ನ್ಯೂಯಾರ್ಕ್: ದಾಖಲೆಯ 24 ಗ್ರ್ಯಾನ್‌ಸ್ಲಾಮ್ ಕಿರೀಟ ಗೆದ್ದು, ನಂತರದಲ್ಲಿ ಪ್ರಶಸ್ತಿಯ ಬರವನ್ನು ಎದುರಿಸುತ್ತಿರುವ ಸರ್ಬಿಯಾದ ಟೆನಿಸ್ ತಾರೆ ನೊವಾಕ್ ಜೊಕೊವಿಚ್ ಸೋಮವಾರ ಪ್ರಕಟಗೊಂಡ ಎಟಿಪಿ ರ‍್ಯಾಂಕ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ.
ಅಮೆರಿಕ ಓಪನ್ ರನ್ನರ್ ಅಪ್ ಟೇಲರ್ ಫ್ರಿಟ್ಜ್ ಅಗ್ರ 10ರೊಳಗೆ ಸ್ಥಾನ ಪಡೆದಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ 12ನೇ ಸ್ಥಾನದಲ್ಲಿದ್ದ ಅವರು ಏಳನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.
ಇಟಲಿಯ ಯಾನಿಕ್ ಸಿನ್ನರ್ ಅಗ್ರಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿದ್ದ ಜೊಕೊವಿಚ್ ಅಮೆರಿಕಾ ಓಪನ್‌ನಲ್ಲಿ ಮೂರನೇ ಸುತ್ತಿನಲ್ಲಿ ಹೊರಬಿದ್ದಿದ್ದರು.
ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್ ಎರಡನೇ ಸ್ಥಾನಕ್ಕೆ ಏರಿದ್ದಾರೆ. ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್ ಮತ್ತು ರಷ್ಯಾದ ಡೇನಿಯಲ್ ಮೆಡ್ವೆಡೇವ್ ಕ್ರಮವಾಗಿ ಮೂರನೇ ಮತ್ತು ಐದನೇ ಕ್ರಮಾಂಕದಲ್ಲಿ ಮುಂದುವರಿದಿದ್ದಾರೆ.
ಮಹಿಳೆಯರ ಸಿಂಗಲ್ಸ್‌ನಲ್ಲಿ ಅಮೆರಿಕದ ಜೆಸ್ಸಿಕಾ ಪೆಗುಲಾ ಮೂರು ಸ್ಥಾನಗಳ ಬಡ್ತಿಯೊಂದಿಗೆ ಮೂರನೇ ಸ್ಥಾನಕ್ಕೆ ಏರಿದ್ದಾರೆ. ಅವರು ಅಮೆರಿಕಾ ಓಪನ್‌ನಲ್ಲಿ ರನ್ನರ್ ಅಪ್ ಆದವರು. ಇಲ್ಲಿ ಸೆಮಿಫೈನಲ್ ತಲುಪಿದ್ದ ಅಮೆರಿಕದ ಮತ್ತೊಬ್ಬ ಆಟಗಾರ್ತಿ ಎಮ್ಮಾ ನವಾರೊ ಜೀವನಶ್ರೇಷ್ಠ ಎಂಟನೇ ರ‍್ಯಾಂಕ್‌ಗೆ ಬಡ್ತಿ ಪಡೆದಿದ್ದಾರೆ. ಪೋಲೆಂಡ್‌ನ ಇಗಾ ಶ್ವಾಂಟೆಕ್, ಅಮೆರಿಕ ಓಪನ್ ಚಾಂಪಿಯನ್, ಬೆಲಾರಸ್‌ನ ಅರಿನಾ ಸಬಲೆಂಕಾ ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿ ಮುಂದುವರಿದಿದ್ದಾರೆ.