ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

World Cup | IND vs PAK: ಪಾಕ್‌ ವಿರುದ್ಧ ಭಾರತಕ್ಕೆ 7 ವಿಕೆಟ್‌ಗಳ ಜಯ

ವಿಶ್ವಕಪ್ ಕ್ರಿಕೆಟ್‌ನಲ್ಲಿ ಪಾಕ್ ಎದುರು ಭಾರತ ಅಜೇಯ ಸಾಧನೆ l ಬೌಲರ್‌ಗಳ ಪಾರಮ್ಯ l ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್‌ ಅರ್ಧಶತಕ
Published 14 ಅಕ್ಟೋಬರ್ 2023, 14:38 IST
Last Updated 14 ಅಕ್ಟೋಬರ್ 2023, 14:38 IST
ಅಕ್ಷರ ಗಾತ್ರ

ಅಹಮದಾಬಾದ್: ಮೊಟೇರಾದ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶನಿವಾರ ಎತ್ತ ಕಣ್ಣು ಹಾಯಿಸಿದರೂ ನೀಲಿವರ್ಣದ ವಿಜೃಂಭಣೆ ಕಣ್ಣಿಗೆ ಹಬ್ಬವನ್ನುಂಟು ಮಾಡಿತ್ತು.

ಈ ಅಂಗಳದಲ್ಲಿ ನೀಲಿ ಪೋಷಾಕು ತೊಟ್ಟು ಬಂದಿದ್ದ ಒಂದು ಲಕ್ಷಕ್ಕೂ ಅಧಿಕ ಪ್ರೇಕ್ಷಕರು ಮತ್ತು ಟೆಲಿವಿಷನ್ ಪರದೆಗಳ ಮುಂದೆ ಕುಳಿತಿದ್ದ ಕೋಟ್ಯಂತರ ಅಭಿಮಾನಿಗಳನ್ನು ಭಾರತ ಕ್ರಿಕೆಟ್‌ ತಂಡ ನಿರಾಸೆಗೊಳಿಸಲಿಲ್ಲ. ವಿಶ್ವಕಪ್ ಏಕದಿನ ಕ್ರಿಕೆಟ್ ಟೂರ್ನಿಯ ಇತಿಹಾಸದಲ್ಲಿ ತನ್ನ ಬದ್ಧ ಎದುರಾಳಿ ಪಾಕಿಸ್ತಾನ ಎದುರು ಅಜೇಯ ಓಟವನ್ನು ಮುಂದುವರಿಸಿತು. ವಿಶ್ವಕಪ್ ಇತಿಹಾಸದಲ್ಲಿಯೇ ಸತತ ಎಂಟನೇ ಬಾರಿ (8–0) ಗೆಲುವಿನ ಸಂಭ್ರಮ ಆಚರಿಸಿತು.

ತಲಾ ಎರಡು ವಿಕೆಟ್‌ ಗಳಿಸಿದ ಭಾರತದ ಐವರು ಬೌಲರ್‌ಗಳು ಮತ್ತು ಅಬ್ಬರದ ಅರ್ಧಶತಕ ಬಾರಿಸಿದ ನಾಯಕ ರೋಹಿತ್ ಶರ್ಮಾ ಅವರ ಆಟದಿಂದ ತಂಡವು 7 ವಿಕೆಟ್‌ಗಳಿಂದ ಜಯಿಸಿತು.  ಏಕಪಕ್ಷೀಯವಾಗಿದ್ದ ಈ ಪಂದ್ಯದಲ್ಲಿ ಭಾರತ ಜಯಿಸಿದಾಗ ಇನ್ನೂ 117 ಎಸೆತಗಳು ಬಾಕಿ ಇದ್ದವು.

ಟಾಸ್ ಗೆದ್ದ ಭಾರತ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಜಸ್‌ಪ್ರೀತ್ ಬೂಮ್ರಾ, ಕುಲದೀಪ್ ಯಾದವ್, ರವೀಂದ್ರ ಜಡೇಜ, ಹಾರ್ದಿಕ್ ಪಾಂಡ್ಯ ಮತ್ತು ಮೊಹಮ್ಮದ್ ಸಿರಾಜ್ ಅವರು ತಲಾ ಎರಡು ವಿಕೆಟ್ ಗಳಿಸಿದರು. ಇದರಿಂದಾಗಿ ಪಾಕ್ ತಂಡವು 42.5 ಓವರ್‌ಗಳಲ್ಲಿ 191 ರನ್‌ ಗಳಿಸಿ ಎಲ್ಲವಿಕೆಟ್ ಕಳೆದುಕೊಂಡಿತು.

ಪಾಕ್ ತಂಡದ ಅಬ್ದುಲ್ಲಾ ಶಫೀಕ್ ಮತ್ತು ಇಮಾಮ್ ಉಲ್ ಹಕ್ ಉತ್ತಮ ಆರಂಭ ನೀಡಿದರು. ಲಯಕ್ಕೆ ಮರಳಿದ ನಾಯಕ ಬಾಬರ್ ಆಜಂ (50; 58ಎ) ಅರ್ಧಶತಕ ಹೊಡೆದರು. ರಿಜ್ವಾನ್ ಜೊತೆಗೆ ಬಾಬರ್ ಅವರು ಮೂರನೇ ವಿಕೆಟ್‌ಗೆ 82 ರನ್‌ ಸೇರಿಸಿದರು. ಆದರೆ, ಜೊತೆಯಾಟಗಳು ದೀರ್ಘವಾಗಿ ಬೆಳೆಯದಂತೆ ಭಾರತದ ಬೌಲರ್‌ಗಳು ಕಡಿವಾಣ ಹಾಕಿದರು.

ಎಡಗೈ ಸ್ಪಿನ್ನರ್‌ಗಳ ಚಾಣಾಕ್ಷ ದಾಳಿ ಮತ್ತು ಬೂಮ್ರಾ ಅವರ ಶಿಸ್ತುಬದ್ಧ ಎಸೆತಗಳ ಮುಂದೆ ಬ್ಯಾಟರ್‌ಗಳು ಆಡಲು ತಡವರಿಸಿದರು. ಇದರಿಂದಾಗಿ ಸಾಧಾರಣ ಮೊತ್ತಕ್ಕೆ ಪಾಕ್ ಕುಸಿಯಿತು. ಪಂದ್ಯ ಏಕಪಕ್ಷೀಯವಾಯಿತು.

ರೋಹಿತ್ ಅಬ್ಬರ: ಟೂರ್ನಿಯ ಮೊದಲ ಪಂದ್ಯದಲ್ಲಿ ಸೊನ್ನೆ ಸುತ್ತಿದ್ದ ರೋಹಿತ್ ಎರಡನೇ ಪಂದ್ಯದಲ್ಲಿ ಅಫ್ಗಾನಿಸ್ತಾನ ವಿರುದ್ಧ ಶತಕ ಬಾರಿಸಿದ್ದರು. ಇಲ್ಲಿಯೂ ತಮ್ಮ ಅಬ್ಬರದ ಆಟವನ್ನು ಮುಂದುವರಿಸಿದರು.

63 ಎಸೆತಗಳಲ್ಲಿ 86 ರನ್‌ ಗಳಿಸಿದರು. ಅರ್ಧ ಡಜನ್ ಸಿಕ್ಸರ್ ಮತ್ತು ಅಷ್ಟೇ ಸಂಖ್ಯೆಯ ಬೌಂಡರಿಗಳನ್ನು ಗಳಿಸಿದರು. ಮತ್ತೊಂದು ಶತಕ ದಾಖಲಿಸುವ ಭರವಸೆ ಮೂಡಿಸಿದ್ದರು. ಆದರೆ 22ನೇ ಓವರ್‌ನಲ್ಲಿ ಆಫ್ರಿದಿ ಎಸೆತವನ್ನು ಆಡುವ ಭರದಲ್ಲಿ ಇಫ್ತಿಕಾರ್ ಅಹಮದ್‌ಗೆ ಸುಲಭವಾದ ಕ್ಯಾಚ್ ಕೊಟ್ಟರು.

ಇದಕ್ಕೂ ಮುನ್ನ ರೋಹಿತ್  ಎರಡನೇ ವಿಕೆಟ್ ಜೊತೆಯಾಟದಲ್ಲಿ ವಿರಾಟ್ ಕೊಹ್ಲಿ ಜೊತೆಗೆ 56 ರನ್‌ ಸೇರಿಸಿದರು. ಏಕದಿನ ಕ್ರಿಕೆಟ್‌ನಲ್ಲಿ ಮುನ್ನೂರು ಸಿಕ್ಸರ್‌ಗಳ ಗಡಿಯನ್ನು ದಾಟಿದರು.

ಹತ್ತು ಓವರ್‌ಗಳು ಮುಗಿಯುವ ಮುನ್ನವೇ ಶುಭಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ಪೆವಿಲಿಯನ್‌ ಸೇರಿದ್ದರು. ಈ ಹಂತದಲ್ಲಿ ದಿಟ್ಟವಾಗಿ ನಿಂತ ರೋಹಿತ್ ಅವರು ಮೂರನೇ ವಿಕೆಟ್ ಜೊತೆಯಾಟದಲ್ಲಿ ಶ್ರೇಯಸ್ ಅಯ್ಯರ್ (ಔಟಾಗದೆ 53; 62ಎ) ಅವರೊಂದಿಗೆ  77 ರನ್ ಸೇರಿಸಿದರು. ರೋಹಿತ್ ಔಟಾದಾಗ ಕ್ರೀಸ್‌ಗೆ ಬಂದ ಕೆ.ಎಲ್. ರಾಹುಲ್ ಅಜೇಯ 19 ರನ್‌ ಗಳಿಸಿದರು.

ಹ್ಯಾಟ್ರಿಕ್ ಜಯ: ಈ ಟೂರ್ನಿಯಲ್ಲಿ ಭಾರತಕ್ಕೆ ಇದು ಸತತ ಮೂರನೇ ಜಯವಾಗಿದೆ. ಎರಡು ಪಂದ್ಯ ಗೆದ್ದಿರುವ ಪಾಕಿಸ್ತಾನಕ್ಕೆ ಮೊದಲ ಸೋಲಾಗಿದೆ.

ಇದರೊಂದಿಗೆ ಭಾರತ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.

ಸ್ಕೋರ್‌ ಕಾರ್ಡ್‌

ಪಾಕಿಸ್ತಾನ 191 (42.5 ಓವರ್‌ಗಳಲ್ಲಿ)

ಶಫೀಕ್ ಎಲ್‌ಬಿಡಬ್ಲ್ಯು ಬಿ ಸಿರಾಜ್ 20 (24ಎ, 4X3)

ಇಮಾಮ್ ಸಿ ರಾಹುಲ್ ಬಿ ಹಾರ್ದಿಕ್ 36 (38ಎ, 4X6)

ಬಾಬರ್ ಬಿ ಸಿರಾಜ್ 50 (58ಎ, 4X7)

ರಿಜ್ವಾನ್ ಬಿ ಬೂಮ್ರಾ 49 (69ಎ, 4X7)

ಶಕೀಲ್ ಎಲ್‌ಬಿಡಬ್ಲ್ಯು ಬಿ ಕುಲದೀಪ್ 6 (10ಎ)

ಇಫ್ತಿಕಾರ್ ಬಿ ಕುಲದೀಪ್ 4 (4ಎ, 4X1)

ಶಾದಾಬ್ ಬಿ ಬೂಮ್ರಾ 2 (5ಎ)

ನವಾಜ್ ಸಿ ಬೂಮ್ರಾ ಬಿ ಹಾರ್ದಿಕ್ 4 (14ಎ)

ಹಸನ್ ಸಿ ಶುಭಮನ್ ಬಿ ಜಡೇಜ 12 (19ಎ, 4X2)

ಆಫ್ರಿದಿ ಔಟಾಗದೆ 2 (10ಎ)

ಹ್ಯಾರಿಸ್ ಎಲ್‌ಬಿಡಬ್ಲ್ಯು ಬಿ ಜಡೇಜ 2 (6ಎ)

ಇತರೆ: 4 (ಬೈ 1, ಲೆಗ್‌ಬೈ 2, ವೈಡ್ 1)

ವಿಕೆಟ್ ಪತನ: 1–41 (ಅಬ್ದುಲ್ಲಾ ಶಫೀಕ್; 7.6), 2–73 (ಇಮಾಮ್ ಉಲ್ ಹಕ್; 12.3), 3–155 (ಬಾಬರ್ ಆಜಂ; 29.4), 4–162 (ಸೌದ್ ಶಕೀಲ್; 32.2), 5–166 (ಇಫ್ತಿಕಾರ್ ಅಹಮದ್; 32.6), 6–168 (ಮೊಹಮ್ಮದ್ ರಿಜ್ವಾನ್; 33.6), 7–171 (ಶಾದಾಬ್ ಖಾನ್; 35.2), 8–187 (ಮೊಹಮ್ಮದ್ ನವಾಜ್; 39.6), 9–187 (ಹಸನ್ ಅಲಿ; 40.1), 10–191 (ಹ್ಯಾರಿಸ್ ರವೂಫ್; 42.5)

ಬೌಲಿಂಗ್‌: ಜಸ್‌ಪ್ರೀತ್ ಬೂಮ್ರಾ 7–1–19–2, ಮೊಹಮ್ಮದ್ ಸಿರಾಜ್ 8–0–50–2, ಹಾರ್ದಿಕ್ ಪಾಂಡ್ಯ 6–0–34–2, ಕುಲದೀಪ್ ಯಾದವ್ 10–0–35–2, ರವೀಂದ್ರ ಜಡೇಜ 9.5–0–38–2, ಶಾರ್ದೂಲ್ ಠಾಕೂರ್ 2–0–12–0.

ಭಾರತ 3ಕ್ಕೆ192 (30.3ಓವರ್‌ಗಳಲ್ಲಿ)

ರೋಹಿತ್ ಸಿ ಇಫ್ತಿಕಾರ್ ಬಿ ಆಫ್ರಿದಿ 86 (63ಎ, 4X6, 6X6)

ಶುಭಮನ್ ಸಿ ಶಾದಾಬ್ ಬಿ ಆಫ್ರಿದಿ 16 (11ಎ, 4X4)

ವಿರಾಟ್ ಸಿ ನವಾಜ್ ಬಿ ಹಸನ್ 16 (18ಎ, 4X3)

ಶ್ರೇಯಸ್ ಔಟಾಗದೆ 53 (62ಎ, 4X3, 6X2)

ಕೆ.ಎಲ್. ರಾಹುಲ್ ಔಟಾಗದೆ 19 (29ಎ, 4X2)

ಇತರೆ: 2 (ಲೆಗ್‌ಬೈ 1, ವೈಡ್ 1)

ವಿಕೆಟ್ ಪತನ: 1–23 (ಶುಭಮನ್ ಗಿಲ್; 2.5), 2–79 (ವಿರಾಟ್ ಕೊಹ್ಲಿ; 9.5), 3–156 (ರೋಹಿತ್ ಶರ್ಮಾ; 21.4)

ಬೌಲಿಂಗ್‌: ಶಾಹೀನ್ ಆಫ್ರಿದಿ 6–0–36–2, ಹಸನ್ ಅಲಿ 6–0–34–1, ಮೊಹಮ್ಮದ್ ನವಾಜ್ 8.3–0–47–0, ಹ್ಯಾರಿಸ್ ರವೂಫ್ 6–0–43–0, ಶಾದಾಬ್ ಖಾನ್ 4–0–31–0.

ಪಂದ್ಯಶ್ರೇಷ್ಠ: ಜಸ್‌ಪ್ರೀತ್ ಬೂಮ್ರಾ

ಏಕದಿನ ಕ್ರಿಕೆಟ್‌ನಲ್ಲಿ ಸಿಕ್ಸರ್ ತ್ರಿಶತಕ

ಸಿಕ್ಸರ್ ಆಟಗಾರ ದೇಶ

351 ಶಾಹೀದ್ ಆಫ್ರಿದಿ ಪಾಕಿಸ್ತಾನ

331 ಕ್ರಿಸ್ ಗೇಲ್ ವೆಸ್ಟ್ ಇಂಡೀಸ್

303 ರೋಹಿತ್ ಶರ್ಮಾ ಭಾರತ

ಐವರು ಬೌಲರ್‌ಗಳು ತಲಾ 2 ವಿಕೆಟ್ ಸಾಧನೆ

(ವಿಶ್ವಕಪ್ ಇನಿಂಗ್ಸ್)

ಪಂದ್ಯ ಸ್ಥಳ ವರ್ಷ

ಭಾರತ–ಪಾಕಿಸ್ತಾನ ಮೊಹಾಲಿ 2011

ನ್ಯೂಜಿಲೆಂಡ್–ಶ್ರೀಲಂಕಾ ಕ್ರೈಸ್ಟ್‌ಚರ್ಚ್ 2015

ಭಾರತ–ಪಾಕಿಸ್ತಾನ ಅಹಮದಾಬಾದ್ 2023

ಪಾಕ್ ಎದುರು ಪಂದ್ಯಶ್ರೇಷ್ಠರು (ವಿಶ್ವಕಪ್)

ಆಟಗಾರ ವರ್ಷ

ಸಚಿನ್ ತೆಂಡೂಲ್ಕರ್ 1992, 2003, 2011

ನವಜ್ಯೋತ್‌ಸಿಂಗ್ ಸಿಧು 1996

ವೆಂಕಟೇಶ್ ಪ್ರಸಾದ್ 1999

ವಿರಾಟ್ ಕೊಹ್ಲಿ 2015

ರೋಹಿತ್ ಶರ್ಮಾ 2019

ಜಸ್‌ಪ್ರೀತ್ ಬೂಮ್ರಾ 2023

ತಪ್ಪು ಜೆರ್ಸಿ ಧರಿಸಿದ ಕೊಹ್ಲಿ!

ಭಾರತ ತಂಡದ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಶನಿವಾರ ಪಂದ್ಯದ ಸಂದರ್ಭದಲ್ಲಿ ಪ್ರಮಾದವಶಾತ್ ತಪ್ಪು ಪೋಷಾಕು ಧರಿಸಿದರು. ತಮ್ಮ ಅರಿವಿಗೆ ಬಂದಾಕ್ಷಣ ಬದಲಿಸಿಕೊಂಡರು.

ಈ ವಿಶ್ವಕಪ್ ಪಂದ್ಯಗಳಲ್ಲಿ ಭಾರತದ ಆಟಗಾರರು ಧರಿಸುತ್ತಿರುವ ಜೆರ್ಸಿಯ ಭುಜದ ಭಾಗದಲ್ಲಿ ತ್ರಿವರ್ಣ ಧ್ವಜದ ಬಣ್ಣಗಳನ್ನು ವಿನ್ಯಾಸ ಮಾಡಲಾಗಿದೆ. ಆದರೆ, ಕೊಹ್ಲಿ ಅವರು ಈ ಜೆರ್ಸಿ ಬದಲಿಗೆ ಬಿಳಿ ಬಣ್ಣದ ಪಟ್ಟಿಗಳಿರುವ ಜೆರ್ಸಿ ಧರಿಸಿದ್ದರು.

ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಇನಿಂಗ್ಸ್‌ನ ಏಳನೇ ಓವರ್‌ನವರೆಗೂ ವಿರಾಟ್ ತಾವು ತಪ್ಪು ಜೆರ್ಸಿ ಹಾಕಿಕೊಂಡಿರುವುದನ್ನು ಗಮನಿಸಿಕೊಂಡಿರಲಿಲ್ಲ. ಕೂಡಲೇ ಪೆವಿಲಿಯನ್‌ಗೆ ತೆರಳಿದ ಅವರು ಜೆರ್ಸಿ ಬದಲಿಸಿ ಮರಳಿದರು.

ಗಿಲ್‌ಗೆ ಅವಕಾಶ;ಇಶಾನ್‌ಗೆ ವಿಶ್ರಾಂತಿ

ವಿಶ್ವಕಪ್‌ ಟೂರ್ನಿಯ ಮೊದಲ ಪಂದ್ಯಕ್ಕೂ ಮುನ್ನ ಡೆಂಗಿ ಜ್ವರದಿಂದ ಬಳಲಿದ್ದ  ಭಾರತದ ಬ್ಯಾಟರ್ ಶುಭಮನ್ ಗಿಲ್ ಶನಿವಾರ ಕಣಕ್ಕೆ ಮರಳಿದರು. ಚೆನ್ನೈನಲ್ಲಿ ಕೆಲವು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಗಿಲ್ ಮೊದಲ ಎರಡೂ ಪಂದ್ಯಗಳಲ್ಲಿ ಆಡಿರಲಿಲ್ಲ. ಅವರ ರಕ್ತದ ಪ್ಲೇಟ್‌ಲೆಟ್‌ಗಳ ಸಂಖ್ಯೆಯು 70 ಸಾವಿರಕ್ಕಿಳಿದಿತ್ತು.

ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಗಿಲ್ ಆಡಿದರು. ಅದರಿಂದಾಗಿ ಇಶಾನ್ ಕಿಶನ್ ಅವರಿಗೆ ವಿಶ್ರಾಂತಿ ನೀಡಲಾಯಿತು. ರೋಹಿತ್ ಶರ್ಮಾ ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ಗಿಲ್, 18 ಎಸೆತಗಳಲ್ಲಿ 16 ರನ್‌ ಗಳಿಸಿದರು. ಫೀಲ್ಡಿಂಗ್‌ ಮಾಡುವಾಗಲೂ ಒಂದು ಕ್ಯಾಚ್ ಪಡೆದರು. ಲವಲವಿಕೆಯಿಂದ ಆಡಿ ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT