ಶನಿವಾರ, ಸೆಪ್ಟೆಂಬರ್ 18, 2021
28 °C

ಟೆನಿಸ್‌: ಷಿಕಾಗೊ ತಂಡ ಶುಭಾರಂಭ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

Prajavani

ಲಾಸ್‌ ವೇಗಾಸ್‌: ದಿಟ್ಟ ಸಾಮರ್ಥ್ಯ ತೋರಿದ ಷಿಕಾಗೊ ಸ್ಮ್ಯಾಷ್‌ ತಂಡವು ವಿಶ್ವ ಟೀಮ್‌ ಟೆನಿಸ್‌ (ಡಬ್ಲ್ಯುಟಿಟಿ) ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಷಿಕಾಗೊ 24–18 ಪಾಯಿಂಟ್ಸ್‌ನಿಂದ ವೇಗಾಸ್‌ ರೋಲರ್ಸ್‌ ತಂಡವನ್ನು ಪರಾಭವಗೊಳಿಸಿತು.

ಷಿಕಾಗೊ ತಂಡದಲ್ಲಿದ್ದ ಸ್ಲೋನ್‌ ಸ್ಟೀಫನ್ಸ್‌ ಅವರು ಮಹಿಳಾ ಸಿಂಗಲ್ಸ್‌ ಪಂದ್ಯದಲ್ಲಿ 5–1ರಿಂದ ಮೋನಿಕಾ ಪುಯಿಗ್‌ ಅವರನ್ನು ಸೋಲಿಸಿದರು. 2017ರ ಅಮೆರಿಕ ಓಪನ್‌ನಲ್ಲಿ ಚಾಂಪಿಯನ್‌ ಆಗಿದ್ದ ಸ್ಟೀಫನ್ಸ್‌ 43 ನಿಮಿಷಗಳ ಹೋರಾಟದಲ್ಲಿ ಅಮೋಘ ಸಾಮರ್ಥ್ಯ ತೋರಿದರು. 

ಪುರುಷರ ಸಿಂಗಲ್ಸ್‌ನಲ್ಲಿ ಕಣಕ್ಕಿಳಿದಿದ್ದ ಷಿಕಾಗೊ ತಂಡದ 18 ವರ್ಷದ ಆಟಗಾರ ಬ್ರೆಂಡನ್‌ ನಕಾಶಿಮಾ 5–3ಯಿಂದ ಸ್ಯಾಮ್‌ ಕ್ವೆರಿಗೆ ಆಘಾತ ನೀಡಿದರು.

ಮಿಶ್ರ ಡಬಲ್ಸ್‌ನಲ್ಲೂ ಷಿಕಾಗೊ ತಂಡದ ಸ್ಪರ್ಧಿಗಳು ಮೋಡಿ ಮಾಡಿದರು. ಪುರುಷರ ಮತ್ತು ಮಹಿಳಾ ಡಬಲ್ಸ್‌ಗಳಲ್ಲಿ ಗೆಲುವಿನ ತೋರಣ ಕಟ್ಟಿದರೂ ರೋಲರ್ಸ್‌ ತಂಡಕ್ಕೆ ಪ್ರಯೋಜನವಾಗಲಿಲ್ಲ.

ಇನ್ನೊಂದು ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಸ್ಪ್ರಿಂಗ್‌ಫೀಲ್ಡ್‌ ಲೇಸರ್ಸ್ 21–18ರಲ್ಲಿ ಒರ್ಲಾಂಡೊ ಸ್ಟಾರ್ಮ್‌ ತಂಡದ ಎದುರು ಜಯಿಸಿತು. 

ಸ್ಯಾನ್‌ ಡೀಗೊ ಏವಿಯೇಟರ್ಸ್‌ 23–16 ಪಾಯಿಂಟ್ಸ್‌ನಿಂದ ಆರೆಂಜ್‌ ಕೌಂಟಿ ಬ್ರೇಕರ್ಸ್‌ ತಂಡವನ್ನು ಮಣಿಸಿತು. ಏವಿಯೇಟರ್ಸ್‌ ತಂಡ ಐದು ಸೆಟ್‌ಗಳ ಪೈಕಿ ನಾಲ್ಕರಲ್ಲಿ ಗೆದ್ದು ಪ್ರಾಬಲ್ಯ ಮೆರೆಯಿತು.

ಪುರುಷರ ಸಿಂಗಲ್ಸ್‌ನಲ್ಲಿ ಏವಿಯೇಟರ್ಸ್‌ ತಂಡವನ್ನು ಪ‍್ರತಿನಿಧಿಸಿದ್ದ ರ‍್ಯಾನ್‌ ಹ್ಯಾರಿಸನ್‌ 5–4ರಲ್ಲಿ ಸ್ಟೀವ್‌ ಜಾನ್ಸನ್‌ ಅವರನ್ನು ಸೋಲಿಸಿದರು. ಮಹಿಳಾ ಡಬಲ್ಸ್‌ನಲ್ಲಿ ಅಂಗಳಕ್ಕಿಳಿದಿದ್ದ ಕೊಕೊ ವೆಂಡೆವೆಘೆ ಮತ್ತು ನಿಕೊಲೆ ಮೆಲಿಚರ್‌ ಅವರೂ ಮೋಡಿ ಮಾಡಿದರು. ಈ ಜೋಡಿಯು ಬ್ರೇಕರ್ಸ್‌ ತಂಡದ ಜೆನಿಫರ್‌ ಬ್ರಾಡಿ ಮತ್ತು ಆ್ಯಂಡ್ರೆಜಾ ಕ್ಲೆಪಾಗ್‌ ಅವರನ್ನು ಸೋಲಿಸಿತು.

2,500 ಆಸನ ಸಾಮರ್ಥ್ಯದ ಕ್ರೀಡಾಂಗಣದಲ್ಲಿ ಗರಿಷ್ಠ 500 ಮಂದಿ ಪ್ರೇಕ್ಷಕರಿಗೆ ಪಂದ್ಯಗಳನ್ನು ನೋಡುವ ಅವಕಾಶ ಕಲ್ಪಿಸಲಾಗಿತ್ತು. ಮುಖಗವಸು ಧರಿಸಿದ್ದ ಅಭಿಮಾನಿಗಳು ಅಂತರ ಕಾಯ್ದುಕೊಳ್ಳುವುದನ್ನು ಮರೆಯಲಿಲ್ಲ.

ಎಲ್ಲಾ ತಂಡಗಳ ಸ್ಪರ್ಧಿಗಳು ಟೂರ್ನಿಯಲ್ಲಿ ಪಾಲ್ಗೊಳ್ಳುವ ಮುನ್ನ ಕೋವಿಡ್‌–19 ಪರೀಕ್ಷೆಗೆ ಒಳಗಾಗಿದ್ದರು. ಪಂದ್ಯಗಳ ವೇಳೆ ಆಗಾಗ ಸ್ಪರ್ಧಿಗಳ ದೇಹದ ಉಷ್ಣಾಂಶ ಪರೀಕ್ಷೆಯನ್ನೂ ಮಾಡಲಾಗುತ್ತಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು