ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಂಬಲ್ಡನ್‌ ಟೆನಿಸ್‌ ಟೂರ್ನಿ: ಕ್ವಾರ್ಟರ್‌ ಫೈನಲ್‌ಗೆ ಅಲ್ಕರಾಜ್‌

Published 8 ಜುಲೈ 2024, 3:18 IST
Last Updated 8 ಜುಲೈ 2024, 3:18 IST
ಅಕ್ಷರ ಗಾತ್ರ

ಲಂಡನ್‌: ಹಾಲಿ ಚಾಂಪಿಯನ್‌ ಕಾರ್ಲೋಸ್ ಅಲ್ಕರಾಜ್‌ ಅವರು ವಿಂಬಲ್ಡನ್‌ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಹಾಕಿದರು. ನಾಲ್ಕನೇ ಗ್ಲಾನ್‌ಸ್ಲಾಮ್‌ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಅವರು ಭಾನುವಾರ ಫ್ರಾನ್ಸ್‌ನ ಉಗೊ ಹಂಬರ್ಟ್‌ ಅವರನ್ನು ಮಣಿಸಿದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿರುವ ಸ್ಪೇನ್‌ನ ಅಲ್ಕರಾಜ್‌ 6-3, 6-4, 1-6, 7-5 ಸೆಟ್‌ಗಳಿಂದ 16ನೇ ಕ್ರಮಾಂಕದ ಹಂಬರ್ಟ್‌ ಅವರನ್ನು ಮಣಿಸಿದರು. ಈ ಮೂಲಕ ಪಾಲ್ಗೊಂಡ 14 ಪ್ರಮುಖ ಟೂರ್ನಿಗಳಲ್ಲಿ ಒಂಬತ್ತನೇ ಬಾರಿ ಎಂಟರ ಘಟ್ಟ ಪ್ರವೇಶಿಸಿದ ಸಾಧನೆ ಮಾಡಿದರು. ಮೂರನೇ ಸುತ್ತಿನ ಪಂದ್ಯದಲ್ಲಿ ಫ್ರಾನ್ಸಿಸ್ ಟಿಯಾಫೊ (ಅಮೆರಿಕ) ವಿರುದ್ಧ ಐದು ಸೆಟ್‌ಗಳ ಹೋರಾಟದಲ್ಲಿ ಪ್ರಯಾಸದ ಗೆಲುವು ಪಡೆದಿದ್ದ 21 ವರ್ಷದ ಅಲ್ಕರಾಜ್‌ ಅವರಿಗೆ ಈ ಪಂದ್ಯದಲ್ಲೂ ಪ್ರಬಲ ಸ್ಪರ್ಧೆ ಎದುರಾಯಿತು. ಮೊದಲೆರಡು ಸೆಟ್‌ನಲ್ಲಿ ಅಲ್ಕರಾಜ್‌ ಗೆಲುವು ಸಾಧಿಸಿದರೆ, ಮೂರನೇ ಸೆಟ್‌ನಲ್ಲಿ ಹಂಬರ್ಟ್‌ ಮೇಲುಗೈ ಸಾಧಿಸಿದರು. ಮತ್ತೆ ಲಯ ಕಂಡುಕೊಂಡ ಸ್ಪೇನ್‌ ಆಟಗಾರ, ನಾಲ್ಕನೇ ಸೆಟ್‌ಗಳನ್ನು ವಶ ಮಾಡಿಕೊಂಡರು.

‌ಅಗ್ರ ಶ್ರೇಯಾಂಕದ ಯಾನಿಕ್‌ ಸಿನ್ನರ್‌ ಅವರೂ ಅಂತಿಮ ಎಂಟರ ಘಟ್ಟವನ್ನು ಪ್ರವೇಶಿಸಿದರು. ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಅವರು 6-2, 6-4, 7-6 (9) ನೇರ ಸೆಟ್‌ಗಳಿಂದ ಬೆನ್ ಶೆಲ್ಟನ್ ಅವರನ್ನು ಮಣಿಸಿದರು.

ಕಳೆದ ವರ್ಷ ಇಲ್ಲಿ ಸೆಮಿಫೈನಲ್‌ನಲ್ಲಿ ನೊವಾಕ್ ಜೊಕೊವಿಚ್‌ ವಿರುದ್ಧ ಸೋತಿದ್ದ ಸಿನ್ನರ್, ಸತತ ಮೂರನೇ ಬಾರಿ ಕ್ವಾರ್ಟರ್‌ ಫೈನಲ್‌ ತಲುಪಿದರು.

ಐದನೇ ಶ್ರೇಯಾಂಕದ ಡೇನಿಯಲ್ ಮೆಡ್ವೇಡೆವ್ ಅವರೂ ನಿರಾಯಾಸವಾಗಿ ಕ್ವಾರ್ಟರ್‌ಗೆ ಮುನ್ನಡೆದರು. ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಅವರು 10ನೇ ಶ್ರೇಯಾಂಕದ ಗ್ರಿಗರ್ ಡಿಮಿಟ್ರೋವ್ ಅವರನ್ನು ಎದುರಿಸಬೇಕಿತ್ತು. 5–3 ಗೇಮ್‌ಗಳ ಹಿನ್ನಡೆಯಲ್ಲಿದ್ದ ಗ್ರಿಗರ್‌ ಅವರು ಗಾಯದ ಕಾರಣದಿಂದ ಹೋರಾಟದಿಂದ ಹಿಂದೆ ಸರಿದರು.

ಅಮೆರಿಕ ಓಪನ್ ಮಾಜಿ ಚಾಂಪಿಯನ್ ಮೆಡ್ವೇಡೆವ್ ಅವರು ಸೆಮಿಫೈನಲ್‌ನಲ್ಲಿ ಯಾನಿಕ್ ಸಿನ್ನರ್ ಅವರನ್ನು ಎದುರಿಸಲಿದ್ದಾರೆ.

ನಾಲ್ಕನೇ ಸುತ್ತಿಗೆ ಜೊಕೊವಿಚ್‌: ಸರ್ಬಿಯಾದ ನೊವಾಕ್ ಜೊಕೊವಿಚ್ ಪುರುಷರ ಸಿಂಗಲ್ಸ್‌ನಲ್ಲಿ ನಾಲ್ಕನೇ ಸುತ್ತಿಗೆ ಮುನ್ನಡೆದರು. ಆ ಮೂಲಕ ವಿಂಬಲ್ಡನ್‌ನಲ್ಲಿ 16ನೇ ಬಾರಿ ನಾಲ್ಕನೇ ಸುತ್ತು ಪ್ರವೇಶಿಸಿದ ಸಾಧನೆ ಮಾಡಿದರು.

ಎರಡನೇ ಶ್ರೇಯಾಂಕ ಜೊಕೊವಿಚ್ ಅವರು 4-6, 6-3, 6-4, 7-6 (7/3)ರಿಂದ ಆಸ್ಟ್ರೇಲಿಯಾದ ಅಲೆಕ್ಸಿ ಪೊಪಿರಿನ್‌ ಅವರನ್ನು ಹಿಮ್ಮೆಟ್ಟಿಸಿದರು.

ಒಟ್ಟಾರೆ ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲಿ ಜೊಕೊವಿಚ್ 65ನೇ ಬಾರಿ ಅಂತಿಮ 16ನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಹಾಗೆಯೇ ವಿಂಬಲ್ಡನ್‌ನಲ್ಲಿ 95ನೇ ಗೆಲುವು ದಾಖಲಿಸಿದರು. ನಾಲ್ಕನೇ ಸುತ್ತಿನಲ್ಲಿ ಅವರು 15ನೇ ಶ್ರೇಯಾಂಕದ ಡೆನ್ಮಾರ್ಕ್‌ನ ಹೊಲ್ಗರ್ ರೂನ್ ಅವರನ್ನು ಎದುರಿಸಲಿದ್ದಾರೆ.

ಬೋಪಣ್ಣ–ಎಬ್ಡೆನ್‌ ಜೋಡಿಗೆ ಆಘಾತ

ಲಂಡನ್‌: ಭಾರತದ ರೋಹನ್‌ ಬೋಪಣ್ಣ ‌ಮತ್ತು ಆಸ್ಟ್ರೇಲಿಯಾದ  ಮ್ಯಾಥ್ಯೂ ಎಬ್ಡೆನ್ ಜೋಡಿ ವಿಂಬಲ್ಡನ್‌ ಟೂರ್ನಿಯಿಂದ ಹೊರಬಿದ್ದಿದೆ. 

ಶನಿವಾರ ನಡೆದ ಪುರುಷರ ಡಬಲ್ಸ್‌ ಎರಡನೇ ಸುತ್ತಿನ ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ಬೋಪಣ್ಣ–ಎಬ್ಡೆನ್ ಜೋಡಿ 3-6, 6-7 (4) ನೇರ ಸೆಟ್‌ಗಳಿಂದ ಶ್ರೇಯಾಂಕರಹಿತ ಜರ್ಮನಿಯ ಹೆಂಡ್ರಿಕ್‌ ಜೆಬೆನ್ಸ್‌ ಮತ್ತು ಕಾನ್‌ಸ್ಟಾಂಟಿನೊ ಪ್ರಾಟ್ಜೆನ್‌ ಜೋಡಿಯ ವಿರುದ್ಧ ಆಘಾತ ಅನುಭವಿಸಿತು.

ಆಸ್ಟ್ರೇಲಿಯನ್‌ ಓಪನ್‌ ವಿಜೇತ ಬೋಪಣ್ಣ ಮತ್ತು ಎಬ್ಡೆನ್‌ ಜೋಡಿಯು ವಿರಾಮದ ನಂತರ ಮೊದಲ ಸೆಟ್‌ ಅನ್ನು ಜೆಬೆನ್ಸ್‌ ಮತ್ತು ಪ್ರಾಟ್ಜೆನ್‌ಗೆ ಬಿಟ್ಟುಕೊಟ್ಟಿತು. ಎರಡನೇ ಸೆಟ್‌ 5–5 ಗೇಮ್‌ಗಳಿಂದ ಸಮಬಲ ವಿದ್ದ ವೇಳೆಯಲ್ಲಿ ಮಳೆ ಪಂದ್ಯಕ್ಕೆ ಅಡ್ಡಿಪಡಿಸಿತು. ನಂತರ ಟೈ ಬ್ರೇಕರ್‌ನಲ್ಲಿ ಜೆಬೆನ್ಸ್‌ ಮತ್ತು ಪ್ರಾಟ್ಜೆನ್‌ 4–1 ರಿಂದ ಬೋಪಣ್ಣ–ಎಬ್ಡೆನ್‌ ಅವರನ್ನು ಸೋಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT