ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಡ್ವೆಡೆವ್‌ಗೆ ಮೊದಲ ಗ್ರ್ಯಾನ್‌ಸ್ಲಾಂ ಖುಷಿ

ಅಮೆರಿಕ ಓಪನ್ ಟೆನಿಸ್ ಟೂರ್ನಿ: ದಾಖಲೆಯ ಹೊಸ್ತಿಲಿನಲ್ಲಿ ಎಡವಿದ ಸರ್ಬಿಯಾದ ನೊವಾಕ್ ಜೊಕೊವಿಚ್‌
Last Updated 13 ಸೆಪ್ಟೆಂಬರ್ 2021, 19:17 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಒಂದು ಸೆಟ್ ಮಾತ್ರ ಬಿಟ್ಟುಕೊಟ್ಟು ಪ್ರಶಸ್ತಿ ಸುತ್ತು ಪ್ರವೇಶಿಸಿದ್ದ ರಷ್ಯಾದ ಡ್ಯಾನಿಯಲ್ ಮೆಡ್ವೆಡೆವ್ ಅಂತಿಮ ಹಣಾಹಣಿಯಲ್ಲಿ ನೋವು ನುಂಗಿ ಆಟದ ಮೇಲೆ ನಿಯಂತ್ರಣ ಸಾಧಿಸಿದರು. ಈ ಮೂಲಕ ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಚಾಂಪಿಯನ್ ಪಟ್ಟಕ್ಕೇರಿದರು.

ಭಾನುವಾರ ರಾತ್ರಿ ನಡೆದ ಫೈನಲ್ ಹಣಾಹಣಿಯಲ್ಲಿ 6-4, 6-4, 6-4ರಲ್ಲಿ ಗೆದ್ದ ಡ್ಯಾನಿಯಲ್ ಮೆಡ್ವೆಡೆವ್‌ ವರ್ಷದ ಎಲ್ಲ ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳನ್ನು ಗೆಲ್ಲುವಸರ್ಬಿಯಾದ ನೊವಾಕ್ ಜೊಕೊವಿಚ್ ಅವರ ಕನಸು ಭಗ್ನಗೊಳಿಸಿದರು. ಆಸ್ಟ್ರೇಲಿಯಾ ಓಪನ್‌, ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದ ಜೊಕೊವಿಚ್‌ ಒಲಿಂಪಿಕ್ಸ್‌ನಲ್ಲಿ ಪದಕ ಗಳಿಸಿ ‘ಗೋಲ್ಡನ್ ಗ್ರ್ಯಾನ್‌ಸ್ಲಾಂ’ ಸಾಧನೆ ಮಾಡುವ ಕನಸು ಕಂಡಿದ್ದರು. ಅದು ಭಗ್ನಗೊಂಡಿತ್ತು. ಇದೀಗ ಗ್ರ್ಯಾನ್‌ಸ್ಲಾಂ ಕ್ಲೀನ್ ಸ್ವೀ‍ಪ್ ಆಸೆಯೂ ಕಮರಿ ಹೋಗಿದೆ.

2019ರ ಅಮೆರಿಕ ಓ‍ಪನ್ ಮತ್ತು ಈ ಬಾರಿಯ ಆಸ್ಟ್ರೇಲಿಯಾ ಓಪನ್ ಟೂರ್ನಿಯ ಫೈನಲ್ ಪ್ರವೇಶಿಸಿದ್ದ ಮೆಡ್ವೆಡೆವ್ ಪ್ರಶಸ್ತಿ ಹಂತದಲ್ಲಿ ಮುಗ್ಗರಿಸಿದ್ದರು. ಆದರೆ ಭಾನುವಾರದ ಫೈನಲ್‌ನಲ್ಲಿ ಅತ್ಯಮೋಘ ಆಟವಾಡಿ ಜೊಕೊವಿಚ್ ಅವರನ್ನು ಕಂಗೆಡಿಸಿದರು. ಪಂದ್ಯದ ಸಂದರ್ಭದಲ್ಲಿ ಅನುಭವಿಸಿದ ನೋವು ಮತ್ತು ಒತ್ತಡವನ್ನು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಂಚಿಕೊಂಡರು.

‘ಮೊದಲ ಸೆಟ್‌ನಲ್ಲಿ 5–2ರ ಮುನ್ನಡೆಯಲ್ಲಿದ್ದಾಗ ಇನ್ನೇನು ಸೆಟ್ ಗೆದ್ದೇ ಬಿಟ್ಟೆ ಎಂದುಕೊಂಡಿದ್ದೆ. ಆದರೆ 5–3ರ ಹಿನ್ನಡೆ ಅನುಭವಿಸಿದಾಗ ಆತಂಕ ಕಾಡಿತು. ಇದೇ ಸಂದರ್ಭದಲ್ಲಿ ಕಾಲುಗಳಲ್ಲಿ ನೋವು ಕಾಣಿಸಿಕೊಂಡಿತ್ತು. ಪಾಯಿಂಟ್ಸ್‌ 4–5 ಆದಾಗ ಎಡಗಾಲು ಬಳಲಿತ್ತು. ಆಗ ನಡೆದಾಡುವುದಕ್ಕೂ ಕಷ್ಟವಾಗುತ್ತಿತ್ತು. ಮುಖ ಒರೆಸಿಕೊಳ್ಳಲು ಟವೆಲ್‌ ಬಳಿ ಹೋದ ವಿಡಿಯೋವನ್ನು ನೋಡಿದರೆ ಎಲ್ಲರಿಗೂ ಇದು ಮನದಟ್ಟಾಗಬಹುದು’ ಎಂದು ಮೆಡ್ವೆಡೆವ್ ವಿವರಿಸಿದರು.

ಮೆಡ್ವೆಡೆವ್ ಈ ಬಾರಿ ಆರಂಭದಿಂದಲೇ ಉತ್ತಮ ಆಟ ಪ್ರದರ್ಶಿಸಿದ್ದರು. ಮೊದಲ ನಾಲ್ಕು ಸುತ್ತುಗಳ ಪ್ರತಿ ಪಂದ್ಯವನ್ನು ಎರಡು ತಾಸುಗಳ ಒಳಗೆ ಮುಗಿಸಿದ್ದರು. ಈ ಜೈತ್ರಯಾತ್ರೆಯು ಮೊದಲ ಗ್ರ್ಯಾನ್‌ಸ್ಲಾಂ ಪ್ರಶಸ್ತಿಗೆ ಮುತ್ತಿಕ್ಕುವತ್ತ ಅವರನ್ನು ಮುನ್ನಡೆಸಿತು. ಹಿಂದಿನ ಬಾರಿ ಅಮೆರಿಕ ಓಪನ್‌ನ ಫೈನಲ್‌ಲ್ಲಿ ಸ್ಪೇನ್‌ನ ರಫೆಲ್ ನಡಾಲ್ ಎದುರು ಐದು ಸೆಟ್‌ಗಳ ವರೆಗೆ ಕಾದಾಡಿ ಸೋತಿದ್ದರು. ಆಸ್ಟ್ರೇಲಿಯಾ ಓಪನ್ ಫೈನಲ್‌ನಲ್ಲಿ ಜೊಕೊವಿಚ್‌ಗೆ ನೇರ ಸೆಟ್‌ಗಳಿಂದ ಮಣಿದಿದ್ದರು.

ದಾಖಲೆಯ ಹೊಸ್ತಿಲಿನಲ್ಲಿದ್ದ ಆಟಗಾರನ ಎದುರು ಗೆದ್ದು ಮೊದಲ ಬಾರಿ ಗ್ರ್ಯಾನ್‌ಸ್ಲಾಂ ಚಾಂಪಿಯನ್‌ ಅಗಿರುವುದು ನನ್ನ ಖುಷಿಯನ್ನು ಇಮ್ಮಡಿಗೊಳಿಸಿದೆ. ಇದು ನನ್ನಲ್ಲಿ ಆತ್ಮವಿಶ್ವಾಸ ತುಂಬಿದೆ. ಹೀಗಾಗಿ ಈ ಗೆಲುವು ಭವಿಷ್ಯದಲ್ಲಿ ಇನ್ನಷ್ಟು ಸಾಧನೆಗೆ ನೆರವಾಗಲಿದೆ.

ಡ್ಯಾನಿಯಲ್ ಮೆಡ್ವೆಡೆವ್‌ ಪ್ರಶಸ್ತಿ ವಿಜೇತ ಆಟಗಾರ

ಪಂದ್ಯದಲ್ಲಿ ಸೋತರೂ ನನ್ನ ಹೃದಯ ತುಂಬಿ ಬಂದಿದೆ. ಪ್ರೇಕ್ಷಕರ ಪ್ರೀತಿ ಮತ್ತು ಅಭಿಮಾನವನ್ನು ಕಂಡು ಜಗತ್ತಿನ ಅತ್ಯಂತ ಖುಷಿಯ ವ್ಯಕ್ತಿ ನಾನೇನೋ ಅನಿಸುತ್ತಿದೆ.

ನೊವಾಕ್ ಜೊಕೊವಿಚ್‌ ಸರ್ಬಿಯಾದ ಆಟಗಾರ

ಪ್ರಮುಖ ಅಂಶಗಳು

* ವರ್ಷದ ಎಲ್ಲ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆಲ್ಲುವ ಅವಕಾಶ ಕೈಚೆಲ್ಲಿದ ಜೊಕೊವಿಚ್‌. ಅಮೆರಿಕದ ಡಾನ್ ಬಜ್ 1938ರಲ್ಲಿ ಮತ್ತು ಆಸ್ಟ್ರೇಲಿಯಾದ ರಾಡ್ ಲೇವರ್ 1962ರಲ್ಲಿ ಕ್ಲೀನ್‌ಸ್ವೀಪ್ ಸಾಧನೆ ಮಾಡಿದ್ದರು.

* ಅತಿಹೆಚ್ಚು ಗ್ರ್ಯಾನ್‌ ಸ್ಲಾಂ ಪ್ರಶಸ್ತಿ ಗೆದ್ದ ಆಟಗಾರ ಎಂಬ ದಾಖಲೆಯ ಅವಕಾಶವನ್ನೂ ಜೊಕೊವಿಚ್ ಕಳೆದುಕೊಂಡರು. ಸದ್ಯ ರೋಜರ್ ಫೆಡರರ್ ಮತ್ತು ರಫೆಲ್ ನಡಾಲ್ ಜೊತೆ ಜೊಕೊವಿಚ್‌ 20 ಪ್ರಶಸ್ತಿಗಳ ದಾಖಲೆ ಹಂಚಿಕೊಂಡಿದ್ದಾರೆ.

* ಗ್ರ್ಯಾನ್‌ಸ್ಲಾಂ ಕ್ಲೀನ್ ಸ್ವೀಪ್ ಹಾದಿಯ ಕೊನೆಯಲ್ಲಿ ಮುಗ್ಗರಿಸಿದ ಮೂರನೇ ಆಟಗಾರ ಜೊಕೊವಿಚ್. ಆಸ್ಟ್ರೇಲಿಯಾದ ಜಾಕ್ ಕ್ರಾಫರ್ಡ್1933ರಲ್ಲಿ ಮತ್ತು ಲ್ಯೂ ಹಾಡ್1956ರಲ್ಲಿ ಅವಕಾಶ ಕಳೆದುಕೊಂಡಿದ್ದರು.

* ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆದ್ದ ರಷ್ಯಾದ ಮೂರನೇ ಆಟಗಾರ ಮೆಡ್ವೆಡೆವ್‌. 1996ರ ಫ್ರೆಂಚನ್ ಓಪನ್‌ ಮತ್ತು 1999ರ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಎವ್ಜಿನಿ ಕಫೆಲ್ನಿಕೊವ್ ಚಾಂಪಿಯನ್ ಆಗಿದ್ದರೆ 2000ನೇ ಇಸವಿಯ ಅಮೆರಿಕ ಓಪನ್ ಮತ್ತು 2005ರ ಆಸ್ಟ್ರೇಲಿಯನ್ ಓಪನ್‌ ಟೂರ್ನಿಯಲ್ಲಿ ಮರಾಟ್ ಸಫಿನ್ ಪ್ರಶಸ್ತಿ ಗೆದ್ದಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT