ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Australian Open 2023: ಇಗಾ, ಕೊಕೊ ಗಾಫ್‌ಗೆ ಆಘಾತ

ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿ: ಕ್ವಾರ್ಟರ್‌ಫೈನಲ್‌ಗೆ ರಿಬಾಕಿನಾ
Last Updated 22 ಜನವರಿ 2023, 13:13 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಅಗ್ರಶ್ರೇಯಾಂಕದ ಆಟಗಾರ್ತಿ ಇಗಾ ಶ್ವಾಂಟೆಕ್‌ ಮತ್ತು ಅಮೆರಿಕದ ಯುವ ಪ್ರತಿಭೆ ಕೊಕೊ ಗಾಫ್‌ ಅವರು ಆಸ್ಟ್ರೇಲಿಯಾ ಓಪನ್ ಟೆನಿಸ್‌ ಟೂರ್ನಿಯಿಂದ ಭಾನುವಾರ ಹೊರಬಿದ್ದರು.

ರಾಡ್‌ ಲೇವರ್ ಅರೆನಾದಲ್ಲಿ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ 16ರ ಘಟ್ಟದ ಪಂದ್ಯದಲ್ಲಿ ಇಗಾ 5–7, 2–6ರಿಂದ ವಿಂಬಲ್ಡನ್‌ ಚಾಂಪಿಯನ್‌ ಕಜಕಸ್ತಾನದ ಎಲೆನಾ ರಿಬಾಕಿನಾ ಎದುರು ಪರಾಭವಗೊಂಡರು. ಶ್ವಾಂಟೆಕ್ ಅವರು 2022ರ ಫ್ರೆಂಚ್‌ ಓಪನ್ ಮತ್ತು ಅಮೆರಿಕ ಓಪನ್ ಟೂರ್ನಿಯ ಚಾಂಪಿಯನ್ ಆಗಿದ್ದರು.

ಇಗಾ ಅವರ ಸೋಲಿನೊಂದಿಗೆ 1968ರ ಬಳಿಕ ಗ್ರ್ಯಾನ್‌ಸ್ಲಾಮ್‌ ಟೂರ್ನಿಯೊಂದರಲ್ಲಿ ಪುರುಷ ಮತ್ತು ಮಹಿಳಾ ಸಿಂಗಲ್ಸ್‌ನ ಅಗ್ರ ಎರಡು ಶ್ರೇಯಾಂಕಿತರು ಕ್ವಾರ್ಟರ್‌ಫೈನಲ್‌ಗೂ ಮೊದಲೇ ಸೋಲು ಅನುಭವಿಸಿದಂತಾಗಿದೆ.

ಮಹಿಳಾ ಸಿಂಗಲ್ಸ್‌ನಲ್ಲಿ ಎರಡನೇ ಶ್ರೇಯಾಂಕ ಹೊಂದಿದ್ದ ಟ್ಯೂನಿಷಿಯಾದ ಆನ್ಸ್ ಜಬೇರ್ ಅವರು ಎರಡನೇ ಸುತ್ತಿನಲ್ಲೇ ನಿರಾಸೆ ಅನುಭವಿಸಿದ್ದರು. ಪುರುಷರ ಸಿಂಗಲ್ಸ್‌ನಲ್ಲಿ ಅಗ್ರಶ್ರೇಯಾಂಕದ ಸ್ಪೇನ್‌ನ ರಫೆಲ್ ನಡಾಲ್ ಮತ್ತು ಎರಡನೇ ಶ್ರೇಯಾಂಕದ, ನಾರ್ವೆಯ ಕ್ಯಾಸ್ಪರ್ ರೂಡ್‌ ಕೂಡ ಎರಡನೇ ಸುತ್ತಿನಲ್ಲೇ ಸೋಲು ಕಂಡಿದ್ದರು.

22ನೇ ಶ್ರೇಯಾಂಕದ ರಿಬಾಕಿನಾ ಅವರು ಎಂಟರಘಟ್ಟದ ಪಂದ್ಯದಲ್ಲಿ ಲಾಟ್ವಿಯಾದ ಎಲೆನಾ ಒಸ್ತಪೆಂಕೊ ಅವರನ್ನು ಎದುರಿಸುವರು. 17ನೇ ಶ್ರೇಯಾಂಕದ ಒಸ್ತಪೆಂಕೊ ಪ್ರೀಕ್ವಾರ್ಟರ್‌ನ ಇನ್ನೊಂದು ಸೆಣಸಾಟದಲ್ಲಿ 7-5, 6-3ರಿಂದ ಏಳನೇ ಶ್ರೇಯಾಂಕದ ಗಾಫ್ ಅವರನ್ನು ಮಣಿಸಿದರು. 18 ವರ್ಷದ ಗಾಫ್‌ ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರು ಸುರಿಸಿದರು.

ಮಹಿಳಾ ಸಿಂಗಲ್ಸ್ 16ರ ಘಟ್ಟದ ಇನ್ನೊಂದು ಪಂದ್ಯದಲ್ಲಿ ಅಮೆರಿಕದ ಜೆಸ್ಸಿಕಾ ಪೆಗೂಲ 7-5, 6-2ರಿಂದ ಜೆಕ್ ಗಣರಾಜ್ಯದ ಬಾರ್ಬರಾ ಕ್ರೆಜಿಕೊವಾ ಎದುರು ಜಯಭೇರಿ ಮೊಳಗಿಸಿದರು.

ಸೋಲಿನ ಆತಂಕದಿಂದ ಪಾರಾದ ಸಿಟ್ಸಿಪಸ್‌: ಗ್ರೀಸ್ ಆಟಗಾರ ಸ್ಟೆಫನೊಸ್‌ ಸಿಟ್ಸಿಪಸ್‌ ಅವರು ಪ್ರೀಕ್ವಾರ್ಟರ್‌ಫೈನಲ್‌ನ ಮ್ಯಾರಥಾನ್‌ ಆಟದಲ್ಲಿ 6-4, 6-4, 3-6, 4-6, 6-3ರಿಂದ ಇಟಲಿಯ ಜಾನಿಕ್ ಸಿನ್ನರ್ ಅವರನ್ನು ಸೋಲಿಸಿದರು. ನಾಲ್ಕು ತಾಸು ನಡೆದ ಈ ಹಣಾಹಣಿಯಲ್ಲಿ 15ನೇ ಶ್ರೇಯಾಂಕದ ಸಿನ್ನರ್ ಕಠಿಣ ಹೋರಾಟ ನೀಡಿದರೂ ಸೋಲೊಪ್ಪಿಕೊಂಡರು.

ಪುರುಷರ ಸಿಂಗಲ್ಸ್ ವಿಭಾಗದ ಇನ್ನೊಂದು ಪ್ರೀಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಜೆಕ್ ಗಣರಾಜ್ಯದ ಜಿರಿ ಲೆಹೆಕಾ 4-6, 6-3, 7-6 (7/2), 7-6 (7/3)ರಿಂದ ಕೆನಡಾದ ಫೆಲಿಕ್ಸ್‌ ಉಜೆರ್‌ ಅಲಿಯಾಸಿಮ್ ಅವರಿಗೆ ಸೋಲಿನ ಕಹಿ ಉಣಿಸಿದರು. 16ರ ಘಟ್ಟದ ಇನ್ನುಳಿದ ಹಣಾಹಣಿಗಳಲ್ಲಿ ರಷ್ಯಾದ ಕರೆನ್ ಕಚನೊವ್‌ 6-0, 6-0, 7-6 (7/4)ರಿಂದ ಜಪಾನ್‌ನ ಯೊಶಿಹಿಟೊ ನಿಶಿಯೊಕಾ ಎದುರು, ಅಮೆರಿಕದ ಸೆಬಾಸ್ಟಿಯನ್ ಕೊರ್ಡಾ 3-6, 6-3, 6-2, 1-6, 7-6 (10/7)ರಿಂದ ಪೋಲೆಂಡ್‌ನ ಹುಬರ್ಟ್‌ ಹರ್ಕಜ್‌ ವಿರುದ್ಧ ಗೆದ್ದು ಬೀಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT