ನ್ಯೂಯಾರ್ಕ್: ಸರ್ಬಿಯಾದ ತಾರೆ ನೊವಾಕ್ ಜೊಕೊವಿಚ್ ಅವರು ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಮೂರನೇ ಸುತ್ತನ್ನು ತಲುಪಿದರು. ಎರಡನೇ ಶ್ರೇಯಾಂಕದ ಜೊಕೊವಿಚ್ ಬುಧವಾರ 6–4, 6–4, 2–0 ಯಿಂದ ಮುಂದಿದ್ದಾಗ ಅವರ ಎದುರಾಳಿ, ಸ್ವದೇಶದ ಲಾಸ್ಲೊ ಜೇರೆ ಗಾಯಾಳಾಗಿ ಪಂದ್ಯ ಬಿಟ್ಟುಕೊಟ್ಟರು.
ಆರ್ಥರ್ ಆ್ಯಷ್ ಕ್ರೀಡಾಂಗಣದಲ್ಲಿ ಎರಡನೇ ಸೆಟ್‌ನಲ್ಲಿ 4–2 ರಿಂದ ಮುಂದಿದ್ದಾಗ ಲಾಸ್ಲೊ ಅವರಿಗೆ ಮೊದಲ ಬಾರಿ ಬೆನ್ನಿನ ಕೆಳಭಾಗದಲ್ಲಿ ನೋವು ಕಾಣಿಸಿಕೊಂಡಿತು. ನಂತರ ಅವರು ಆಟ ಮುಂದುವರಿಸಿದರೂ, ಮೂರನೇ ಸೆಟ್‌ನ ಆರಂಭದಲ್ಲೇ ಪಂದ್ಯ ಬಿಟ್ಟುಕೊಡಬೇಕಾಯಿತು. ಆದರೆ ಜೊಕೊವಿಚ್ ಉತ್ತಮ ಲಯದಲ್ಲೇನೂ ಇರಲಿಲ್ಲ. ಅವರ ಸರ್ವ್‌ಗಳು ನಿರೀಕ್ಷಿತ
ಮಟ್ಟದಲ್ಲಿರಲಿಲ್ಲ.
37 ವರ್ಷ ವಯಸ್ಸಿನ ಜೊಕೊವಿಚ್‌ಗೆ ಇದು ಅಮೆರಿಕ ಓಪನ್‌ನಲ್ಲಿ ಒಟ್ಟಾರೆ 90ನೇ ಗೆಲುವು ಎನಿಸಿತು. ಎಲ್ಲ ನಾಲ್ಕೂ ಗ್ರ್ಯಾನ್‌ಸ್ಲಾಮ್‌ಗಳಲ್ಲಿ 90 ಅಥವಾ ಹೆಚ್ಚು ಪಂದ್ಯಗಳನ್ನು ಗೆದ್ದ ಮೊದಲ ಟೆನಿಸಿಗ ಎಂಬ ಹಿರಿಮೆ ಅವರದಾಯಿತು. ಬೆಲ್‌ಗ್ರೇಡ್‌ನಲ್ಲಿ ಜನಿಸಿದ ಈ ಆಟಗಾರ ಆಸ್ಟ್ರೇಲಿಯಾ ಓಪನ್‌ನಲ್ಲಿ 94, ಫ್ರೆಂಚ್ ಓಪನ್‌ನಲ್ಲಿ 96, ವಿಂಬಲ್ಡನ್‌ನಲ್ಲಿ 97 ಪಂದ್ಯಗಳನ್ನು ಜಯಿಸಿದ್ದಾರೆ. 25ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯ ಯತ್ನದ ಲ್ಲಿರುವ ಜೊಕೊವಿಚ್ ಶುಕ್ರವಾರ ನಡೆಯುವ ಮೂರನೇ ಸುತ್ತಿನ ಪಂದ್ಯದಲ್ಲಿ 28ನೇ ಶ್ರೇಯಾಂಕದ ಅಲೆಕ್ಸಿ ಪೊಪಿರಿನ್ ಅವರನ್ನು ಎದುರಿಸಲಿದ್ದಾರೆ.
ಆರನೇ ಶ್ರೇಯಾಂಕದ ಆ್ಯಂಡ್ರಿ ರುಬ್ಲೇವ್ (ರಷ್ಯಾ) 4–6, 5–7, 6–1, 6–2, 6–2 ರಿಂದ ಆರ್ಥರ್ ರಿಂಡರ್‌ನೆಕ್ (ಫ್ರಾನ್ಸ್) ಅವರನ್ನು ಹಿಮ್ಮೆಟ್ಟಿಸಿದರು.
ಬಾರ್ಬರಾಗೆ ಸೋಲು: ವಿಂಬಲ್ಡನ್ ಮಹಿಳಾ ಸಿಂಗಲ್ಸ್ ಚಾಂಪಿಯನ್ ಬಾರ್ಬರಾ ಕ್ರೆಚಿಕೊವಾ ಎರಡನೇ ಸುತ್ತಿನಲ್ಲಿ ಹೊರಬಿದ್ದರು. ಎಲೆನಾ–ಗೇಬ್ರಿಯೆಲಾ ರುಸ್ 6–4, 7–5 ರಿಂದ ಝೆಕ್ ರಿಪಬ್ಲಿಕ್‌ನ ಆಟಗಾರ್ತಿಯನ್ನು ನೇರ ಸೆಟ್‌ಗಳಿಂದ ಹಿಮ್ಮೆಟ್ಟಿಸಿದರು. ಕ್ರೇಚಿಕೊವಾ ಈ ಟೂರ್ನಿಯಲ್ಲಿ ಎಂಟನೇ ಶ್ರೇಯಾಂಕ ಪಡೆದಿದ್ದರು.
ದಾಖಲೆ ಅವಧಿಯ ಪಂದ್ಯ ಆಡಿದ ಇವಾನ್ಸ್: ಅಂತಿಮ ಸೆಟ್‌ನಲ್ಲಿ 0–4 ಹಿನ್ನಡೆಯಿಂದ ಅಮೋಘವಾಗಿ ಪುನರಾಗಮನ ಮಾಡಿದ ಬ್ರಿಟನ್‌ನ ಡೇನಿಯಲ್ ಇವಾನ್ಸ್ ಅಮೆರಿಕ ಓಪನ್ ಇತಿಹಾಸದಲ್ಲೇ ಅತಿ ದೀರ್ಘ ಪಂದ್ಯ ಆಡಿ ಕರೆನ್ ಕಚನೋವ್ ಅವರನ್ನು ಸೋಲಸಿಇದರು.
ಆರನೇ 6ಕೋರ್ಟ್‌ನಲ್ಲಿ ಇವಾನ್ಸ್ 5 ಗಂಟೆ 35 ನಿಮಿಷಗಳವರೆಗೆ ನಡೆದ ಮ್ಯಾರಥಾನ್ ಪಂದ್ಯದಲ್ಲಿ 23ನೇ ಶ್ರೇಯಾಂಕದ ರಷ್ಯನ್ ಆಟಗಾರ ಕಚನೋವ್ ಅವರನ್ನು 6–7 (6–8), 7–6 (7–2), 7–6 (7–4), 4–6, 6–4 ರಿಂದ ಜಯಗಳಿಸಿದರು. ಬುಧವಾರ ತಡರಾತ್ರಿವರೆಗೆ ಪಂದ್ಯ ನಡೆಯಿತು.
ಈ ಹಿಂದೆ 1992ರ ಸೆಮಿಫೈನಲ್ ಪಂದ್ಯದಲ್ಲಿ ಸ್ವೀಡನ್‌ನ ಸ್ಟೀಫನ್ ಎಡ್ಬರ್ಗ್ ಅವರು ಅಮೆರಿಕದ ಮೈಕೆಲ್ ಚಾಂಗ್ ಅವರನ್ನು 6–7 (3–7), 7–5, 7–6 (7–3), 5–7, 6–4 ರಿಂದ ಸೋಲಿಸಲು 5 ಗಂಟೆ 26 ನಿಮಿಷ ಹೋರಾಡಿದ್ದು, ಈ ಹಿಂದಿನ ದಾಖಲೆ ಆಗಿತ್ತು.
ಬಾಲಾಜಿ, ಭಾಂಬ್ರಿ ಮುನ್ನಡೆ
ನ್ಯೂಯಾರ್ಕ್: ಭಾರತದ ಡಬಲ್ಸ್ ಆಟಗಾರರು ಅಮೆರಿಕ ಓಪನ್ ಟೂರ್ನಿಯಲ್ಲಿ ಶುಭಾರಂಭ ಮಾಡಿದರು. ಡೇವಿಸ್ ಕಪ್ ಆಟಗಾರ ಎನ್.ಶ್ರೀರಾಮ್ ಬಾಲಾಜಿ ಮತ್ತು ಯುಕಿ ಭಾಂಬ್ರಿ ಅವರು ತಮ್ಮ ತಮ್ಮ ಜೊತೆಗಾರರೊಡನೆ ಡಬಲ್ಸ್‌ನಲ್ಲಿ ಮೊದಲ ಸುತ್ತಿನ ಪಂದ್ಯಗಳನ್ನು ಗೆದ್ದುಕೊಂಡರು.
ಬಾಲಾಜಿ ಅವರು ಅರ್ಜೆಂಟೀನಾದ ಜೊತೆಗಾರ ಗಿದೊ ಅಂಡ್ರಿಯೋಜಿ ಅವರೊಂದಿಗೆ ಆರಂಭದ ಹಿನ್ನಡೆಯಿಂದ ಚೇತರಿಸಿ 5–7, 6–1, 7–6 (12–6) ರಿಂದ ನ್ಯೂಜಿಲೆಂಡ್ ಮಾರ್ಕಸ್ ಡೇನಿಯಲ್ ಮತ್ತು ಮೆಕ್ಸಿಕೊದ ಮಿಗೆಲ್ ರಯೆಸ್ ವೆರೆಲಾ ಜೋಡಿಯ ಮೇಲೆ ಜಯಗಳಿಸಿದರು. ತೀವ್ರ ಪೈಪೋಟಿಯ ಈ ಪಂದ್ಯ 2 ಗಂಟೆ 36 ನಿಮಿಷಗಳವರೆಗೆ ಬೆಳೆಯಿತು.
ಬಾಲಾಜಿ ಫ್ರೆಂಚ್ ಓಪನ್‌ನಲ್ಲೂ ಗಮನ ಸೆಳೆದಿದ್ದರು. ಅಲ್ಲಿನ ಕ್ಲೇ ಅಂಕಣದಲ್ಲಿ ಬಾಲಾಜಿ– ರೆಯೆಸ್ ಜೋಡಿ, ಅನುಭವಿಗಳಾದ ರೋಹನ್ ಬೋಪಣ್ಣ– ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಅವರಿಗೆ ತೀವ್ರ ಪೈಪೋಟಿ ನೀಡಿತ್ತು. ಇಲ್ಲಿ ಯಶಸ್ಸಿನ ಓಟ ಮುಂದುವರಿಸಿದರೆ, ಅದು ಬಾಲಾಜಿ ಅವರಿಗೆ ಸ್ವೀಡನ್ ವಿರುದ್ಧ ಡೇವಿಸ್ ಕಪ್‌ಗೆ ಉತ್ತಮ ತಯಾರಿ ಎನಿಸಲಿದೆ.
ಯುಕಿ ಭಾಂಬ್ರಿ ಅವರು ಫ್ರಾನ್ಸ್‌ನ ಅಲ್ಬಾನೊ ಒಲಿವೆಟ್ಟಿ ಜೊತೆಗೂಡಿ 6–3, 6–4 ರಿಂದ ಸ್ಥಳೀಯರಾದ ರಯಾನ್ ಸೆಗೆರ್‌ಮನ್– ಪ್ಯಾಟ್ರಿಕ್ ಟ್ರಹಾಕ್ ಅವರನ್ನು ಸೋಲಿಸಿದರು. ರಯಾನ್– ಪ್ಯಾಟ್ರಿಕ್ ಅವರು ವೈಲ್ಡ್‌ಕಾರ್ಡ್ ಪ್ರವೇಶ ಪಡೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.