ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಓಪನ್ ಟೆನಿಸ್‌ ಟೂರ್ನಿ: ನಿಕ್‌ ತಡೆ ದಾಟದ ಮೆಡ್ವೆಡೆವ್‌

Last Updated 5 ಸೆಪ್ಟೆಂಬರ್ 2022, 19:45 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಹಾಲಿ ಚಾಂಪಿಯನ್‌ ಡೇನಿಯಲ್ ಮೆಡ್ವೆಡೆವ್‌ ಅಮೆರಿಕ ಓಪನ್ ಟೆನಿಸ್‌ ಟೂರ್ನಿಯಲ್ಲಿ ಆಘಾತ ಅನುಭವಿಸಿದ್ದಾರೆ. ಅಮೆರಿಕದ ಯುವ ಆಟಗಾರ್ತಿ ಕೊಕೊ ಗಫ್‌ ಮೊದಲ ಬಾರಿ ಕ್ವಾರ್ಟರ್‌ಫೈನಲ್‌ ತಲುಪಿದ ಶ್ರೇಯ ಗಳಿಸಿದರು.

ಅರ್ಥರ್‌ ಆ್ಯಶ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ನಾಲ್ಕನೇ ಸುತ್ತಿನ ಹಣಾಹಣಿಯಲ್ಲಿ ಆಸ್ಟ್ರೇಲಿಯಾದ ನಿಕ್‌ ಕಿರ್ಗಿಯೊಸ್‌7-6 (13/11), 3-6, 6-3, 6-2ರಿಂದ ರಷ್ಯಾ ಆಟಗಾರ, ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿರುವ ಮೆಡ್ವೆಡೆವ್ ಅವರಿಗೆ ಸೋಲುಣಿಸಿ ಎಂಟರಘಟ್ಟಕ್ಕೆ ಲಗ್ಗೆಯಿಟ್ಟರು.

ಜುಲೈನಲ್ಲಿ ನಡೆದ ವಿಂಬಲ್ಡನ್‌ ಟೂರ್ನಿಯ ಫೈನಲ್‌ನಲ್ಲಿ ನಡಾಲ್ ಎದುರು ಎಡವಿದ್ದ ಕಿರ್ಗಿಯೊಸ್‌ ಇಲ್ಲಿ ದಿಟ್ಟ ಆಟದ ಮೂಲಕ ಗಮನಸೆಳೆದರು. ಶಾಟ್‌ಗಳ ಆಯ್ಕೆಯಲ್ಲಿ ಜಾಣತನ ತೋರಿದ ಅವರು, ಮೊದಲ ಸೆಟ್‌ನಲ್ಲಿ ಮೂರು ಪಾಯಿಂಟ್ಸ್ ಉಳಿಸಿಕೊಂಡರು. ಟೈಬ್ರೇಕ್‌ವರೆಗೆ ಸಾಗಿದ ಈ ಸೆಟ್‌ನಲ್ಲಿ ಒತ್ತಡವನ್ನು ಮೀರಿನಿಂತು ಗೆಲುವು ಕಂಡರು.

ಎರಡನೇ ಸೆಟ್‌ನಲ್ಲಿ ಮೆಡ್ವೆಡೆವ್ ತಿರುಗೇಟು ನೀಡಿದರೂ ನಿಕ್‌ ಛಲ ಕಳೆದುಕೊಳ್ಳಲಿಲ್ಲ. ಮೂರು ಮತ್ತು ನಾಲ್ಕನೇ ಸೆಟ್‌ನಲ್ಲಿ ಜಯ ಸಾಧಿಸುವ ಮೂಲಕ ಎರಡು ತಾಸು 53 ನಿಮಿಷಗಳಲ್ಲಿ ಪಂದ್ಯ ಗೆದ್ದ ಸಂತಸದಲ್ಲಿ ಅಲೆಯಲ್ಲಿ ತೇಲಿದರು.

ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಕಿರ್ಗಿಯೊಸ್‌ ಅವರಿಗೆ ರಷ್ಯಾದ ಇನ್ನೋರ್ವ ಆಟಗಾರ ಕರೆನ್ ಕಚನೊವ್ ಸವಾಲು ಎದುರಾಗಿದೆ. ಪ್ರೀಕ್ವಾರ್ಟರ್‌ನ ಮತ್ತೊಂದು ಸೆಣಸಾಟದಲ್ಲಿ ಕರೆನ್‌4-6, 6-3, 6-1, 4-6, 6-3ರಿಂದ ಸ್ಪೇನ್‌ನ ಪ್ಯಾಬ್ಲೊ ಕರೆನೊ ಬುಸ್ಟಾ ಸವಾಲು ಮೀರಿದರು. ಮೂರು ತಾಸು 21 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಉಭಯ ಆಟಗಾರರ ಮಧ್ಯೆ ತುರುಸಿನ ಪೈಪೋಟಿ ನಡೆಯಿತು.

ಪ್ರೀಕ್ವಾರ್ಟರ್‌ಫೈನಲ್‌ನ ಇನ್ನುಳಿದ ಪಂದ್ಯಗಳಲ್ಲಿ ಇಟಲಿಯ ಮ್ಯಾಟಿಯೊ ಬೆರೆಟಿನಿ3-6, 7-6 (7/2), 6-3, 4-6, 6-2ರಿಂದ ಸ್ಪೇನ್‌ನ ಅಲೆಜಾಂಡ್ರೊ ಫೊಕಿನಾ ಎದುರು, ನಾರ್ವೆಯ ಕಾಸ್ಪರ್ ರೂಡ್‌6-1, 6-2, 6-7 (4/7), 6-2ರಿಂದ ಕೊರೆಂಟಿನ್‌ ಮೌಟೆಟ್‌ ಅವರನ್ನು ಪರಾಭವಗೊಳಿಸಿದರು.

ಗಫ್‌ ಗೆಲುವಿನ ಓಟ: ಉದಯೋನ್ಮುಖ ಆಟಗಾರ್ತಿ ಕೊಕೊ ಗಫ್‌, ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ7-5, 7-5ರಿಂದ ಚೀನಾದ ಜಾಂಗ್‌ ಶುವಾಯಿ ಅವರನ್ನು ಮಣಿಸಿದರು. 18 ವರ್ಷದ ಗಫ್‌, ಮುಂದಿನ ಪಂದ್ಯದಲ್ಲಿ ಫ್ರಾನ್ಸ್‌ನ ಕರೋಲಿನಾ ಗಾರ್ಸಿಯಾ ಅವರಿಗೆ ಮುಖಾಮಖಿಯಾಗುವರು.

16ರ ಘಟ್ಟದ ಇನ್ನುಳಿದ ಪಂದ್ಯಗಳಲ್ಲಿ ಗಾರ್ಸಿಯಾ6-4, 6-1ರಿಂದ ಅಮೆರಿಕದ ಅಲಿಸನ್ ರಿಸ್ಕೆ ಅಮೃತರಾಜ್ ಎದುರು, ಟ್ಯೂನಿಷಿಯಾದ ಆನ್ಸ್ ಜಬೆವುರ್‌7-6 (7/1), 6-4ರಿಂದ ವೆರೊನಿಕಾ ಕುದರ್ಮೆಟೊವಾ ವಿರುದ್ಧ, ಆಸ್ಟ್ರೇಲಿಯಾದ ಅಜ್ಲಾ ಟೊಮ್ಲಾನೊವಿಚ್‌7-6 (10/8), 6-1ರಿಂದ ಲ್ಯೂಡ್‌ಮಿಲಾ ಸಮ್ಸೊನೊವಾ ಎದುರು ಜಯ ಸಾಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT