್‌ ವಿರುದ್ಧ 6–1, 6–2ರಲ್ಲಿ ಜಯ ಗಳಿಸಿದರು. ಉಕ್ರೇನ್‌ನ ಎಲಿನಾ ಸ್ವಿಟೋಲಿನಾ 6-3, 5-7, 5-1ರಲ್ಲಿ (ನಿವೃತ್ತಿ) ಹಾರ್ಮನಿ ಟ್ಯಾನ್‌ ಎದುರು ಗೆದ್ದರು. ಅಮೆರಿಕದ ಮ್ಯಾಡಿಸನ್ ಕೀಸ್ 6-2, 7-5ರಲ್ಲಿ ರೊಮೇನಿಯಾದ ಜಾಕ್ವೆಲಿನ್‌ ಅಡಿನಾ ಕ್ರಿಸ್ಟಿಯನ್ ಅವರನ್ನು ಮಣಿಸಿದರು.  

ರೋಹನ್‌ ಬೋಪಣ್ಣ ಕನಸು ಭಗ್ನ

ಡಬಲ್ಸ್ ವಿಭಾಗದಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ಸಾನಿಯಾ ಮಿರ್ಜಾ ಅವರ ಕನಸು ಭಗ್ನಗೊಂಡಿತು. ಪುರುಷರ ವಿಭಾಗದಲ್ಲಿ ರೋಹನ್ ಬೋಪಣ್ಣ ಮತ್ತು ಫ್ರಾನ್ಸ್‌ನ ಎಡ್ವರ್ಡ್ ರೋಜರ್ ವ್ಯಾಸೆಲಿನ್ ಜೋಡಿ ವೈಲ್ಡ್ ಕಾರ್ಡ್ ಮೂಲಕ ಪ್ರವೇಶಿಸಿದ್ದ ಕ್ರಿಸ್ಟೋಫರ್ ಲುಂಕಟ್ ಮತ್ತು ಟ್ರೀಟ್ ಹ್ಯೂ ವಿರುದ್ಧ 6-3, 6-7(2), 2-6ರಲ್ಲಿ ಸೋತರು. ಮಿಶ್ರ ಡಬಲ್ಸ್‌ನಲ್ಲಿ ರೋಹನ್ ಬೋಪಣ್ಣ ಕ್ರೊವೇಷ್ಯಾದ ದರಿಜಾ ಜುರಕ್ ಶೀಬರ್‌ ಜೊತೆಯೂ ಸಾನಿಯಾ ಮಿರ್ಜಾ ಅಮೆರಿಕದ ರಾಜೀವ್ ರಾಮ್ ಜೊತೆಯೂ ಆಡಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು