ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀಕ್ವಾರ್ಟರ್‌ಗೆ ಜ್ವೆರೆವ್‌; ಬೆರೆಟಿನಿಗೆ ಪ್ರಯಾಸದ ಜಯ

ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿ: ವಿಕ್ಟೋರಿಯಾ ಅಜರೆಂಕಾ ಜಯಭೇರಿ
Last Updated 21 ಜನವರಿ 2022, 17:28 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಅಮೋಘ ಆಟವಾಡಿದ ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಆಟಗಾರ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್‌ ಆಸ್ಟ್ರೇಲಿಯಾ ಓಪನ್ ಟೆನಿಸ್‌ ಟೂರ್ನಿಯ 16ರ ಘಟ್ಟಕ್ಕೆ ಪ್ರವೇಶಿಸಿದರು. ಇಟಲಿಯ ಮಟಿಯೊ ಬೆರೆಟಿನಿ ಪ್ರಯಾಸದ ಜಯ ಸಾಧಿಸಿ ಮುನ್ನಡೆದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿರುವ ಜ್ವೆರೆವ್‌, ಜಾನ್‌ ಕೇನ್ ಅರೆನಾದಲ್ಲಿ ನಡೆದ ಪುರುಷರ ಸಿಂಗಲ್ಸ್ ಮೂರನೇ ಸುತ್ತಿನ ಹಣಾಹಣಿಯಲ್ಲಿ6-3, 6-4, 6-4ರಿಂದ ಮೊಲ್ದೊವಾದ ರಾಡು ಅಲ್ಬೊಟ್‌ ಅವರನ್ನು ಪರಾಭವಗೊಳಿಸಿದರು. ಬಿರುಬಿಸಿಲಿನ ನಡುವೆ ಈ ಪಂದ್ಯವು ಒಂದು ತಾಸು 57 ನಿಮಿಷಗಳ ಕಾಲ ನಡೆಯಿತು.

ವಿಶ್ವ ಕ್ರಮಾಂಕದಲ್ಲಿ 124ನೇ ಸ್ಥಾನದಲ್ಲಿರುವ ಅಲ್ಬೊಟ್‌ ಅವರ ಸರ್ವ್‌ಅನ್ನು ಜ್ವೆರೆವ್‌ ಮೂರು ಬಾರಿ ಮುರಿದರು. ತಮ್ಮದೇ ಸರ್ವ್‌ನಲ್ಲಿ ಮೂರು ಬ್ರೇಕ್ ಪಾಯಿಂಟ್ಸ್ ಉಳಿಸಿಕೊಂಡರು. ಮೊಲ್ದೊವಾ ಆಟಗಾರ 30 ಸ್ವಯಂ ತಪ್ಪುಗಳನ್ನು ಎಸಗಿದರು.

ಜ್ವೆರೆವ್ ಅವರಿಗೆ ಮುಂದಿನ ಪಂದ್ಯದಲ್ಲಿ 14ನೇ ಶ್ರೇಯಾಂಕದ ಆಟಗಾರ, ಕೆನಡಾದ ಡೆನಿಸ್ ಶಪೊವಲೊವ್ ಎದುರಾಗುವರು. ಇಲ್ಲಿ ಗೆದ್ದರೆ ಜರ್ಮನಿ ಆಟಗಾರನಿಗೆ ಕ್ವಾರ್ಟರ್‌ಫೈನಲ್‌ನಲ್ಲಿ 20 ಬಾರಿಯ ಗ್ರ್ಯಾನ್‌ಸ್ಲಾಮ್ ವಿಜೇತ ರಫೆಲ್ ನಡಾಲ್ ಸವಾಲು ಎದುರಾಗುವ ಸಾಧ್ಯತೆಯಿದೆ.

ಮೂರನೇ ಸುತ್ತಿನ ಇನ್ನೊಂದು ಹಣಾಹಣಿಯಲ್ಲಿ ಏಳನೇ ಶ್ರೇಯಾಂಕದ ಇಟಲಿಯ ಮಟಿಯೊ ಬೆರೆಟಿನಿ6-2, 7-6 (7/3), 4-6, 2-6, 7-6 (10/5)ರಿಂದ ಸ್ಪೇನ್‌ನ ಕಾರ್ಲೊಸ್ ಅಲ್ಕರಾಜ್‌ ಸವಾಲು ಮೀರಿದರು. ಸ್ಪೇನ್‌ನ 18 ವರ್ಷದ ಆಟಗಾರನನ್ನು ಮಣಿಸಲು ಬೆರೆಟಿನಿ ಭಾರಿ ಬೆವರು ಸುರಿಸಬೇಕಾಯಿತು.

ಪುರುಷರ ಸಿಂಗಲ್ಸ್ ವಿಭಾಗದ ಮೂರನೇ ಸುತ್ತಿನ ಇನ್ನುಳಿದ ಪಂದ್ಯಗಳಲ್ಲಿ, ಫ್ರಾನ್ಸ್‌ನ ಗೇಲ್‌ ಮೊಂಫಿಲ್ಸ್7-6 (7/4), 6-1, 6-3ರಿಂದ ಚಿಲಿಯ ಕ್ರಿಸ್ಟಿಯನ್ ಗರಿನ್ ಎದುರು, ಸರ್ಬಿಯಾದ ಮಿಯೊಮಿರ್ ಕೆಸ್ಮೊನೊವಿಚ್‌6-4, 6-7 (8/10), 6-2, 7-5ರಿಂದ ಇಟಲಿಯ ಲೊರೆಂಜೊ ಸೊನೆಗೊ ಎದುರು, ಸ್ಪೇನ್‌ನ ಪ್ಯಾಬ್ಲೊ ಕರೆನೊ ಬುಸ್ಟಾ6-4, 7-5, 6-7 (6/8), 6-3ರಿಂದ ಅಮೆರಿಕದ ಸೆಬಾಸ್ಟಿಯನ್ ಕೊರ್ಡಾ ವಿರುದ್ಧ, ಕೆನಡಾದ ಡೆನಿಸ್ ಶಪವಲೊವ್‌7-6 (7/4), 4-6, 6-3, 6-4ರಿಂದ ಅಮೆರಿಕದ ರೇಲಿ ಒಪೆಲ್ಕಾ ವಿರುದ್ಧ ಗೆಲುವು ಸಾಧಿಸಿದರು.

ಸ್ವಿಟೊಲಿನಾಗೆ ಆಘಾತ ನೀಡಿದ ಅಜರೆಂಕಾ: ಎರಡು ಬಾರಿಯ ಚಾಂಪಿಯನ್, ಬೆಲಾರಸ್‌ನ ವಿಕ್ಟೊರಿಯಾ ಅಜರೆಂಕಾ6-0, 6-2ರಿಂದ ಉಕ್ರೇನ್‌ನ ಎಲಿನಾ ಸ್ವಿಟೊಲಿನಾ ಅವರನ್ನು ಮಣಿಸಿ ಪ್ರೀಕ್ವಾರ್ಟರ್‌ ತಲುಪಿದರು. ಮುಂದಿನ ಸುತ್ತಿನಲ್ಲಿ ಅವರಿಗೆ ಫ್ರೆಂಚ್‌ ಓಪನ್ ಚಾಂಪಿಯನ್‌ ಬಾರ್ಬೊರಾ ಕ್ರೇಸಿಕೊವಾ ಸವಾಲು ಎದುರಾಗಿದೆ.

ಮಹಿಳಾ ಸಿಂಗಲ್ಸ್‌ನ ಮೂರನೇ ಸುತ್ತಿನ ಇನ್ನುಳಿದ ಪಂದ್ಯಗಳಲ್ಲಿ ಜೆಕ್‌ ಗಣರಾಜ್ಯದ ಬಾರ್ಬೊರಾ ಕ್ರೇಸಿಕೊವಾ2-6, 6-4, 6-4ರಿಂದ ಲಾತ್ವಿಯಾದ ಎಲೆನಾ ಒಸ್ತಾಪೆಂಕೊ ಎದುರು, ಗ್ರೀಸ್‌ನ ಮರಿಯಾ ಸಕರಿ6-4, 6-1ರಿಂದ ರಷ್ಯಾದ ವೆರೋನಿಕಾ ಕುದರ್ಮೆಟೊವಾ ಎದುರು, ಅಮೆರಿಕದ ಮ್ಯಾಡಿಸನ್‌ ಕೀಸ್‌ 4-6, 6-3, 7-6ರಿಂದ ಚೀನಾದ ಕಿಯಾಂಗ್ ವಾಂಗ್ ಎದುರು ಜಯಿಸಿ 16ರ ಘಟ್ಟ ಪ್ರವೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT