ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯ ಸುತ್ತು ಪ್ರವೇಶದ ಹಾದಿಗೆ ಮುಳ್ಳು

ಡೇವಿಸ್ ಕಪ್‌ ಅರ್ಹತಾ ಸುತ್ತಿನ ಹಣಾಹಣಿ; ಆತಿಥೇಯರ ಇಬ್ಬರೂ ಆಟಗಾರರಿಗೆ ಸೋಲು
Last Updated 1 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

ಕೋಲ್ಕತ್ತ: ಸ್ಥಳೀಯ ಪ್ರೇಕ್ಷಕರ ಬೆಂಬಲದ ನಡುವೆಯೂ ಉತ್ತಮ ಸಾಮರ್ಥ್ಯ ತೋರಲು ವಿಫಲವಾದ ಭಾರತ ತಂಡ ಡೇವಿಸ್ ಕಪ್‌ ಅರ್ಹತಾ ಸುತ್ತಿನ ಹಣಾಹಣಿಯಲ್ಲಿ ನಿರಾಸೆ ಅನುಭವಿಸಿದೆ. ಹೀಗಾಗಿ ಮುಖ್ಯ ಸುತ್ತು ಪ್ರವೇಶಿಸುವ ಭಾರತದ ಹಾದಿ ಕಠಿಣವಾಗಿದೆ.

ಇಲ್ಲಿನ ಸೌತ್ ಕ್ಲಬ್ ಆವರಣದಲ್ಲಿ ಶುಕ್ರವಾರ ನಡೆದ ಮೊದಲ ಹಣಾಹಣಿಯ ಎರಡೂ ಸಿಂಗಲ್ಸ್ ಪಂದ್ಯದಲ್ಲಿ ಭಾರತದ ಆಟಗಾರರು ಸೋತರು. ಮೊದಲ ಪಂದ್ಯದಲ್ಲಿ ರಾಮ್‌ಕುಮಾರ್ ರಾಮನಾಥನ್‌ ಅವರನ್ನು ಆ್ಯಂಡ್ರೀಸ್ ಸೆಪ್ಪಿ 6–4, 6–2ರಿಂದ ಮಣಿಸಿದರು. ನಂತರದ ಪಂದ್ಯದಲ್ಲಿ ಯುವ ಆಟಗಾರ ಮಾಟಿಯೊ ಬೆರೆಟಿನಿ ಮಿಂಚಿದರು. ಡೇವಿಸ್ ಕಪ್‌ನಲ್ಲಿ ಮೊದಲ ಬಾರಿ ಕಣಕ್ಕೆ ಇಳಿದ ಅವರು ಭಾರತದ ಭರವಸೆ ಎನಿಸಿದ್ದ ಪ್ರಜ್ಞೇಶ್‌ ಗುಣೇಶ್ವರನ್ ಅವರನ್ನು 6–4, 6–3ರಿಂದ ಸೋಲಿಸಿದರು.

ಮೊದಲ ದಿನ 0–2ರ ಹಿನ್ನಡೆ ಅನುಭವಿಸಿದ ಕಾರಣ ಭಾರತದ ಡಬಲ್ಸ್ ಜೋಡಿಯ ಮೇಲೆ ಒತ್ತಡ ಹೆಚ್ಚಾಗಿದ್ದು ಶನಿವಾರ ನಡೆಯುವ ಹಣಾಹಣಿಯಲ್ಲಿ ರೋಹನ್ ಬೋಪಣ್ಣ ಮತ್ತು ದಿವಿಜ್ ಶರಣ್‌ ಗೆಲ್ಲಲೇಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ಅವರಿಗೆ ವಿಶ್ವಶ್ರೇಷ್ಠ ಡಬಲ್ಸ್‌ ಆಟಗಾರ ಮಾರ್ಕೊ ಸೆಚಿನಾಟೊ ಮತ್ತು 2015ರ ಆಸ್ಟ್ರೇಲಿಯಾ ಓಪನ್ ವಿಜೇತ ಆಟಗಾರ ಸಿಮೋನ್ ಬೊಲೆಲಿ ಎದುರಾಳಿಗಳು.

ಬೆರೆಟಿನ್‌ ಅಮೋಘ ಆಟ: ಮೊದಲ ಪಂದ್ಯದ ಮೊದಲ ಗೇಮ್‌ನ ಆರಂಭದಲ್ಲಿ ಬೆರೆಟಿನಿ 15–40ರ ಹಿನ್ನಡೆ ಅನುಭವಿಸಿದ್ದರು. ನಂತರ ಚೇತರಿಸಿಕೊಂಡು ಗೆಲುವಿನತ್ತ ಹೆಜ್ಜೆ ಹಾಕಿದರು. ಪ್ರಜ್ಞೇಶ್‌ ಕೂಡ ತಿರುಗೇಟು ನೀಡಿದರು. ಆದರೆ 10ನೇ ಗೇಮ್‌ನಲ್ಲಿ ಇಟಲಿ ಆಟಗಾರ ಒಂದು ಪಾಯಿಂಟ್ ಕೂಡ ಬಿಟ್ಟುಕೊಡದೆ ಗೆದ್ದು ಸೆಟ್‌ ತಮ್ಮದಾಗಿಸಿಕೊಂಡರು.

ಎರಡನೇ ಸೆಟ್‌ನಲ್ಲಿ ಬೆರೆಟಿನಿ ಸುಲಭವಾಗಿ ಪಾಯಿಂಟ್‌ಗಳನ್ನು ಕಲೆ ಹಾಕಿದರು. ಪ್ರಜ್ಞೇಶ್‌ ಅವರ ಸರ್ವ್ ಬ್ರೇಕ್ ಮಾಡಿದ ಅವರು 1–0 ಮುನ್ನಡೆ ಸಾಧಿಸಿದರು. ನೆಟ್ ಬಳಿ ಮೋಹಕ ಡ್ರಾಪ್‌ಗಳನ್ನು ಹಾಕಿದ ಅವರು ನೆಲಮಟ್ಟದ ಶಾಟ್‌ಗಳ ಮೂಲಕ ಮಿಂಚಿದರು. 5–3ರ ಮುನ್ನಡೆ ಗಳಿಸಿದ್ದ ಅವರು ಒಂಬತ್ತನೇ ಗೇಮ್‌ನಲ್ಲಿ ಮತ್ತೆ ಪ್ರಜ್ಞೇಶ್ ಅವರ ಸರ್ವ್ ಮುರಿದರು. ಸ್ವಯಂ ತಪ್ಪುಗಳನ್ನು ಎಸಗಿದ ಪ್ರಜ್ಞೇಶ್‌ ಸುಲಭವಾಗಿ ಸೋಲೊಪ್ಪಿಕೊಂಡರು.

ಸೆಪ್ಪಿಗೆ ಮಣಿದ ರಾಮ್‌ಕುಮಾರ್‌: ಮೊದಲ ಸೆಟ್‌ನಲ್ಲಿ ತಾಳ್ಮೆಯ ಆಟದ ಮೂಲಕ ಲಯ ಕಂಡುಕೊಂಡ ಆ್ಯಂಡ್ರೀಸ್ ಸೆಪ್ಪಿ ಎರಡನೇ ಸೆಟ್‌ನಲ್ಲಿ ರಾಮ್‌ಕುಮಾರ್ ರಾಮನಾಥನ್‌ ಅವರನ್ನು ದಂಗುಬಡಿಸಿದರು. ವಿಶ್ವದ 37ನೇ ಕ್ರಮಾಂಕದ ಆಟಗಾರ ಸುಲಭವಾಗಿ ಗೆದ್ದು ಸಂಭ್ರಮಿಸಿದರು.

ಫೈನಲ್‌ನತ್ತ ಆಸ್ಟ್ರೇಲಿಯಾ, ಸರ್ಬಿಯಾ
ಪ್ಯಾರಿಸ್‌ (ಎಎಫ್‌ಪಿ):
ಮಾಜಿ ಚಾಂಪಿಯನ್‌ ತಂಡಗಳಾದ ಆಸ್ಟ್ರೇಲಿಯಾ ಮತ್ತು ಸರ್ಬಿಯಾ ಡೇವಿಸ್ ಕಪ್‌ನ ಫೈನಲ್ ಹಂತದತ್ತ ಹೆಜ್ಜೆ ಹಾಕಿವೆ. ಮೊದಲ ದಿನದ ಹಣಾಹಣಿಯಲ್ಲಿ ಎರಡೂ ತಂಡಗಳು ತಮ್ಮ ಎದುರಾಳಿಗಳನ್ನು ಮಣಿಸಿ 2–0 ಮುನ್ನಡೆ ಸಾಧಿಸಿವೆ.

ಅಡಿಲೇಡ್‌ನಲ್ಲಿ ನಡೆದ ಹಣಾಹಣಿಯಲ್ಲಿ ಆಸ್ಟ್ರೇಲಿಯಾದ ಅಲೆಕ್ಸ್‌ ಡಿ ಮಿನೌರ್ ಮತ್ತು ಜಾನ್‌ ಮಿಲ್ಮನ್‌ ನೇರ ಸೆಟ್‌ಗಳಿಂದ ಬೋಸ್ನಿಯಾ ಆಟಗಾರರನ್ನು ಮಣಿಸಿದರು. ದುಸಾನ್‌ ಲಾಜೊವಿಚ್‌ ಮತ್ತು ಫಿಲಿಪ್‌ ಕ್ರಾಜಿನೊವಿಚ್‌ ಉಜ್ಬೆಕಿಸ್ತಾನದ ಆಟಗಾರರನ್ನು ಸೋಲಿಸಿ ಸರ್ಬಿಯಾಗೆ ಮುನ್ನಡೆ ಒದಗಿಸಿದರು.

*
ಶನಿವಾರದ ಹಣಾಹಣಿ ನಮಗೆ ಸವಾಲಿನದ್ದು. ಇದನ್ನು ಮೀರಲೇ ಬೇಕು. ಯೋಚನೆ ಮಾಡಲು ಹೆಚ್ಚು ಸಮಯ ಇಲ್ಲ. ಜಯವೊಂದೇ ನಮ್ಮ ಮುಂದಿನ ಗುರಿ.
-ಮಹೇಶ್ ಭೂಪತಿ, ಭಾರತ ತಂಡದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT