ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್ ವಿರುದ್ಧ ಗುಡುಗಿದ ಹಿಟ್‌ಮ್ಯಾನ್: ಏಕದಿನ ಮಾದರಿಯಲ್ಲಿ ಸಿಕ್ಸರ್‌ಗಳ ತ್ರಿಶತಕ

Published 14 ಅಕ್ಟೋಬರ್ 2023, 13:50 IST
Last Updated 14 ಅಕ್ಟೋಬರ್ 2023, 13:50 IST
ಅಕ್ಷರ ಗಾತ್ರ

ಅಹಮದಾಬಾದ್‌: ಕಳೆದ ಪಂದ್ಯದಲ್ಲಿ ಅಫ್ಗಾನಿಸ್ತಾನ ವಿರುದ್ಧ ಅಬ್ಬರದ ಶತಕ ಬಾರಿಸಿದ್ದ ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್‌ ಶರ್ಮಾ, ಪಾಕಿಸ್ತಾನ ವಿರುದ್ಧವೂ ಬಿರುಸಿನ ಬ್ಯಾಟಿಂಗ್‌ ನಡೆಸಿದರು. ಪಾಕ್‌ ಬೌಲರ್‌ಗಳೆದುರು ಲೀಲಾಜಾಲವಾಗಿ ಬ್ಯಾಟ್‌ ಬೀಸಿದ ಅವರು, ಏಕದಿನ ಮಾದರಿಯಲ್ಲಿ 300 ಸಿಕ್ಸರ್‌ ಸಿಡಿಸಿ ಸಾಧನೆ ಮಾಡಿದರು.

ಮೊಟೆರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್‌ ಪಂದ್ಯದಲ್ಲಿ ಪಾಕಿಸ್ತಾನ 191 ರನ್‌ ಗಳಿಸಿ ಆಲೌಟ್‌ ಆಯಿತು. ಈ ಗುರಿ ಬೆನ್ನತ್ತಿದ ಭಾರತ ರೋಹಿತ್‌ ಅವರ ಬಿರುಸಿನ ಬ್ಯಾಟಿಂಗ್ ಮತ್ತು ಶ್ರೇಯಸ್‌ ಅಯ್ಯರ್‌ ಗಳಿಸಿದ ಅರ್ಧಶತಕದ ಬಲದಿಂದ 30.3 ಓವರ್‌ಗಳಲ್ಲಿ 192 ರನ್‌ ಗಳಿಸಿತು. ಆ ಮೂಲಕ 7 ವಿಕೆಟ್‌ ಅಂತರದ ಸುಲಭ ಜಯ ಸಾಧಿಸಿತು.

ಸಾಧಾರಣ ಗುರಿ ಎದುರು ಬ್ಯಾಟಿಂಗ್‌ ಆರಂಭಿಸಿದ ರೋಹಿತ್‌ ಶರ್ಮಾ, ಶುರುವಿನಿಂದಲೇ ರಟ್ಟೆಯರಳಿಸಿದರು. 62 ಎಸೆತಗಳಲ್ಲಿ 86 ರನ್ ಗಳಿಸುವ ಮೂಲಕ ಭಾರತದ ಜಯದ ಹಾದಿಯನ್ನು ಸುಗಮಗೊಳಿಸಿದರು. ಶ್ರೇಯಸ್‌ ಅಯ್ಯರ್‌ (53) ಮತ್ತು ಕೆ.ಎಲ್‌.ರಾಹುಲ್‌ (19) ಪಂದ್ಯಕ್ಕೆ ಕೊನೆಯಾಡಿದರು.

300 ಸಿಕ್ಸರ್‌ ಸಾಧನೆ
ಅಫ್ಗಾನಿಸ್ತಾನ ವಿರುದ್ಧದ ಪಂದ್ಯದಲ್ಲಿ 5 ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗಳಿಸಿದ ಒಟ್ಟು ಸಿಕ್ಸರ್‌ಗಳ ಸಂಖ್ಯೆಯನ್ನು 556ಕ್ಕೆ ಏರಿಸಿಕೊಂಡಿದ್ದ ರೋಹಿತ್‌, ಪಾಕ್‌ ವಿರುದ್ಧವೂ ಸಿಕ್ಸರ್‌ ಯಾತ್ರೆ ಮುಂದುವರಿಸಿದರು.

ಇಂದು ರೋಹಿತ್‌ ಬ್ಯಾಟ್‌ನಿಂದ 6 ಸಿಕ್ಸರ್‌ಗಳು ಸಿಡಿದವು. ಹಾಗಾಗಿ ಅವರು ಏಕದಿನ ಮಾದರಿಯಲ್ಲಿ ಬಾರಿಸಿದ ಸಿಕ್ಸರ್‌ಗಳ ಸಂಖ್ಯೆ 303ಕ್ಕೆ ಏರಿದೆ. ಇದರೊಂದಿಗೆ ರೋಹಿತ್‌ 50 ಓವರ್‌ಗಳ ಕ್ರಿಕೆಟ್‌ನಲ್ಲಿ 300 ಸಿಕ್ಸರ್‌ ಸಿಡಿಸಿದ ವಿಶ್ವದ 3ನೇ ಹಾಗೂ ಭಾರತದ ಮೊದಲ ಬ್ಯಾಟರ್‌ ಎನಿಸಿಕೊಂಡರು.

ಪಾಕಿಸ್ತಾನದ ಆಲ್‌ರೌಂಡರ್‌ ಶಾಹಿದ್‌ ಅಫ್ರಿದಿ (351) ಮತ್ತು ವೆಸ್ಟ್‌ ಇಂಡೀಸ್‌ನ ಸ್ಫೋಟಕ ಬ್ಯಾಟರ್‌ ಕ್ರಿಸ್‌ ಗೇಲ್‌ (331) ಮಾತ್ರವೇ ರೋಹಿತ್‌ಗಿಂತ ಮುಂದಿದ್ದಾರೆ. ಅಫ್ರಿದಿ ಮತ್ತು ಗೇಲ್‌ ಈಗಾಗಲೇ ನಿವೃತ್ತಿ ಹೊಂದಿರುವುದರಿಂದ ಅವರಿಬ್ಬರನ್ನು ಹಿಂದಿಕ್ಕುವ ಅವಕಾಶ ಹಿಟ್‌ಮ್ಯಾನ್‌ಗೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT