‘ನಡೆದರೆ ವಾಕಿಂಗು ಸ್ಟಡಿ ಆಗಿರಬೇಕು, ಕುಡಿದರೆ ವಾಸನೆ ಕಡಿಮೆ ಬರಬೇಕು...’ ಯೋಗರಾಜ್ ಭಟ್ರು ಬರೆದಿರೋ ಹಾಡನ್ನ ಹೇಳ್ಕೊಂಡ್ ಮನೆಯೊಳಗೆ ಹೋದೆ.
‘ಮತ್ತೆ ಕುಡ್ಕೊಂಡು ಬಂದ್ರೇನ್ರೀ.. ನನ್ ಮರ್ಯಾದೆ ತೆಗೆಯೋಕೆ ಇದೀರಿ’ ಹೆಂಡ್ತಿ ಬೈಯತೊಡಗಿದಳು.
‘ಟೀಚರ್ ಆದ ನಿನಗೆ ಸೊಸೈಟೀಲಿ ಎಷ್ಟ್ ರೆಸ್ಪೆಕ್ಟ್ ಇದೆಯೋ, ನನಗೂ ಅಷ್ಟೇ ಗೌರವ ಇದೆ ಗೊತ್ತಾ...’ ತೂರಾಡುತ್ತಲೇ ಹೇಳಿದೆ.
‘ಪಾಠ ಹೇಳೋರಿಗಿಂತ, ಕುಡಿಯೋರಿಗೇ ಮರ್ಯಾದೆ ಜಾಸ್ತಿ ಇರುತ್ತಾ?’ ಸಿಟ್ಟಲ್ಲೇ ಕೇಳಿದಳು ಹೆಂಡ್ತಿ.
‘ಹೂಂ ಮತ್ತೆ. ಉದಾಹರಣೆ ಸಮೇತ ಹೇಳ್ತೀನಿ ಕೇಳು. ನೀನು ಪ್ರೈವೇಟ್ ಸ್ಕೂಲ್ ಟೀಚರ್ ಅಲ್ವಾ? ನಿಮ್ ಸ್ಕೂಲ್ನಲ್ಲಿ ಎಷ್ಟು ಜನ ಸ್ಟೂಡೆಂಟ್ಸ್ಗೆ ಒಬ್ಬರು ಟೀಚರ್ ಇದೀರಿ?’
‘80 ಜನ ವಿದ್ಯಾರ್ಥಿಗಳಿಗೆ ಒಬ್ಬರಿದೀವಿ’.
‘ಯಾವತ್ತಾದರೂ ಸರ್ಕಾರ 1:30 ಅನುಪಾತದಂತೆ ಶಿಕ್ಷಕರನ್ನ ನೇಮಕ ಮಾಡಿದಿಯಾ?’
‘ಇಲ್ಲವೇ ಇಲ್ಲ’.
‘ಈಗೊಂದು ಕೆಲಸ ಮಾಡೋಣ. ನಾನು ಬಾರ್ ಓಪನ್ ಮಾಡೋಕೆ ಲೈಸೆನ್ಸ್ಗೆ ಅಪ್ಲೈ ಮಾಡ್ತೀನಿ. ನೀನು ಸ್ಕೂಲ್ ಓಪನ್ ಮಾಡೋಕೆ ಪರ್ಮಿಷನ್ಗಾಗಿ ಅರ್ಜಿ ಹಾಕು ನೋಡೋಣ’ ಎಂದು ಸವಾಲು ಹಾಕಿದೆ.
15 ದಿನದಲ್ಲೇ ಬಾರ್ಗೆ ಲೈಸನ್ಸ್ ಸಿಕ್ಕಿತು. ಅದೂ ನಮ್ಮೂರಲ್ಲಿರೋ ಜನಸಂಖ್ಯೆಗೆ ಅನುಗುಣವಾಗಿ! ಆದರೆ, ಹೆಂಡ್ತಿಯ ಅರ್ಜಿ ಇನ್ನೂ ಪರಿಗಣನೆಗೂ ಹೋಗಿರಲಿಲ್ಲ.
‘ಏನ್ರೀ ಇದು, ಕಾವೇರಿ ನೀರಿಗಿಂತಲೂ ಸುಲಭವಾಗಿ ನಿಮಗೆ ಎಣ್ಣೆ ಸಿಗೋ ಹಾಗಾಯ್ತಲ್ಲ’ ಅಚ್ಚರಿಯಿಂದ ಹೇಳಿದಳು ಹೆಂಡ್ತಿ.
‘ಅದಕ್ಕೇ ಟೀಚರಮ್ಮ ಹೇಳೋದು, ಈಗ ಅತ್ಯಂತ ಪ್ರಭಾವಶಾಲಿಗಳೆಂದರೆ ಎಣ್ಣೆ ಹಾಕೋರೇ ಅಂತ’ ನಕ್ಕೆ.
ಭಟ್ರು ಬರೆದ ಅದೇ ಹಾಡಿನ ಮೊದಲ ಸಾಲು ಹೇಳುತ್ತಾ ಒಳಹೋದಳು ಟೀಚರಮ್ಮ, ‘ಹಾಲು ಕುಡಿದ ಮಕ್ಕಳೇ ಬದುಕಲ್ಲ, ಇನ್ನು ಎಣ್ಣೆ ಹೊಡದೋವ್ ಉಳೀತಾವ, ಅಂಥ ದೇವದಾಸೇ ಉಳೀಲಿಲ್ಲ, ಇನ್ನು ಬಾರ್ ಓನರ್ ಉಳೀತಾನ...’
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.