ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಓಪನ್ ಟೆನಿಸ್ ಟೂರ್ನಿ: ಮೂರನೇ ಸುತ್ತಿಗೆ ಸಿಟ್ಸಿಪಾಸ್‌

ಮೆಡ್ವೆಡೆವ್‌, ಸ್ವಾರ್ಟ್ಜ್‌ಮನ್ ಜಯಭೇರಿ
Last Updated 2 ಸೆಪ್ಟೆಂಬರ್ 2021, 13:26 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಜಿದ್ದಾಜಿದ್ದಿ ಪೈಪೋಟಿಯಲ್ಲಿ ಗೆದ್ದ ಗ್ರೀಸ್‌ನ ಸ್ಟೆಫನೊಸ್ ಸಿಟ್ಸಿಪಾಸ್ ಅವರು ಅಮೆರಿಕ ಓಪನ್ ಟೆನಿಸ್ ಟೂರ್ನಿಯಲ್ಲಿ ಮೂರನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಆದರೆ ಈ ಪಂದ್ಯದಲ್ಲಿ ಅವರು ಶೌಚಕ್ಕೆ ಹೋಗಿ ಬರಲು ನಿಗದಿಗಿಂತಲೂ ಹೆಚ್ಚು ಸಮಯ ತೆಗೆದುಕೊಂಡಿದ್ದು ಮೋಜಿನ ಪ್ರಸಂಗವಾಗಿ ದಾಖಲಾಯಿತು.

ಅರ್ಥರ್ ಆ್ಯಶ್ ಕ್ರೀಡಾಂಗಣದಲ್ಲಿ ಮೂರನೇ ಶ್ರೇಯಾಂಕದ ಸಿಟ್ಸಿಪಾಸ್‌ ಪಂದ್ಯದ ಮೂರು ಮತ್ತು ನಾಲ್ಕನೇ ಸೆಟ್‌ನ ನಡುವಿನ ಅವಧಿಯಲ್ಲಿ ನಿಗದಿಗಿಂತ ಎಂಟು ನಿಮಿಷಗಳ ಕಾಲ ಶೌಚ ವಿರಾಮ ತೆಗೆದುಕೊಂಡರು. ಬಳಿಕ ನಾಲ್ಕನೇ ಸೆಟ್‌ನಲ್ಲಿ ಸಂಪೂರ್ಣ ಪಾರಮ್ಯ ಮೆರೆದರು.

ಪಂದ್ಯದಲ್ಲಿ ಅವರು 6-3, 6-4, 6-7 (4/7), 6-0ರಿಂದ ಫ್ರಾನ್ಸ್‌ನ ಆ್ಯಡ್ರಿಯನ್‌ ಮನ್ನಾರಿನೊ ಎದುರು ಜಯ ಸಾಧಿಸಿದರು.

ಪಂದ್ಯ ಸ್ಥಗಿತ: ಬಿರುಗಾಳಿ ಸಹಿತ ಜೋರು ಮಳೆ ಸುರಿದಿದ್ದರಿಂದ ಲೂಯಿಸ್‌ ಆರ್ಮ್‌ಸ್ಟ್ರಾಂಗ್ ಕ್ರೀಡಾಂಗಣದಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್ಸನ್ ಮತ್ತು ಅರ್ಜೆಂಟೀನಾದ ಡಿಗೊ ಸ್ವಾರ್ಟ್ಜ್‌ಮನ್ ನಡುವಣ ಎರಡನೇ ಸುತ್ತಿನ ಪಂದ್ಯವನ್ನು 30 ನಿಮಿಷ ಸ್ಥಗಿತಗೊಳಿಸಲಾಗಿತ್ತು. ಬಳಿಕ ಪುನರಾರಂಭವಾದ ಪಂದ್ಯದಲ್ಲಿ ಸ್ವಾರ್ಟ್ಜ್‌ಮನ್ 7-6 (7/4), 6-3, 6-4ರಿಂದ ಗೆಲುವು ಸಾಧಿಸಿದರು.

ಮಹಿಳಾ ಸಿಂಗಲ್ಸ್ ಹಾಲಿ ಚಾಂಪಿಯನ್ ನವೊಮಿ ಒಸಾಕ ಅವರಿಗೆ ಎರಡನೇ ಸುತ್ತಿನಲ್ಲಿ ವಾಕ್‌ ಓವರ್ ಲಭಿಸಿತು. ಅವರ ವಿರುದ್ಧ ಆಡಬೇಕಿದ್ದ ಸರ್ಬಿಯಾದ ಓಲ್ಗಾ ಡ್ಯಾನಿಲೊವಿಚ್‌ ಅನಾರೋಗ್ಯದ ಕಾರಣದಿಂದ ಹಿಂದೆ ಸರಿದರು.

ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಇತರ ಪಂದ್ಯಗಳಲ್ಲಿ ರಷ್ಯಾದ ಆ್ಯಂಡ್ರೆ ರುಬ್ಲೆವ್‌ 7-6 (7/2), 6-7 (5/7), 6-1, 6-1ರಿಂದ ಸ್ಪೇನ್‌ನ ಪೆಡ್ರೊ ಮಾರ್ಟಿನೆಜ್ ಎದುರು, ರಷ್ಯಾದ ಡ್ಯಾನಿಯಲ್ ಮೆಡ್ವೆಡೆವ್‌ 6-4, 6-1, 6-2ರಿಂದ ಜರ್ಮನಿಯ ಡಾಮಿನಿಕ್‌ ಕೂಪರ್ ಎದುರು ಗೆದ್ದರು.

ಮಹಿಳಾ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಹಣಾಹಣಿಗಳಲ್ಲಿ ಉಕ್ರೇನ್‌ನ ಎಲಿನಾ ಸ್ವಿಟೋಲಿನಾ 6-2, 7-5ರಿಂದ ಸ್ಪೇನ್‌ನ ರೆಬೆಕಾ ಮಸರೊವಾ ಎದುರು, ರುಮೇನಿಯಾದ ಸಿಮೊನಾ ಹಲೆಪ್‌ 6-3, 6-1ರಿಂದ ಸ್ಲೋವೆಕಿಯಾದ ಕ್ರಿಸ್ಟಿನಾ ಕುಸೊವಾ ಎದುರು ಗೆದ್ದು ಮುನ್ನಡೆದರು. ಅಮೆರಿಕದ ಸ್ಲೊವಾನೆ ಸ್ಟಿಫನ್ಸ್ 6-4, 6-2ರಿಂದ ತಮ್ಮದೇ ದೇಶದ ಕೋರಿ ಗಫ್ ಅವರನ್ನು ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT