ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿಎಫ್‌ ಕಲಬುರಗಿ ಓಪನ್‌ ಟೆನಿಸ್‌ ಟೂರ್ನಿ: ಮನೀಷ್‌, ರಿಷಭ್‌ ಕ್ವಾರ್ಟರ್‌ಗೆ

Published 30 ನವೆಂಬರ್ 2023, 19:30 IST
Last Updated 30 ನವೆಂಬರ್ 2023, 19:30 IST
ಅಕ್ಷರ ಗಾತ್ರ

ಕಲಬುರಗಿ: ಎದುರಾಳಿಯನ್ನು ಸುಲಭವಾಗಿ ಮಣಿಸಿದ ಭಾರತದ ಮನೀಷ್‌ ಸುರೇಶ್‌ಕುಮಾರ್ ಹಾಗೂ ರೋಚಕ ಜಯ ದಾಖಲಿಸಿದ ರಿಷಭ್ ಅಗರವಾಲ್ ಅವರು ಕಲಬುರಗಿ ಓಪನ್ ಐಟಿಎಫ್‌ ಪುರುಷರ ಟೆನಿಸ್‌ ಟೂರ್ನಿಯ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದರು.

ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಸಿಂಗಲ್ಸ್ ವಿಭಾಗದ 16ರ ಘಟ್ಟದ ಹಣಾಹಣಿಯಲ್ಲಿ ಗುರುವಾರ ಭಾರತದ ಮನೀಷ್‌ ಸುರೇಶ್‌ಕುಮಾರ್ 6–1, 6–0ಯಿಂದ ಸ್ವದೇಶದ ಆಟಗಾರ ಭರತ್ ನಿಶೋಕ್ ಕುಮಾರನ್ ಅವರನ್ನು ಪರಾಭವಗೊಳಿಸಿದರು.

ವೇಗದ ಸರ್ವ್‌ ಮತ್ತು ತಾಂತ್ರಿಕ ನೈಪುಣ್ಯದ ನೆರವಿನಿಂದ ಮನೀಷ್‌ ಅವರು ಕೇವಲ ಒಂದು ಗೇಮ್‌  ಮಾತ್ರ ಎದುರಾಳಿಗೆ ಬಿಟ್ಟುಕೊಟ್ಟು, ಮೊದಲ ಸೆಟ್‌ ಜಯಿಸಿದರು. ಆದರೆ, ಎರಡನೇ ಸೆಟ್‌ನಲ್ಲಿ ಏಕಪಕ್ಷೀಯ ಜಯ ಸಾಧಿಸಿದರು. ಈ ಹಂತದಲ್ಲಿ ಅವರು ಎರಡು ಏಸ್‌ಗಳನ್ನು ಸಿಡಿಸಿದರೆ, 31 ಸರ್ವಿಸ್‌ ಪಾಯಿಂಟ್ಸ್ ಗಳಿಸಿದರು.

ಇನ್ನೊಂದು ಪಂದ್ಯದಲ್ಲಿ ರಿಷಭ್ ಅಗರವಾಲ್‌ 6–1, 7–6 (1)ರಿಂದ ಕರ್ನಾಟಕದ ಮನೀಷ್‌ ಗಣೇಶ್ ಅವರನ್ನು ಮಣಿಸಿದರು. ಮೊದಲ ಸೆಟ್‌ ಸುಲಭವಾಗಿ ಕೈಚೆಲ್ಲಿದ ಮನೀಷ್‌, ಎರಡನೇ ಸೆಟ್‌ನಲ್ಲಿ ಕೊಂಚ ಹೋರಾಟ ತೋರಿದರು. ಆದರೆ, ಗೆಲುವು ಒಲಿಯಲಿಲ್ಲ. ಟೈಬ್ರೇಕರ್‌ನಲ್ಲಿ ಫಲಿತಾಂಶ ನಿರ್ಧಾರವಾಯಿತು.

ರಾಮಕುಮಾರ್‌ಗೆ ಪ್ರಯಾಸದ ಜಯ: ಐದನೇ ಶ್ರೇಯಾಂಕದ ರಾಮಕುಮಾರ್‌ ರಾಮನಾಥನ್ ಅವರು ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಗೆಲುವಿಗೆ ತಿಣುಕಾಡಿ ದರು. ವೈಲ್ಡ್‌ಕಾರ್ಡ್‌ ಪ್ರವೇಶ ಪಡೆದಿದ್ದ ಆಟಗಾರ ಕಬೀರ್ ಹಂಸ್‌ ಎದುರು 7–5, 3–6, 6–2ರಿಂದ ಗೆದ್ದ ಅವರು ನಿಟ್ಟುಸಿರುಬಿಟ್ಟರು. 2 ಗಂಟೆ 49 ನಿಮಿಷಗಳ ಸುದೀರ್ಘ ಕಾಲ ನಡೆದ ಮತ್ತೊಂದು ಹಣಾಹಣಿಯಲ್ಲಿ, ಅರ್ಹತಾ ಸುತ್ತಿನಿಂದ ಗೆದ್ದು ಬಂದ ಆರ್ಯನ್‌ ಶಾ 4–6, 7–6 (4), 7–6 (3)ರಿಂದ ನಾಲ್ಕನೇ ಶ್ರೇಯಾಂಕದ ಸಿದ್ಧಾರ್ಥ್ ರಾವತ್‌ ಅವರಿಗೆ ಆಘಾತ ನೀಡಿದರು.

ಪ್ರೀ ಕ್ವಾರ್ಟರ್‌ನ ಇನ್ನುಳಿದ ಪಂದ್ಯಗಳಲ್ಲಿ ಜಪಾನ್‌ನ ರೂಕಿ ಮತ್ಸುದಾ 6–2, 6–0ರಿಂದ ಭಾರತದ ರಾಘವ್ ಜೈಸಿಂಘಾನಿ ಎದುರು, ಆಸ್ಟ್ರಿಯಾದ ಡೇವಿಡ್‌ ಪಿಚ್ಲರ್ 7–6 (6), 6–3ರಿಂದ ಅಮೆರಿಕದ ಆ್ಯಡಂ ಹ್ಯಾರಿಸನ್‌ ವಿರುದ್ಧ, ಜಪಾನ್‌ನ ರಿಯೊತಾರೊ ತಗುಚಿ 7–5, 6–1ರಿಂದ ಭಾರತದ ಕರಣ್‌ ಸಿಂಗ್ ಮೇಲೆ, ಜಪಾನ್‌ನ ಸಿಯೆಟಾ ವಾಟನಬೆ 6–2, 6–3ರಿಂದ ಭಾರತದ ರಿಷಿ ರೆಡ್ಡಿ ವಿರುದ್ಧ ಗೆದ್ದು ಮುನ್ನಡೆದರು.

ಡಬಲ್ಸ್: ಸೆಮಿಗೆ ಆದಿಲ್‌ ಜೋಡಿ

ಡಬಲ್ಸ್ ವಿಭಾಗದಲ್ಲಿ ಕರ್ನಾಟಕದ ಆದಿಲ್ ಕಲ್ಯಾಣಪುರ ಹಾಗೂ ಸಿದ್ದಾರ್ಥ್ ರಾವತ್ ಜೋಡಿಯು ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ 6–1, 6–4ರಿಂದ ಜಪಾನ್‌ನ ತೈಸಿ ಇಚಿಕಾವಾ ಮತ್ತು ಸಿ ಯಟಾ ವಾಟನಬೆ ಎದುರು ಗೆದ್ದು ಸೆಮಿಗೆ ಕಾಲಿಟ್ಟಿತು.

ಡಬಲ್ಸ್ ವಿಭಾಗದ ಇನ್ನುಳಿದ ಕ್ವಾರ್ಟರ್‌ಫೈನಲ್‌ ಹಣಾಹಣಿಗಳಲ್ಲಿ ಭಾರತದ ರಿಷಭ್ ಅಗರವಾಲ್‌–ಭರತ್‌ ನಿಶೋಕ್ 4–6, 6–4, 10–8ರಿಂದ ಸಾಯಿ ಕಾರ್ತಿಕ್ ರೆಡ್ಡಿ ಗಂಟಾ– ಕಬೀರ್ ಹಂಸ್‌ ಜೋಡಿಯ ಎದುರು, ಜಪಾನ್‌ನ ರೂಕಿ–ರಿಯೊತಾರೊ 6–2, 3–6, 10–5ರಿಂದ ಭಾರತದ ಆರ್ಯನ್‌–ರಂಜೀತ್‌ ವಿರಾಲಿ ಮುರುಗೇಶನ್ ಎದುರು ಗೆದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT