ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌: ಎಂಟರ ಘಟ್ಟಕ್ಕೆ ಕರಣ್‌, ಪ್ರಜ್ವಲ್‌

ಐಟಿಎಫ್‌– ಮೈಸೂರು ಓಪನ್‌: ಫೈಸಲ್ ಖಮರ್‌ಗೆ ನಿರಾಸೆ
Last Updated 30 ಮಾರ್ಚ್ 2023, 19:08 IST
ಅಕ್ಷರ ಗಾತ್ರ

ಮೈಸೂರು: ರೋಚಕ ಹಣಾಹಣಿಯಲ್ಲಿ ಗೆದ್ದ ಭಾರತದ ಕರಣ್ ಸಿಂಗ್‌ ಹಾಗೂ ತವರಿನ ಅಂಗಳದಲ್ಲಿ ಮತ್ತೊಮ್ಮೆ ಪಾರಮ್ಯ ಮೆರೆದ ಎಸ್‌.ಡಿ.ಪ್ರಜ್ವಲ್‌ ದೇವ್‌ ಇಲ್ಲಿ ನಡೆಯುತ್ತಿರುವ ಐಟಿಎಫ್‌– ಮೈಸೂರು ಓಪನ್‌ ಟೆನಿಸ್‌ ಟೂರ್ನಿಯ ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟರು.

ಚಾಮರಾಜಪುರಂನ ಮೈಸೂರು ಟೆನಿಸ್‌ ಕ್ಲಬ್‌ (ಎಂಟಿಸಿ)ನಲ್ಲಿ ಗುರುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ಕರಣ್‌ ಸಿಂಗ್ ಅವರು 7–6, 3–6, 6–4ರಲ್ಲಿ ಭಾರತದವರೇ ಆದ ಸಿದ್ದಾರ್ಥ ರಾವತ್‌ ವಿರುದ್ಧ ಗೆದ್ದರು.

ಕರಣ್ ಸಿಂಗ್‌ ಗ್ರೌಂಡ್‌ಸ್ಟ್ರೋಕ್, ಬ್ಯಾಕ್‌ಹ್ಯಾಂಡ್‌ ಹೊಡೆತಗಳಿಂದ ಸಿದ್ಧಾರ್ಥ್ ಅವರನ್ನು ಕಾಡಿದರು. ಟ್ರೈಬ್ರೇಕ್‌ನಲ್ಲಿ ಮೊದಲ ಸೆಟ್‌ ಗೆದ್ದರು. 2ನೇ ಸೆಟ್‌ನಲ್ಲಿ ಪುಟಿದೇಳಿದ ರಾವತ್‌, ಕರುಣ್ ಅವರ ಬಲವಾದ ಸರ್ವ್‌ಗಳನ್ನು ಮುರಿದು ಬ್ರೇಕ್‌ಪಾಯಿಂಟ್‌ಗಳ ಬಲದಿಂದ ಸೆಟ್‌ ತಮ್ಮದಾಗಿಸಿಕೊಂಡರು. ಜಿದ್ದಾಜಿದ್ದಿನಿಂದ ಕೂಡಿದ್ದ 3ನೇ ಸೆಟ್‌ ಕರುಣ್ ಪಾಲಾಯಿತು. ತೀವ್ರ ಪೈಪೋಟಿ ನೀಡಿದ ಇಬ್ಬರೂ 2 ಗಂಟೆ 31 ನಿಮಿಷಗಳ ಆಟವಾಡಿ ರಂಜಿಸಿದರು.

ಪ್ರಜ್ವಲ್ ಮಿಂಚು: ತವರಿನ ಅಂಗಳದಲ್ಲಿ ಮೈಸೂರಿನ ಎಸ್‌.ಡಿ.ಪ್ರಜ್ವಲ್ ಮತ್ತೆ ಮಿಂಚಿದರು. ಭಾರತದವರೇ ಆದ ವಿಷ್ಣುವರ್ಧನ್‌ ಅವರನ್ನು 6–3, 7–6ರಿಂದ ಮಣಿಸಿದರು. ಮೆಚ್ಚಿನ ಫೋರ್‌ಹ್ಯಾಂಡ್‌ ಹೊಡೆತಗಳಿಂದ ಅಂಕಗಳನ್ನು ದೋಚಿದ ಪ್ರಜ್ವಲ್‌ ಮೊದಲ ಸೆಟ್‌ ಅನ್ನು ಸುಲಭವಾಗಿ ಗೆದ್ದರು. 2ನೇ ಸೆಟ್‌ ಅನ್ನು ಟೈಬ್ರೇಕ್‌ನಲ್ಲಿ ಗೆಲುವು ಸಾಧಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ಮತ್ತೊಂದು ಪಂದ್ಯದಲ್ಲಿ ಮುಕುಂದ್‌ ಶಶಿಕುಮಾರ್‌ 6–1, 6–2ರಲ್ಲಿ ಫೈಸಲ್ ಖಮರ್‌ ಅವರನ್ನು ಸುಲಭವಾಗಿ ಮಣಿಸಿ ಎಂಟರ ಘಟ್ಟ ಪ್ರವೇಶಿಸಿದರು. ಇದಕ್ಕೂ ಮೊದಲು ಸರ್ಬಿಯಾದ ಬೋರಿಸ್‌ ಬುಟುಲಿಜಾ ಅವರನ್ನು 6–3, 3–6, 6–3ರಲ್ಲಿ ಗೆದ್ದು, ಪ್ರೀ ಕ್ವಾರ್ಟರ್‌ ಫೈನಲ್ ಪ್ರವೇಶಿಸಿದ್ದರು.

ರಿಷಬ್‌, ಇಕ್ಬಾಲ್, ನಿತಿನ್‌ಗೆ ನಿರಾಸೆ: ಭರವಸೆ ಮೂಡಿಸಿದ್ದ ಭಾರತಸ ರಿಷಬ್ ಅಗರ್‌ವಾಲ್ ಅವರು ಉಕ್ರೇನ್‌ನ ವ್ಲಾಡಿಸ್ಲಾವ್‌ ಆರ್ಲವ್ ಎದುರು 1–6, 7–5, 4–6ರಿಂದ ಸೋತರೆ, ಇಶಾಕ್‌ ಇಕ್ಬಾಲ್ 3–6, 3–6ರಿಂದ ಅಮೆರಿಕದ ಆಲಿವರ್‌ ಕ್ರಾಫರ್ಡ್‌ ಅವರಿಗೆ ಮಣಿದರು. ನಿತಿನ್‌ ಕುಮಾರ್‌ ಸಿನ್ಹಾ 1–6, 5–7ರಲ್ಲಿ ಫ್ರಾನ್ಸ್‌ನ ಫ್ಲಾರೆಂಟ್‌ ಬಾಕ್ಸ್ ಅವರಿಂದ ನಿರಾಸೆ ಅನುಭವಿಸಿದರು.

ಆಸ್ಟ್ರೇಲಿಯಾದ ಬ್ಲೇಕ್‌ ಎಲಿಸ್‌ 6–2, 6–3ರಲ್ಲಿ ಮಲೇಶ್ಯಾದ ಮಿತ್ಸುಕಿ ವೈಕಾಂಗ್‌ ಲಿಯಾಂಗ್ ಎದುರು, ಬ್ರಿಟನ್‌ನ ಜಾರ್ಜ್‌ ಲ್ಹೊಫಗೆನ್ 6–0, 6–1ರಲ್ಲಿ ದಕ್ಷಿಣ ಕೊರಿಯಾದ ವೂಬಿನ್‌ ಶಿನ್ ವಿರುದ್ಧ ಗೆದ್ದು ಕ್ವಾರ್ಟರ್ ಫೈನಲ್‌ ಪ್ರವೇಶಿಸಿದರು.

ಡಬಲ್ಸ್‌ ಪಂದ್ಯಗಳಲ್ಲಿ ಪರೀಕ್ಷಿತ್ ಸೋಮಾನಿ– ಮನಿಷ್‌ ಸುರೇಶ್‌ ಕುಮಾರ್‌ ಜೋಡಿ 6–3, 6–7, 12–10ರಲ್ಲಿ ಅಮೆರಿಕದ ಡಾಲಿ ಬ್ಲಾಂಚ್‌– ನಿಕೋಲಸ್‌ ಬೈಬೆಲ್‌ ಎದುರು, ಋತ್ವಿಕ್‌ ಚೌಧರಿ–ನಿಕಿ ಪೂಣಚ್ಚ ಜೋಡಿ 6–3, 7–6ರಲ್ಲಿ ಫ್ರಾನ್ಸ್‌ನ ಫ್ಲಾರೆಂಟ್‌ ಬಾಕ್ಸ್‌– ಭಾರತದ ನಿತಿನ್‌ ಸಿನ್ಹಾ ವಿರುದ್ಧ ಗೆದ್ದು ಸೆಮಿ ಫೈನಲ್ ಪ್ರವೇಶಿಸಿದರು. ಭಾರತದ ಇಶಾಕ್‌ ಇಕ್ಬಾಲ್– ಕರಣ್ ಸಿಂಗ್ ಜೋಡಿ 1–6, 5–7ರಿಂದ ಆಸ್ಟ್ರೇಲಿಯಾದ ಬ್ಲೇಕ್‌ ಎಲಿಸ್‌– ಉಕ್ರೇನ್‌ನ ವ್ಲಾಡಿಸ್ಲಾವ್ ಆರ್ಲವ್‌ ಎದುರು ನಿರಾಸೆ ಅನುಭವಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT