ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡಾಲ್‌ ನಾಗಾಲೋಟಕ್ಕೆ ಸಿಸಿಪಸ್‌ ತಡೆ

ಆಸ್ಟ್ರೇಲಿಯಾ ಓಪನ್ ಟೆನಿಸ್‌ ಟೂರ್ನಿ: ನಾಲ್ಕರ ಘಟ್ಟಕ್ಕೆ ಮೆಡ್ವೆಡೆವ್‌; ಬಾರ್ಟಿ ಪರಾಭವ
Last Updated 17 ಫೆಬ್ರುವರಿ 2021, 14:29 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಗರಿಷ್ಠ ಗ್ರ್ಯಾನ್‌ಸ್ಲಾಮ್ ವಿಜೇತ ಆಟಗಾರ ಎನಿಸಿಕೊಳ್ಳುವ ರಫೆಲ್ ನಡಾಲ್ ಅವರ ಆಸೆಗೆ ಸ್ಟೆಫಾನೋಸ್‌ ಸಿಸಿಪಸ್ ತಣ್ಣೀರು ಸುರಿದರು. ಎರಡು ಸೆಟ್‌ಗಳ ಹಿನ್ನಡೆಯಿಂದ ಪುಟಿದೆದ್ದು ಗೆಲುವಿನ ನಗೆ ಬೀರಿದ ಗ್ರೀಸ್‌ ಆಟಗಾರ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ನಾಲ್ಕರ ಘಟ್ಟ ತಲುಪಿದರು.

21ನೇ ಗ್ರ್ಯಾನ್‌ಸ್ಲಾಮ್ ಕಿರೀಟ ಮುಡಿಗೇರಿಸಿಕೊಳ್ಳುವ ಹಂತದಲ್ಲಿದ್ದ ಸ್ಪೇನ್‌ನ ನಡಾಲ್‌ ಅವರನ್ನು ಐದನೇ ಶ್ರೇಯಾಂಕದ ಸಿಸಿಪಸ್‌ 3–6, 2–6, 7–6, 6–4, 6–5ರಿಂದ ಪರಾಭವಗೊಳಿಸಿದರು. ನಡಾಲ್ ಇಲ್ಲಿ ಎರಡನೇ ಶ್ರೇಯಾಂಕ ಪಡೆದಿದ್ದರು.

‘ಮೂರನೇ ಸೆಟ್‌ ಬಳಿಕ ಏನಾಯಿತೋ ಗೊತ್ತಿಲ್ಲ, ನಾನು ಪುಟ್ಟ ಹಕ್ಕಿಯಂತೆ ಹಾರುವ ಅನುಭವವಾಯಿತು, ಎಲ್ಲವೂ ನನ್ನ ಪರವಾಯಿತು‘ ಎಂದು ಪಂದ್ಯದ ಬಳಿಕ ಸಿಸಿಪಸ್ ಸಂತಸ ವ್ಯಕ್ತಪಡಿಸಿದರು.

ಗ್ರ್ಯಾನ್‌ಸ್ಲಾಮ್ ಟೂರ್ನಿಯೊಂದರಲ್ಲಿ ಮೊದಲ ಎರಡು ಸೆಟ್‌ ಮುನ್ನಡೆಯಲ್ಲಿದ್ದೂ ನಡಾಲ್‌ ಸೋಲು ಕಂಡಿದ್ದು ಇದು ಕೇವಲ ಎರಡನೇ ಬಾರಿ. ಈ ಮೊದಲು 2015ರ ಅಮೆರಿಕ ಓಪನ್ ಟೂರ್ನಿಯ ಮೂರನೇ ಸುತ್ತಿನ ಪಂದ್ಯದಲ್ಲಿ ಇಟಲಿಯ ಫ್ಯಾಬಿಯೊ ಫಾಗ್ನಿನಿ ಎದುರು ಮಣಿದಿದ್ದರು.

ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್‌ ಹಾಗೂ ನಡಾಲ್‌ ಇದುವರೆಗೆ ತಲಾ 20 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ್ದಾರೆ. ಇಲ್ಲಿ ಟ್ರೋಫಿ ಗೆದ್ದರೆ 34 ವರ್ಷದ ನಡಾಲ್ ದಾಖಲೆ ನಿರ್ಮಿಸುತ್ತಿದ್ದರು.

ಸೆಮಿಫೈನಲ್‌ನಲ್ಲಿ ಸಿಸಿಪಸ್ ಅವರಿಗೆ ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ಸವಾಲು ಎದುರಾಗಿದೆ.

ಎಂಟರಘಟ್ಟದ ಮತ್ತೊಂದು ಪಂದ್ಯದಲ್ಲಿ ಆತ್ಮೀಯ ಗೆಳೆಯ, ತಮ್ಮದೇ ದೇಶದ ಆ್ಯಂಡ್ರೆ ರುಬ್ಲೆವ್ ಅವರಿಗೆ ಸೋಲುಣಿಸಿದ ರಷ್ಯಾದ ಡ್ಯಾನಿಲ್ ಮೆಡ್ವೆಡೆವ್‌, ಸೆಮಿಫೈನಲ್‌ ಪ್ರವೇಶಿಸಿದರು. ಮೆಡ್ವೆಡೆವ್‌ ಅವರಿಗೆ 7-5 6-3 6-2ರಿಂದ ಜಯ ಒಲಿಯಿತು. ಇದರೊಂದಿಗೆ ಅವರ ಸತತ ಗೆಲುವಿನ ಸರಣಿ 19ಕ್ಕೇರಿತು.

ಎರಡು ವಾರಗಳ ಹಿಂದೆ ಎಟಿಪಿ ಕಪ್ ಟೂರ್ನಿಯಲ್ಲಿ ಈ ಜೋಡಿ ರಷ್ಯಾ ಪರ ಜೊತೆಯಾಗಿ ಕಣಕ್ಕಿಳಿದಿದ್ದರು. 2019ರ ಅಮೆರಿಕ ಓಪನ್ ರನ್ನರ್‌ಅಪ್ ಮೆಡ್ವೆಡೆವ್‌ ಅವರಿಗೆ ರುಬ್ಲೆವ್ ಎದುರು ಇದು ಸತತ ನಾಲ್ಕನೇ ನೇರ ಸೆಟ್‌ಗಳ ಜಯ.

ಎರಡು ತಾಸು ಐದು ನಿಮಿಷಗಳ ಕಾಲ ನಡೆದ ಹಣಾಹಣಿಯಲ್ಲಿ ಮೆಡ್ವೆಡೆವ್ ಸ್ನಾಯುಸೆಳೆತ ಅನುಭವಿಸಿದರು. ಮಸಾಜ್ ಥೆರಪಿಸ್ಟ್‌ ನೆರವು ಪಡೆದರು.

ಅರ್ಹತಾ ಸುತ್ತಿನಿಂದ ಗೆದ್ದುಬಂದು ಸೆಮಿಫೈನಲ್‌ ತಲುಪಿರುವ ರಷ್ಯಾದ ಅಸ್ಲನ್‌ ಕರಾತ್ಸೆವ್ ಅವರು ಮುಂದಿನ ಪಂದ್ಯದಲ್ಲಿ ಅಗ್ರಕ್ರಮಾಂಕದ ಆಟಗಾರ ನೊವಾಕ್ ಜೊಕೊವಿಚ್ ಅವರನ್ನು ಎದುರಿಸಲಿದ್ದಾರೆ.

ಬಾರ್ಟಿಗೆ ಆಘಾತ ನೀಡಿದ ಮುಚೋವ: 43 ವರ್ಷಗಳ ಈ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಸ್ಥಳೀಯ ಆಟಗಾರ್ತಿ ಎಂಬ ಗರಿಮೆ ತಮ್ಮದಾಗಿಸುವ ನಿರೀಕ್ಷೆಯಲ್ಲಿದ್ದ ಅಗ್ರಶ್ರೇಯಾಂಕಿತೆ ಆ್ಯಶ್ಲಿ ಬಾರ್ಟಿ ಆಘಾತ ಅನುಭವಿಸಿದರು. ಎಂಟರಘಟ್ಟದ ಹಣಾಹಣಿಯಲ್ಲಿ ಅವರು 6–1, 3–6, 2–6ರಿಂದ ಜೆಕ್ ಗಣರಾಜ್ಯದ ಕರೋಲಿನಾ ಮುಚೋವ ಎದುರು ಮುಗ್ಗರಿಸಿದರು.

ಮೊದಲ ಸೆಟ್‌ ಸುಲಭವಾಗಿ ಗೆದ್ದುಕೊಂಡು ವಿಶ್ವಾಸದಲ್ಲಿದ್ದ ಬಾರ್ಟಿ ಅವರಿಗೆ ಕರೋಲಿನಾ ಎರಡು ಮತ್ತು ಮೂರನೇ ಸೆಟ್‌ನಲ್ಲಿ ಅಚ್ಚರಿಯ ಆಘಾತ ನೀಡಿದರು.

ಸೆಮಿಫೈನಲ್ ಹಣಾಹಣಿಯಲ್ಲಿ ಅವರು ಮುಚೋವ, ಅಮೆರಿಕದ ಜೆನಿಫರ್ ಬ್ರಾಡಿ ಅವರನ್ನು ಎದುರಿಸಲಿದ್ದಾರೆ. ಮತ್ತೊಂದು ಪಂದ್ಯದಲ್ಲಿ 22ನೇ ಶ್ರೇಯಾಂಕದ ಜೆನಿಫರ್‌ 4-6, 6-2, 6-1ರಿಂದ ತಮ್ಮದೇ ದೇಶದ ಜೆಸ್ಸಿಕಾ ಪೆಗುಲಾ ಅವರನ್ನು ಮಣಿಸಿದರು.

ಪ್ರೇಕ್ಷಕರಿಗೆ ಅವಕಾಶ: ಕ್ವಾರಂಟೈನ್‌ ಹೊಟೇಲ್‌ನಲ್ಲಿ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಐದು ದಿನಗಳ ಕಾಲ ಲಾಕ್‌ಡೌನ್ ಹೇರಿದ್ದರಿಂದ ಟೂರ್ನಿಯಲ್ಲಿ ಪ್ರೇಕ್ಷಕರಿಗೆ ಅವಕಾಶ ಇರಲಿಲ್ಲ. ಗುರುವಾರದಿಂದ ರಾಡ್ ಲೇವರ್ ಅರೆನಾದಲ್ಲಿ ಪಂದ್ಯವೊಂದಕ್ಕೆ 7,477 ಪ್ರೇಕ್ಷಕರಿಗೆ ಅವಕಾಶ ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT