ಶನಿವಾರ, ಆಗಸ್ಟ್ 13, 2022
27 °C
ಆಟದ ಮನೆ

PV Web Exclusive: ಒತ್ತಡದ ನೊಗ ಹೊತ್ತೇ ಗೆದ್ದ ನವೊಮಿ

ವಿಶಾಖ ಎನ್. Updated:

ಅಕ್ಷರ ಗಾತ್ರ : | |

Prajavani

ಈ ಸಲ ಅಮೆರಿಕ ಓಪನ್ ಟೆನಿಸ್‌ನ ಮಹಿಳೆಯರ ಸಿಂಗಲ್ಸ್‌ ಫೈನಲ್‌ನಲ್ಲಿ ಭಾರದ ಎರಡು ಮಿದುಳುಗಳು ಚಾಂಪಿಯನ್ ಆಗಲು ಆಡಿದವು. ಇಪ್ಪತ್ತೆರಡರ ಚಿಗರೆಯಂಥ ಹುಡುಗಿ ನವೊಮಿ ಗೆದ್ದಳು. ಮೂರು ವರ್ಷದ ಮಗನ ತಲೆ ನೇವರಿಸಿದ ಮೇಲೆ ಆಡಲು ಬಂದಿದ್ದ ಅಜರೆಂಕಾ ಸೋತೂ ಗೆದ್ದಳು.

---

ನ್ಯೂಯಾರ್ಕ್‌ನ ಕಣದಲ್ಲಿ ಕಳೆದ ವಾರ ಎರಡು ವಿಭಿನ್ನ ಮನಸ್ಸುಗಳು ಅಮೆರಿಕ ಓಪನ್ ಟೆನಿಸ್‌ಸಿಂಗಲ್ಸ್‌ಫೈನಲ್‌ನಲ್ಲಿ ಸೆಣೆಸಲು ಇದಿರುಬದಿರಾಗಿದ್ದವು. ಒಬ್ಬಳು– ಜಪಾನ್‌ನ ನವೊಮಿ ಒಸಾಕಾ. ವಯಸ್ಸು ಇನ್ನೂ ಇಪ್ಪತ್ತೆರಡು. ಕುದಿರಕ್ತದ ಹುಡುಗಿ. ಸಾಮಾಜಿಕ ಹೋರಾಟದ ಕಣಕ್ಕೂ ಇಳಿದಿರುವ ಅವಳು ಹೋದವರ್ಷದಿಂದಲೂ ಗೊಂದಲಕ್ಕೆ ಬಿದ್ದವಳು. ಟೆನಿಸ್‌ನಿಂದ ಒಂದು ದೊಡ್ಡ ಬ್ರೇಕ್‌ ತೆಗೆದುಕೊಳ್ಳಬೇಕು ಎಂದು ಹತಾಶೆಯಲ್ಲಿ ಹೇಳಿದ್ದ ಏಷ್ಯನ್ ಪೋರಿ. ಇನ್ನೊಬ್ಬಳು– ಬೆಲರೂಸ್‌ನ ವಿಕ್ಟೋರಿಯಾ ಅಜರೆಂಕಾ. ಬಾಯ್‌ಫ್ರೆಂಡುಗಳು, ಕೋಚ್‌ಗಳ ಬ್ರೇಕ್‌ಅಪ್‌ಗಳಿಂದ ಕಲ್ಲವಿಲಗೊಂಡ ವನಿತೆ. ಮೂರು ವರ್ಷದ ಮಗ ಲಿಯೊನನ್ನು ತನ್ನ ಸುಪರ್ದಿಗೆ ಪಡೆಯಲು ಅವಳು ನಡೆಸಿದ ಹೋರಾಟದ ಕುರಿತೇ ಪುಟಗಟ್ಟಲೆ ಬರೆಯಬಹುದು. ತಿಂಗಳುಗಳ ಕಾಲ ಸ್ಪರ್ಧಾತ್ಮಕ ಟೆನಿಸ್‌ ಆಡಲು ಸಾಧ್ಯವಾಗದೆ ಇದ್ದರೂ ಒಂದು ಕೈ ನೋಡಿಯೇಬಿಡೋಣ ಎಂದು ಮತ್ತೆ ಕಣಕ್ಕೆ ಇಳಿದಳು. 31ರ ವಯಸ್ಸಿನಲ್ಲಿ ಹೊಂಡಗಳ ರಸ್ತೆಯಂಥ ಮನಸ್ಸಿಟ್ಟುಕೊಂಡು ಗ್ರ್ಯಾನ್‌ಸ್ಲ್ಯಾಮ್‌ನಲ್ಲಿ ಆಡುವುದು ತಮಾಷೆಯೇ? ಒಂದು ವೇಳೆ ಅವಳು ಈ ಸಲ ಅಮೆರಿಕ ಓಪನ್ ಚಾಂಪಿಯನ್ ಆಗಿದ್ದಿದ್ದರೆ, ಕಿಮ್ ಕ್ಲೈಸ್ಟರ್ಸ್‌ನಂತರ ಗ್ರ್ಯಾನ್‌ಸ್ಲ್ಯಾಮ್ ಪ್ರಶಸ್ತಿ ಗೆದ್ದ ಇನ್ನೊಬ್ಬ ತಾಯಿ ಎನಿಸಿಕೊಳ್ಳುತ್ತಿದ್ದಳು. 2011ರಲ್ಲಿ ಕಿಮ್ ಕ್ಲೈಸ್ಟರ್ಸ್ ‌ಅಂಥದೊಂದು ಸಾಧನೆ ಮಾಡಿ, ಪ್ರೇಕ್ಷಕರೆದೆಗೆ ಕಿಚ್ಚು ಹಚ್ಚಿದ್ದಳು.

1–6, 6–3, 6–3ರಲ್ಲಿ ನವೊಮಿ ಅಮೆರಿಕ ಓಪನ್ ಫೈನಲ್‌ನಲ್ಲಿ ಗೆದ್ದಾಗ ನೆನಪಾದದ್ದು ಎರಡು ವರ್ಷಗಳ ಹಿಂದಿನ ಇದೇ ಹುಡುಗಿ. ಅದೂ ಸೆಪ್ಟೆಂಬರ್‌ತಿಂಗಳೇ. ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಅವಳು ಸೆರೆನಾ ವಿಲಿಯಮ್ಸ್‌ತರಹದ ಅನುಭವಿಯನ್ನು ನೇರ ಸೆಟ್‌ಗಳಿಂದ ಸೋಲಿಸಿ ನೀಲಿ ಅಂಗಳದ ಮೇಲೆ ಅಂಗಾತ ಮಲಗಿ ಇಪ್ಪತ್ತು ಸೆಕೆಂಡ್ ಆಕಾಶ ದಿಟ್ಟಿಸಿದ್ದಳು. ‘ದಿಗ್ಗಜರು ಆಡುವುದನ್ನು ನೋಡುವಾಗಲೆಲ್ಲ, ಅವರು ಗೆದ್ದಮೇಲೆ ಅಂಗಾತ ಮಲಗಿ ಆಕಾಶದಲ್ಲಿ ಅದೇನು ನೋಡುತ್ತಿದ್ದರು ಎಂದುಕೊಳ್ಳುತ್ತಿದ್ದೆ. ಗೆದ್ದ ಮರುಕ್ಷಣವೇ ಕುಸಿದಂತೆ ಬೀಳುವ ದೇಹಗಳಿಗೆ ಆಕಾಶ ಅದೇನು ಶಕ್ತಿ ಕೊಡುವುದೋ ಎಂಬ ಕುತೂಹಲವದು. ಅದಕ್ಕೇ ನಾನೂ ಮಲಗಿ, ಆಕಾಶ ನೋಡಿದೆ’ ಎಂದು ನವೊಮಿ ಆಗ ಹೇಳಿದ್ದಳು.

ಜಪಾನಿನ ಈ ಹುಡುಗಿಯ ಟೆನಿಸ್ ಬದುಕಿನ ಟೆಂಪ್ಲೇಟ್‌ಗೂ ಸೆರೆನಾ ವಿಲಿಯಮ್ಸ್‌ವೃತ್ತಿಬದುಕಿನ ಟೆಂಪ್ಲೇಟ್‌ಗೂ ಸಾಮ್ಯವಿದೆ. ಹಯಾಟಿ ದೇಶದ ಅಪ್ಪ, ಜಪಾನಿನ ಅಮ್ಮ ಇಬ್ಬರ ಕೂಸು ನವೊಮಿ. ರ‍್ಯಾಕೆಟ್ ಹಿಡಿದದ್ದು ಮೂರನೇ ವಯಸ್ಸಿನಲ್ಲಿ. ಅಮೆರಿಕದ ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್ಸ್‌ನಲ್ಲಿ ನೆಲೆಗೊಂಡರೂ ಪ್ರತಿನಿಧಿಸುವ ದೇಶ ಜಪಾನ್. ಹೀಗಾಗಿ ಅವಳು ಏಷ್ಯಾದ ಕಣ್ಮಣಿ. ವೃತ್ತಿಬದುಕಿನಲ್ಲಿ ಇದುವರೆಗೆ ಆಡಿರುವ 222 ಟೆನಿಸ್ ಪಂದ್ಯಗಳಲ್ಲಿ 133ರಲ್ಲಿ ಗೆದ್ದಿದ್ದಾಳೆ. ಅವಳು ದಾಳಿಕೋರ ಆಟಗಾರ್ತಿ. ಪ್ರತಿ ಗಂಟೆಗೆ 200 ಕಿ.ಮೀ. ವೇಗದಲ್ಲಿ ಸರ್ವ್ ಮಾಡಬಲ್ಲಳು. ಈ ವರ್ಷ ಅತಿ ಹೆಚ್ಚು ಸಂಪಾದನೆ ಮಾಡಿರುವ ಜಗತ್ತಿನ ಅಥ್ಲೀಟ್‌ಗಳಲ್ಲಿ ಅವಳು 29ನೆಯವಳು.

ನವೊಮಿ ಅಪ್ಪ ಲಿಯೊನಾರ್ಡ್ ಫ್ರಾಂಕೋಯಿಸ್‌ 1999ರಲ್ಲಿ ಫ್ರೆಂಚ್ ಓಪನ್ ನೋಡುವಾಗ ವಿಲಿಯಮ್ಸ್‌ ಸಹೋದರಿಯರತ್ತ ಕಣ್ಣು ಕೀಲಿಸಿದ್ದರು. ಅವರಿಗೂ ಇಬ್ಬರು ಹೆಣ್ಣುಮಕ್ಕಳು. ದೊಡ್ಡವಳು ಮೇರಿ. ಚಿಕ್ಕವಳು ನವೊಮಿ. ರಿಚರ್ಡ್ ವಿಲಿಯಮ್ಸ್‌ಖುದ್ದು ಟೆನಿಸ್ ಆಡಿಲ್ಲದೇ ಇದ್ದರೂ ಅದು ಹೇಗೆ ವೀನಸ್–ಸೆರೆನಾ ಇಬ್ಬರನ್ನೂ ಟೆನಿಸ್ ಆಟಗಾರ್ತಿಯರನ್ನಾಗಿ ಬೆಳೆಸಿದ ಎನ್ನುವುದರ ಕುರಿತು ಲಿಯೊನಾರ್ಡ್ ಅಧ್ಯಯನ ನಡೆಸಿದರು. ತಮ್ಮ ಮಕ್ಕಳಿಗೂ ಆ ಅಪ್ಪ ಕೊಟ್ಟಂತೆಯೇ ತರಬೇತಿ ನೀಡಬೇಕೆಂದು ನೀಲನಕ್ಷೆ ತಯಾರಿಸಿದರು. ಮೇರಿ ಕೂಡ ವೃತ್ತಿಪರ ಆಟಗಾರ್ತಿಯೇ. ಆದರೆ, ನವೊಮಿ ಇನ್ನೂ ಒಂದು ಹೆಜ್ಜೆ ಮುಂದೆ. ಅವಳಿಗೆ ಎಂಟು ತುಂಬಿದ ಹೊತ್ತಿಗೆ ಅಮೆರಿಕದ ಫ್ಲಾರಿಡಾಗೆ ಸ್ಥಳಾಂತರಗೊಂಡಿದ್ದು ಟೆನಿಸ್ ತರಬೇತಿಯನ್ನು ಇನ್ನಷ್ಟು ಶಿಷ್ಟಗೊಳಿಸಲೆಂದೇ. ಐಎಸ್‌ಪಿ ಅಕಾಡೆಮಿಯಲ್ಲಿ ಪ್ಯಾಟ್ರಿಕ್ ಟಾಮಾ ಗರಡಿಯಲ್ಲಿ 15ನೇ ವಯಸ್ಸಿನ ಹೊತ್ತಿಗೆ ಪಳಗಿದ ನವೊಮಿ, 2014ರಲ್ಲಿ ಹೆರಾಲ್ಡ್‌ಸಾಲೊಮನ್ ಟೆನಿಸ್ ಅಕಾಡೆಮಿಯತ್ತ ನಡೆದಳು. ಅಲ್ಲಿಂದ ಪ್ರೊವರ್ಲ್ಡ್‌ಟೆನಿಸ್‌ ಅಕಾಡೆಮಿಯತ್ತ ಪಯಣ.

ಜಪಾನ್‌ನಲ್ಲಿ ಕುಟುಂಬದ ಸದಸ್ಯರೆಲ್ಲ ಹೆಸರನ್ನು ನೋಂದಾಯಿಸುವಾಗ ಅಲ್ಲಿನ ಸಂಸ್ಕೃತಿ, ಸ್ಥಳ ಬಿಂಬಿಸುವ ಒಂದು ಪದ ಇರಲೇಬೇಕೆಂಬ ನಿಯಮವಿದೆ. ಅದಕ್ಕೇ ನವೊಮಿ ತನ್ನ ಹೆಸರಿನ ಪಕ್ಕ ಒಸಾಕ ಎನ್ನುವುದನ್ನು ಸೇರಿಸಿಕೊಂಡದ್ದು. ಅವಳ ಅಪ್ಪ–ಅಮ್ಮ ಇಬ್ಬರೂ ಮಗಳು ಜಪಾನ್ ದೇಶವನ್ನೇ ಟೆನಿಸ್‌ನಲ್ಲಿ ಪ್ರತಿನಿಧಿಸಲಿ ಎಂದದ್ದಕ್ಕೂ ಅಮೆರಿಕ ದೇಶದ ಟೆನಿಸ್‌ ಸಂಸ್ಥೆಯು ಬೇರೆ ದೇಶದ ಅಸ್ಮಿತೆಯವರನ್ನು ವಾರೆಗಣ್ಣಿನಿಂದ ನೋಡುತ್ತಿದ್ದುದಕ್ಕೂ ಸಂಬಂಧವಿತ್ತೆನ್ನಿ. ನವೊಮಿಯ ಸರ್ವ್‌ಗಳ ವೇಗ ನೋಡಿ, ಅವಳ ಹದಿನಾರರ ಹರೆಯದಲ್ಲಿ ತಮ್ಮ ದೇಶಕ್ಕೇ ಆಡುವಂತೆ ಅಮೆರಿಕದ ಟೆನಿಸ್ ಸಂಸ್ಥೆ ಆಹ್ವಾನಿಸಿದ್ದು ಕೂಡ ವಿಶೇಷವೇ. ಆದರೆ, ಅವಳು ನಯವಾಗಿ ಅದನ್ನು ನಿರಾಕರಿಸಿದಳು.


ಅಜರೆಂಕಾ

2014ರಲ್ಲಿ ಡಬ್ಲ್ಯುಟಿಎ ಟೂರ್ ಪದಾರ್ಪಣೆ ಋತುವಿನಲ್ಲೇ ಅಮೆರಿಕ ಓಪನ್ ಮಾಜಿ ಚಾಂಪಿಯನ್ ಸಮಾಂತಾ ಸ್ಟೊಸುರ್ ಅವರನ್ನು ಮಣಿಸುವ ಮೂಲಕ ನವೊಮಿ ತನ್ನ ಆಟದ ಲಯ ಕಂಡುಕೊಂಡಳು. ಆಗ ಅವಳ ಭವಿಷ್ಯದ ಬಗೆಗೆ ಅನೇಕ ಬರವಣಿಗೆಗಳು ಪ್ರಕಟವಾದವು. 2018ರಲ್ಲಿ ಅಮೆರಿಕ ಓಪನ್ ಗೆದ್ದು ಆಕಾಶ ದಿಟ್ಟಿಸಿದ ಮೇಲೆ 2019ರಲ್ಲಿ ಆಸ್ಟ್ರೇಲಿಯಾ ಓಪನ್ ಗೆದ್ದಳು. ರ‍್ಯಾಂಕಿಂಗ್‌ನಲ್ಲಿ ನಂಬರ್ ಒನ್ ಸ್ಥಾನಕ್ಕೇರಿದ ಶುಭಗಳಿಗೆ ಅದು.

ಇಪ್ಪತ್ತು ಇಪ್ಪತ್ತೊಂದರ ಹುಡುಗಿಗೆ ಜನಪ್ರಿಯತೆಯನ್ನು ನಿಭಾಯಿಸುವುದು ಕಷ್ಟವಾಯಿತು. ಆಸ್ಟ್ರೇಲಿಯಾ ಓಪನ್ ಗೆದ್ದ ಕೆಲವೇ ದಿನಗಳಲ್ಲಿ ತನ್ನ ತರಬೇತುದಾರ ಸಾಶಾ ಬಾಜಿನ್‌ಅವರಿಗೆ ಟ್ವೀಟ್‌ ಮೂಲಕವೇ, ‘ಇನ್ನು ನನಗೆ ನಿಮ್ಮ ತರಬೇತಿಯ ಅವಶ್ಯಕತೆ ಇಲ್ಲ’ ಎನ್ನುವ ಧಾಟಿಯಲ್ಲಿ ಬರೆದ ನವೊಮಿ, ಆಮೇಲೆ ತಡಕಾಡತೊಡಗಿದಳು. ಹೋದವರ್ಷ ಅಮೆರಿಕ ಓಪನ್‌ನಲ್ಲಿ ನಾಲ್ಕನೇ ಸುತ್ತಿನಲ್ಲೇ ಬೆಲಿಂಡಾ ಬನ್ಸಿಕ್ ಎದುರು ಸೋತಳು. ಈ ವರ್ಷ ಜನವರಿಯಲ್ಲಿ ಆಸ್ಟ್ರೇಲಿಯಾ ಓಪನ್‌ನಲ್ಲಿ ಕೊಕೊ ಗಾಫ್ ಎದುರು ತಪ್ಪುಗಳ ಮೇಲೆ ತಪ್ಪುಗಳನ್ನು ಮಾಡಿ ಬಸವಳಿದಳು. ಅಲ್ಲಿಂದಾಚೆಗೆ ಕೊರೊನಾ ಸೋಂಕು ಆವರಿಸತೊಡಗಿದ್ದೇ ವೃತ್ತಿಪರ ಆಟಕ್ಕೆ ಅಲ್ಪವಿರಾಮ.

ಆಟದಂಗಣದ ಹೊರಗೂ ನವೊಮಿ ಚುರುಕು. ತಿಂಗಳುಗಳ ಹಿಂದೆ ಸಾಮಾಜಿಕ ನ್ಯಾಯಕ್ಕಾಗಿ ಆಗ್ರಹಿಸಿ ಮಿನಿಯಾಪೊಲಿಸ್‌ನಲ್ಲಿ ನಡೆದ ಜಾಥಾದಲ್ಲಿ ಅವಳೂ ಸೇರಿಕೊಂಡಿದ್ದಳು. ಹೋದವರ್ಷ ಮಾಡಿದ ತಪ್ಪುಗಳಿಂದ ತಿದ್ದಿಕೊಳ್ಳಲೇಬೇಕು ಎಂದು ಸಂಕಲ್ಪ ಮಾಡಿ, ಹೊಸ ಕೋಚ್ ವಿಮ್ ಫಿಸೆಟ್ ಹೇಳಿಕೊಟ್ಟ ಪಾಠಗಳಿಗೆ ಗಮನಕೊಟ್ಟಳು. ಅಮೆರಿಕ ಓಪನ್ ‌ಪ್ರಾರಂಭವಾಗುವ ಒಂದು ವಾರ ಮೊದಲು ಅವಳು ವೆಸ್ಟರ್ನ್ ಅಂಡ್ ಸದರ್ನ್ ಓಪನ್‌ಸೆಮಿಫೈನಲ್ ಪಂದ್ಯದಲ್ಲಿ ಆಡುವುದಿಲ್ಲ ಎಂದಳು. ಬಾಸ್ಕೆಟ್‌ಬಾಲ್, ಬೇಸ್‌ಬಾಲ್ ಹಾಗೂ ಫುಟ್‌ಬಾಲ್ ಆಟಗಾರರು ವ್ಯವಸ್ಥೆಯ ವರ್ಣಭೇದ ನೀತಿ ಹಾಗೂ ಪೊಲೀಸ್ ಹಿಂಸಾಚಾರವನ್ನು ವಿರೋಧಿಸಿ ನಡೆಸುತ್ತಿದ್ದ ಪ್ರತಿಭಟನೆಗೆ ಬೆಂಬಲ ಸೂಚಿಸಿ ಈ ನಿರ್ಧಾರವನ್ನು ಅವಳು ತೆಗೆದುಕೊಂಡಿದ್ದು ಎಷ್ಟೋ ಆಟಗಾರರ ಹುಬ್ಬೇರಿಸಿತ್ತು.

ಅಮೆರಿಕ ಓಪನ್ ಫೈನಲ್ ‍ಪಂದ್ಯ ಆಡಲು ಅವಳು ಕಣಕ್ಕೆ ಇಳಿದಾಗ ಮಾಸ್ಕ್‌ ಒಂದನ್ನು ಹಾಕಿಕೊಂಡಿದ್ದಳು. ಅದರ ಮೇಲೆ ‘ತಮೀರ್ ರೈಸ್’ ಎಂಬ ಹೆಸರು ಬರೆಯಲಾಗಿತ್ತು. 2014ರಲ್ಲಿ ಬಿಳಿ ಪೊಲೀಸ್ ಒಬ್ಬನ ಗುಂಡಿಗೆ ಬಲಿಯಾಗಿದ್ದ 12 ವರ್ಷದ ಹುಡುಗ ತಮೀರ್. ಈ ಸಲ ತಾನು ಆಡಿದ ಪ್ರತಿ ಪಂದ್ಯಕ್ಕೆ ತೊಟ್ಟ ಮಾಸ್ಕ್‌ಗಳ ಮೇಲೆ ನವೊಮಿ ಹೀಗೆ ಒಬ್ಬೊಬ್ಬ ಸಂತ್ರಸ್ತ ಅಥವಾ ಮೃತನ ಹೆಸರು ಹಾಕಿಸಿಕೊಂಡು ಬಂದಳು. ‘ಜನ ಅದನ್ನು ನೋಡಿಯಾದರೂ ಮಾತನಾಡಲು ಪ್ರಾರಂಭಿಸಲಿ’ ಎನ್ನುವುದು ಅವಳ ಉದ್ದೇಶ.

ಕಳೆದ ವರ್ಷ ಫಾರ್ಮ್ ಕಳೆದುಕೊಂಡು ಪಂದ್ಯವೊಂದರಲ್ಲಿ 50 ಸ್ವಯಂಕೃತ ಪ್ರಮಾದಗಳನ್ನು ಮಾಡಿದ್ದ ನವೊಮಿ, ಸುದ್ದಿಮಿತ್ರರ ಪ್ರಶ್ನೆಗಳನ್ನು ಎದುರಿಸಲೂ ಹೆಣಗಾಡಿದ್ದರು. ‘ನಾನು ಇಲ್ಲಿಂದ ಹೊರಡುವೆ’ ಎಂದು ಆಯೋಜಕರತ್ತ ನೋಡಿದ್ದಳು. ‘ಉತ್ತರ ಕೊಡಲಾರೆ. ನನಗೆ ಅಳು ಬರುತ್ತಿದೆ’ ಎಂದು ಸುದ್ದಿಗಾರರಲ್ಲಿ ಪ್ರಶ್ನೆಗಳನ್ನು ಇನ್ನಷ್ಟು ಹೆಚ್ಚಿಸಿದ್ದಳು. ಆಗ ಅನೇಕ ಹಳೆಯ ಆಟಗಾರರು, ವಿಶ್ಲೇಷಕರು, ‘ತಲೆ ಮೇಲಿನ ಕಿರೀಟವೇ ಭಾರ. ಅದನ್ನು ಹೊರಲಾಗದ ಅವಳ ಮಿದುಳೂ ಭಾರವಾಗಿದೆ’ ಎಂದು ಟೀಕಿಸಿದ್ದರು. ಇನ್ನು ಕೆಲವರು, ‘ಪುಟ್ಟ ಹುಡುಗಿ, ಮುಂದೆ ಸುಧಾರಿಸಿಕೊಳ್ಳುತ್ತಾಳೆ’ ಎಂದು ಸಮಾಧಾನದ ಮಾತನ್ನಾಡಿದ್ದರು.

ಅಜರೆಂಕಾ ಎದುರು ನವೊಮಿ ಮೊದಲ ಸೆಟ್‌ನಲ್ಲಿ ಅವೇ ಪ್ರಮಾದಗಳನ್ನು ಮುಂದುವರಿಸಿದಳು. ಆ ಸೆಟ್‌ ಸೋತ ಮೇಲೆ ಮಾನಸಿಕವಾಗಿ ಧಿಗ್ಗನೆದ್ದಳು; 1994ರಲ್ಲಿ ಅರೆಂಕಾ ಸ್ಯಾಂಚೆಜ್ ವಿಕಾರಿಯೊ ಅಮೆರಿಕ ಓಪನ್ ಟೆನಿಸ್ ಪಂದ್ಯದ ಫೈನಲ್ಸ್‌ನಲ್ಲಿ ಮೊದಲ ಸೆಟ್‌ಸೋತರೂ ಎದುರಾಳಿ ಸ್ಟೆಫಿ ಗ್ರಾಫ್ ಅವರನ್ನು ಸೋಲಿಸಿದ್ದರು. ಅದು ಈಗ ನೆನಪಾಯಿತು. ಇಪ್ಪತ್ತಾರು ವರ್ಷಗಳಾದ ಮೇಲೆ ಅಂಥದ್ದೇ ಇನ್ನೊಂದು ಹೋರಾಟ ಅಮೆರಿಕ ಓಪನ್‌ನಲ್ಲಿ ಕಂಡದ್ದು ಈಗಲೇ.

ಅಜರೆಂಕಾ 2012–13ರಲ್ಲಿ 51 ವಾರ ನಂಬರ್ ಒನ್ ಆಟಗಾರ್ತಿಯಾಗಿದ್ದವಳು. ಅವಳ ತಲೆಯ ಮೇಲೀಗ ಕಿರೀಟ ಇಲ್ಲದಿದ್ದರೂ ಮಗನನ್ನು ತನ್ನ ಸುಪರ್ದಿಗೆ ಪಡೆದುಕೊಳ್ಳಲು ನಡೆಸಿದ ಹೆಣಗಾಟದ ಭಾರವಿತ್ತು. ಬಾಡಿಗೆಗೆ ಮನೆಯೊಂದನ್ನು ಹಿಡಿದು, ಬಿಲ್ಲೀ ಜೀನ್ ಕಿಂಗ್ ನ್ಯಾಷನಲ್ ಟೆನಿಸ್‌ಸೆಂಟರ್‌ನಲ್ಲಿ ಅಭ್ಯಾಸ ಮಾಡಿ, ಬೆವರಿಳಿಸಿ ಕೊನೆಯ ಹಂತದವರೆಗೆ ಬಂದದ್ದೂ ಸಾಧನೆಯೇ. ಅವಳ ಸೋಲು, ನವೊಮಿ ಗೆಲುವು ಎರಡಕ್ಕೂ ಈಗ ಬೇರೆಯದೇ ಅರ್ಥವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು