ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ ಓಪನ್ ಐಟಿಎಫ್‌ ಟೆನಿಸ್‌ ಟೂರ್ನಿ: ರಾಮಕುಮಾರ್‌ಗೆ ಸಾಟಿಯಾಗದ ಮಲಿಕ್

ರಿಷಿ ರೆಡ್ಡಿ ಶುಭಾರಂಭ
Published 29 ನವೆಂಬರ್ 2023, 20:06 IST
Last Updated 29 ನವೆಂಬರ್ 2023, 20:06 IST
ಅಕ್ಷರ ಗಾತ್ರ

ಕಲಬುರಗಿ: ಸುಲಭ ಜಯ ಸಾಧಿಸಿದ ಭಾರತದ ರಾಮಕುಮಾರ್ ರಾಮನಾಥನ್‌ ಹಾಗೂ ಹೋರಾಡಿ ಗೆದ್ದ ರಿಷಿ ರೆಡ್ಡಿ ಅವರು ಕಲಬುರಗಿ ಓಪನ್ ಪುರುಷರ ಐಟಿಎಫ್‌ ಟೆನಿಸ್‌ ಟೂರ್ನಿಯ ಸಿಂಗಲ್ಸ್ ವಿಭಾಗದ ಪ್ರೀಕ್ವಾರ್ಟರ್‌ಫೈನಲ್‌ ಪ್ರವೇಶಿಸಿದರು.

ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಮೊದಲ ಸುತ್ತಿನ ಹಣಾಹಣಿಯಲ್ಲಿ ಬುಧವಾರ ಐದನೇ ಶ್ರೇಯಾಂಕದ ರಾಮ್‌ಕುಮಾರ್ ಅವರಿಗೆ 6–0, 6–0ಯಿಂದ ಸ್ವದೇಶದ ಅಜಯ್ ಮಲಿಕ್ ವಿರುದ್ಧ ನಿರಾಯಾಸ ಜಯ ಒಲಿಯಿತು.

ಕೇವಲ 40 ನಿಮಿಷಗಳಲ್ಲಿ ಮುಗಿದ ಈ ಸೆಣಸಾಟದಲ್ಲಿ ಅನುಭವಿ ರಾಮಕುಮಾರ್, ಅರ್ಹತಾ ಸುತ್ತಿನಿಂದ ಗೆದ್ದುಬಂದ ಆಟಗಾರನ ವಿರುದ್ಧ ಸಂಪೂರ್ಣ ಪಾರಮ್ಯ ಮೆರೆದರು. ಅವರ ವೇಗದ ಸರ್ವ್‌ಗಳ ಮುಂದೆ ಅಜಯ್‌ ಬಳಿ ಉತ್ತರವಿರಲಿಲ್ಲ.

ಮತ್ತೊಂದು ಸೆಣಸಾಟದಲ್ಲಿ ಕರ್ನಾಟಕದ ರಿಷಿ 6–4, 7–5ರಿಂದ ದೆಹಲಿಯ ಪಾರ್ಥ್ ಅಗರವಾಲ್ ಅವರಿಗೆ ಸೋಲುಣಿಸಿದರು. ಅರ್ಹತಾ ಸುತ್ತಿನಲ್ಲಿ ಗೆದ್ದು ಮುಖ್ಯ ಸುತ್ತಿಗೆ ಪ್ರವೇಶ ಪಡೆದಿರುವ ರಿಷಿ ಅವರು ‘ಲಕ್ಕಿ ಲೂಸರ್’ ವಿರುದ್ಧ ಚಿತ್ತಾಕರ್ಷಕ ಆಟವಾಡಿದರು. ಮೊದಲ ಸೆಟ್‌ನ ಮೊದಲ ಗೇಮ್‌ ರಿಷಿ ಗೆದ್ದರು. ಆದರೆ ಸತತ ಎರಡು ಗೇಮ್‌ ಜಯಿಸಿದ ಪಾರ್ಥ್‌ ತಿರುಗೇಟು ನೀಡಿದರು. ಬಳಿಕ ದೀರ್ಘ ರ‍್ಯಾಲಿಗಳಲ್ಲಿ ಮಿಂಚಿದ ರಿಷಿ ಸೆಟ್‌ ತಮ್ಮದಾಗಿಸಿಕೊಂಡರು.

ಎರಡನೇ ಸೆಟ್‌ನಲ್ಲೂ ಪಾರ್ಥ್ ಅವರು ಭಾರೀ ಪೈಪೋಟಿ ನೀಡಿದರೂ ರಿಷಿ ಅವರ ಬ್ಯಾಕ್‌ಹ್ಯಾಂಡ್‌ ಹೊಡೆತಗಳು ಹಾಗೂ ಚುರುಕಿನ ಪಾದಚಲನೆಯ ಆಟದ ಮುಂದೆ ಶರಣಾಗಬೇಕಾಯಿತು. ಈ ನಡುವೆ ಆಯಾಸದಿಂದ ಬಳಲಿ ವೈದ್ಯಕೀಯ ವಿರಾಮ ಪಡೆದರೂ ರಿಷಿ ಅವರ ಆಟ ಮನಮೋಹಕವಾಗಿತ್ತು.

ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಇನ್ನುಳಿದ ಹಣಾಹಣಿಗಳಲ್ಲಿ ಅಸ್ಟ್ರಿಯಾದ ಡೇವಿಡ್ ಪಿಚ್ಲರ್ 6–0, 6–3ರಿಂದ ಭಾರತದ ಅರ್ಜುನ್ ಮಹದೇವನ್ ಎದುರು, ಭರತ್ ನಿಶೋಕ್ ಕುಮಾರನ್‌ 6–4, 6–4ರಿಂದ ನಿತಿನ್‌ ಕುಮಾರ್ ಸಿನ್ಹಾ ವಿರುದ್ಧ, ಅಮೆರಿಕದ ಹ್ಯಾರಿಸನ್ ಆ್ಯಡಮ್ಸ್ 7–5, 6–1ರಿಂದ ಭಾರತದ ದೇವ್ ಜೇವಿಯಾ ವಿರುದ್ಧ, ಭಾರತದ ರಿಷಭ್ ಅಗರವಾಲ್‌ 6–4, 3–6, 6–4ರಿಂದ ಸ್ವದೇಶದ ಜಗಮೀತ್ ಸಿಂಗ್ ವಿರುದ್ಧ, ಸಿದ್ದಾರ್ಥ್ ರಾವತ್‌ 6–3, 6–4ರಿಂದ ಜಪಾನ್‌ನ ತೈಸಿ ಇಚಿಕಾವಾ ಎದುರು ಗೆದ್ದು ಪ್ರೀಕ್ವಾರ್ಟರ್‌ಫೈನಲ್‌ಗೆ ಮುನ್ನಡೆದರು.

ಒರ್ಲೊವ್‌ ಗಾಯಗೊಂಡು ನಿವೃತ್ತಿ: ಅಗ್ರಶ್ರೇಯಾಂಕದ ಆಟಗಾರ ಉಕ್ರೇನ್‌ನ ಒರ್ಲೊವ್ ಅವರು ಭುಜದ ನೋವಿನ ಕಾರಣ ಪಂದ್ಯದಿಂದ ಹಿಂದೆ ಸರಿದರು. ಪಂದ್ಯದಲ್ಲಿ ಅವರ ವಿರುದ್ಧ ಕಣಕ್ಕಿಳಿದಿದ್ದ ಭಾರತದ ಮನೀಷ್ ಸುರೇಶ್ ಕುಮಾರ್ ಈ ವೇಳೆ 6–3, 2–0ರಿಂದ ಮುನ್ನಡೆಯಲ್ಲಿದ್ದರು. ಹೀಗಾಗಿ ಮನೀಷ್ ವಿಜೇತರೆಂದು ಪ್ರಕಟಿಸಲಾಯಿತು. ಇದೇ ರೀತಿ ಭಾರತದ ಧ್ರುವ ಹಿರ್ಪಾರ ಅವರೂ 2–6, 0–2ರಿಂದ ಜಪಾನ್‌ನ ಸೆಯಿಟಾ ವಟಾನ್ಬೆ ಎದುರು ಹಿನ್ನಡೆಯಲ್ಲಿದ್ದಾಗ ಗಾಯಗೊಂಡು ಹಿಂದೆ ಸರಿದರು.

ಕಲಬುರಗಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಬುಧವಾರ ನಡೆಯುತ್ತಿರುವ ಓಪನ್ ಪುರುಷರ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ರಾಮಕುಮಾರ್ ರಾಮನಾಥನ್ ಆಟದ ಪರಿ–ಪ್ರಜಾವಾಣಿ ಚಿತ್ರ/ ತಾಜುದ್ದೀನ್‌ ಆಜಾದ್‌
ಕಲಬುರಗಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಬುಧವಾರ ನಡೆಯುತ್ತಿರುವ ಓಪನ್ ಪುರುಷರ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ರಾಮಕುಮಾರ್ ರಾಮನಾಥನ್ ಆಟದ ಪರಿ–ಪ್ರಜಾವಾಣಿ ಚಿತ್ರ/ ತಾಜುದ್ದೀನ್‌ ಆಜಾದ್‌

ರಾಮ್‌– ಪೂರವ್ ಜೋಡಿಗೆ ಆಘಾತ

ಡಬಲ್ಸ್‌ನಲ್ಲಿ ಅಗ್ರಶ್ರೇಯಾಂಕ ಹೊಂದಿದ್ದ ಭಾರತದ ರಾಮಕುಮಾರ್ ರಾಮನಾಥನ್–ಪುರವ್‌ ರಾಜಾ ಜೋಡಿ ಮೊದಲ ಸುತ್ತಿನಲ್ಲೇ ನಿರಾಸೆ ಅನುಭವಿಸಿತು. ಶ್ರೇಯಾಂಕರಹಿತ ಆಟಗಾರರಾದ ಭಾರತದ ಸಾಯಿ ಕಾರ್ತಿಕ್ ರೆಡ್ಡಿ– ಕಬೀರ್ ಹಂಸ್‌ 7–5 6–3ರಿಂದ ರಾಮಕುಮಾರ್– ಪೂರವ್ ಅವರನ್ನು ಸೋಲಿಸಿ ಕ್ವಾರ್ಟರ್‌ಫೈನಲ್ ತಲು‍ಪಿದರು. ಡಬಲ್ಸ್ ವಿಭಾಗದ ಮೊದಲ ಸುತ್ತಿನ ಇನ್ನೊಂದು ಪಂದ್ಯದಲ್ಲಿ ಜಪಾನ್‌ನ ರೂಕಿ ಮತ್ಸುದಾ– ರಿಯೊತಾರೊ ತಗುಚಿ 6–4 6–2ರಿಂದ ಸಿದ್ಧಾಂತ್ ಬಂತಿಯಾ– ಮನೀಷ್ ಸುರೇಶ್ ಕುಮಾರ್ ಎದುರು ಜಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT