ಶನಿವಾರ, ಏಪ್ರಿಲ್ 4, 2020
19 °C

ನವತಾರೆ ನಿಕಿ...

ಜಿ.ಶಿವಕುಮಾರ Updated:

ಅಕ್ಷರ ಗಾತ್ರ : | |

Prajavani

ಫೆಬ್ರುವರಿ 11ರ ಮಧ್ಯಾಹ್ನದ ಸಮಯ. ಕಬ್ಬನ್‌ ಉದ್ಯಾನದಲ್ಲಿರುವ ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಸಂಸ್ಥೆಯ (ಕೆಎಸ್‌ಎಲ್‌ಟಿಎ) ಮೊದಲನೇ ಕೋರ್ಟ್‌ನ ಸುತ್ತ ನಿರೀಕ್ಷೆಗಿಂತಲೂ ಹೆಚ್ಚು ಪ್ರೇಕ್ಷಕರು ಜಮಾಯಿಸಿದ್ದರು. ಅವರದ್ದೆಲ್ಲಾ ಒಂದೇ ಬಯಕೆ, ಕರ್ನಾಟಕ ಮೂಲದ ಆ ಯುವಕ ಗೆಲ್ಲಬೇಕೆಂಬುದು. ಹೀಗೆ ಆಸೆಗಣ್ಣಿನಿಂದ ನೋಡುತ್ತಾ ಕುಳಿತಿದ್ದವರಿಗೆ ಆತ ನಿರಾಸೆ ಮಾಡಲಿಲ್ಲ.

ರ‍್ಯಾಂಕಿಂಗ್‌ನಲ್ಲಿ ತನಗಿಂತಲೂ 570 ಸ್ಥಾನ ಮೇಲಿದ್ದ ಆಟಗಾರನಿಗೆ ಆಘಾತ ನೀಡಿ ತವರಿನ ಅಭಿಮಾನಿಗಳ ಮನ ಗೆದ್ದ ಆ ಯುವ ತಾರೆ ಕಲಿಯಂಡ ನಿಕಿ ಪೂಣಚ್ಚ. ಹೋದ ವಾರ ನಡೆದಿದ್ದ ಬೆಂಗಳೂರು ಓಪನ್‌ ಟೂರ್ನಿಯಲ್ಲಿ ‘ವೈಲ್ಡ್‌ ಕಾರ್ಡ್‌’ ಅರ್ಹತೆ ಗಳಿಸಿದ್ದ 24 ವರ್ಷ ವಯಸ್ಸಿನ ನಿಕಿ, ಎರಡನೇ ಸುತ್ತಿನ ಪೈಪೋಟಿಯಲ್ಲಿ ಜೆಕ್‌ ಗಣರಾಜ್ಯದ ಲುಕಾಸ್‌ ರಸೊಲ್‌ಗೆ ಆಘಾತ ನೀಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು.

34 ವರ್ಷ ವಯಸ್ಸಿನ ಲುಕಾಸ್‌, 2012ರ ವಿಂಬಲ್ಡನ್‌ ಟೂರ್ನಿಯ ಪಂದ್ಯದಲ್ಲಿ ಸ್ಪೇನ್‌ನ ದಿಗ್ಗಜ ಆಟಗಾರ ರಫೆಲ್‌ ನಡಾಲ್‌ಗೆ ಆಘಾತ ನೀಡಿದ್ದರು. ಜೊತೆಗೆ ಬೆಂಗಳೂರು ಓಪನ್‌ನಲ್ಲಿ 16ನೇ ಶ್ರೇಯಾಂಕ ಪಡೆದಿದ್ದರು. ಮರುದಿನ ನಡೆದ (ಫೆಬ್ರುವರಿ 12) ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲೂ ನಿಕಿ ‘ಮ್ಯಾಜಿಕ್‌’ ಮಾಡಿದ್ದರು. ಜಪಾನ್‌ನ ಆಟಗಾರ, ಟೂರ್ನಿಯಲ್ಲಿ ಮೂರನೇ ಶ್ರೇಯಾಂಕ ಹೊಂದಿದ್ದ ಯುಯಿಚಾ ಸುಗಿಟಾ ಎದುರಿನ ಪಂದ್ಯದ ಮೊದಲ ಸೆಟ್‌ನಲ್ಲಿ ಎದುರಾಳಿಯ ಸರ್ವ್‌ ಬ್ರೇಕ್‌ ಮಾಡಿ ಗಮನ ಸೆಳೆದಿದ್ದರು. 

ಹೋದ ವರ್ಷ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದಿದ್ದ ನಿಕಿ ‘ಪ್ರಜಾವಾಣಿ’ ಜೊತೆ ತಮ್ಮ ಕನಸುಗಳನ್ನು ಬಿಚ್ಚಿಟ್ಟಿದ್ದಾರೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ 82ನೇ ಸ್ಥಾನದಲ್ಲಿರುವ ಸುಗಿಟಾ ವಿರುದ್ಧ ಸೋತರೂ ನಿಮ್ಮಿಂದ ಮೂಡಿಬಂದ ಆಟ ಅಭಿಮಾನಿಗಳ ಮನ ಗೆದ್ದಿತು. ಈ ಪಂದ್ಯಕ್ಕಾಗಿ ಏನಾದರೂ ವಿಶೇಷ ಸಿದ್ಧತೆ ಮಾಡಿಕೊಂಡಿದ್ದಿರೇ?

ಬಲಿಷ್ಠ ಆಟಗಾರರ ವಿರುದ್ಧ ಆಡುವಾಗ ‌ಅವರ ಬಲ ಮತ್ತು ದೌರ್ಬಲ್ಯದ ಅರಿವು ನಮಗಿರಬೇಕು. ಆದ್ದರಿಂದ ಸುಗಿಟಾ ಎದುರಿನ ಹಣಾಹಣಿಗೂ ಮುನ್ನ ಅವರು ಈ ಹಿಂದೆ ಆಡಿದ್ದ ಪಂದ್ಯಗಳ ಕೆಲ ವಿಡಿಯೊಗಳನ್ನು ವೀಕ್ಷಿಸಿದ್ದೆ. ಹೀಗಾಗಿ ಮೊದಲ ಸೆಟ್‌ನ ಆರಂಭದಲ್ಲೇ ಅವರ ಸರ್ವ್‌ ಮುರಿದು ಮುನ್ನಡೆ ಗಳಿಸಲು ಸಾಧ್ಯವಾಯಿತು. ಕಿಬ್ಬೊಟ್ಟೆ ನೋವಿನಿಂದಾಗಿ ಎರಡನೇ ಸೆಟ್‌ನಲ್ಲಿ ಪರಿಣಾಮಕಾರಿಯಾಗಿ ಆಡಲು ಆಗಲಿಲ್ಲ.

ಲುಕಾಸ್‌ ವಿರುದ್ಧದ ಗೆಲುವಿನ ಬಗ್ಗೆ..

ಇದು ನನ್ನ ಜೀವನದ ಸ್ಮರಣೀಯ ಜಯ. ಲುಕಾಸ್‌ ಅವರಂತಹ ಅನುಭವಿ ಆಟಗಾರನ ವಿರುದ್ಧ ಆಡುವುದೇ ಒಂದು ಹೆಮ್ಮೆ. ಅವರನ್ನು ಮಣಿಸಿದಾಗ ಆದ ಸಂತಸ ಪದಗಳಿಗೆ ನಿಲುಕದ್ದು.

ನಿಮ್ಮ ಹಿನ್ನೆಲೆ..

ಅಪ್ಪ ಕೊಡಗಿನವರು. ಅಮ್ಮ ಆಂಧ್ರಪ್ರದೇಶದವರು. ಇಬ್ಬರೂ ಎನ್‌ಎಲ್‌ಸಿಯಲ್ಲಿ ಉದ್ಯೋಗಿಗಳಾಗಿದ್ದರು. ನಾನು ಹುಟ್ಟಿ ಬೆಳೆದಿದ್ದೆಲ್ಲಾ ತಮಿಳುನಾಡಿನ ನೈವೇಲಿಯಲ್ಲಿ.

ಟೆನಿಸ್‌ ಪಯಣ ಶುರುವಾಗಿದ್ದು ಹೇಗೆ?

ನಮ್ಮದು ಕ್ರೀಡಾ ಹಿನ್ನೆಲೆಯ ಕುಟುಂಬ. ಅಪ್ಪ ಅಥ್ಲೆಟಿಕ್ಸ್‌ನಲ್ಲಿ ಆಸಕ್ತಿ ಹೊಂದಿದ್ದರು. ಅಮ್ಮ ಬ್ಯಾಸ್ಕೆಟ್‌ಬಾಲ್‌ ಆಡುತ್ತಿದ್ದರು. ಒಂಬತ್ತರ ಹರೆಯದಲ್ಲಿ ನಾನು ಟೆನಿಸ್‌ ಕಲಿಯಲು ಶುರುಮಾಡಿದೆ. ಅಪ್ಪನೇ ನನ್ನ ಮೊದಲ ಗುರು. ಅವರು ಟೆನಿಸ್‌ ಕೋಚಿಂಗ್‌ಗೆ ಹೋಗುತ್ತಿದ್ದರು. ಅಲ್ಲಿ ಕಲಿತ ವಿಷಯಗಳನ್ನು ನನಗೆ ಹೇಳಿಕೊಡುತ್ತಿದ್ದರು. ಜೂನಿಯರ್‌ ಹಂತದಲ್ಲಿ ಅನೇಕ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದೆ. 18ನೇ ವಯಸ್ಸಿನಲ್ಲಿದ್ದಾಗ ಈ ಕ್ರೀಡೆಯನ್ನು ಇನ್ನಷ್ಟು ಗಂಭೀರವಾಗಿ ಪರಿಗಣಿಸಿದೆ.

ಪೋಷಕರ ಬೆಂಬಲದ ಬಗ್ಗೆ..

ಅಪ್ಪ, ಅಮ್ಮ ನನಗಾಗಿ ತುಂಬಾ ತ್ಯಾಗ ಮಾಡಿದ್ದಾರೆ. ಇದ್ದ ಆಸ್ತಿಯನ್ನು ಮಾರಿ ವಿದೇಶದಲ್ಲಿ ತರಬೇತಿ ಕೊಡಿಸಿದ್ದಾರೆ. ಗೆದ್ದಾಗ ಬೆನ್ನು ತಟ್ಟಿದ್ದಾರೆ, ಸೋತಾಗ ಸ್ಥೈರ್ಯ ತುಂಬಿದ್ದಾರೆ. ಅವರ ಸಹಕಾರದ ಬಗ್ಗೆ ಎಷ್ಟು ಹೇಳಿದರೂ ಸಾಲದು.

ಹೋದ ವರ್ಷ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದಿದ್ದಿರಿ. ಈ ಸಾಧನೆ ಬಗ್ಗೆ ಹೇಳಿ?

ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಜಯಿಸಿದ ಮೊದಲ ಪ್ರಶಸ್ತಿ ಅದು. ಹೀಗಾಗಿ ತುಂಬಾ ಖುಷಿಯಾಗಿತ್ತು. ಆ ಸಾಧನೆ ನನ್ನಲ್ಲಿ ಹೊಸ ಹುರುಪು ಮೂಡಿಸಿತ್ತು. 

ಬೆಂಗಳೂರಿನಲ್ಲಿರುವ ರೋಹನ್‌ ಬೋಪಣ್ಣ ಅಕಾಡೆಮಿಗೆ ಸೇರಿದ್ದು ಯಾವಾಗ. ಬೋಪಣ್ಣ ನಿಮಗೇನಾದರೂ ಸಲಹೆ ನೀಡುತ್ತಾರೆಯೇ?

2016ರಲ್ಲಿ ಬೋಪಣ್ಣ ಅಕಾಡೆಮಿಗೆ ಸೇರಿದೆ. ಲುಕಾಸ್‌ ವಿರುದ್ಧದ ಪಂದ್ಯದ ಹಿಂದಿನ ದಿನ ಬೋಪಣ್ಣ ಅವರು ದೂರವಾಣಿ ಕರೆ ಮಾಡಿ ಮಾತನಾಡಿದರು. ಎದುರಾಳಿಯ ಬಲ ಹಾಗೂ ದೌರ್ಬಲ್ಯದ ಬಗ್ಗೆ ತಿಳಿಸಿದರು. ಅವರ ಸಲಹೆಗಳು ನೆರವಿಗೆ ಬಂದವು.

ಜೀವನದ ಗುರಿ?

ಡೇವಿಸ್‌ ಕಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಬೇಕೆಂಬ ಹೆಬ್ಬಯಕೆ ಇದೆ. ಆ ಕನಸು ಸಾಕಾರಗೊಳಿಸಿಕೊಳ್ಳಲು ಪ್ರಯತ್ನಿಸುತ್ತೇನೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು