ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ 500 ಟೆನಿಸ್ ಕೋರ್ಟ್ ನಿರ್ಮಾಣ ಗುರಿ

Last Updated 19 ಜೂನ್ 2020, 16:50 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ವಿವಿಧ ಕಡೆಗಳಲ್ಲಿ ಒಟ್ಟು 500 ಟೆನಿಸ್ ಕೋರ್ಟ್‌ಗಳನ್ನು ನಿರ್ಮಿಸಲು ರಾಜ್ಯ ಟೆನಿಸ್ ಸಂಸ್ಥೆ (ಕೆಎಸ್‌ಎಲ್‌ಟಿಎ) ಗುರಿ ಇಟ್ಟುಕೊಂಡಿದ್ದು ಎಟಿಪಿ ಮತ್ತು ಡಬ್ಲ್ಯುಟಿಎ ಆಯೋಜಿಸುವ ಟೂರ್ನಿಗಳಿಗೆ 100 ಮಂದಿಯನ್ನು ಸಜ್ಜುಗೊಳಿಸುವ ಯೋಜನೆಯನ್ನೂ ಜಾರಿಗೆ ತರಲಿದೆ.

ಫೆಬ್ರುವರಿಯಲ್ಲಿ ಆಯ್ಕೆಯಾದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಗುರುವಾರ ಸಂಜೆ ನಡೆದಿದ್ದು ನಂತರ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಕೊರೊನಾ ಹಾವಳಿಯಿಂದಾಗಿ ಮೂರು ತಿಂಗಳಿಂದ ಸಂಸ್ಥೆಯ ಸಭೆ ನಡೆದಿರಲಿಲ್ಲ.

‘ಕೆಎಸ್‌ಎಲ್‌ಟಿಎ ‘ವಿಷನ್ 2030’ ಎಂಬ 10 ವರ್ಷಗಳ ಅಭಿವೃದ್ಧಿ ಯೋಜನೆಯನ್ನು ಹಾಕಿಕೊಂಡಿದ್ದು ಈಗಿನ ಸಮಿತಿಯ ನಾಲ್ಕು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಟೆನಿಸ್ ಕ್ರೀಡೆಯನ್ನು ಅಭಿವೃದ್ಧಿ ಪಥದಲ್ಲಿ ಸಾಗಿಸಲಾಗುವುದು ಮತ್ತು ದೇಶದ ಕ್ರೀಡಾಕ್ಷೇತ್ರ ಇತ್ತ ದೃಷ್ಟಿ ಹಾಯಿಸುವಂತೆ ಮಾಡಲಾಗುವುದು’ ಎಂದು ಸಂಸ್ಥೆಯ ಅಧ್ಯಕ್ಷ ಆರ್‌.ಅಶೋಕ್ ತಿಳಿಸಿದರು.

ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು ಮತ್ತುಕೋಚ್‌ಗಳು, ಅಧಿಕಾರಿಗಳು, ತರಬೇತುದಾರರು ಮುಂತಾದವರ ಕೌಶಲ ಅಭಿವೃದ್ಧಿಪಡಿಸುವುದು ಮೊದಲ ಆದ್ಯತೆಯಾಗಿದ್ದು ಸ್ಥಳೀಯ ಟೆನಿಸ್‌ಪಟುಗಳಿಗೆ ಸ್ಮರ್ಧಾತ್ಮಕ ಟೆನಿಸ್‌ನ ಅನುಭವ ದೊರಕುವಂತೆ ಮಾಡುವುದಕ್ಕಾಗಿ ಕಿರಿಯರ ಅಂತರರಾಷ್ಟ್ರೀಯ ಟೂರ್ನಿಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಪ್ರತಿ ಜಿಲ್ಲಾ ಕೇಂದ್ರದಲ್ಲಿ ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳನ್ನು ಆಯೋಜಿಸುವ ಸಾಮರ್ಥ್ಯದ ಕೋರ್ಟ್‌ಗಳ ನಿರ್ಮಾಣಕ್ಕೂ ತಾಲ್ಲೂಕು ಮಟ್ಟಗಳಲ್ಲಿ ಸಾರ್ವಜನಿಕ ಕೋರ್ಟ್‌ಗಳ ನಿರ್ಮಾಣಕ್ಕೂ ನಿರ್ಧರಿಸಲಾಗಿದೆ.

ಬೆಂಗಳೂರು ಟೆನಿಸ್ ರಾಜಧಾನಿ

ದೇಶದ ಟೆನಿಸ್ ರಾಜಧಾನಿಯಾಗಿ ಬೆಂಗಳೂರನ್ನು ಬೆಳೆಸುವುದಕ್ಕೂ ಯೋಜನೆ ಹಾಕಿಕೊಳ್ಳಲಾಗಿದ್ದು ಕೆಎಸ್‌ಎಲ್‌ಟಿಎ ಆವರಣದ ಕ್ಲಬ್‌ ಹೌಸ್‌ಗೆ ಹೊಸ ಸ್ಪರ್ಶ ನೀಡುವ ಚಿಂತನೆಯೂ ಇದೆ. ಟೆನಿಸ್ ಪಟುಗಳು, ಕೋಚ್‌ಗಳು ಮತ್ತು ಅಕಾಡೆಮಿಗಳನ್ನು ಒಂದೇ ಸೂರಿನಡಿಗೆ ತರುವ ಉದ್ದೇಶದಿಂದ ನೋಂದಣಿ ಯೋಜನೆ ಜಾರಿಗೆ ತರಲಾಗಿದೆ.

ಪ್ಲೇ ಟೆನಿಸ್ ಯೋಜನೆಯಡಿ ಶಾಲೆ ಮತ್ತು ಸಮುದಾಯ ಮಟ್ಟದಲ್ಲಿ ಕ್ರೀಡೆಯನ್ನು ಪ್ರೋತ್ಸಾಹಿಸಲಾಗುವುದು. ರಾಜ್ಯದಲ್ಲಿ 25 ಸಾವಿರ ಮಕ್ಕಳು ಟೆನಿಸ್ ಕಣಕ್ಕೆ ಇಳಿಯುವಂತೆ ಮಾಡುವುದು ಇದರ ಉದ್ದೇಶ. 14 ಮತ್ತು 12 ವರ್ಷದೊಳಗಿನ ಪ್ರತಿಭೆಗಳನ್ನು ಗುರುತಿಸುವುದಕ್ಕಾಗಿ ಪ್ರತಿಭಾ ಶೋಧ ಕಾರ್ಯ ನಡೆಸಿ ಎಂಟರಿಂದ 10 ವರ್ಷಗಳ ತರಬೇತಿ ನೀಡಲಾಗುವುದು.

ರಾಜ್ಯದ ಮೂರು ಭಾಗಗಳಲ್ಲಿ ಪ್ರಾದೇಶಿಕ ಟೆನಿಸ್ ಕೇಂದ್ರಗಳನ್ನು ಸ್ಥಾಪಿಸಿ ವೃತ್ತಿಪರ ಟೆನಿಸ್ ಕೋಚ್‌ಗಳಿಗೆ ಅವುಗಳ ಉಸ್ತುವಾರಿ ವಹಿಸಲಾಗುವುದು. ರಾಜ್ಯ ಮತ್ತು ಪ್ರಾದೇಶಿಕ ಮಟ್ಟದ ಶಿಬಿರಗಳನ್ನೂ ನಡೆಸಲಾಗುವುದು. ಬೆಂಗಳೂರಿನಲ್ಲಿ ರಾಜ್ಯ ಹೈ ಪರ್ಫಾರ್ಮೆನ್ಸ್ ಟೆನಿಸ್ ಕೇಂದ್ರ ಸ್ಥಾಪಿಸಲಾಗುವುದು. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಪಾಲ್ಗೊಳ್ಳುವುದಕ್ಕೆ ಆಟಗಾರರ ತಂಡವನ್ನೇ ರೂಪಿಸಲಾಗುವುದು. ಬೆಂಗಳೂರಿನಲ್ಲಿ ಹೊಸ ಟೆನಿಸ್ ಸಂಕೀರ್ಣ ನಿರ್ಮಿಸಲಾಗುವುದು. ಆಟಗಾರರು, ಕೋಚ್‌ಗಳು ಮತ್ತು ಟೆನಿಸ್‌ ಕ್ರೀಡೆಯನ್ನೇ ಆಶ್ರಯಿಸಿ ಜೀವನ ಸಾಗಿಸುತ್ತಿರುವವರಿಗೆ ಆರ್ಥಿಕ ನೆರವು ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಪದಾಧಿಕಾರಿಗಳು

ಆರ್‌.ಅಶೋಕ್ (ಅಧ್ಯಕ್ಷ), ಎಂ.ಲಕ್ಷ್ಮಿನಾರಾಯಣ (ಗೌರವ ಆಜೀವ ಉಪಾಧ್ಯಕ್ಷ), ಪ್ರಿಯಾಂಕ್ ಖರ್ಗೆ (ಹಿರಿಯ ಉಪಾಧ್ಯಕ್ಷ), ರೋಹನ್‌ ಬೋಪಣ್ಣ, ಆಶಿಶ್‌ ಪುರವಂಕರ, ಎಂ.ಬಿ.ದ್ಯಾಬೇರಿ, ಪಿ.ಆರ್‌.ರಾಮಸ್ವಾಮಿ (ಉಪಾಧ್ಯಕ್ಷರು), ಮಹೇಶ್ವರ ರಾವ್ (ಗೌರವ ಕಾರ್ಯದರ್ಶಿ), ಸುನಿಲ್ ಯಜಮಾನ್ (ಗೌರವ ಜಂಟಿ ಕಾರ್ಯದರ್ಶಿ), ನಾಗಾನಂದ ದೊರೆಸ್ವಾಮಿ (ಗೌರವ ಖಜಾಂಚಿ).

ಸಮಿತಿ ಸದಸ್ಯರು: ವಿ.ರಾಜಶೇಖರ್ (ಸದಾಶಿವ ನಗರ ಕ್ಲಬ್), ಮೋಹನ್ ಗುರ್ಜೇರ್ (ಬೆಂಗಳೂರು ಕ್ಲಬ್‌), ಕೆ.ಸಿ.ನಾಗರಾಜ್ (ಸ್ಟೆಪಾಕ್), ಗಾಯತ್ರಿ ರಾವ್ (ಮಹಿಳಾ ಸೇವಾ ಸಮಾಜ), ಪೀಟರ್ ವಿಜಯಕುಮಾರ್ (ಇಂದಿರಾ ನಗರ ಕ್ಲಬ್), ಎಸ್‌.ಬ್ಯಾಡಗಿ (ದಾವಣಗೆರೆ ಜಿಲ್ಲಾ ಟೆನಿಸ್ ಸಂಸ್ಥೆ), ಚಂದ್ರಶೇಖರ ಹೆಗಡೆ (ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್, ಉಡುಪಿ), ಆದಿಶೇಷ (ಗಾರ್ಡನ್ ಟೆನಿಸ್ ಕ್ಲಬ್‌, ಮೈಸೂರು), ಅಮರನಾಥ್ (ತುಮಕೂರು ಕ್ಲಬ್‌).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT