ನ್ಯೂಯಾರ್ಕ್: ಶನಿವಾರ ನಡೆದ ಮಹಿಳಾ ವಿಭಾಗದ ಯುಎಸ್ ಓಪನ್ ಫೈನಲ್ ಪಂದ್ಯದಲ್ಲಿ ಜಪಾನ್‌ನ ನವೊಮಿ ಒಸಾಕ ಬೆಲಾರಸ್‌ನ ವಿಕ್ಟೋರಿಯ ಆಜರೆಂಕಾ ಅವರನ್ನು ಮಣಿಸುವ ಮೂಲಕ ಮೂರನೇ ಗ್ರ್ಯಾನ್‌ಸ್ಲಾಂ ಮುಡಿಗೇರಿಸಿಕೊಂಡರು.
ಒಸಾಕಾ ಮತ್ತು ಆಜರೆಂಕಾ ನಡುವಿನ 1 ಗಂಟೆ 53 ನಿಮಿಷಗಳ ಪೈಪೋಟಿಯಲ್ಲಿ 1–6, 6–3 ಮತ್ತು 6–3 ಅಂತರದಲ್ಲಿ ಒಸಾಕಾ ಗೆಲುವು ಸಾಧಿಸಿದರು. 22 ವರ್ಷ ವಯಸ್ಸಿನ ಒಸಾಕಾಗೆ ಇದು ಎರಡನೇ ಯುಎಸ್ ಓಪನ್ ಪ್ರಶಸ್ತಿಯಾಗಿದೆ. ಈ ಹಿಂದೆ 2018ರಲ್ಲಿ ಮೊದಲ ಬಾರಿಗೆ ಯುಎಸ್ ಓಪನ್ ಮತ್ತು 2019ರಲ್ಲಿ ಆಸ್ಟ್ರೇಲಿಯಾ ಓಪನ್‌ನಲ್ಲಿ ಗೆಲುವು ಸಾಧಿಸಿದ್ದರು.
'ಅದನ್ನು ನಾನು ಅಷ್ಟು ಸಂಭ್ರಮಿಸಲಿಲ್ಲ. ನಿಜಕ್ಕೂ ಅದು ಕಠಿಣ ಪಂದ್ಯವಾಗಿತ್ತು' ಎಂದು ಗೆಲುವಿನ ಬಳಿಕ ಒಸಾಕಾ ಹೇಳಿದರು. ಅವರಿಗೆ 30 ಲಕ್ಷ ಡಾಲರ್ ಬಹುಮಾನ ದೊರೆತಿದೆ.
ಪ್ರಭಾವಶಾಲಿ ಆಟದೊಂದಿಗೆ ಕೇವಲ 26 ನಿಮಿಷಗಳಲ್ಲಿಯೇ ಆಜರೆಂಕಾ (31) ಮೊದಲ ಸೆಟ್ ತನ್ನದಾಗಿಸಿಕೊಂಡರು. ಎರಡನೇ ಸೆಟ್‌ನಲ್ಲಿ ರೋಚಕ ತಿರುವಿನೊಂದಿಗೆ ಒಸಾಕಾ ಪೈಪೋಟಿ ನೀಡಲು ಆರಂಭಿಸಿದರು, ಎರಡೇ ಸೆಟ್‌ಗಳಲ್ಲಿ ಫೈನಲ್ ಮುಗಿದು ಹೋಗಬಹುದು ಎಂಬ ಪರಿಸ್ಥಿತಿ ಬದಲಾಯಿತು.
ಎರಡನೇ ಸೆಟ್‌ನಲ್ಲಿ 6–3 ಪಾಯಿಂಟ್‌ಗಳಿಂದ ಒಸಾಕಾ ಗೆಲ್ಲುವ ಮೂಲಕ ಪಂದ್ಯ ಮತ್ತೊಂದು ಸೆಟ್‌ನತ್ತ ಸಾಗಿತು. ಅಂತಿಮ ಹಣಾಹಣಿಯಲ್ಲೂ ಒಸಾಕಾ 6–3ರಿಂದ ಗೆದ್ದು, ಯುಎಸ್ ಓಪನ್ ಪ್ರಶಸ್ತಿ ತಮ್ಮದಾಗಿಸಿಕೊಂಡರು.
A championship won on an incredible rally!@naomiosaka clinches the #USOpen 🏆 in three sets over Victoria Azarenka. pic.twitter.com/yVVd0Q0mnN
— US Open Tennis (@usopen) September 12, 2020
ಮೂರು ಬಾರಿ ಗ್ರ್ಯಾನ್‌ಸ್ಲಾಂ ಮುಡಿಗೇರಿಸಿಕೊಂಡ ಏಷ್ಯಾದ ಮೊದಲ ಮಹಿಳೆ ಎಂಬ ಖ್ಯಾತಿಗೂ ಒಸಾಕಾ ಪಾತ್ರರಾಗಿದ್ದಾರೆ. ಚೀನಾದ ಲಿ ನಾ ಎರಡು ಬಾರಿ ಚಾಂಪಿಯನ್ ಆಗಿದ್ದರು. ಅಜರೆಂಕಾ ಸಹ ಎರಡು ಬಾರಿ ಗ್ರ್ಯಾಂನ್ ಸ್ಲ್ಯಾಂ ಚಾಂಪಿಯನ್ ಆಗಿದ್ದಾರೆ.
ತಾಮಿರ್ ರೈಸ್ ಹೆಸರನ್ನು ಒಳಗೊಂಡಿದ್ದ ಮಾಸ್ಕ್ ಧರಿಸಿ ಒಸಾಕಾ ಕೋರ್ಟ್‌ಗೆ ಪ್ರವೇಶಿಸಿದ್ದರು. 2014ರಲ್ಲಿ ಓಹಿಯೊದಲ್ಲಿ ಬಿಳಿಯ ಪೊಲೀಸ್ ಅಧಿಕಾರಿಯು 12 ವರ್ಷ ವಯಸ್ಸಿನ ಆಫ್ರಿಕನ್–ಅಮೆರಿಕನ್ ಬಾಲಕ ತಾಮಿರ್‌ನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಒಸಾಕಾ ಟೂರ್ನಿಯ ಪ್ರತಿ ಆಟದಲ್ಲಿಯೂ ಜನಾಂಗೀಯ ದ್ವೇಷ, ಅನ್ಯಾಯ ಹಾಗೂ ಪೊಲೀಸ್ ಕ್ರೌರ್ಯದ ಬಗ್ಗೆ ಬೇರೆ ಬೇರೆ ಮಾಸ್ಕ್ ಧರಿಸಿ ಜಗತ್ತಿನ ಗಮನ ಸೆಳೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.