ಶನಿವಾರ, ಏಪ್ರಿಲ್ 4, 2020
19 °C

ಟೆನಿಸ್‌: ಕ್ವಾರ್ಟರ್‌ಗೆ ನಡಾಲ್‌

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಲಾಸ್‌ ಏಂಜಲಿಸ್‌ : ಸ್ಪೇನ್‌ನ ರಫೆಲ್‌ ನಡಾಲ್‌ ಅವರು ಎಟಿಪಿ ಮೆಕ್ಸಿಕೊ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಬುಧವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಹದಿನಾರರ ಘಟ್ಟದ ಹಣಾಹಣಿಯಲ್ಲಿ ನಡಾಲ್‌ 6–2, 7–5 ನೇರ ಸೆಟ್‌ಗಳಿಂದ ಸರ್ಬಿಯಾದ ಮಿಯೊಮಿರ್‌ ಕೆಕಮನೋವಿಚ್‌ ಅವರನ್ನು ಸೋಲಿಸಿದರು. ಇದರೊಂದಿಗೆ ಮಿಯೊಮಿರ್‌ ವಿರುದ್ಧದ ಗೆಲುವಿನ ದಾಖಲೆಯನ್ನು 17–2ಕ್ಕೆ ಹೆಚ್ಚಿಸಿಕೊಂಡರು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ನಡಾಲ್‌, ಈ ಪಂದ್ಯದಲ್ಲಿ ಒಟ್ಟು 20 ವಿನ್ನರ್‌ಗಳನ್ನು ಸಿಡಿಸಿದರು. ಮೊದಲ ಸೆಟ್‌ನಲ್ಲಿ ಗರ್ಜಿಸಿದ ಸ್ಪೇನ್‌ನ ಆಟಗಾರ ಎದುರಾಳಿಯ ಸರ್ವ್‌ಗಳನ್ನು ಮುರಿದು 5–0 ಮುನ್ನಡೆ ಪಡೆದರು. ಈ ಹಂತದಲ್ಲಿ ಸರ್ಬಿಯಾದ ಆಟಗಾರ ಅಲ್ಪ ಪ್ರತಿರೋಧ ಒಡ್ಡಿದರು. ಬಳಿಕ ನಡಾಲ್‌ ಮತ್ತೆ ಮಿಂಚಿದರು.

ಎರಡನೇ ಸೆಟ್‌ನಲ್ಲೂ ನಡಾಲ್‌ 5–3 ಮುನ್ನಡೆ ಗಳಿಸಿದ್ದರು. ಒಂಬತ್ತನೇ ಗೇಮ್‌ನಲ್ಲಿ ಎದುರಾಳಿಯ ಸರ್ವ್‌ ಮುರಿದ 20 ವರ್ಷ ವಯಸ್ಸಿನ ಮಿಯೊಮಿರ್‌, ಮರು ಗೇಮ್‌ನಲ್ಲಿ ಸರ್ವ್‌ ಉಳಿಸಿಕೊಂಡು 5–5 ಸಮಬಲ ಸಾಧಿಸಿದರು. ನಂತರ ನಡಾಲ್‌ ಆಕ್ರಮಣಕಾರಿಯಾಗಿ ಆಡಿ ಎದುರಾಳಿಯ ಸವಾಲು ಮೀರಿದರು.

ಮುಂದಿನ ಸುತ್ತಿನಲ್ಲಿ ನಡಾಲ್‌, ದಕ್ಷಿಣ ಕೊರಿಯಾದ ಕ್ವೊನ್‌ ಸೂನ್‌ ವೂ ವಿರುದ್ಧ ಸೆಣಸಲಿದ್ದಾರೆ.

ಮತ್ತೊಂದು ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಸೂನ್‌ ವೂ 7–6, 6–0ರಲ್ಲಿ ಎಂಟನೇ ಶ್ರೇಯಾಂಕದ ಆಟಗಾರ ದುಸಾನ್‌ ಲಾಜೊವಿಚ್‌ಗೆ ಆಘಾತ ನೀಡಿದರು.

ಮೂರನೇ ಶ್ರೇಯಾಂಕದ ಆಟಗಾರ ಸ್ಟಾನಿಸ್ಲಾಸ್‌ ವಾವ್ರಿಂಕ, ಗ್ರಿಗರ್‌ ಡಿಮಿಟ್ರೊವ್‌, ಟೇಲರ್‌ ಫ್ರಿಟ್ಜ್‌, ಕೈಲ್‌ ಎಡ್ಮಂಡ್‌, ಜಾನ್‌ ಇಸ್ನರ್‌ ಮತ್ತು ಟಾಮಿ ಪಾಲ್‌ ಅವರೂ ಎಂಟರ ಘಟ್ಟ ಪ್ರವೇಶಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು