ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್ ಅಂಕಣದ ಹೊಸ ಭರವಸೆ ಅಂಕಿತಾ

Last Updated 26 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಸಾನಿಯಾ ಮಿರ್ಜಾ ನಂತರ ಭಾರತದ ಮಹಿಳಾ ಟೆನಿಸ್‌ ಕ್ರೀಡೆಯ ವಿಭಾಗದ ಕೀರ್ತಿಪತಾಕೆಯನ್ನು ಹಾರಿಸುವವರು ಯಾರು ಎಂಬ ಪ್ರಶ್ನೆಗೆ ಜಕಾರ್ತ ಏಷ್ಯನ್ ಗೇಮ್ಸ್‌ನಲ್ಲಿ ಉತ್ತರ ಸಿಕ್ಕಂತಾಗಿದೆ.

ಮಹಿಳೆಯರ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಆಂಕಿತಾ ರೈನಾ ಅವರೇ ಆ ಭರವಸೆ.ಅಹಮದಾಬಾದಿನ ಅಂಕಿತಾ 2009ರಿಂದ ಐಟಿಎಫ್‌ ಟೂರ್ನಿಗಳಲ್ಲಿ ಸ್ಪರ್ಧಿಸಲು ಆರಂಭಿಸಿದ್ದರು. ಕಳೆದ ಒಂಬತ್ತು ವರ್ಷಗಳಲ್ಲಿ ಏಳು ಐಟಿಎಫ್‌ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಆದರೆ, ಗ್ರ್ಯಾನ್‌ಸ್ಲಾಮ್‌ ಟೂರ್ನಿಗಳಲ್ಲಿ ಇನ್ನೂ ಹೆಜ್ಜೆಗುರುತು ಮೂಡಿಸಬೇಕು. ಇದೀಗ ಏಷ್ಯಾಮಟ್ಟದಲ್ಲಿ ತಮ್ಮ ಇರುವನ್ನು ತೋರಿಸಿಕೊಟ್ಟಿದ್ದಾರೆ.

ಏಷ್ಯನ್ ಗೇಮ್ಸ್‌ನಲ್ಲಿ ಈ ಸಾಧನೆ ಮಾಡಿದ ಭಾರತದ ಎರಡನೇ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಯೂ ಅವರದ್ದಾಗಿದೆ. ಸಾನಿಯಾ 2006 ಮತ್ತು 2010ರಲ್ಲಿಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದಿದ್ದರು. ಕಳೆದ ಎಂಟು ಹೆಚ್ಚು ಮಹಿಳಾ ಆಟಗಾರ್ತಿಯರು ಪ್ರವರ್ಧಮಾನಕ್ಕೆ ಬಂದಿಲ್ಲ. ಪ್ರಾರ್ಥನಾ ತೋಂಬರೆ ಅವರು ಸಾನಿಯಾ ಜೊತೆಗೆ ರಿಯೊ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ ಡಬಲ್ಸ್‌ನಲ್ಲಿ ಆಡಿದ್ದರು. ಆದರೆ ಸಿಂಗಲ್ಸ್‌ನಲ್ಲಿ ನಿರೀಕ್ಷೆ ಮೂಡಿಸಿರುವುದು ಅಂಕಿತಾ ಅವರು ಮಾತ್ರ.

ಕಾಶ್ಮೀರಿ ಕುಟುಂಬದ ಕುಡಿ
ಸದ್ಯ ಭಾರತದ ನಂಬರ್ ಒನ್ ಆಟಗಾರ್ತಿಯಾಗಿರುವ ಅಂಕಿತಾ ಮೊದಲ ಬಾರಿಗೆ ಟೆನಿಸ್ ಆಂಕಣಕ್ಕೆ ಕಾಲಿಟ್ಟಿದ್ದು ತಮ್ಮ ಐದನೇ ವಯಸ್ಸಿನಲ್ಲಿ. ಮೂಲತಃ ಕಾಶ್ಮೀರದ ಪಂಡಿತರ ಕುಟುಂಬ ಅವರದ್ದು. ದಶಖಗಳ ಹಿಂದೆ ಅಹಮದಾಬಾದ್‌ಗೆ ಬಂದು ನೆಲೆಸಿತ್ತು.

ಮನೆಯ ಸಮೀಪವೇ ಇದ್ದ ಕ್ಲಬ್‌ನಲ್ಲಿ ಅವರ ಅಣ್ಣ ಅಂಕುರ್ ಟೆನಿಸ್‌ ಆಡುತ್ತಿದ್ದರು. ಅದೊಂದು ದಿನ ಅಣ್ಣನ ಕೈಯಿಂದ ರೆಕೆಟ್ ಕಸಿದುಕೊಂಡ ಹುಡುಗಿ ಚೆಂಡನ್ನೂ ಪಡೆದು ವಾಲ್‌ ಪ್ರಾಕ್ಟಿಸ್‌ ಶುರು ಮಾಡಿದಳು. ಅವರ ಚುರುಕಾದ ಆಟ ನೋಡಿದ ಕ್ಲಬ್‌ ಕೋಚ್‌ಗಳು ತರಬೇತಿ ನೀಡಲು ಆರಂಭಿಸಿದರು. ಮುಂದೆ ಮೂರೇ ವರ್ಷದಲ್ಲಿ ಅಂಕಿತಾ ಸ್ಪರ್ಧಾತ್ಮಕ ಟೆನಿಸ್‌ ಆಡಲು ಆರಂಭಿದ್ದೂ ಆಯಿತು. ಬ್ಯಾಕ್‌ಹ್ಯಾಂಡ್‌ ಆಡುವುದೆಂದರೆ ಈ ಹುಡುಗಿಗೆ ಅಚ್ಚುಮೆಚ್ಚಾಗಿತ್ತು. 8, 12, 14 ವರ್ಷದೊಳಗಿನವರ ವಿಭಾಗಗಳಲ್ಲಿ ಜಯ ಗಳಿಸುತ್ತ ಸಾಗಿದರು. ಐಟಿಎಫ್‌ನಲ್ಲಿಯೂ ಸಾಧನೆಯ ಮೆಟ್ಟಿಲುಗಳನ್ನು ಏರಿದರು.

ಆರು ತಿಂಗಳ ಹಿಂದೆ ಅವರ ಜೀವನದಲ್ಲಿ ಮಹತ್ವದ ತಿರುವು ಲಭಿಸಿತು. ಡಬ್ಲ್ಯುಟಿಎಫ್‌ ರ‍್ಯಾಂಕಿಂಗ್‌ನಲ್ಲಿ ಟಾಪ್ –200 ಆಟಗಾರ್ತಿಯರಲ್ಲಿ ಸ್ಥಾನ ಪಡೆದರು. ಸಾನಿಯಾ, ನಿರುಪಮಾ ವೈದ್ಯನಾಥನ್, ಶಿಖಾ ಒಬೆರಾಯ್ ಮತ್ತು ಸುನಿತಾ ರಾವ್ ಅವರ ನಂತರ ಈ ಸಾಧನೆ ಮಾಡಿದ ಭಾರತೀಯ ಆಟಗಾರ್ತಿಯಾದರು.

‘ರ‍್ಯಾಂಕಿಂಗ್ ಘೋಷಣೆಯಾದ ದಿನ ನಾನು ಜಪಾನ್‌ನಲ್ಲಿ ಐಟಿಎಫ್‌ ಟೂರ್ನಿಯಲ್ಲಿ ಆಡುತ್ತಿದ್ದೆ. ಆಂಕಣದಲ್ಲಿದ್ಧಾಗ ಸುದ್ದಿ ತಿಳಿಯಿತು. ಅಲ್ಲಿಂದ ಹೋಟೆಲ್‌ ಕೋಣೆ ತಲುಪುವವರೆಗೂ ಅಳುತ್ತಲೇ ಇದ್ದೆ. ಬಹಳ ದಿನಗಳ ಕನಸು ನನಸಾದ ಖುಷಿ ಆ ರೀತಿಯದ್ದಾಗಿತ್ತು’ ಎಂದು ಅಂಕಿತಾ ಇಎಸ್‌ಪಿನ್‌ ಸೋನಿ ವೆಬ್‌ಸೈಟ್‌ಗೆ ನೀಡಿದ್ದ ಸಂದರ್ಶನವೊಂದರಲ್ಲಿ ನೆನಪಿಸಿಕೊಂಡಿದ್ದಾರೆ.

‘ಜೀವನದಲ್ಲಿ ಬರುವ ಸವಾಲುಗಳನ್ನು ಎದುರಿಸುವ ಕೌಶಲವನ್ನೂ ಟೆನಿಸ್ ಕಲಿಸಿದೆ. ಮುಂದೊಂದು ದಿನ ಅಗ್ರಸ್ಥಾನ ಪಡೆಯುವ ಕನಸು ನನ್ನದು. ಆ ನಿಟ್ಟಿನಲ್ಲಿ ಸಾಧಿಸುವ ಛಲವೂ ಇದೆ. ನನ್ನ ಅಮ್ಮ ಮತ್ತು ಅಣ್ಣ ನೀಡಿದ ಸಂಸ್ಕಾರವು ಮನಸ್ಸನ್ನು ದೃಢಗೊಳಿಸಿದೆ’ ಎಂದು ಅಂಕಿತಾ ಹೇಳುತ್ತಾರೆ.

ಅಂಕಿತಾ ಅವರ ಸಮಕಾಲೀನರಾಗಿರುವ ಅಂಕಿತಾ ಭಾಂಬ್ರಿ, ಪ್ರೇರಣಾ ಭಾಂಬ್ರಿ ಮತ್ತು ರುತುಜಾ ಭೋಸ್ಲೆ, ರುಷ್ಮಿ ಚಕ್ರವರ್ತಿ ಅವರು ಕೆಲವು ಟೂರ್ನಿಗಳಲ್ಲಿ ಪ್ರಶಸ್ತಿ ಸಾಧನೆ ಮಾಡಿದ್ದರು. ಆದರೆ, ರೈನಾ ಮಾತ್ರ ಅವರೆಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಸಾಗಿದ್ದಾರೆ. ಸದ್ಯ ಅವರು ಪುಣೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಕನ್ನಡಿಗ ರೋಹನ್ ಬೋಪಣ್ಣ ಅವರೊಂದಿಗೆ ಮಿಶ್ರ ಡಬಲ್ಸ್‌ನಲ್ಲಿ ಆಡುತ್ತಿರುವ ಅಂಕಿತಾ ಹಲವು ಪಾಠಗಳನ್ನು ಕಲಿಯುತ್ತಿದ್ದಾರೆ. ಅನುಭವಿ ಆಟಗಾರರಾಗಿರುವ ರೋಹನ್ ಕೂಡ ಬಹಳಷ್ಟು ಉತ್ತಮ ಸಲಹೆಗಳನ್ನು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಅಂಕಿತಾ ಅವರಿಂದ ದೊಡ್ಡ ಸಾಧನೆಗಳು ಮೂಡಿ ಬರುವ ನಿರೀಕ್ಷೆ. ಅಮೆರಿಕ, ಯುರೋಪ್ ನ ಟೆನಿಸ್‌ ಆಟಗಾರ್ತಿಯರನ್ನು ಎದುರಿಸಿ ನಿಲ್ಲುವ ಸಾಮರ್ಥ್ಯವನ್ನೂ ಅವರು ಬೆಳೆಸಿಕೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT