ಲಖನೌ: ಭಾರತ ಮತ್ತು ಮೊರೊಕ್ಕೊ ನಡುವಣ ಶನಿವಾರ ಆರಂಭವಾಗುವ ಡೇವಿಸ್ ಕಪ್ ಟೆನಿಸ್ ವಿಶ್ವಗುಂಪು–2ರ ಹಣಾಹಣಿಯು ರೋಹನ್ ಬೋಪಣ್ಣ ಅವರ ವಿದಾಯ ಪಂದ್ಯಕ್ಕೆ ವೇದಿಕೆಯೊದಗಿಸಲಿದೆ.
ಕರ್ನಾಟಕದ ಬೋಪಣ್ಣ ಅವರ 21 ವರ್ಷಗಳ ಡೇವಿಸ್ ಕಪ್ ವೃತ್ತಿಜೀವನಕ್ಕೆ ಈ ಪಂದ್ಯದೊಂದಿಗೆ ತೆರೆಬೀಳಲಿದೆ. ಭಾರತ ತಂಡವು ಅವರಿಗೆ ಗೆಲುವಿನ ಉಡುಗೊರೆ ನೀಡಲು ಸಜ್ಜಾಗಿದೆ.
ಶನಿವಾರ ಸಿಂಗಲ್ಸ್ ಪಂದ್ಯಗಳು ಆಯೋಜನೆಯಾಗಿದ್ದು, 43 ವರ್ಷದ ಬೋಪಣ್ಣ ಅವರು ಭಾನುವಾರ ನಡೆಯಲಿರುವ ಡಬಲ್ಸ್ ಪಂದ್ಯದಲ್ಲಿ ಯೂಕಿ ಭಾಂಬ್ರಿ ಅವರೊಂದಿಗೆ ಕಣಕ್ಕಿಳಿಯಲಿದ್ದಾರೆ.
ಶನಿವಾರ ಮೊದಲ ಸಿಂಗಲ್ಸ್ ಪಂದ್ಯದಲ್ಲಿ ಶಶಿಕಿರಣ್ ಮುಕುಂದ್, ಮೊರಕ್ಕೊದ ಯಾಸಿನ್ ದ್ಲಿಮಿ ಅವರನ್ನು ಎದುರಿಸುವರು. ಎರಡನೇ ಸಿಂಗಲ್ಸ್‌ನಲ್ಲಿ ಸುಮಿತ್ ನಗಾಲ್– ಆ್ಯಡಮ್ ಮೌಂಡಿರ್ ಹಣಾಹಣಿ ನಡೆಸಲಿದ್ದಾರೆ.
ಡೇವಿಡ್ ಕಪ್‌ನಲ್ಲಿ ಈಚೆಗಿನ ವರ್ಷಗಳಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿರುವ ಭಾರತ, ಇದೇ ಫೆಬ್ರುವರಿ ತಿಂಗಳಲ್ಲಿ ವಿಶ್ವಗುಂಪು –2ಕ್ಕೆ ಹಿಂಬಡ್ತಿ ಪಡೆದುಕೊಂಡಿತ್ತು. 2019 ರಲ್ಲಿ ಟೂರ್ನಿಗೆ ಹೊಸ ಮಾದರಿ ಅಳವಡಿಸಿದ ಬಳಿಕ, ಭಾರತ ತಂಡ ಇದೇ ಮೊದಲ ಬಾರಿ ವಿಶ್ವಗುಂಪು–2ಕ್ಕೆ ಕುಸಿತ ಕಂಡಿತ್ತು. ಡೆನ್ಮಾರ್ಕ್ ಎದುರಿನ ತನ್ನ ಕೊನೆಯ ಡೇವಿಸ್ ಕಪ್ ಪಂದ್ಯವನ್ನು 2–3 ರಿಂದ ಸೋತಿತ್ತು.
ಬೋಪಣ್ಣ ಅವರು ಕಳೆದ ವಾರ ಅಮೆರಿಕ ಓಪನ್ ಟೂರ್ನಿಯ ಡಬಲ್ಸ್ ವಿಭಾಗದ ಫೈನಲ್ ಪ್ರವೇಶಿಸಿದ್ದನ್ನು ಹೊರತುಪಡಿಸಿದರೆ, ಭಾರತದ ಟೆನಿಸ್‌ಗೆ ಈ ಋತುವಿನಲ್ಲಿ ಯಾವುದೇ ಸ್ಮರಣೀಯ ಕ್ಷಣಗಳು ಲಭಿಸಿಲ್ಲ.
ಕೊಡಗಿನ ಆಟಗಾರ 2002 ರಲ್ಲಿ ಡೇವಿಡ್ ಕಪ್ ಪದಾರ್ಪಣೆ ಮಾಡಿ ದ್ದರು. ಇದುವರೆಗೆ ಒಟ್ಟು 32 ಪಂದ್ಯ ಗಳನ್ನು ಆಡಿದ್ದು, 10 ಸಿಂಗಲ್ಸ್ ಸೇರಿ ದಂತೆ 22ರಲ್ಲಿ ಗೆದ್ದಿದ್ದಾರೆ. ಡೇವಿಸ್ ಕಪ್‌ನಿಂದ ವಿರಮಿಸಿದರೂ ಅವರು ಎಟಿಪಿ ಟೂರ್ನಿಗಳಲ್ಲಿ ಆಟ ಮುಂದುವರಿಸಲಿದ್ದಾರೆ. ಡಬಲ್ಸ್ ವಿಭಾಗದ ವಿಶ್ವ ರ್‍ಯಾಂಕಿಂಗ್‌ನಲ್ಲಿ 7ನೇ ಸ್ಥಾನದಲ್ಲಿದ್ದಾರೆ.
ಬೋಪಣ್ಣ ವಿದಾಯ ಪಂದ್ಯವನ್ನು ಬೆಂಗಳೂರಿನಲ್ಲಿ ಆಡಲು ಬಯಸಿದ್ದರಲ್ಲದೆ, ಅಖಿಲ ಭಾರತ ಟೆನಿಸ್ ಫೆಡರೇಷನ್‌ಗೂ (ಎಐಟಿಎ) ಮನವಿ ಮಾಡಿದ್ದರು. ಆದರೆ ಮೊರೊಕ್ಕೊ ವಿರುದ್ಧದ ಪಂದ್ಯವನ್ನು ಲಖನೌದಲ್ಲಿ ಆಯೋಜಿಸಲು ಎಐಟಿಎ ಈ ಮೊದಲೇ ನಿರ್ಧರಿಸಿತ್ತು. ಅವರ ಕುಟುಂಬದ ಸದಸ್ಯರು ಮತ್ತು ಗೆಳೆಯರು ವಿದಾಯ ಪಂದ್ಯವನ್ನು ವೀಕ್ಷಿಸಲಿದ್ದಾರೆ. ಎಐಟಿಎ ವತಿಯಿಂದ ಗುರುವಾರ ರಾತ್ರಿ ಬೋಪಣ್ಣ ಅವರನ್ನು ಸನ್ಮಾನಿಸಲಾಯಿತು.
ನಗಾಲ್‌ಗೆ ಗೆಲುವಿನ ವಿಶ್ವಾಸ: ಸಿಂಗಲ್ಸ್‌ನಲ್ಲಿ ಭಾರತದ ನಂ.1 ಆಟಗಾರ ಎನಿಸಿರುವ ಸುಮಿತ್ ನಗಾಲ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಆಸ್ಟ್ರಿಯಾದಲ್ಲಿ ಈಚೆಗೆ ನಡೆದಿದ್ದ ಚಾಲೆಂಜರ್ ಟೂರ್ನಿಯಲ್ಲಿ ರನ್ನರ್ ಅಪ್ ಆಗಿದ್ದ ಅವರು ತಮ್ಮ ಎರಡೂ ಸಿಂಗಲ್ಸ್ ಪಂದ್ಯಗಳಲ್ಲಿ ಗೆಲ್ಲುವ ವಿಶ್ವಾಸ ಹೊಂದಿದ್ದಾರೆ. ಶಶಿಕಿರಣ್ ಮುಕುಂದ್, ಈ ಪಂದ್ಯದೊಂದಿಗೆ ಡೇವಿಸ್ ಕಪ್‌ಗೆ ಪದಾರ್ಪಣೆ ಮಾಡಲಿದ್ದಾರೆ.
ಮೊರೊಕ್ಕೊ ತಂಡದ ಪ್ರಮುಖ ಆಟಗಾರ ಎಲಿಯೊಟ್ ಬೆಂಚಿತ್ರಿತ್, ಡಬಲ್ಸ್ ಪಂದ್ಯದಲ್ಲಿ ಮಾತ್ರ ಆಡಲಿ ದ್ದಾರೆ. 24 ವರ್ಷದ ಅವರು ಈಗ ಎಟಿಪಿ ರ್‍ಯಾಂಕಿಂಗ್‌ನಲ್ಲಿ 465ನೇ ಸ್ಥಾನದಲ್ಲಿ ದ್ದರೂ, 2020 ರಲ್ಲಿ 198ನೇ ಸ್ಥಾನಕ್ಕೇರಿದ್ದರು. ವಿಶ್ವ ರ್‍ಯಾಂಕಿಂಗ್‌ನಲ್ಲಿ 50 ರೊಳಗಿನ ಸ್ಥಾನದಲ್ಲಿರುವ ಆಟಗಾರರನ್ನು ಮಣಿಸಿರುವ ಅವರು, ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲೂ ಆಡಿದ್ದಾರೆ.
ಎದುರಾಳಿ ತಂಡವು ಯಾಸಿನ್ ದ್ಲಿಮಿ ಮತ್ತು ಆ್ಯಡಮ್ ಮೌಂಡಿರ್ ಅವರನ್ನು ಸಿಂಗಲ್ಸ್‌ನಲ್ಲಿ ಕಣ
ಕ್ಕಿಳಿಸಲಿದೆ. ಇವರು ಎಟಿಪಿ ರ್‍ಯಾಂಕಿಂಗ್ ನಲ್ಲಿ ಕ್ರಮವಾಗಿ 557 ಹಾಗೂ 779ನೇ ಸ್ಥಾನದಲ್ಲಿದ್ದಾರೆ.
‘2010 ರಲ್ಲಿ ಚೆನ್ನೈನಲ್ಲಿ ನಡೆದಿದ್ದ ಬ್ರೆಜಿಲ್ ವಿರುದ್ಧದ ಹಣಾಹಣಿ, ಡೇವಿಸ್ ಕಪ್ ವೃತ್ತಿಜೀವನದ ಸ್ಮರಣೀಯ ಪಂದ್ಯ’ ಎಂದು ಬೋಪಣ್ಣ ಹೇಳಿದರು. ಆ ಪಂದ್ಯದಲ್ಲಿ ಮೊದಲ ಸಿಂಗಲ್ಸ್‌ನಲ್ಲಿ ಸೋತಿದ್ದ ಬೋಪಣ್ಣ, ಐದನೇ ಹಾಗೂ ನಿರ್ಣಾಯಕ ಸಿಂಗಲ್ಸ್‌ನಲ್ಲಿ ಗೆದ್ದಿದ್ದರು.
‘ಆ ಪಂದ್ಯದಲ್ಲಿ 0–2 ರಿಂದ ಹಿನ್ನಡೆಯಲ್ಲಿದ್ದ ನಾವು ಮರು ಹೋರಾಟ ನಡೆಸಿ ಗೆದ್ದು (3–2), ವಿಶ್ವ ಗುಂಪಿನ ಪ್ಲೇ ಆಫ್ ಪ್ರವೇಶಿಸಿದ್ದೆವು. ಮೊದಲ ಸಿಂಗಲ್ಸ್‌ನಲ್ಲಿ ಮ್ಯಾಚ್ ಪಾಯಿಂಟ್ ಅವಕಾಶ ಪಡೆದಿದ್ದರೂ, ಸೋತಿದ್ದೆ. ಆದರೆ ಅದಾದ 48 ಗಂಟೆಗಳ ಬಳಿಕ ಶ್ರೇಷ್ಠ ಆಟವಾಡಿ ಭಾರತ ತಂಡವನ್ನು ಜಯದತ್ತ ಮುನ್ನಡೆಸಿದ್ದು ಅಮೋಘವೇ ಸರಿ’ ಎಂದರು.
‘ಇಂದಿನ ತಲೆಮಾರಿನ ಆಟಗಾರರು ಡೇವಿಸ್ ಕಪ್ ಟೂರ್ನಿಯ ಮೇಲಿನ ಪ್ರೀತಿ ಕಳೆದುಕೊಂಡಿದ್ದಾರೆ. ಇತರ ಟೂರ್ನಿಗಳಂತೆ ಇದೂ ಒಂದು ಟೂರ್ನಿ ಎಂದಷ್ಟೇ ಭಾವಿಸಿದ್ದಾರೆ. ಯಾಂತ್ರಿಕವಾಗಿ ಬಂದು ಆಡಿ ಹೋಗುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.