ಸೋಮವಾರ, ಮೇ 17, 2021
21 °C

ವರ್ಣಭೇದ ನೀತಿಗೆ ವಿರೋಧ: ಟೆನಿಸ್ ಟೂರ್ನಿ ಮುಂದೂಡಿಕೆ

ಎಪಿ Updated:

ಅಕ್ಷರ ಗಾತ್ರ : | |

Prajavani

ನ್ಯೂಯಾರ್ಕ್‌: ವರ್ಣಭೇದ ನೀತಿ ವಿರೋಧಿಸಿ ಜಪಾನ್‌ನ ನವೊಮಿ ಒಸಾಕ ಅವರು ಇಲ್ಲಿ ನಡೆಯುತ್ತಿರುವ ವೆಸ್ಟರ್ನ್ ಆ್ಯಂಡ್ ಸದರ್ನ್ ಓಪನ್ ಟೆನಿಸ್ ಟೂರ್ನಿಯನ್ನು ಬಹಿಷ್ಕರಿಸಲು ಗುರುವಾರ ನಿರ್ಧರಿಸಿದರು. ಇದಕ್ಕೆ ಇತರ ಕೆಲ ಆಟಗಾರರೂ ಬೆಂಬಲ ಸೂಚಿಸುತ್ತಿದ್ದಂತೆ ಆಯೋಜಕರು ಟೂರ್ನಿಯನ್ನು ಒಂದು ದಿನದ ಮಟ್ಟಿಗೆ ಮುಂದೂಡಿದರು.

ನಾಲ್ಕನೇ ಶ್ರೇಯಾಂಕ ಹೊಂದಿದ್ದ ಒಸಾಕ ಎಂಟರ ಘಟ್ಟದ ಪಂದ್ಯದಲ್ಲಿ ಅನೆಟ್ ಕೊಂತಾವೇಟ್ ವಿರುದ್ಧ 4–6, 6–2, 7–5ರಲ್ಲಿ ಗೆದ್ದು ಸೆಮಿಫೈನಲ್‌ ಪ್ರವೇಶಿಸಿದ್ದರು. ಆದರೆ ಕಪ್ಪುವರ್ಣದ ಜೇಕಬ್ ಬ್ಲೇಕ್ ಮೇಲೆ ಗುಂಡಿನ ದಾಳಿ ನಡೆದದ್ದನ್ನು ಖಂಡಿಸಿ ಅವರು ಬಹಿಷ್ಕಾರದ ವಿಷಯ ಪ್ರಕಟಿಸಿದರು. 

‘ಇತರ ಕ್ರೀಡೆಗಳಂತೆ ಟೆನಿಸ್ ಕೂಡ ವರ್ಣಭೇದ ನೀತಿ ಮತ್ತು ಸಾಮಾಜಿಕ ಅಸಮಾನತೆಯನ್ನು ವಿರೋಧಿಸುತ್ತದೆ. ಹೀಗಾಗಿ ಒಂದು ದಿನದ ಮಟ್ಟಿಗೆ ಟೂರ್ನಿಯನ್ನು ಮುಂದೂಡಲು ನಿರ್ಧರಿಸಲಾಗಿದೆ’ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಪೊಲೀಸರು ಕಪ್ಪುವರ್ಣೀಯರ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ಕಪ್ಪು ವರ್ಣೀಯಳಾಗಿ ಪ್ರತಿಭಟಿಸಬೇಕಾದದ್ದು ನನ್ನ ಜವಾಬ್ದಾರಿ. ನನ್ನ ಈ ನಿರ್ಧಾರದಿಂದ ಏಕಾಏಕಿ ಎಲ್ಲವೂ ಬದಲಾಗುತ್ತದೆ ಎಂಬ ನಂಬಿಕೆಯೇನೂ ಇಲ್ಲ. ಆದರೆ ಪೊಲೀಸರ ಕೃತ್ಯವು ನನ್ನಲ್ಲಿ ಬೇಸರ ಉಂಟುಮಾಡಿದ್ದು ವಿರೋಧಕ್ಕೆ ಧ್ವನಿಗೂಡಿಸುವುದಕ್ಕಾಗಿ ಈ ತೀರ್ಮಾನ ಕೈಗೊಂಡಿದ್ದೇನೆ’ ಎಂದು ಒಸಾಕ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ತಕ್ಷಣ ಪ್ರತಿಕ್ರಿಯಸಿದ ಸ್ಲಾನೆ ಸ್ಟೀಫನ್ಸ್ ‘ಒಸಾಕ ಬಗ್ಗೆ ಹೆಮ್ಮೆ ಎನಿಸುತ್ತದೆ. ನಿಮ್ಮ ಧ್ವನಿ ಇನ್ನಷ್ಟು ಜೋರಾಗಿ ಮೊಳಗಲಿ’ ಎಂದಿದ್ದಾರೆ. ‘ಒಂದು ವರ್ಗದ ಆಟಗಾರು ಕೂಡ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಇದನ್ನು ಎಟಿಪಿ ಮತ್ತು ಡಬ್ಲ್ಯುಟಿಎ ಗಂಭೀರವಾಗಿ ಪರಿಗಣಿಸಬೇಕು’ ಎಂದು ಬುಧವಾರ ನಾಲ್ಕರ ಘಟ್ಟ ಪ್ರವೇಶಿಸಿದ್ದ ಮಿಲಾಸ್ ರಾನಿಕ್ ಒತ್ತಾಯಿಸಿದ್ದರು.

ಜನಾಂಗೀಯ ನ್ಯಾಯ ಬೇಕು ಎಂದು ಒತ್ತಾಯಿಸಿ ಆಟಗಾರರು ಪ್ರತಿಭಟನೆ ನಡೆಸಿದ್ದರಿಂದ ಎನ್‌ಬಿಎ, ಮಹಿಳಾ ಎನ್‌ಬಿಎ ಮತ್ತು ಇತರ ಮೂರು ಬ್ಯಾಸ್ಕೆಟ್‌ಬಾಲ್ ಲೀಗ್‌ಗಳ ಪಂದ್ಯಗಳನ್ನು ಬುಧವಾರ ರದ್ದುಗೊಳಿಸಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು