ಗುರುವಾರ , ಏಪ್ರಿಲ್ 9, 2020
19 °C

ಆಸ್ಟ್ರೇಲಿಯನ್‌ ಓಪನ್‌: ನಡಾಲ್‌ಗೆ ಗೆಲುವಿನ ಸಿಹಿ, ಶರಪೋವಾಗೆ ಮುಖಭಂಗ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಮೆಲ್ಬರ್ನ್‌: ದಾಖಲೆ ಸರಿಗಟ್ಟುವ 20ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಅಗ್ರ ಶ್ರೇಯಾಂಕದ ರಫೆಲ್‌ ನಡಾಲ್‌, ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ತಮ್ಮ ಅಭಿಯಾನವನ್ನು ಮಂಗಳವಾರ ಅಮೋಘ ಗೆಲುವಿ ನೊಡನೆ ಆರಂಭಿಸಿದರು. ಆದರೆ ಮರಿಯಾ ಶರಪೋವಾ ವೃತ್ತಿ ಬದುಕಿನ ತಳಕಂಡರು. 

ನಡಾಲ್‌, ರಾಡ್‌ ಲೇವರ್‌ ಅರೇನಾದಲ್ಲಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಬೊಲಿವಿಯಾದ ಹ್ಯೂಗೊ ಡೆಲ್ಲಿಯನ್‌ ಅವರನ್ನು 6–2, 6–3, 6–0 ಯಿಂದ ಸದೆಬಡಿದರು.

‘ಇದೊಂದು ಸಕಾರಾತ್ಮಕ ಆರಂಭ. ಮೊದಲ ಸುತ್ತಿನಲ್ಲಿ ನಾವು ಬಯಸುವುದು ಗೆಲುವನ್ನಷ್ಟೇ. ನೇರ ಸೆಟ್‌ಗಳಲ್ಲಿ ಗೆದ್ದರೆ ಇನ್ನೂ ಉತ್ತಮ’ ಎಂದು ಸ್ಪೇನ್‌ನ ದೈತ್ಯ ಆಟಗಾರ ಹೇಳಿದರು. ಅವರು ಫ್ರೆಂಚ್‌ ಮತ್ತು ಅಮೆರಿಕನ್‌ ಓಪನ್‌ ಚಾಂಪಿಯನ್‌ ಆಗಿದ್ದಾರೆ.

33 ವರ್ಷದ ನಡಾಲ್‌ ಜೊತೆಗೆ ‘ಟೆನಿಸ್‌ನ ಬಿಗ್‌ ತ್ರೀ’ಯ ಇನ್ನಿಬ್ಬರಾದ ಫೆಡರರ್‌ ಮತ್ತು ಜೊಕೊವಿಚ್‌ ಈಗಾ ಗಲೇ ಎರಡನೇ ಸುತ್ತಿಗೆ ತಲುಪಿದ್ದಾರೆ. ಕಳೆದ 14 ಆಸ್ಟ್ರೇಲಿಯನ್‌ ಓಪನ್‌ ಟೂರ್ನಿಗಳಲ್ಲಿ 13ಅನ್ನು ಈ ಮೂವರು ಹಂಚಿಕೊಂಡಿದ್ದಾರೆ. 


ಚೆಂಡು ಹಿಂದಿರುಗಿಸಿದ ರಫೆಲ್‌ ನಡಾಲ್‌–ರಾಯಿಟರ್ಸ್ ಚಿತ್ರ

ಇನ್ನೊಂದೆಡೆ ಐದು ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ವಿಜೇತೆ ಆಗಿರುವ 32 ವರ್ಷದ ಶರಪೋವಾ ಅವರ ಕಥೆ ತದ್ವಿರುದ್ಧವಾಗಿತ್ತು. 19ನೇ ಶ್ರೇಯಾಂಕದ ಆಟಗಾರ್ತಿ ಡೊನ್ನಾ ವೆಕಿಕ್‌ ಮೊದಲ ಸುತ್ತಿನಲ್ಲಿ 6–3, 6–4 ರಿಂದ ಶರಪೋವಾ ಅವ ರನ್ನು ಹೊರದೂಡಿದರು. ಶರಪೋವಾ, ವೈಲ್ಡ್‌ ಕಾರ್ಡ್‌ ಮೂಲಕ ಪ್ರವೇಶ ಪಡೆದಿದ್ದರು.

ನಾಲ್ಕನೇ ಶ್ರೇಯಾಂಕದ ಸಿಮೊನಾ ಹಲೆಪ್‌ 7–6 (7–6), 6–1 ರಿಂದ ಅಮೆರಿಕದ ಜೆನಿಫರ್‌ ಬ್ರ್ಯಾಡಿ ಅವರನ್ನು ಸೋಲಿಸಿದರು.

28 ವರ್ಷದ ಹಲೆಪ್‌ ಮೊದಲ ಗೇಮ್‌ನಲ್ಲೇ ಹಿನ್ನಡೆ ಅನುಭವಿಸಿದ್ದರು. ಚೇತರಿಸಿಕೊಂಡ ಅವರು‌‌ ಸೆಟ್‌ ಸ್ಕೋರ್‌ 5–5ರಲ್ಲಿದ್ದಾಗ ರ‍್ಯಾಲಿಯ ವೇಳೆ ಬಿದ್ದುಬಿಟ್ಟರು. ಮಣಿಗಂಟಿನ ನೋವೂ ಅವರನ್ನು ಕಾಡಿತು. ಚಿಕಿತ್ಸೆ ಪಡೆದುಕೊಂಡ ರುಮೇನಿಯಾದ ಆಟಗಾರ್ತಿ ಎರಡನೇ ಸೆಟ್‌ನಲ್ಲಿ ಪ್ರಾಬಲ್ಯ ಮೆರೆದು ಒಟ್ಟು ಒಂದು ಗಂಟೆ 36 ನಿಮಿಷಗಳ ಪಂದ್ಯ ಗೆದ್ದುಕೊಂಡರು.

2018ರಲ್ಲಿ ಫ್ರೆಂಚ್‌ ಓಪನ್‌, ಕಳೆದ ವರ್ಷ ವಿಂಬಲ್ಡನ್‌ ಚಾಂಪಿಯನ್‌ ಆಗಿದ್ದ ಹಲೆಪ್‌, ಅರ್ಹತಾ ಸುತ್ತಿನಿಂದ ಬಂದ ಬ್ರಿಟನ್‌ನ ಹ್ಯಾರಿಯಟ್‌ ಡರ್ಟ್‌ ಅಥವಾ ಜಪಾನ್‌ನ ಮಿಸಾಖಿ ಡೊಯಿ ಅವರನ್ನು ಎರಡನೇ ಸುತ್ತಿನ ಪಂದ್ಯದಲ್ಲಿ ಎದುರಿಸಲಿದ್ದಾರೆ.

ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಇತರ ಪಂದ್ಯಗಳಲ್ಲಿ ನಿಕ್‌ ಕಿರ್ಗಿಯೊಸ್‌ ಅವರು ಲೊರೆಂಜೊ ಸೊನೆಗೊ ವಿರುದ್ಧ 6–2, 7–6, 7–6ರಿಂದ, ಡೇನಿಯಲ್‌ ಮೆಡ್ವೆಡೆವ್‌, ಫ್ರಾನ್ಸಿಸ್‌ ಟೈಪೊಯ್‌ ಎದುರು 6–3, 4–6, 6–4, 6–2ರಿಂದ ಗೆದ್ದರು. ಸ್ಟ್ಯಾನ್‌ ವಾವ್ರಿಂಕಾ ಅವರು ಗ್ರ್ಯಾನ್‌ಸ್ಲಾಮ್‌ನಲ್ಲಿ 200ನೇ ವಿಜಯ ಸಾಧಿಸಿದರು. ಅವರು ಬೊಸ್ನಿಯಾದ ಡ್ಯಾಮಿರ್‌ ಡಿಜುಮುರ್‌ ಎದುರು 7-5 6-7 6-4 6-4ರಿಂದ ಜಯಿಸಿದರು.

ಮಹಿಳಾ ಸಿಂಗಲ್ಸ್ ಪಂದ್ಯಗಳ ಪೈಕಿ ಗಾರ್ಬೈನ್‌ ಮುಗುರುಜಾ ಅವರು ಶೆಲ್ಬಿ ರೋಜರ್ಸ್ ವಿರುದ್ಧ 0–6, 6–1, 6–0 ರಿಂದ, ಕಜಕಸ್ತಾನದ ಜರೀನಾ ಡಿಯಾಸ್‌ ಅವರು ಅಮಂಡಾ ಅನಿಸಿಮೊವಾ ಎದುರು 6–3, 4–6, 6–3ರಿಂದ ಗೆದ್ದರು.

ಸೋಂಗಾ ನಿವೃತ್ತಿ: ಫ್ರಾನ್ಸ್‌ನ ಜೊ ವಿಲ್‌ಫ್ರೆಡ್‌ ಸೋಂಗಾ ಅವರು ಬೆನ್ನುನೋವಿನ ಕಾರಣ ಅಲೆಕ್ಸ್ ಪೊಪಿರಿನ್‌ ಎದುರಿನ ಮೊದಲ ಸುತ್ತಿನ ಪಂದ್ಯದಿಂದ ನಿವೃತ್ತಿ ಪಡೆದರು.

ಪ್ರಜ್ಞೇಶ್‌ಗೆ ಸೋಲು
ಮೆಲ್ಬರ್ನ್‌: ಭಾರತದ ಪ್ರಜ್ಞೇಶ್‌ ಗುಣೇಶ್ವರನ್‌ ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲೇ ನಿರ್ಗಮಿಸಿದರು. ಜಪಾನ್‌ನ ತಾತ್ಸುಮಾ ಇಟೊ ಅವರು ಸುಮಾರು ಎರಡು ಗಂಟೆಗಳ ಕಾಲ ನಡೆದ ಪಂದ್ಯದಲ್ಲಿ 6–4, 6–2, 7–5 ರಿಂದ ಪ್ರಜ್ಞೇಶ್‌ ಮೇಲೆ ನೇರ ಸೆಟ್‌ಗಳಲ್ಲಿ ಜಯಗಳಿಸಿದರು.

ವಿಶ್ವ ಕ್ರಮಾಂಕದಲ್ಲಿ 122ನೇ ಸ್ಥಾನದಲ್ಲಿರುವ ಪ್ರಜ್ಞೇಶ್‌ ಅರ್ಹತಾ ಸುತ್ತಿನ ಫೈನಲ್‌ನಲ್ಲಿ ಸೋಲನುಭವಿಸಿದ್ದರು. ಆದ್ದರೆ ‘ಲಕ್ಕಿ ಲೂಸರ್‌’ ಆಗಿ ಪ್ರಧಾನ ಸುತ್ತಿಗೆ ಅರ್ಹತೆ ಪಡೆದಿದ್ದರು. ತಾತ್ಸುಮಾ ಎರಡನೇ ಸುತ್ತಿನಲ್ಲಿ ವಿಶ್ವದ ಎರಡನೇ ಕ್ರಮಾಂಕದ ಆಟಗಾರ ನೊವಾಕ್‌ ಜೊಕೊವಿಚ್‌ (ಸರ್ಬಿಯಾ) ಎದುರಿಸಲಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು